ಹಣ್ಣು ಮಾರಿ ಬಂದ ಹಣದಿಂದ ಶಾಲೆ ಕಟ್ಟಿದ 21 ನೇ ಶತಮಾನದ ಅಕ್ಷರ ಸಂತನ ಕಥೆ

ಸದಾ ಒಂದು ಬಿಳಿ ಪಂಚೆ , ಬಿಳಿಶರ್ಟ್ ಧರಿಸಿ ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರುವ ಹರೇಕಳ ಹಾಜಬ್ಬ ತನಗಾಗಿ ಒಂದು ಸ್ವಂತ ಮನೆಯನ್ನೂ ಹೊಂದಿಲ್ಲದಿದ್ದರೂ, ಸುಮಾರು 130 ವಿದ್ಯಾರ್ಥಿಗಳಿಗೆ ಅಕ್ಷರ ಹಂಚಿ "ಅಕ್ಷರಸಂತ" ಎನಿಸಿಕೊಂಡಿದ್ದಾರೆ.

ಹಣ್ಣು ಮಾರಿ ಬಂದ ಹಣದಿಂದ ಶಾಲೆ ಕಟ್ಟಿದ 21 ನೇ ಶತಮಾನದ ಅಕ್ಷರ ಸಂತನ ಕಥೆ

Thursday September 05, 2019,

3 min Read

"ಸಪ್ಟೆಂಬರ್ 5" ಈ ದಿನ ನಮ್ಮೆಲ್ಲರ ಬದುಕಿಗೆ ತುಂಬಾ ಅಪ್ಯಾಯಮಾನವಾದ ದಿನ. ವಿವಿಧ ಕಾರ್ಯಕ್ಷೇತ್ರಗಳ ವ್ಯತ್ಯಾಸ ಇಲ್ಲದೇ ಪ್ರತಿಯೊಬ್ಬರೂ ತಮ್ಮನ್ನು ರೂಪಿಸಿದ ಶಿಕ್ಷಕರನ್ನು ಸ್ಮರಿಸುವ ದಿನ. ಆದರೆ ನಾನು ಈಗ ಹೇಳಹೊರಟಿರುವ ವ್ಯಕ್ತಿ ಪದವಿ, ಬಿ.ಎಡ್ , ಡಾಕ್ಟ್ರೇಟ್ ಪಡೆದ ಅಧ್ಯಾಪಕರಲ್ಲ. ಉತ್ತಮ ಅತ್ಯುತ್ತಮ ಶಿಕ್ಷಕರು ಎಂಬ ಗೌರವಕ್ಕೆ ಪಾತ್ರರಾದವರು ಇವರಲ್ಲ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಒಡೆಯರಲ್ಲ, ಸದಾ ಒಂದು ಬಿಳಿ ಪಂಚೆ , ಬಿಳಿಶರ್ಟ್, ಧರಿಸಿ ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರುವ ಇವರು ತನಗಾಗಿ ಒಂದು ಸ್ವಂತ ಮನೆಯನ್ನೂ ಹೊಂದಿಲ್ಲದಿದ್ದರೂ, ಸುಮಾರು 130 ವಿದ್ಯಾರ್ಥಿಗಳಿಗೆ ಅಕ್ಷರ ಹಂಚಿ "ಅಕ್ಷರಸಂತ" ಎನಿಸಿಕೊಂಡವರು. ಒಂದರ್ಥದಲ್ಲಿ "ಪರೋಕಾರರ್ಥಮ್ ಇದಂ ಶರೀರಮ್" ಎಂಬಂತೆ ಬದುಕಿದ " ಹರೇಕಳ ಹಾಜಬ್ಬ" ರ ಒಟ್ಟು ಬದುಕೇ ನಮಗೆ ಆದರ್ಶ.


