ಗುಜರಾತ್‌ನ ಈ ರೆಸಾರ್ಟ್ ಪ್ರತಿ ವರ್ಷ 3.5 ದಶಲಕ್ಷ ಲೀಟರ್ ಮಳೆನೀರಿನ ಕೊಯ್ಲನ್ನು ಮಾಡುತ್ತದೆ.
2010ರಲ್ಲಿ ಶೀತಲ್ ಕುಮಾರ್ ಭಾಟಿಯಾ ಅವರು ಪ್ರಾರಂಭಿಸಿದ ದ್ವಾರಕೆಯ 'ಗೋವರ್ಧನ್ ಗ್ರೀನ್ಸ್' ರೆಸಾರ್ಟ್ ನೀರನ್ನು ಸಂರಕ್ಷಿಸಲು ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದೆ. ಇವರ ಈ ಪ್ರಯತ್ನವನ್ನು ಮನಗಂಡ ಗುಜರಾತ್ ಸರ್ಕಾರವು 'ಗುಜರಾತ್ ನ ಅತ್ಯುತ್ತಮ ಹಸಿರು ರೆಸಾರ್ಟ್' ಎಂದು ಕರೆದಿದೆ.
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಅದು ಎಷ್ಟರ ಮಟ್ಟಿಗೆಯೆಂದರೆ, ಶೀಘ್ರದಲ್ಲೇ ನಾವು ಸಮಸ್ಯೆಯನ್ನು ಪರಿಹರಿಸಲು ಕೂಡ ಅವಕಾಶ ಸಿಗದಂತಾಗಬಹುದು. ನೀತಿ(NITI) ಆಯೋಗದ ಪ್ರಕಾರ 2020ರ ವೇಳೆಗೆ ಭಾರತದ ಕನಿಷ್ಟ 21 ನಗರಗಳಲ್ಲಿ ಅಂತರ್ಜಲದ ಮಟ್ಟ ಖಾಲಿಯಾಗುವ ನಿರೀಕ್ಷೆಯಿದೆ.
ಹವಾಮಾನ ಬದಲಾವಣೆಯು ತನ್ನ ಪರಿಣಾಮವನ್ನು ಬೀರುತ್ತಿದೆ. ಬೇಸಿಗೆಯ ಬಿಸಿಲು, ಅನಿಯಮಿತವಾದ ಮಳೆ ಇದಕ್ಕೆ ಸ್ಪಷ್ಟ ಕಾರಣಗಳಾಗಿವೆ. ನೈಸರ್ಗಿಕ ಜಲಮೂಲಗಳ ನಾಶ, ಅಂತರ್ಜಲ ಹಾಗೂ ಸಂಪನ್ಮೂಲಗಳ ಶೋಷಣೆ ಇದಕ್ಕೆ ಕಾರಣವಾಗಿದೆ.
ಈ ಪರಿಸ್ಥಿತಿಯನ್ನು ಮನಗಂಡ ಗುಜರಾತ್ ನ ದ್ವಾರಕಾದಲ್ಲಿರುವ ಶೀತಲ್ ಕುಮಾರ್ ಭಾಟಿಯಾ ಅವರು ಪ್ರಾರಂಭಿಸಿದ 'ಗೋವರ್ಧನ್ ಗ್ರೀನ್ಸ್' ರೆಸಾರ್ಟ್, ಮಳೆನೀರು ಕೊಯ್ಲಿನ ಮೂಲಕ ನೀರನ್ನು ಸಂರಕ್ಷಿಸುತ್ತಿದ್ದು, ಸುಸ್ಥಿರ ಕೃಷಿ ಪದ್ಧತಿಯನ್ನು ಸಹ ಅನುಸರಿಸುತ್ತಿದೆ.
