ಮೈಂತ್ರಾ ವ್ಯಾಪಾರ ಜಾಲತಾಣದಲ್ಲಿ ಅತಿ ಹೆಚ್ಚು ಉಡುಪುಗಳನ್ನು ಮಾರಾಟ ಮಾಡಿ 3.4 ಕೋಟಿ ರೂಪಾಯಿ ಗಳಿಸಿದ ಮಧ್ಯಪ್ರದೇಶದ ಗೃಹಿಣಿ

ಮಧ್ಯಪ್ರದೇಶದ ಗೃಹಿಣಿ ರಾಖಿ ಖೇರಾ ವಾಲ್ ಮಾರ್ಟ್ ವ್ಯಾಪಾರ ಸಂಸ್ಥೆಯ ನೆರವಿನೊಂದಿಗೆ ಫ್ಲಿಪ್ ಕಾರ್ಟ್, ಜಬೋಂಗ್ ಮತ್ತು ಮೈಂತ್ರಾ ವ್ಯಾಪಾರ ಜಾಲತಾಣಗಳಲ್ಲಿ ಗರ್ಭಿಣಿಯರ ಉಡುಪುಗಳು ಮತ್ತು ಪಾಶ್ಚಿಮಾತ್ಯ ಶೈಲಿಯ ಉಡುಗೆ-ತೊಡುಗೆಗಳನ್ನು ಎಲ್ಲರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಮೈಂತ್ರಾ ವ್ಯಾಪಾರ ಜಾಲತಾಣದಲ್ಲಿ ಅತಿ ಹೆಚ್ಚು ಉಡುಪುಗಳನ್ನು ಮಾರಾಟ ಮಾಡಿ 3.4 ಕೋಟಿ ರೂಪಾಯಿ ಗಳಿಸಿದ ಮಧ್ಯಪ್ರದೇಶದ ಗೃಹಿಣಿ

Thursday October 17, 2019,

3 min Read

ಮಧ್ಯಪ್ರದೇಶದ ಸಣ್ಣ ಪಟ್ಟಣವಾದ ಅಶೋಕ ನಗರದಲ್ಲಿ ಬೆಳೆದ 43 ವರ್ಷ ವಯಸ್ಸಿನ ರಾಖಿ ಖೇರಾ ಯಾವಾಗಲೂ ಒಬ್ಬ ಉತ್ತಮ ಫ್ಯಾಷನ್ ಡಿಸೈನರ್ ಆಗಬೇಕೆಂದು ಬಯಸುತಿದ್ದರು.


ಆದರೆ ಅವರು ಬೆಳೆದ ಕಾಲದಲ್ಲಿ ಫ್ಯಾಷನ್ ಡಿಸೈನರ್ ವೃತ್ತಿ ಸಾಂಪ್ರದಾಯಿಕವಾದ ವೃತ್ತಿಯಾಗಿರಲಿಲ್ಲ. ಅದರಿಂದಾಗಿ ಅವರ ಕುಟುಂಬದವರು ಆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ರಾಖಿಯವರಿಗೆ ಅವಕಾಶ ನೀಡಲಿಲ್ಲ ಮತ್ತು ಅವರು ಅದರ ಬದಲಾಗಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು.


2013 ರವರೆಗೆ ಅವರು ಗುರುಗ್ರಾಮದಲ್ಲಿ ಎರಡು ಮಕ್ಕಳ ಸುಖೀ ಕುಟುಂಬವನ್ನು ಆರೈಕೆ ಮಾಡುತಿದ್ದ ಗೃಹಿಣಿಯಾಗಿದ್ದರು. ಆಗ ಅವರಿಗೆ ಫ್ಯಾಷನ್ ಡಿಸೈನಿಂಗ್ ಕ್ಷೇತ್ರವನ್ನು ಪ್ರವೇಶಿಸುವ ಆಲೋಚನೆ ಪುನಃ ಬಂದಿತು. ತಮ್ಮ ಪತಿಯ ಬೆಂಬಲದೊಂದಿಗೆ ಅವರು ಗರ್ಭಿಣಿಯರ ಸಿದ್ಧ ಉಡುಪುಗಳನ್ನು ತಯಾರಿಸಲು ಪ್ರಾರಂಭಿಸಿದರು.


