ಒಂದು ಹನಿ ನೀರನ್ನು ಬಳಸದೆ ನಿಮ್ಮ ಕಾರನ್ನು ಸ್ವಚ್ಚಗೊಳಿಸುತ್ತದೆ ಈ ಹೊಸ ಆವಿಷ್ಕಾರ

ನಿತಿನ್ ಶರ್ಮಾ ಅವರ ಗೋ ವಾಟರ್‌ಲೆಸ್ ಉಪಕ್ರಮವು ಒಂದು ಹನಿ ನೀರನ್ನು ಬಳಸದೆ ವಾಹನಗಳ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಲು ಸಸ್ಯಗಳ ಆಧಾರಿತ ಸ್ಪ್ರೇ ಬಳಸುತ್ತದೆ.

ಒಂದು ಹನಿ ನೀರನ್ನು ಬಳಸದೆ ನಿಮ್ಮ ಕಾರನ್ನು ಸ್ವಚ್ಚಗೊಳಿಸುತ್ತದೆ ಈ ಹೊಸ ಆವಿಷ್ಕಾರ

Friday February 28, 2020,

4 min Read

“ಬಾಯಾರಿದ ಮನುಷ್ಯನಿಗೆ, ಒಂದು ಹನಿ ನೀರು ಚಿನ್ನಕ್ಕಿಂತ ಮಿಗಿಲು” ಎಂಬ ಹಳೆ ಗಾದೆ ಇದೆ. ವೇಗವಾಗಿ ಬೆಳೆಯುತ್ತಿರುವ ನಗರಗಳು ನೀರಿನ ಸಂಪನ್ಮೂಲಗಳ ಮೇಲೆ ತೀವ್ರ ಒತ್ತಡವನ್ನು ಬೀರುತ್ತಿರುವ ಇಂದಿನ ಕಾಲಕ್ಕೆ ಈ ಗಾದೆ ಸೂಕ್ತವಾದಂತಿಲ್ಲ.


ಹೊಸತನ ಮತ್ತು ತಂತ್ರಜ್ಞಾನದೊಂದಿಗೆ, ಸವಾಲನ್ನು ಎದುರಿಸಬಹುದು. ಮಹಾರಾಷ್ಟ್ರದ ನಿತಿನ್ ಶರ್ಮಾ ಅವರು ಅದನ್ನೇ ಮಾಡಿದ್ದಾರೆ. 36 ವರ್ಷದ ಉದ್ಯಮಿ ‘ಗೋ ವಾಟರ್‌ಲೆಸ್’ ಎನ್ನುವ ಉಪಕ್ರಮವನ್ನು ಪ್ರಾರಂಭಿಸಿದ್ದು, ಇದು ಮುಂಬೈ ಮತ್ತು ನಾಗ್ಪುರದಲ್ಲಿ ಮನೆಯ ಬಳಿಯೇ ಕಾರನ್ನು ಒಂದಯ ಹನಿ ನೀರನ್ನು ಬಳಸದೆ ತೊಳೆಯುವ ಸೇವೆಯನ್ನು ಒದಗಿಸುತ್ತದೆ.


ನಿತಿನ್ ಶರ್ಮಾ, ಸಂಸ್ಥಾಪಕ, ಗೋ ವಾಟರ್‌ಲೆಸ್


ಒಂದು ಹನಿ ನೀರನ್ನು ವ್ಯರ್ಥ ಮಾಡದೆ ವಾಹನಗಳ ಮೇಲಿನಿಂದ ಧೂಳನ್ನು ತೆಗೆಯಬಲ್ಲ ಸಸ್ಯ ಆಧಾರಿತ ಹೈ ಲೂಬ್ರಿಸಿಟಿ ಸ್ಪ್ರೇ ಅನ್ನು ನಿತಿನ್ ಕಂಡುಹಿಡಿದ್ದಾರೆ.