"ಐದು ವರ್ಷಗಳ ಅವಧಿಯಲ್ಲಿ, 2010 ಮತ್ತು 2015 ರ ನಡುವೆ, ಗೋವರ್ಧನ ಗ್ರೀನ್ಸ್ ವಾರ್ಷಿಕವಾಗಿ ಒಂದು ಮಿಲಿಯನ್ ಲೀಟರ್ ನೀರನ್ನು ಕಟಾವು ಮಾಡಿದೆ, ಮತ್ತು 2016 ರಿಂದ 2019 ರವರೆಗೆ, ನಾವು ವರ್ಷಕ್ಕೆ 3.5 ದಶಲಕ್ಷ ಲೀಟರ್ ಕೊಯ್ಲು ಮಾಡುವ ಮೂಲಕ ನಮ್ಮ ಪ್ರಯತ್ನವನ್ನು ಸ್ಥಿರವಾಗಿ ಹೆಚ್ಚಿಸಿದ್ದೇವೆ. ರೆಸಾರ್ಟ್ ನ 'ನಿವ್ವಳ ನೀರು-ಸಕಾರಾತ್ಮಕ ಆತಿಥ್ಯ ವ್ಯವಹಾರ'. ಇದರರ್ಥ ನಾವು ನೆಲದಿಂದ ನೀರನ್ನು ಎತ್ತುವುದಕ್ಕಿಂತ ಹೆಚ್ಚಿನ ನೀರನ್ನು ಕೊಯ್ಲು ಮಾಡುತ್ತೇವೆ” ಎಂದು ಗೋವರ್ಧನ್ ಗ್ರೀನ್ಸ್ ನ ಸಿಇಒ ಆಗಿರುವ ಎಸ್.ವಿ. ಭಾಟಿಯಾ ಹೇಳುತ್ತಾರೆ.
ಪಯಣದ ಹಾದಿ
ಬಾಲ್ಯದಿಂದಲೂ ನಾನು ನೀರನ್ನು ಸಂರಕ್ಷಿಸುತ್ತಿದ್ದು, ಇಂದಿಗೂ ನನ್ನ ಕುಟುಂಬದ ಸದಸ್ಯರು ಮಳೆನೀರನ್ನು ಹೇಗೆ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ಪ್ರೀತಿಯಿಂದ ಜ್ಞಾಪಿಸಿಕೊಳ್ಳುತ್ತೆನೆ. ಅವರು ಕುಡಿಯಲು ಹಾಗೂ ಅಡುಗೆ ಮಾಡಲು ಒಂದೇ ನೀರನ್ನು ಬಳಸುತ್ತಿದ್ದರು. ಆದ್ದರಿಂದಲೇ ಮಳೆನೀರು ಕೊಯ್ಲು ಮಾಡುವ ಪರಿಕಲ್ಪನೆ ಬಾಲ್ಯದಲ್ಲಿಯೇ ಹುಟ್ಟಿತು" ಎಂದು ಭಾಟಿಯಾ ಹೇಳುತ್ತಾರೆ.
ದ್ವಾರಕಾ ನಗರ ಸಮುದ್ರ ಮುಖೇನ ನಗರವಾಗಿರುವದರಿಂದ ರೆಸಾರ್ಟ್ ನಿರ್ಮಿಸುವಾಗ ಅಲ್ಲಿ ಲಭ್ಯವಿರುವ ನೀರು ಯಾವುದೇ ಉಪಯೋಗ್ಯಕ್ಕೂ ಯೋಗ್ಯವಾಗಿರಲಿಲ್ಲ. ಅದಕ್ಕೆ ನೀರನ್ನು ಶುದ್ಧೀಕರಣಗೊಳಿಸಲೇಬೇಕಾದ ಅವಶ್ಯಕತೆ ಇತ್ತು. ಆಗ ಭಾಟಿಯಾ ಅವರ ಹತ್ತಿರ ಇದ್ದ ಎರಡೇ ಆಯ್ಕೆಗಳೆಂದರೆ ಒಂದು ಉಪ್ಪಿನಂಶ ತೆಗೆಯುವುದು ಇನ್ನೊಂದು ಪರಾಸರಣ(ಸಾಮಾನ್ಯವಾಗಿ ಇದನ್ನು RO ವಿಧಾನ ಎಂದು ಕರೆಯಲಾಗುತ್ತದೆ)
ಡಸಲೀಕರಣ ಅಥವಾ ಉಪ್ಪಿನಂಶ ತೆಗೆಯುವ ವಿಧಾನವು ಮೂಲಭೂತವಾಗಿ ಸಮುದ್ರದ ನೀರಿನಿಂದ ಲವಣ ಹಾಗೂ ಖನಿಜಗಳನ್ನು ತೆಗೆದು ಹಾಕುವ ಪ್ರಕ್ರಿಯೆಯಾದರೆ, ಪರಾಸರಣ ವಿಧಾನದಲ್ಲಿ ಭಾಗಶಃ ಪ್ರವೇಶಸಿಸಬಹುದಾದ ಪೊರೆಯನ್ನು ಬಳಸುವುದರ ಮೂಲಕ ಆಯಾನುಗಳನ್ನು ಮತ್ತು ಬೇಡವಾದ ಅನುಗಳನ್ನು ತೆಗೆದು ಹಾಕುತ್ತದೆ.
