ನೀರು ಉಳಿಸುವ ಯಂತ್ರವನ್ನು ಆವಿಷ್ಕರಿಸಿದ ಹುಬ್ಬಳ್ಳಿ ಹುಡುಗನ ವಿನೂತನ ಸಾಧನೆ
ಹುಬ್ಬಳ್ಳಿಯ ಸೇಂಟ್ ಪೌಲ್ಸ್ ಶಾಲೆಯಲ್ಲಿ ಹತ್ತನೇಯ ತರಗತಿಯಲ್ಲಿ ಓದುತ್ತಿರುವ ರಾಯಸ್ಟನ್ ವೇದಮುತ್ತು ನೀರು ಉಳಿಸುವ ಯಂತ್ರವಾದ ಅಕ್ವಾ ಸೇವರ್ ಅನ್ನು ಆವಿಷ್ಕರಿಸಿದ್ದರಿಂದ ರಷ್ಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾನೆ.
ಪ್ರತಿಭೆ, ಜ್ಞಾನ ಎನ್ನುವುದು ಎಲ್ಲರಲ್ಲಿಯೂ ಅಡಗಿರುತ್ತದೆ ಅದಕ್ಕೊಂದು ಸರಿಯಾದ ವೇದಿಕೆ ಬೇಕಷ್ಟೇ. ತನ್ನ ಚಿಕ್ಕ ವಯಸ್ಸಿನಲ್ಲಿಯೇ ವಿನೂತನ ಆವಿಷ್ಕಾರ ಮಾಡುವ ಮೂಲಕ ಈ ಹುಡುಗ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಸೇಂಟ್ ಪೌಲ್ಸ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ರಾಯಸ್ಟನ್ ವೇದಮುತ್ತು ನೀರು ಉಳಿಸುವ ಯಂತ್ರದ ಆವಿಷ್ಕಾರವನ್ನು ಮಾಡಿದ್ದಾನೆ. ಈ ಮೂಲಕ ನೀತಿ ಆಯೋಗ ಆಯ್ಕೆ ಮಾಡಿರುವ 25 ಯುವ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಉತ್ತರ ಕರ್ನಾಟಕದ ಏಕೈಕ ವಿದ್ಯಾರ್ಥಿಯಾಗಿದ್ದಾನೆ.
ನೀತಿ ಆಯೋಗಯು ಜಲಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹೀಗೆ ಹಲವಾರು ವಿಷಯಗಳ ಕುರಿತಾಗಿ ಸಂಶೋಧನೆ ಮಾಡಲು ತಿಳಿಸಿತ್ತು. ಜಲಸಂರಕ್ಷಣೆ ವಿಭಾಗದಲ್ಲಿ ರಾಯಸ್ಟನ್ ವೇದಮುತ್ತು ಆವಿಷ್ಕರಿಸಿರುವ ಅಕ್ವಾ ಸೇವರ್ ಆಯ್ಕೆಯಾಗಿದೆ. ಈ ವಿನೂತನ ಆವಿಷ್ಕಾರಕ್ಕಾಗಿ ಕೇಂದ್ರ ಸರ್ಕಾರದ ಅಟಲ್ ಇನ್ನೊವೇಶನ್ ಮಿಷನ್(ಎಐಎಂ) ಈತನನ್ನು ನವೆಂಬರ್ 29 ರಿಂದ ಡಿಸೆಂಬರ್ 7 ರವರೆಗೆ ರಷ್ಯಾದಲ್ಲಿ ನಡೆಯಲಿರುವ ಎಸ್‌ಐಆರ್‌ಯುಎಸ್ ಡೀಪ್ ಟೆಕ್ನಾಲಜಿ ಲರ್ನಿಂಗ್ ಆ್ಯಂಡ್ ಇನ್ನೊವೇಶನ್ ವಿಶೇಷ ಅಧ್ಯಯನಕ್ಕಾಗಿ ಆಯ್ಕೆ ಮಾಡಿದೆ, ವರದಿ ದಿ ಹಿಂದೂ.