“ಪೈಪ್ ಮೂಲಕ ಮನೆಯಲ್ಲಿ ಕಾರುಗಳನ್ನು ತೊಳೆಯುವಾಗ ಸುಮಾರು 80 ರಿಂದ 90 ಲೀಟರ್ ನೀರನ್ನು ಬಳಸಲಾಗುತ್ತದೆ ಅಥವಾ ಬಕೆಟ್ ಬಳಸಿದರೆ 40 ಲೀಟರ್ ವ್ಯರ್ಥವಾಗುತ್ತದೆ ಅಲ್ಲದೇ ಸರ್ವಿಸ್ ಸೆಂಟರ್‌ಗಳಲ್ಲಿ ತೊಳೆಯಲು ಕೊಟ್ಟರೆ ಸುಮಾರು 200 ಲೀಟರ್ ಬಳಸಲಾಗುತ್ತದೆ. ಒಟ್ಟಾರೆಯಾಗಿ ದೇಶದಲ್ಲಿನ ಕಾರುಗಳನ್ನು ಲೆಕ್ಕಹಾಕಿದರೆ ಕನಿಷ್ಠ 23 ಕೋಟಿ ಕಾರುಗಳೆಂದು ಅಂದಾಜಿಸಿದರೂ ಅದು ವ್ಯರ್ಥವಾಗುವ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಗೋ ವಾಟರ್‌ಲೆಸ್‌ನೊಂದಿಗೆ, ವ್ಯರ್ಥವಾಗುವ ಅಷ್ಟೂ ನೀರನ್ನು ಸಂರಕ್ಷಿಸಬಹುದು,” ಎಂದು ನಿತಿನ್ ಶರ್ಮಾ ಹೇಳುತ್ತಾರೆ.


ಪ್ರಸ್ತುತ, 23 ಜನರು ಗೋ ವಾಟರ್‌ಲೆಸ್ ತಂಡದಲ್ಲಿದ್ದಾರೆ, ಮತ್ತು ಇದು 1,000 ಗ್ರಾಹಕರನ್ನು ಹೊಂದಿದೆ ಎಂದು ಹೇಳಿಕೊಂಡಿದೆ.


"ಫ್ರ್ಯಾಂಚೈಸ್ ಮಾದರಿಯಲ್ಲಿ ನನ್ನ ಉಪಕ್ರಮವನ್ನು ವಿಸ್ತರಿಸುವ ಮೂಲಕ ನೀರನ್ನು ಉಳಿಸಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸಲು ನಾನು ಎದುರು ನೋಡುತ್ತಿದ್ದೇನೆ. ತೀರಾ ಇತ್ತೀಚಿನ ಸೇರ್ಪಡೆಗೊಂಡ ಊರೆಂದರೆ ನಾಗ್ಪುರ. ಇದಲ್ಲದೆ, ಬುಕಿಂಗ್‌ಗಾಗಿ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ನಾನು ಯೋಜಿಸುತ್ತಿದ್ದೇನೆ," ಎಂದು ನಿತಿನ್ ಹೇಳುತ್ತಾರೆ.


ಪ್ರಾರಂಭ

ವರ್ಷದಿಂದ ವರ್ಷಕ್ಕೆ ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆಯನ್ನು ಅನುಭವಿಸಿದ ನಂತರ, ನಿತಿನ್ ಮತ್ತು ಅವರ ಪತ್ನಿ ಕ್ಷಮಾ ಶರ್ಮಾ ಗೋ ವಾಟರ್‌ಲೆಸ್ ಉಪಕ್ರಮವನ್ನು ಪ್ರಾರಂಭಿಸಿದರು. ಅಕ್ಟೋಬರ್ 2019 ರಲ್ಲಿ ಎಂಟರ್‌ಪ್ರೈಸ್ ರಿವೊಲ್ಯೂಷನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು.


ರಾಜಸ್ಥಾನದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಇನ್ ಎಜುಕೇಶನ್ (ಐಎಎಸ್ಇ) ನಲ್ಲಿ ಬಿಬಿಎ ಮುಗಿಸಿದ ನಿತಿನ್, ತನ್ನ ತಂದೆಯ ವಾಹನ ವ್ಯವಹಾರವನ್ನು ವಹಿಸಿಕೊಂಡರು. ಅವರು ಚತ್ತೀಸ್‌ಗಢದಲ್ಲಿ ಮೆಕ್ಯಾನಿಕ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು ಮತ್ತು ಜನರಿಗೆ ಬ್ಯಾಟರಿ ಮತ್ತು ಕಾರುಗಳ ಸೇವೆಗಳನ್ನು ತಲುಪಿಸುತ್ತಿದ್ದರು. ಆ ಸಮಯದಲ್ಲಿ ಬೇಸಿಗೆಯಲ್ಲಿ, ಬೋರ್‌ವೆಲ್‌ನಲ್ಲಿ ನೀರಿಲ್ಲ ಎಂಬ ವಿಷಯ ಅವರಿಗೆ ತಿಳಿಯಿತು.


ಗೋ ವಾಟರ್‌ಲೆಸ್‌ನ ತಂಡವು ಲುಬ್ರಿಸಿಟಿ ಸ್ಪ್ರೇ ಬಳಸಿ ಕಾರನ್ನು ಸ್ವಚ್ಚಗೊಳಿಸುತ್ತಿರುವುದು.