ಹರೇಕಳ ಹಾಜಬ್ಬ(ಚಿತ್ರ ಕೃಪೆ: ಫೆಸ್‌ ಬುಕ್)


ಹರೇಕಳ ಹಾಜಬ್ಬ "ಅಕ್ಷರ ಸಂತ" ರಾದ ಬಗೆ


ಅದು 1995 ರ ಸಮಯ ಮಂಗಳೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇತ್ತಾದರೂ, ಕೊಣಾಜೆಯ ಹರೇಕಳಕ್ಕೆ ಒಂದೂ ಸರಕಾರಿ ಶಾಲೆ ಇರಲಿಲ್ಲ. ಇತ್ತ ಹರೇಕಳದ ನಿವಾಸಿ ಹಾಜಬ್ಬರು ಎಂದಿನಂತೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಹಿಡಿದು ಮಂಗಳೂರಿನ ಬೀದಿಯಲ್ಲಿ ವ್ಯಾಪಾರಕ್ಕೆ ನಿಂತಿದ್ದರು. ಅಕಸ್ಮಾತ್ ಆಗಿ ಬಂದ ವಿದೇಶಿ ಮಹಿಳೆಯೊಬ್ಬರು ಇಂಗ್ಲಿಷ್ ನಲ್ಲಿ ಹಾಜಬ್ಬರ ಬಳಿ ಒಂದು ಕೆಜಿ ಕಿತ್ತಾಳೆಯ ಬೆಲೆ ಕೇಳಿದ, ಉತ್ತರಿಸಲಾಗದೆ ಹಾಜಬ್ಬ ಪೆಚ್ಚುಮೋರೆ ಹಾಕಿ ಮನೆಗೆ ಬಂದರು.


ಶಾಲೆಗೆ ಹೋಗುವ ಮಕ್ಕಳ ಬಳಿ ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷ್ ಕಳಿತುಕೊಂಡು, ವಿದೇಶಿ ಗ್ರಾಹಕರನ್ನು ಸೆಳೆಯಲು ಹಾಜಬ್ಬ ಪ್ರಯತ್ನಿಸಲಿಲ್ಲ, ಅಥವಾ ಈ ಬಿಳಿ ತೊಗಲಿನ ಭಾಷೆ ಬಾರದವರ ಸಹವಾಸವೇ ಬೇಡವೆಂದು ದೂರದಿಂದಲೇ ಕೈಮುಗಿಯಲಿಲ್ಲ. ಬದಲಿಗೆ ಹಾಜಬ್ಬರನ್ನು ತೀವ್ರವಾಗಿ ಕಾಡಿದ್ದು ಶಿಕ್ಷಣದ ಮಹತ್ವ. ತನ್ನೂರಿನಲ್ಲೇ ಒಂದು ವರ್ಗದ ಹೆತ್ತವರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರುವುದೂ ಕನ್ನಡಕ್ಕೋ ಎಂದು ಯೋಚಿಸುತ್ತಿದ್ದರೆ ಇನ್ನೊಂದು ವರ್ಗದ ಪಾಲಕರು ಶಾಲೆಗೆ ಸೇರಿಸಲು ಅಶಕ್ತರಾಗಿದ್ದರು.


ಇದೆಲ್ಲ ಮನಗಂಡ ಹಾಜಬ್ಬರು ತನ್ನೂರಿನಲ್ಲೇ ಶಾಲೆ ಕಟ್ಟಲು ಪಣ ತೊಟ್ಟರು. ಮೂಲು-ನಾಲ್ಕು ದಿನ ಸರಕಾರಿ ಕಛೇರಿಗಳಿಗೆ ಅಳೆದು ಶಾಲೆಗಾಗಿ ಭೂಮಿಯನ್ನು ಪಡೆದುಕೊಂಡು ತಾವೇ ಶಾಲೆಕಟ್ಟಲು ಪ್ರಾರಂಭಿಸಿದರು.


ಕಿತ್ತಳೆ ಮಾರುವ ಹಾಜಬ್ಬನವರು( ಚಿತ್ರ ಕೃಪೆ:ಮಂಗಳೂರು ಟುಡೇ)


ಹಾಜಬ್ಬರ ಅಕ್ಷರಕ್ರಾಂತಿ


ಹೆಚ್ಚು ಹೆಚ್ಚು ಕಿತ್ತಳೆ ವ್ಯಾಪಾರ ಮಾಡಿ, ಬರುವ 100-200 ರೂಪಾಯಿಯನ್ನೇ ಉಳಿಸಿ, ಶಾಲಾ ಕಟ್ಟಡಕ್ಕೆ ಸಿಮೆಂಟು ಕಲ್ಲು ಮೊದಲಾದ ಸಾಮಗ್ರಿಗಳನ್ನು ತಂದು ಶಾಲೆ ಕಟ್ಟಲು ಆರಂಭಿಸಿದರು. 1999 ಹೊತ್ತಿಗೆ ಹರೇಕಲಕ್ಕೆ ಕಿರಿಯ ಪ್ರಾಥಮಿಕ ಶಾಲೆ ಮಂಜೂರಾಯಿತು. ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಧಾನಿಗಳ ನೆರವಿನಿಂದ ಹಾಜಬ್ಬರೇ ಒದಗಿಸಿ, ಮುಂದೆ ಶಾಲೆಯನ್ನು ಹಿರಿಯ ಪ್ರಾಥಮಿಕದ ವರೆಗೆ ವಿಸ್ತರಿಸಲು ತಾವೇ ನೆಲ ಸಮತಟ್ಟುಗೊಳಿಸಿ, ತಾವೇ ಕೆಲವೊಮ್ಮೆ ಮೇಸ್ತ್ರಿ ಆಗಿ ದುಡಿದು, ಅಂತೂ ಕೆಲ ದಾನಿಗಳ ನೆರವಿನಿಂದ 6 ಮತ್ತು 7 ನೆ ತರಗತಿಯನ್ನು ಆರಂಭಿಸಿದರು.


ಇದೀಗ ಪ್ರೌಢಶಾಲೆ ಕೂಡ ಹರೇಕಳದಲ್ಲಿ ಆರಂಭವಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಯಾವುದೇ ಚಿಂತೆಯಿಲ್ಲದೆ ಪ್ರೌಢಶಾಲೆಯವರೆ ವಿದ್ಯಾಭ್ಯಾಸ ವನ್ನು ಪಡೆದುಕೊಳ್ಳುತ್ತಿದ್ದಾರೆ. ಒಂದೆರಡು ಲಕ್ಷವನ್ನು ದೇಣಿಗೆ ನೀಡಿದ ದಾನಿಗಳು ತಮ್ಮ ಹೆಸರನ್ನು ಶಾಲಾ ಗೋಡೆಗಳ ಮೇಲೆ ಕೆತ್ತಿಸಿದ್ದಾರೆ. ಆದ್ರೆ ತಾನು ಕಷ್ಟಪಟ್ಟು ದುಡಿದು 100 ರೂಪಾಯಿಗಳನ್ನೇ ಉಳಿಸಿ, ತಾನೇ ಕಲ್ಲು ಇಟ್ಟಿಗೆಗಳನ್ನು ಹೊತ್ತು ಶಾಲೆ ಗೋಡೆಗಳನ್ನು ಕಟ್ಟಿ , ಇವತ್ತಿಗೂ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ, ತಮಗೆ ಬಂದಿರುವ ಸನ್ಮಾನ ಹಣವನ್ನೆಲ್ಲಾ ಶಾಲೆ ಕಟ್ಟಲು ಬಳಸಿ, ತಮ್ಮ ಹಾಗೂ ತಮ್ಮ ಪತ್ನಿಯ ಅನ್ಯಾರೋಗ್ಯವನ್ನು ಲೆಕ್ಕಿಸದೇ ಶಾಲೆಗಾಗಿ ದುಡಿಯುವ ಹಾಜಬ್ಬ ಎಂದೂ ಹೆಸರು - ಪ್ರಶಸ್ತಿಗಳಿಗೆ ತಮ್ಮನ್ನ ಮಾರಿಕೊಂಡವರಲ್ಲ.


ತಮ್ಮ ಶಾಲಾಯಲ್ಲಿ ಹಾಜಬ್ಬರು(ಚಿತ್ರ ಕೃಪೆ: ಮಂಗಳೂರು ಟುಡೇ)

ಕಾಯಕವೇ ಕೈಲಾಸ ಎಂದು ನಂಬಿದವರು ಹಾಜಬ್ಬ, ಆದ್ರೂ ಅವರ ಸಾಧನಗೆ, ತ್ಯಾಗಕ್ಕೆ ಸಂದ ಗೌರವ ಹಲವಾರು, ರಾಜ್ಯೋತ್ಸವ ಪ್ರಶಸ್ತಿ , 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡಿದೆ ಅಲ್ಲದೆ ಸಿಎನ್ಎನ್-ಐಬಿಎನ್ "Real Hero" ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ತನ್ನ ಪಠ್ಯದಲ್ಲಿ ಹಾಜಬ್ಬರ ಸಾಧನೆಯನ್ನು ಮಕ್ಕಳಿಗೆ ಉಣಬಡಿಸಿದೆ, ಮಂಗಳೂರಿನ ಇಸ್ಮಂತ್ ಪಾಜೀರ್ "ಹರೇಕಳ ಹಾಜಬ್ಬರ ಜೀವನ ಚರಿತ್ರೆ" ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಅಂಥರಾಷ್ಟ್ರೀಯ ಮಟ್ಟದಲ್ಲೂ ಹಾಜಬ್ಬರು ಗುರುತಿಸಲ್ಪಟ್ಟವರು, ಬ್ರಿಟಿಷ್ ಬ್ರಾಡ್ಕ್ಯಾಸ್ಟಿಂಗ್ ಕಾರ್ಪೊರೇಷನ್ "ಅನ್‌ ಲೆಟರಡ್‌ ಫ್ರುಟ್-ಸೆಲ್ಲರ ಇಂಡಿಯನ್‌ ಎಜುಕೇಶನ್‌ ಡ್ರೀಮ್" ಹೆಸರಿನಲ್ಲಿ ಲೇಖನವನ್ನು ಪ್ರಕಟಿಸಿದೆ.


ಉತ್ಸಾಹಕ್ಕೆ ಕೊನೆಯಿಲ್ಲ...


ಈಗ ಹಾಜಬ್ಬರು ತಮ್ಮ ಉರಿನಲ್ಲೇ ಕಾಲೇಜನ್ನು ನಿರ್ಮಿಸಲು ಓಡಾಡುತ್ತಿದ್ದಾರೆ, ದೂರದ ದೇರಳಕಟ್ಟೆಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಜಬ್ಬರ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಹರೇಕಳಲ್ಲೇ ಕಾಲೇಜು ಶಿಕ್ಷವನ್ನು ಪಡೆದುಕೊಳ್ಳಲಿದ್ದಾರೆ.


ನಾನು ಮೊದಲೇ ಹೇಳಿದಂತೆ ಹಾಜಬ್ಬರೇ ಬದುಕೇ ಒಂದು ಆದರ್ಶ. ಅವಮಾನ ಎನ್ನಿಸುವಂತ ಸನ್ನಿವೇಶಗಳು ಎಲ್ಲರ ಜೀವನದಲ್ಲೂ ಸಾಮಾನ್ಯ, ಅದರಿಂದ ಕುಗ್ಗುವುದಲ್ಲಾ, ಬದಲಿಗೆ ಅದೊಂದು ಅವಕಾಶವನ್ನಾಗಿ ತೆಗೆದುಕೊಂಡಲ್ಲಿ ಮಾತ್ರ ಹಾಜಬ್ಬರಂತೆ ತನ್ನ ಸುತ್ತಲಿನವರ ಬಾಳನ್ನು ಬೆಳಗಲು ಸಾಧ್ಯ. ಈಗಲೂ ಹಾಜಬ್ಬರು ತಾನೇ ಕಟ್ಟಿದ ಶಾಲೆಗೆ ತಾನು ಒಬ್ಬ ಸಾರ್ವಜನಿಕ ಎಂದೇ ತಮ್ಮನ್ನು ಕರೆದುಕೊಳ್ಳುತ್ತಾರೆ. ಶಾಲೆಗೆ, ಶಿಕ್ಷಣಕ್ಕೆ ತನ್ನ ಬದುಕನ್ನೇ ಮೀಸಲಿಟ್ಟ ಈ ಅಕ್ಷರ ಸಂತನನ್ನು ಕಂಡಾಗ ನಂಗೆ ನೆನಪಾಗುವುದು ಡಿವಿಜಿ ಅವರ ಸಾಲುಗಳು


"ಕಾನನದಿ ಮಲ್ಲಿಗೆಯು ಮೌನದಿಂ ಬಿರುದು


ನಿಜ ಸೌರಭವ ಸೂಸಿ ನಲವಿಂ


ತಾನೆಲೆಯ ಪಿಂತಿರ್ದು ದೀನತೆಯ ತೋರಿ


ಅಭಿಮಾನವನ್ನು ತೊರೆದು


ಕೃತಕೃತ್ಯತೆಯ ನೆಸೆವಂತೆ


ಉಪಕಾರಿ ನಾನು ಎನ್ನುಪಕೃತಿಯು


ಜಗಕೆಂಬ, ವಿಪರೀತ ಮತಿಯನಳಿದು


ವಿಪುಲಾಶ್ರಯವನೀವ ಸುಫಲ


ಸುಮಭರಿತ ಪಾದಪದಂತೆ


ನೈಜಮಾದೊಳ್ಪಿನಿಂ ಬಾಲ್ವವೊಳು......"