“ನಾನು ಗರ್ಭಿಣಿಯಾಗಿದ್ದಾಗ ನನಗೆ ಸೂಕ್ತವಾದ ಮತ್ತು ಉತ್ತಮ ಶೈಲಿಯ ಉಡುಪುಗಳನ್ನು ಹುಡುಕುವುದು ಬಹಳ ಕಷ್ಟಕರವಾಯಿತು. ಇದರಿಂದಾಗಿ ನಾನು 2013 ರಲ್ಲಿ ಗರ್ಭಿಣಿಯರಿಗಾಗಿ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ಬಾಡಿಗೆ ನೀಡಲು ನಿರ್ಧರಿಸಿದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ದುರಾದೃಷ್ಟವೋ ಏನೋ ಅವರ ಈ ಪ್ರಯತ್ನ ಹೆಚ್ಚು ಯಶಸ್ವಿಯಾಗಲಿಲ್ಲ. ಆದರೆ ರಾಖಿ ಎದೆಗುಂದಲಿಲ್ಲ ಮತ್ತು ಅವರ ಕನಸನ್ನು ಜೀವಂತವಾಗಿಯೇ ಇಟ್ಟುಕೊಂಡರು.

ಭಾವೀ ತಾಯಂದಿರಿಗೆ ಸೂಕ್ತವಾದ ಉಡುಪು

ಮತ್ತೆ 2014 ರಲ್ಲಿ 5 ಲಕ್ಷ ಬಂಡವಾಳದೊಂದಿಗೆ ಅವರು ಪಾಶ್ಚಿಮಾತ್ಯ ಶೈಲಿಯ ಉಡುಪುಗಳು ಮತ್ತು ಭಾವೀ ತಾಯಂದಿರಿಗಾಗಿ ಗರ್ಭಿಣಿಯರ ಉಡುಪುಗಳ ತಮ್ಮ ಸ್ವಂತ ಬ್ರಾಂಡೊಂದನ್ನು ಪ್ರಾರಂಭಿಸಿದರು. ಇದರೊಂದಿಗೆ ಅಭಿತಿ ಬೆಲ್ಲಾ ಎಂಟರ್ ಪ್ರೈಸಸ್ (ಇಟಾಲಿಯನ್ ಭಾಷೆಯಲ್ಲಿ ಸುಂದರ ಉಡುಪು ಎಂಬ ಅರ್ಥ) ಉದಯವಾಯಿತು.


ಈ ಸಮಯದಲ್ಲಿ ಭಾರತದಲ್ಲಿ ಇ-ಕಾಮರ್ಸ್ ವ್ಯಾಪಾರ ತಂತ್ರವು ಶುರುವಾಗಿತ್ತು. ರಾಖಿ ಫ್ಲಿಪ್ ಕಾರ್ಟಿನಲ್ಲಿ ಗರ್ಭಿಣಿಯರ ಉಡುಪುಗಳನ್ನು ಮಾರತೊಡಗಿದರು. ಫ್ಲಿಪ್ ಕಾರ್ಟ್ ಅವರಿಗೆ ಬ್ರಾಂಡಿಂಗ್, ಕ್ಯಾಟಲಾಗಿಂಗ್, ಅಪ್ ಲೋಡಿಂಗ್ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಿತು. ಅದಾದ ನಂತರ ಅಭಿತಿ ಬೆಲ್ಲಾ ಮತ್ತು ಮೈನ್4ನೈನ್ ಎಂಬ ಎರಡು ಬ್ರಾಂಡುಗಳನ್ನು ರಾಖಿ ಮಾರಲು ಪ್ರಾರಂಭಿಸಿದರು.