ಏನಿದು ಅಕ್ವಾ ಸೇವರ್?
ಈಗ ಹಲವಾರು ಕಡೆ ಸೋಲಾರ್ ವಾಟರ್ ಹೀಟರ್ ಅಳವಡಿಸಿರುತ್ತಾರೆ. ಇಲ್ಲಿ ಸೌರಶಕ್ತಿಯ ಮೂಲಕ ನೀರು ಕಾದು ಬಿಸಿನೀರು ಬರುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಸಿನೀರು ಬರುವ ಮೊದಲು 2 ಬಕೆಟ್‌ನಷ್ಟು ತಣ್ಣೀರು ಹರಿದು ಹೋಗುತ್ತದೆ. ಇದನ್ನು ತಪ್ಪಿಸಲಿಕ್ಕಾಗಿಯೇ ಅಕ್ವಾ ಸೇವರ್ ಸಿಸ್ಟಂ ಅನ್ನು ಅಳವಡಿಸಲಾಗುತ್ತದೆ.
ಕಾರ್ಯ ನಿರ್ವಹಿಸುವುದು ಹೀಗೆ
ಬಿಸಿನೀರು ಬರುವ ಮುಂಚೆ ಬರುವ ತಣ್ಣೀರು ಅಕ್ವಾ ಸೇವರ್ ಸಿಸ್ಟಂನ್ನು ಅಳವಡಿಸಿದಾಗ ತಣ್ಣೀರು ಹರಿದು ಅಂಡರ್‌ಗ್ರೌಂಡ್ ನೀರಿನ ಟ್ಯಾಂಕ್‌ಗೆ ಸೇರುವಂತೆ ಮಾಡಲಾಗುವುದು. ಇದಕ್ಕೆ ಮೈಕ್ರೊ ಕಂಟ್ರೋಲರ್, ವಾಲ್ಟ್ ಜೋಡಿಸಲಾಗಿದ್ದು ಟೆಂಪರೇಚರ್ ಸೆನ್ಸಾರ್ ಸಹಾಯದಿಂದ ಪೈಪ್ ನಲ್ಲಿ ಬಿಸಿನೀರು ಬರುವವರೆಗೆ ತಣ್ಣೀರು ಟ್ಯಾಂಕ್‌ಗೆ ಹೋಗುತ್ತದೆ.
ಏನು ಉಪಯೋಗ?
ಇದನ್ನು ಅಳವಡಿಸಿಕೊಳ್ಳುವದರಿಂದ ಹಾಸ್ಟೆಲ್, ಹೋಟೆಲ್‌ಗಳು, ಲಾಡ್ಜಿಂಗ್ ಮುಂತಾದ ಕಡೆಗಳಲ್ಲಿ ದೊಡ್ಡ ಪ್ರಮಾಣದ ನೀರನ್ನು ಉಳಿಸಲು ಸಾಧ್ಯವಾಗುತ್ತದೆ. ಹುಬ್ಬಳ್ಳಿ ನಗರದ ಸ್ವರ್ಣಾ ಪ್ಯಾರಡೈಸ್ ಹೋಟೆಲ್ ಈ ಉಪಕರಣವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ.
ಸೇಂಟ್ ಪೌಲ್ಸ್ ಶಾಲೆಯ ಮುಖ್ಯಸ್ಥರಾದ ರೆವರೆಂಡ್ ಫಾದರ್ ಜೋಸೆಫ್ ವೇದಮುತ್ತುರವರು,
"ನಮ್ಮ ಶಾಲೆಯ ವಿದ್ಯಾರ್ಥಿಯ ಈ ಸಾಧನೆ ನಮಗೆಲ್ಲರಿಗೂ ಖುಷಿ ತಂದಿದ್ದು, ಈ ಸಾಧನೆಯಿಂದ ಉತ್ತೇಜಿತರಾಗಿ ನೂತನ ಆವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು" ಎಂದಿದ್ದಾರೆ ಎಂದು ವರದಿ ತಿಳಿಸುತ್ತದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.