“ನಮಗೆ ನೀರಿನ ಅಭಾವದಿಂದ ಹಲವಾರು ಕಠಿಣ ಪರಿಸ್ಥಿಗಳನ್ನು ಎದುರಿಸಬೇಕಾಯಿತು. ನಮ್ಮ ಗ್ರಾಹಕರ ಕಾರುಗಳನ್ನು ತೊಳೆಯಲಾಗಲಿಲ್ಲ. ನಾನು ಗ್ರಾಹಕರಿಗೆ ಪರಿಸ್ಥಿತಿಯನ್ನು ವಿವರಿಸಿ ಕ್ಷಮೆಯಾಚಿಸಬೇಕಿತ್ತು. ವರ್ಷದಿಂದ ವರ್ಷಕ್ಕೆ ಇದೇ ರೀತಿಯ ತೊಂದರೆಗಳನ್ನು ಅನುಭವಿಸಿದ ನಂತರ, ನಾನು ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದೆ. ನಾನು ಸಂಶೋಧನೆಯನ್ನು ನಡೆಸುತ್ತಿದ್ದೆ ಮತ್ತು ಪ್ರತಿ ಬಾರಿಯೂ ವಾಹನವನ್ನು ತೊಳೆಯುವಾಗ ಬಹಳಷ್ಟು ನೀರು ವ್ಯರ್ಥವಾಗುತ್ತಿತ್ತು. ಇದೇ ಗೋ ವಾಟರ್‌ಲೆಸ್ ಕಲ್ಪನೆಯು ನನ್ನ ತಲೆಯಲ್ಲಿ ಹುಟ್ಟಲು ಕಾರಣ,” ಎಂದು ನಿತಿನ್ ನೆನಪಿಸಿಕೊಳ್ಳುತ್ತಾರೆ.


ಪ್ರತಿ ಹನಿಯೂ ಅಮೂಲ್ಯ

ನ್ಯಾನೊತಂತ್ರಜ್ಞಾನವನ್ನು ಬಳಸಿಕೊಂಡು ಸಸ್ಯ ಆಧಾರಿತ ಲೂಬ್ರಿಕಂಟ್‌ಗಳಿಂದ ಮಾಡಿದ ಸ್ಪ್ರೇ ಅಭಿವೃದ್ಧಿಪಡಿಸಲು 2017 ರಲ್ಲಿ ನಿತಿನ್ ಕೆಲವು ಕೆಮಿಕಲ್ ಎಂಜಿನಿಯರ್‌ಗಳ ಸಹಾಯವನ್ನು ಪಡೆದರು. ಅಪ್ಲೈಡ್ ಫಿಸಿಕ್ಸ್ ಮತ್ತು ಸೂಪರ್ ಮೊಲಿಕ್ಯುಲರ್ ಕೆಮೆಸ್ಟ್ರಿಗಳಲ್ಲಿ ಒಂದು ವರ್ಷದ ಆಳವಾದ ಪ್ರಯೋಗದ ನಂತರ, ನಿತಿನ್ ಒಂದು ಲುಬ್ರಿಸಿಟಿ ಸ್ಪ್ರೇ ಅಭಿವೃದ್ಧಿಪಡಿಸಿದರು, ಅದು ನೀರನ್ನು ಬಳಸದೆ ಕಾರುಗಳಿಂದ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ನಂತರ ಅವರು ತಮ್ಮ ಪತ್ನಿ ಮತ್ತು ಕುಟುಂಬದವರ ಸಹಾಯದಿಂದ 10 ಲಕ್ಷ ರೂಪಾಯಿಗಳನ್ನು ಒಟ್ಟುಗೂಡಿಸಿ ಮುಂಬೈನಲ್ಲಿ ತಮ್ಮದೇ ಆದ ಉದ್ಯಮವನ್ನು ಮತ್ತು ಗೋ ವಾಟರ್ಲೆಸ್ ಉಪಕ್ರಮವನ್ನು ಆರಂಭಿಸಿದರು.


36 ವರ್ಷದ ನಿತಿನ್ ಶರ್ಮಾ


ಸ್ಪ್ರೇ ಉತ್ಪಾದನೆಗೆ ಬೇಕಾದ ವಸ್ತುಗಳನ್ನು ಮತ್ತು ಸಸ್ಯಗಳನ್ನು ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಪ್ರತಿ ಕಾರ್ ವಾಶ್‌ಗೆ ಸರಿಸುಮಾರು 100 ಎಂಎಲ್ ಸ್ಪ್ರೇ ಅಗತ್ಯವಿರುತ್ತದೆ, ಮತ್ತು ಇಲ್ಲಿಯವರೆಗೆ, ಸುಮಾರು 1,000 ಲೀಟರ್ ಸ್ಪ್ರೇಗಳನ್ನು ಉತ್ಪಾದಿಸಲಾಗಿದೆ.