ನಂತರ ನಾನು ಮೈಂತ್ರಾದಲ್ಲಿ ಉಡುಪುಗಳ ಮಾರಾಟ ಪ್ರಾರಂಭಿಸಿದೆ ಮತ್ತು ಇದೀಗ ಅಭಿತಿ ಬೆಲ್ಲಾ ಅಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬ್ರಾಂಡ್ ಆಗಿದೆ. ಇದರಿಂದ ಉತ್ತೇಜಿತಳಾಗಿ ನಾನು 2017 ರಲ್ಲಿ ಕಲರ್ ಬ್ಲಾಕ್ ಎನ್ನುವ ಮೂರನೆಯ ಬ್ರಾಂಡನ್ನು ಮಾರಲು ತೊಡಗಿದೆ” ಎಂದು ಅವರು ಹೇಳುತ್ತಾರೆ. ರಾಖಿಯವರ ಎಲ್ಲಾ ಬ್ರಾಂಡುಗಳು ಆನ್ ಲೈನ್ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

“ನಮಗೆ ಮೈಂತ್ರಾದಿಂದ ಹೆಚ್ಚು ಬೇಡಿಕೆ ಬರುತ್ತಿದೆ. ನಾವು ಎಲ್ಲಾ ಟ್ರೆಂಡುಗಳ ಮತ್ತು ಆಧುನಿಕ ಶೈಲಿಯ ಉಡುಪುಗಳನ್ನು ಮಾರುತ್ತೇವೆ” ಎಂದು ಅವರು ಹೇಳುತ್ತಾರೆ.


ರಾಖಿಯವರಿಗೆ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಯಾವುದೇ ಪೂರ್ವ ಅನುಭವವಿರಲಿಲ್ಲವೆಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಆದರೆ ಅವರಿಗೆ ವಿವಿಧ ಉಡುಪುಗಳ ಶೈಲಿ ಮತ್ತು ವಿನ್ಯಾಸದ ಮೇಲೆ ಅತೀವ ಆಸಕ್ತಿಯಿತ್ತು.


“ನಾವು ಉಡುಪುಗಳ ವಿನ್ಯಾಸವನ್ನು ಹವ್ಯಾಸಿ ವಿನ್ಯಾಸಗಾರರಿಗೆ ನೀಡುತ್ತೇವೆ. ಇವರಲ್ಲಿ ಕೆಲವರು ಎನ್ ಐ ಎಫ್ ಟಿ ಗೆ ಸೇರಿದವರಾಗಿದ್ದಾರೆ. ಉಡುಪುಗಳು ಗುರುಗ್ರಾಮ ಮತ್ತು ಫರೀದಾಬಾದಿನಲ್ಲಿರುವ ಉತ್ಪಾದನಾ ಘಟಕಗಳಲ್ಲಿ ತಯಾರಾಗುತ್ತವೆ. ನಾವು ಇದುವರಗೆ ಎರಡೂ ಬ್ರಾಂಡುಗಳ 800 ವಿನ್ಯಾಸಗಳ ಉಡುಪು ತಯಾರಿಸಿದ್ದೇವೆ ಮತ್ತು ಸುಮಾರು ಎರಡು ಲಕ್ಷ ಆರ್ಡರುಗಳನ್ನು ಸರಬರಾಜು ಮಾಡಿದ್ದೇವೆ” ಎಂದು ಅವರು ಹೇಳುತ್ತಾರೆ.

ಅಭೂತಪೂರ್ವ ಬೆಂಬಲ

ಗರ್ಭಿಣಿಯರ ಉಡುಪು ಮತ್ತು ಪಾಶ್ಚಿಮಾತ್ಯ ಶೈಲಿಯ ಉಡುಪುಗಳನ್ನು ಫ್ಲಿಪ್ ಕಾರ್ಟ್, ಜಬೋಂಗ್ ಮತ್ತು ಮೈಂತ್ರಾ ವ್ಯಾಪಾರ ಸಂಸ್ಥೆಗಳಿಗೆ ಒದಗಿಸಲಾಗುತ್ತಿದೆ. ಈ ಸಂಸ್ಥೆಗಳು 2018 ರಲ್ಲಿ ವಾಲ್ ಮಾರ್ಟ ಸಂಸ್ಥೆಯ ಅಧೀನಕ್ಕೊಳಪಟ್ಟವು. ರಾಖಿಯವರ ಉದ್ಯಮವು ಫ್ಲಿಪ್ ಕಾರ್ಟ್ ಮತ್ತು ಮೈಂತ್ರಾದೊಂದಿಗಿನ ವ್ಯಾಪಾರದಿಂದ ಬಂದ ಆದಾಯದಲ್ಲಿ ಪ್ರತಿಶತಃ 30 ಮತ್ತು 15 ರಷ್ಟು ಪ್ರಗತಿಯನ್ನು ಕಂಡಿದೆ. 2018-2019 ರ ಒಟ್ಟು ಆದಾಯವು 3.4 ಕೋಟಿ ರೂಪಾಯಿಗಳಾಗಿದೆ ಮತ್ತು ರಾಖಿ ಮುಂದಿನ ವರ್ಷದಲ್ಲಿ 4.5 ಕೋಟಿ ಆದಾಯ ಗಳಿಸುವ ಗುರಿ ಹೊಂದಿದ್ದಾರೆ.