ಆ ಸಮಯದಲ್ಲಿ ಸಾರ್ವಜನಿಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರೆಸಾರ್ಟ್ ನಲ್ಲಿ ಬಳಸುವ ನೀರನ್ನು ಹೇಗೆ ಸುರಕ್ಷಿತವಾಗಿ ವಿಲೇವಾರಿ ಮಾಡಬಹುದೆಂಬ ತಂತ್ರವನ್ನು ಅವರು ಮಾಡಬೇಕಾಗಿತ್ತು. ರೆಸಾರ್ಟ್ ಅಲ್ಲಿರುವ ಹೇರಳವಾಗಿ ಕಂಡು ಬರುವ ಮರಗಳನ್ನು ನಿರ್ವಹಿಸಲು ಸಾಕಷ್ಟು ನೀರು ಬೇಕಾಗುತ್ತದೆಂಬುದು ಭಾಟಿಯಾ ಅವರಿಗೆ ತಿಳಿದಿತ್ತು. ಆಗ ಅವರು ಉತ್ತಮವಾದುದನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದರು.
“ಆಗ, ಡಸಲೀಕರಣದ ಪ್ರಕ್ರಿಯೆ ವಿಧಾನ ಅನುಕೂಲಕರ ಆಯ್ಕೆಯಾಗಿದ್ದರು ಅದರ ಖರ್ಚು ಹೆಚ್ಚು ವೆಚ್ಚವನ್ನು ಬೇಡುತ್ತಿತ್ತು. TDS ಅಂದ್ರೆ ನೀರಿನಲ್ಲಿ ಕರಗಿದ ಘನ ಮಟ್ಟಗಳು ಮತ್ತು ಗಡಸುತನ ಹೊಂದಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಸಿಯಂ ಮಟ್ಟಗಳು ಈ ವಿಧಾನವನ್ನು ಪರಿಸರಸ್ನೇಹಿಯನ್ನಾಗಿ ನಿರೂಪಿಸುವಲ್ಲಿ ಸಫಲವಾಗಲಿಲ್ಲ. ರಿವರ್ಸ್ ಆಸ್ಮೊಸಿಸ್ (RO) ಅಂದರೆ ಪರಾಸರಣ ವಿಧಾನವು ಕೂಡ ನೀರಿನ ವಿಲೇವಾರಿಗೆ ಸಂಬಂಧಿಸಿದಂತೆ ತನ್ನದೇ ಆದ ಸಮಸ್ಯೆಗಳನ್ನು ಹೊಂದಿತ್ತು" ಎಂದು ಭಾಟಿಯಾ ಹೇಳುತ್ತಾರೆ.
ಹೊಸದೊಂದು ಯೋಜನೆ ಹೊಳೆದ ತಕ್ಷಣ
ಲಭ್ಯವಿರುವ ನೀರಿನ ಗುಣಮಟ್ಟ ಮತ್ತು ಅದನ್ನು ಹೇಗೆ ಉತ್ತಮವಾಗಿ ಕೊಯ್ಲು ಮಾಡಬಹುದೆಂದು ಯೋಚಿಸುವಾಗ ಭಾಟಿಯಾ ಅವರಿಗೆ ಹೊಸದೊಂದು ಯೋಜನೆ ಹೊಳೆದಿದೆ. ಅದನ್ನು ಅವರು ಯುರೇಕಾ ಕ್ಷಣ ಎಂದು ಹೇಳಿಕೊಳ್ಳುತ್ತಾರೆ.
ಬಳಸಿದ ನೀರಿನ ಗುಣಮಟ್ಟವನ್ನು ಸುಧಾರಿಸಲು ಅವರು ಬಯಸಿದರೆ ಅದರ ಒಳಹರಿವಿನ (ಇನ್ಪುಟ್) ನೀರನ್ನು ಸಹ ಸುಧಾರಿಸಬೇಕಾಗುತ್ತದೆ ಎಂದು ಭಾಟಿಯಾ ಅವರಿಗೆ ತಿಳಿದಿತ್ತು. ಅದಕ್ಕಾಗಿಯೇ ಮಳೆನೀರು ಹಾಗೂ ಅಂತರ್ಜಲವನ್ನು ಒಟ್ಟಿಗೆ ಬೆರೆಸುವ ಪ್ರಯತ್ನದ ಮೂಲಕ ಒಳಹರಿವಿನ ನೀರಿನ ಗುಣಮಟ್ಟವನ್ನು ಹೆಚ್ಚಿಸಿ ಉತ್ತಮ ಫಲಿತಾಂಶ ಹೊಂದುವಂತಹ ಯೋಜನೆ ನಿರ್ಮಿಸಿದರು.
ಈ ಪ್ರಕ್ರಿಯೆಯಲ್ಲಿ ಮಳೆನೀರಿನ ಕೊಯ್ಲನ್ನು ಏಕಕಾಲದಲ್ಲಿ ಕೈಗೊಳ್ಳಬಹುದಾಗಿದೆ. ಇದು ಬ್ಯಾಂಕ್ ಖಾತೆಯಂತೆ ಹಣವನ್ನು ಖರ್ಚು ಮಾಡುವುದಕ್ಕಿಂತ ಇಟ್ಟು ಉಳಿತಾಯ ಮಾಡುವುದು ಉತ್ತಮ ಎಂದು ಅವರು ನಂಬಿದ್ದರು.
ನೀರಿನ ಬಾವಿಗೆ ಸಂಪರ್ಕ ಹೊಂದಿದ ಸಮತಲವಾದ ಬೋರವೆಲ್ ನಿರ್ಮಾಣದ ಜೊತೆಗೆ, ನೀರಿನ ಮರುಬಳಕೆಯ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಬೋರವೆಲ್ ನಿರ್ಮಿಸಲು ಭಾಟಿಯಾ ನಿರ್ಧರಿಸಿದರು. ಜುಲೈನಿಂದ ನವೆಂಬರ್ ವರೆಗೆ ಗುಜರಾತನಲ್ಲಿ ಉತ್ತಮ ಮಳೆಯಾಗಿತ್ತು. ಈ ಸಮಯದಲ್ಲಿ ಹೆಚ್ಚಿನ ನೀರನ್ನು ಸಂಗ್ರಹಿಸಿ ಮಾರ್ಚ್ ಮತ್ತು ಏಪ್ರಿಲ್ ನಂತಹ ಬೇಸಿಗೆಯ ತಿಂಗಳುಗಳಲ್ಲಿ ಈ ನೀರನ್ನು ಬಳಸಬಹುದೆಂದು ಅವರು ನಿರ್ಧರಿಸಿದರು.
"ಮಳೆನೀರು ಕೊಯ್ಲಿನ ವಿಷಯ ಬಂದಾಗ ಅದನ್ನು ನಾನು ನ್ಯಾಯಯುತವಾದ ವಿಧಾನದ ಮೂಲಕ ಮಾಡಬೇಕು" ಎಂದು ಭಾಟಿಯಾ ಹೇಳುತ್ತಾರೆ.
2010- 2011 ರಲ್ಲಿ ಗುಜರಾತ್ ನಲ್ಲಿ ಮಳೆಗಾಲ ಬಂದಾಗ ಈ ವಿಧಾನದ ಮೂಲಕ ಯಶಸ್ವಿಯಾದ ಫಲಿತಾಂಶವನ್ನು ಪಡೆದರು. ಭವಿಷ್ಯಕ್ಕಾಗಿ ಹೆಚ್ಚಿನ ನೀರನ್ನು ಕೊಯ್ಲು ಮಾಡಲು ಅವರು ಗಮನ ಹರಿಸಿದಾಗ ಆ ಪ್ರಯತ್ನಗಳು ಫಲ ನೀಡಿದವು.
ಹಸಿರು ರೆಸಾರ್ಟ್
'ಚಿನ್ನದ ನಗರ'ವಾದ ದ್ವಾರಕೆಯ ಹೊರವಲಯದಲ್ಲಿರುವ 'ಗೋವರ್ಧನ್ ಗ್ರೀನ್ಸ್' 13 ಎಕರೆಗಳಷ್ಟು ವಿಸ್ತೀರ್ಣವಾಗಿದ್ದು, ಅನೇಕ ಮರಗಳಿಂದ ಹಾಗೂ ಹಚ್ಚ ಹಸಿರಿನಿಂದ ಆವೃತ್ತವಾಗಿದೆ.
ಇಲ್ಲಿ,ರೆಸಾರ್ಟ್ ಬಗ್ಗೆ ಗಮನ ಸೆಳೆಯುವ ಅಂಶವೆಂದರೆ ನೀರಿನ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯ ಬಗೆಗಿನ ಪ್ರಯತ್ನಗಳು.
ಮಳೆನೀರಿನ ಕೊಯ್ಲು ಮಾಡುವುದರ ಹೊರತಾಗಿ ಶೌಚಾಲಯಗಳ ನೀರು, ಶವರ್ ನೀರನ್ನು ಮರುಬಳಕೆ ಮಾಡುವುದು ಸೇರಿದಂತೆ ನೀರನ್ನು ಉಳಿಸಲು ರೆಸಾರ್ಟ್ ಇತರ ಕ್ರಮಗಳನ್ನು ಸಹ ಕೈಗೊಂಡಿದೆ. ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯಲು ಮತ್ತು ಸುತ್ತ- ಮುತ್ತಲಿನ ಹಸಿರನ್ನು ಕಾಪಾಡಿಕೊಳ್ಳಲು ಮರುಬಳಕೆಯ ನೀರನ್ನು ಉಪಯೋಗಿಸಲಾಗುತ್ತದೆ. 90% ಈ ಕ್ರಮಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಭಾಟಿಯಾ ಹೇಳುತ್ತಾರೆ.
ಬೆಳೆಗಳಿಗೆ ಹನಿ ನೀರಾವರಿಯ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಇತರೆ ಪರಿಸರಸ್ನೇಹಿ ಪದ್ಧತಿಗಳನ್ನು ಗೋವರ್ಧನ್ ಗ್ರೀನ್ಸ್ ಅನುಸರಿಸುತ್ತಿದೆ. ಇಲ್ಲಿ ಕೃಷಿಗೆ ಬೇಕಾದಂತಹ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಹಸುವಿನ ಸಗಣಿಯನ್ನು ಬಳಸಲಾಗುತ್ತದೆ. ರಾಸಾಯಿನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ನೀರಿನ ಬಿಕ್ಕಟ್ಟನ್ನು ನಿಭಾಯಿಸುವುದು
ಇಂದು, 'ಗೋವರ್ಧನ್ ಗ್ರೀನ್ಸ್' ವಾರ್ಷಿಕವಾಗಿ ಸುಮಾರು 3.5 ದಶಲಕ್ಷ ಲೀಟರ್ ಮಳೆನೀರಿನ ಕೊಯ್ಲು ಮಾಡುತ್ತದೆ. ಇದನ್ನು ಗಮನಿಸಿದ ಗುಜರಾತ್ ಸರ್ಕಾರ 'ಗುಜರಾತ್ ನ ಅತ್ಯುತ್ತಮ ಹಸಿರು ರೆಸಾರ್ಟ್' ಎಂದು ಗುರುತಿಸಿದೆ.
ಗೋವರ್ಧನ್ ಗ್ರೀನ್ಸ್ ರೆಸಾರ್ಟ್ ನ ಮಾರಾಟ ಮತ್ತು ಮಾರುಕಟ್ಟೆಯನ್ನು ನೋಡಿಕೊಳ್ಳುವ ಧವಲ್ ಬರೋಟ್ ಅವರ ಪ್ರಕಾರ, ನಮ್ಮ ನೀರಿನ ಸಂರಕ್ಷಣೆ ಅಭ್ಯಾಸದಿಂದ ನಾವಿಂದು ಸ್ವಾವಲಂಭಿಗಳಾಗಿದ್ದೇವೆ. ಅಲ್ಲದೆ, ಹೊರಗಡೆಯಿಂದ ನೀರನ್ನು ತರುವಂತಹ ಪ್ರಸಂಗ ಉಂಟಾಗಿಲ್ಲ ಎಂದು ಎನ್ನುತ್ತಾರೆ. ಅಲ್ಲದೇ ಇದು ಸಾಮಾಮ್ಯ ಸಂಸ್ಕರಣಾ ಘಟಕಗಳಿಗಿಂತ ಸರಳವಾದ ಮತ್ತು ಕಡಿಮೆ ವೆಚ್ಚದ ಪರಿಣಾಮಕಾರಿ ಕೆಲಸವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.