ಸ್ಪ್ರೇ ಸಹ ಪರಿಸರ ಸ್ನೇಹಿಯಾಗಿದ್ದು ಮತ್ತು ಸವೆತವನ್ನುಂಟು ಮಾಡುವುದಿಲ್ಲ. ಆದ್ದರಿಂದ, ವಾಹನದ ವಿವಿಧ ಮೇಲ್ಮೈಗಳು ಮತ್ತು ಅದರ ಮೇಲೆ ಬಣ್ಣದ ಪದರಗಳು ಹಾಳಾಗದೆ ಉಳಿಯುತ್ತವೆ. "ಎಲ್ಲಕ್ಕಿಂತ ಮುಖ್ಯವಾಗಿ, ಯಾವುದೇ ನೀರನ್ನು ಬಳಸದ ಕಾರಣ, ಜನರು ತಮ್ಮ ಕಾರುಗಳನ್ನು ತೊಳೆಯುವ ವಿಧಾನದಲ್ಲಿ ಈ ವಿನೂತನ ಪ್ರಯೋಗವು ಕ್ರಾಂತಿಯುಂಟು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ, ಎಂದು ನಿತಿನ್ ಹೇಳುತ್ತಾರೆ.


ಎಡದಿಂದ ಬಲಕ್ಕೆ, ಗೋ ವಾಟರ್‌ಲೆಸ್‌ನಿಂದ ಕಾರನ್ನು ಸ್ವಚ್ಚಗೊಳಿಸುವ ಮೊದಲು ಮತ್ತು ಸ್ವಚ್ಛಗೊಳಿಸಿದ ನಂತರ.




ನನ್ನ ಕಲ್ಪನೆ ಬಹಳ ಸರಳವಾಗಿತ್ತು. ನಾನು ಸಾಧ್ಯವಾದಷ್ಟು ಜನರನ್ನು ತಲುಪಲು ಇಷ್ಟಪಡುತ್ತೇನೆ. ಆದ್ದರಿಂದ, ನಾನು ಆನ್‌ಲೈನ್‌ನಲ್ಲಿ ಕಾರ್ ವಾಶ್ ಅನ್ನು ಬುಕ್ ಮಾಡುವ ವೆಬ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ. ಬುಕಿಂಗ್ ದೃಢಪಟ್ಟ ನಂತರ, ತರಬೇತಿ ಪಡೆದ ವ್ಯಕ್ತಿಯನ್ನು ಲೂಬ್ರಿಸಿಟಿ ಸ್ಪ್ರೇ ಬಳಸಿ ವಾಹನವನ್ನು ಸ್ವಚ್ಚಗೊಳಿಸಲು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಸ್ಪ್ರೇಯ ಅಂಟಿಕೊಳ್ಳುವ ಸ್ವಭಾವದಿಂದ ಎಲ್ಲಾ ಧೂಳಿನ ಕಣಗಳು ಸುಲಭವಾಗಿ ಸ್ವಚ್ಛಗೊಳಿಸಬಹುದು,” ಎಂದು ನಿತಿನ್ ಹೇಳುತ್ತಾರೆ.


ಗೋ ವಾಟರ್‌ಲೆಸ್ ಸಂಪೂರ್ಣ ಕಾರ್ ವಾಶ್‌ಗೆ 449 ರೂ, ಮತ್ತು ಕಾರಿನ ಹೊರ ಭಾಗವನ್ನು ತೊಳೆಯಲು 249 ರೂ ಪಡೆಯುತ್ತದೆ. ಈ ಎರಡೂ ಸೇವೆಗಳಿಗೆ ಪ್ರಚಾರದ ಕೊಡುಗೆಗಳು ಪ್ರಸ್ತುತ ಅನ್ವಯವಾಗುತ್ತವೆ.


ಅಮೂಲ್ಯವಾದ ಸಂಪನ್ಮೂಲವನ್ನು ಸಂರಕ್ಷಿಸುವುದು

ಕಳೆದ ಕೆಲವು ತಿಂಗಳುಗಳಿಂದ 35 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳು ಮತ್ತು ಸಂಘಗಳು ನಿಯಮಿತವಾಗಿ ಗೋ ವಾಟರ್‌ಲೆಸ್‌ನ ಸೇವೆಗಳನ್ನು ಪಡೆಯುತ್ತಿವೆ. ನಾಗ್ಪುರದ ಗಜಾನಂದ್ ಅಪಾರ್ಟ್ಮೆಂಟ್ ಕೂಡ ಅವುಗಳಲ್ಲಿ ಒಂದು.