ವಾಲ್ ಮಾರ್ಟ್ ಸಂಸ್ಥೆಯ ಮಹಿಳಾ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಬೆಂಬಲದಿಂದಾಗಿ ಅವರು ಬಹುಬೇಗ ಜನಪ್ರಿಯತೆಯನ್ನು ಗಳಿಸಲು ಮತ್ತು ಯಶಸ್ವಿಯಾಗಲು ಕಾರಣವಾಯಿತೆಂದು ರಾಖಿ ಹೇಳುತ್ತಾರೆ.


“ಮಹಿಳಾ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವು ವ್ಯಾಪಾರದಲ್ಲಿ ಯಾವುದೇ ವೃತ್ತಿಪರ ಅನುಭವವಿಲ್ಲದ ನನ್ನಂತಹ ಉದ್ಯಮಿಗಳಿಗೆ ವರದಾನವಾಗಿದೆ. ಈ ಕಾರ್ಯಕ್ರಮವು ವೃತ್ತಿಪರ ಕೌಶಲ್ಯಗಳನ್ನು ನೀಡಿತಲ್ಲದೆ ತುಂಬು ಆತ್ಮವಿಶ್ವಾಸವನ್ನು ನನ್ನಲ್ಲಿ ಮೂಡಿಸಿ ನನ್ನಂತಹ ಮಹಿಳಾ ಉದ್ಯಮಿಗಳನ್ನು ಪರಿಚಯಗೊಳಿಸಿತು. ಅವರು ನನಗೆ ಬೆಲೆಕಟ್ಟಲಾಗದ ಮಾರ್ಗದರ್ಶಕರಾಗಿದ್ದಾರೆ” ಎಂದು ರಾಖಿ ಹೇಳುತ್ತಾರೆ.

ಈ ಕಾರ್ಯಕ್ರಮವು ರಾಖಿಯವರಿಗೆ ವ್ಯಾಪಾರದ ಹಣಕಾಸು ನಿರ್ವಹಣೆ, ಲಾಜಿಸ್ಟಿಕ್ಸ, ಡಿಜಿಟಲ್ ಮಾರ್ಕೆಟೆಂಗ್ ಮತ್ತು ನೆಟ್ ವರ್ಕಿಂಗ್ ಕಾರ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿತು. ರಾಖಿಯವರು ಬೇರೆಯ ಮಹಿಳಾ ಉದ್ಯಮಿಗಳ ಒಡನಾಟದಿಂದ ಈ ಕ್ಷೇತ್ರದ ವ್ಯಾಪಾರದ ಗುಟ್ಟುಗಳನ್ನು ಅರಿತುಕೊಂಡರು.


ವಾಲ್ ಮಾರ್ಟಿನ ಭಾರತದ ಶಾಖೆಯ ಸಿಇಓ ಕ್ರಿಸ್ ಐಯ್ಯರ್ ಈ ಕಾರ್ಯಕ್ರಮವು ಬಹಳಷ್ಟು ಸಂಖ್ಯೆಯ ಮಹಿಳಾ ಉದ್ಯಮಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆಯೆಂಬುದನ್ನು ವಿವರಿಸುತ್ತಾ ಹೀಗೆ ಹೇಳುತ್ತಾರೆ.


“ವಾಲ್ ಮಾರ್ಟಿನ ಮಹಿಳಾ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿಗಳು ತಮ್ಮವ್ಯಾಪಾರವನ್ನು ಸದೃಢವಾಗಿಸಿಕೊಳ್ಳಲು ನೆರವಾಗುವ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿಲಾಗುತ್ತದೆ. ಇದರಿಂದಾಗಿ ಅವರು ಇಂದಿನ ಸ್ಫರ್ಧಾತ್ಮಕ ವ್ಯಾಪಾರಿ ಯುಗದಲ್ಲಿ ಯಶಸ್ವಿಯಾಗಿ ಸ್ಪರ್ಧಿಸಬಹುದಾಗಿದೆ. ನಾವು ಮೂರು ಗುಂಪುಗಳಲ್ಲಿ 150 ಮಹಿಳಾ ಉದ್ಯಮಿಗಳಿಗೆ ಶ್ರದ್ಧೆಯಿಂದ ತರಬೇತಿ ನೀಡಿದ್ದೇವೆ. ಇದರಿಂದಾಗಿ ಇವರು ವಾಲ್ ಮಾರ್ಟ್ ಸಂಸ್ಥೆಯೊಂದಕ್ಕೇ ಅಲ್ಲದೇ ಸಂಬಂಧಿಸಿದ ಮಾರುಕಟ್ಟೆಗೆ ಉತ್ತಮ ಉತ್ಪನ್ನಗಳನ್ನು ಸರಬರಾಜು ಮಾಡುವಲ್ಲಿ ಸಫಲರಾಗಿದ್ದಾರೆ. ನಮ್ಮ ವಾಲ್ ಮಾರ್ಟಿನ ಮೂರನೆಯ ಆವೃತ್ತಿ ಪತ್ರಿಕೆಯಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಮತ್ತು ಉತ್ತಮ ಮಹಿಳಾ ಉದ್ಯಮಿಗಳ ಹೆಸರನ್ನು ಪ್ರಕಟಿಸಿದ್ದೇವೆ. ರಾಖಿ ಖೇರಾ ಅವರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಉದ್ಯಮದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ನಮ್ಮ ತರಬೇತಿ ಕಾರ್ಯಕ್ರಮದಿಂದ ಅವರ ಉದ್ಯಮಕ್ಕೆ ಬಹಳಷ್ಟು ಸಹಾಯವಾಗಿದೆ ಎಂಬುದನ್ನು ಅವರು ವ್ಯಕ್ತಪಡಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ”


ರಾಖಿಯವರಿಗೆ ನೋಟು ಅಮಾನ್ಯೀಕರಣ ಸಮಯದಲ್ಲಿ ವ್ಯಾಪಾರವನ್ನು ನಡೆಸುವುದು ಬಹಳಷ್ಟು ಕಷ್ಟಕರವೆನಿಸಿತು. ಆದರೆ ಮುಂದೆ ಅದು ಅವರಿಗೆ ವರದಾನವಾಗಿ ಪರಿಣಮಿಸಿತು. “ನಮ್ಮ ನಗದು ವ್ಯವಹಾರ ಕಡಿಮೆಯಾಗಿ ನಾವು ಇಂದು ಸಂಪೂರ್ಣವಾಗಿ ಡಿಜಿಟಲ್ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿದ್ದೇವೆ” ಎಂದು ಅವರು ಹೇಳುತ್ತಾರೆ.


ಮಹಿಳೆಯರು ಯಾವುದೇ ಉದ್ಯಮದಲ್ಲಿ ತೊಡಗಿಕೊಳ್ಳಲು ಹೆದರಬಾರದೆಂದು ರಾಖಿ ಹೇಳುತ್ತಾರೆ. “ನಾನು ಮುಂದಿನ ದಿನಗಳಲ್ಲಿ ಹಲವಾರು ಬ್ರಾಂಡುಗಳೊಂದಿಗೆ ವಿಸ್ತರಿಸಿ ಈ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಲು ನಿರ್ಧರಿಸಿದ್ದೇನೆ” ಎಂದು ಅವರು ದೃಢವಾಗಿ ಹೇಳುತ್ತಾರೆ.


“ನಾನು ಪ್ರಾರಂಭಿಸಿದಾಗ ನನಗೂ ಏನೂ ಗೊತ್ತಿರಲಿಲ್ಲ. ಪ್ರಯತ್ನಪಡಿ, ಕಷ್ಟಪಟ್ಟು ಕೆಲಸ ಮಾಡಿ, ಖಂಡಿತ ಯಶಸ್ಸು ನಿಮ್ಮದಾಗುತ್ತದೆ” ಎಂದು ರಾಖಿ ಎಲ್ಲರಿಗೂ ಹೇಳುತ್ತಾರೆ.