“ನೀರು ಉತ್ಪಾದಿಸಲಾಗದ ವಿಷಯ. ಆದರೆ ನಮ್ಮ ವಿಧಾನವು ಸರಳವಾಗಿದೆ, ಅದು ಸಾಧ್ಯವಾದಷ್ಟು ನೀರನ್ನು ಉಳಿಸಿಕೊಳ್ಳುವುದು, ”ಎಂದು ಅವರು ಹೇಳುತ್ತಾರೆ.
ಭಾಟಿಯಾ ಅವರು ಆರೋಗ್ಯಕರ ನಿರೀನ ಸಂರಕ್ಷಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಇತರರನ್ನು ಪ್ರೋತ್ಸಾಹಿಸುತ್ತಾರೆ. ಮತ್ತು ಈ ರೆಸಾರ್ಟ್ ಮೂಲಕ ಇತರರು ನೀರಿನ ಸಂರಕ್ಷಣೆಯ ಸ್ಪೂರ್ತಿ ಪಡೆಯಬಹುದೆಂದು ಅವರು ಹೇಳುತ್ತಾರೆ.
“ಪ್ರಕೃತಿಯು ನಮ್ಮನ್ನು ಹೇರಳವಾಗಿ ಆಶೀರ್ವದಿಸಿದೆ ಎಂದೇ ನಾನು ನಂಬುತ್ತೇನೆ. ಆದರೆ ಒಂದು ಸಮಾಜವಾಗಿ ನಾವು ನಮಗೆ ದೊರಕಿದಂತಹ ಸಂಪನ್ಮೂಲಗಳನ್ನು ಉಳಿಸಿಕೊಳ್ಳಲು ನಾವು ಪ್ರಯತ್ನಿಸಬೇಕಾಗಿದೆ. ಇತರ ಸಂಸ್ಥೆ ಹಾಗೂ ವ್ಯಕ್ತಿಗಳು ಈ ರೀತಿಯ ಪದ್ಧತಿಗಳನ್ನು ಅಳವಡಿಸಿಕೊಂಡರೆ ಅವರು ಸಹ ಬೆಂಗಳೂರು ಹಾಗೂ ಚೆನ್ನೈನಂತಹ ನಗರಗಳನ್ನು ನೀರಿನ ಬಿಕ್ಕಟ್ಟಿನಿಂದ ಪಾರಗಬಹುದಾಗಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜವಾಬ್ದಾರಿಯುತ ಪ್ರಜೆಯಾದರೆ ಸಿಗುವ ಪ್ರಯೋಜನಗಳು ಹಲವಾರು.”
ಭವಿಷ್ಯದ ಯೋಜನೆ
ಮುಂದಿನ ದಿನಗಳಲ್ಲಿ, ಗೋವರ್ಧನ್ ಗ್ರೀನ್ಸ್ ಕೃಷಿ ಮತ್ತು ಮನರಂಜನೆಯ ಅಂಶವನ್ನು ಒಳಗೊಂಡಿರುವ 'ಅಗ್ರಿಟೈನ್ಮೆಂಟ್ ಪಾರ್ಕ್' ಅನ್ನು ರಚಿಸಲು ಯೋಜಿಸಿದೆ. ಸಂಪೂರ್ಣ ಈ ಸಂಕೀರ್ಣವನ್ನು ಸ್ವಯಂ- ಸುಸ್ಥಿರವಾಗಿಸಲು ಇದು ಒಂದು ಅನನ್ಯ ಪ್ರಯತ್ನವಾಗಿದೆ ಎಂದು ಭಾಟಿಯಾ ಹೇಳುತ್ತಾರೆ.
ಅಲ್ಲದೇ,ಅವರು ತಮ್ಮ ಮಳೆನೀರು ಕೊಯ್ಲು ಅಭ್ಯಾಸವನ್ನು ವಿಸ್ತರಿಸುವ ಆಶಯವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಏಳು ದಶಲಕ್ಷ ಲೀಟರ್ ನೀರನ್ನು ಕೊಯ್ಲು ಮಾಡುವ ಗುರಿ ಹೊಂದಿದ್ದಾರೆ.