ನಾಗ್ಪುರವು ಸ್ವಲ್ಪ ಸಮಯದಿಂದ ನೀರಿನ ಅಭಾವವನ್ನು ಎದುರಿಸುತ್ತಿದೆ. ಸಂಪನ್ಮೂಲಗಳ ಬಳಕೆ ಜನರ ಕೈಯಲ್ಲಿಯೇ ಇರುವುದರಿಂದ, ನೀರನ್ನು ಉಳಿಸುವುದು ನಾಗರೀಕರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಒಂದು ಹನಿ ನೀರಿಲ್ಲದೆ ಕಾರ್ ವಾಶ್ ಮಾಡುವ ಸೇವೆಯ ಬಗ್ಗೆ ನಾನು ಮೊದಲು ಕೇಳಿದಾಗ, ನಾನು ಅದನ್ನು ನಂಬಲಿಲ್ಲ. ಆದರೆ ಅವರು ನನಗೆ ಡೆಮೊ ನೀಡಿದಾಗ, ನಾನು ಮಂತ್ರಮುಗ್ಧನಾಗಿದ್ದೆ. ಗಜಾನಂದ್ ಅಪಾರ್ಟ್‌ಮೆಂಟ್‌ನಲ್ಲಿ 27 ಫ್ಲ್ಯಾಟ್‌ಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಇಂದು ಗೋ ವಾಟರ್‌ಲೆಸ್ ಅನ್ನು ಸೇವೆಯನ್ನು ಉಪಯೋಗಿಸುತ್ತೇವೆ. ಈ ಉಪಕ್ರಮವು ಬಹಳ ದೂರ ಸಾಗಲಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡರೆ ಸಾಕಷ್ಟು ನೀರನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ,” ಎಂದು ಸೊಸೈಟಿಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳುತ್ತಾರೆ.


ನೀರಿನ ಸಂಪನ್ಮೂಲಗಳ ಮೇಲೆ ಹೊರೆಯಾಗುತ್ತಿರುವ ನಗರ ಬೆಳವಣಿಗೆಗಳನ್ನು ನೋಡಿದರೆ, ಗೋ ವಾಟರ್‌ಲೆಸ್‌ನಂತಹ ಉಪಕ್ರಮಗಳು ನೀರಿನ ಸಂರಕ್ಷಣೆಗೆ ಸಹಾಯ ಮಾಡುತ್ತದೆ.


ಗೋ ವಾಟರ್ ಲೆಸ್ ತಂಡ


ಪಾಲಿಸಿ ಥಿಂಕ್ ಟ್ಯಾಂಕ್ ನೀತಿ ಆಯೋಗ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಬೆಂಗಳೂರು, ದೆಹಲಿ, ಹೈದರಾಬಾದ್, ಮತ್ತು ಚೆನ್ನೈ ಸೇರಿದಂತೆ ಭಾರತದಾದ್ಯಂತ ಸುಮಾರು 21 ನಗರಗಳಲ್ಲಿ 2020 ರ ವೇಳೆಗೆ ಅಂತರ್ಜಲ ಖಾಲಿಯಾಗುವ ಭೀತಿಯಲ್ಲಿದೆ. ಸಮಸ್ಯೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ದೇಶದಲ್ಲಿ 600 ದಶಲಕ್ಷ ಜನರು ತೀವ್ರ ನೀರಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಮತ್ತು ನೀರಿನ ಕೊರತೆಯಿಂದಾಗಿ 2018 ರಿಂದ ಪ್ರತಿವರ್ಷ ಎರಡು ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸಂಶೋಧನೆ ಹೇಳುತ್ತದೆ.


ಈ ಭೀಕರ ಪರಿಸ್ಥಿತಿಯು ನೀರನ್ನು ವ್ಯರ್ಥಮಾಡುವುದರ ಪರಿಣಾಮವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಮನೆಯಲ್ಲಿಯೇ ಪ್ರತಿದಿನ ಸರಾಸರಿ 135 ಲೀಟರ್ ನೀರನ್ನು ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ. ಕಾರುಗಳು ಮತ್ತು ಇತರ ವಾಹನಗಳನ್ನು ತೊಳೆಯಲು ಬಳಸುವ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಿದೆ.