ಮೇಘಾಲಯದ ಮಾದರಿ ಐಎಎಸ್ ಅಧಿಕಾರಿ ರಾಮ್ ಸಿಂಗ್

ಮೇಘಾಲಯದ ಐಎಎಸ್ ಅಧಿಕಾರಿ ರಾಮ್ ಸಿಂಗ್ ಸ್ಥಳೀಯ ರೈತರ ಮಾರುಕಟ್ಟೆಯಿಂದ ಸಾವಯವ ಉತ್ಪನ್ನಗಳನ್ನು ಖರೀದಿಸಲು ಪ್ರತಿವಾರ 10 ಕಿಲೋಮೀಟರ್ ದೂರ ನಡೆದುಕೊಂಡೇ ಹೋಗುತ್ತಾರೆ. ಅದಲ್ಲದೇ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಲುವಾಗಿ ಅವರ ಕಛೇರಿಯಲ್ಲಿ ಯಾರೇ ಆಗಲಿ ಸಿಹಿತಿಂಡಿಗಳನ್ನು ಹಂಚುವುದನ್ನು ನಿಷೇಧಿಸಿದ್ದಾರೆ ಇತರರಿಗೆ ಸ್ಪೂರ್ತಿ ನೀಡುವ ವ್ಯಕ್ತಿಯಾಗಿದ್ದಾರೆ.

ಮೇಘಾಲಯದ ಮಾದರಿ ಐಎಎಸ್ ಅಧಿಕಾರಿ ರಾಮ್ ಸಿಂಗ್

Monday September 30, 2019,

2 min Read

ಪ್ರಪಂಚದಲ್ಲಿ ಕಲುಷಿತಗೊಳ್ಳತ್ತಿರುವ ವಾತಾವರಣದ ವಿರುದ್ಧ ಹೋರಾಡುತ್ತಿರುವ ಗ್ರೇಟಾ ಥಾನ್ಬರ್ಗ್, ನ್ಯೂಯಾರ್ಕ್ ನಗರದಲ್ಲಿ ಕಳೆದ ಸೋಮವಾರ ಜರುಗಿದ ವಿಶ್ವಸಂಸ್ಥೆಯ ವಾತಾವರಣ ಕಮ್ಮಟದಲ್ಲಿ ಏರುತ್ತಿರುವ ಜಗತ್ತಿನ ವಾತಾವರಣದ ಉಷ್ಣತೆ, ಏರುತ್ತಿರುವ ಸಮುದ್ರಗಳ ಮಟ್ಟ, ಕರಗುತ್ತಿರುವ ಸಮುದ್ರದ ಮಂಜುಗಡ್ಡೆಗಳು, ಕಲುಷಿತ ನದಿಗಳು, ಉಸಿರಾಟಕ್ಕೆ ಯೋಗ್ಯವಲ್ಲದ ಗಾಳಿ ಮತ್ತು ಸುಟ್ಟುಹೋಗುತ್ತಿರುವ ಅರಣ್ಯಗಳು ಇವೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ನಿಮಗೆಷ್ಟು ಧೈರ್ಯ ಎಂದು ಅಲ್ಲಿ ಭಾಗವಹಿಸಿದ್ದ ವಿಶ್ವದ ನಾಯಕರೆಲ್ಲರನ್ನೂ ತರಾಟೆಗೆ ತೆಗೆದುಕೊಂಡು ಇಂತಹ ವಿಷಯಗಳನ್ನು ನನ್ನಂತಹ ಚಿಕ್ಕಹುಡುಗಿ ನಿಮಗೆ ಹೇಳಬೇಕೆ ಎಂದು ಕೇಳಿದರು.


ಬದಲಾಗುತ್ತಿರುವ ವಾತಾವರಣದ ಬಗ್ಗೆ ಇಂತಹ ಚರ್ಚೆಗಳು ಸಾಕಷ್ಟು ನಡೆಯುತ್ತಿರುವಾಗ, ಇದರ ಬಗ್ಗೆ ಎನಾದರೂ ಕಿಂಚಿತ್ತು ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ನಾವು ನಮ್ಮ ದೈನಂದಿನ ಜೀವನದಲ್ಲಿ ಸಾರ್ವಜನಿಕ ಸಾರಿಗೆ ಬಳಸುವುದು, ಪ್ಲಾಸ್ಟಿಕ್ಕಿನ ಬದಲಾಗಿ ಬಟ್ಟೆ ಬ್ಯಾಗು ಉಪಯೋಗಿಸುವುದು ಇಂತಹ ಕೆಲವು ಅಭ್ಯಾಸಗಳನ್ನು ಬೆಳೆಸಿಕೊಂಡರೆ ನಮ್ಮೆಲ್ಲರ ಸಾಮೂಹಿಕ ಪ್ರಯತ್ನದಿಂದಾಗಿ ನಾವು ವಾಸಿಸುತ್ತಿರುವ ಭೂಮಿಗೆ ಹೆಚ್ಚಿನ ಲಾಭವಾಗವುದರಲ್ಲಿ ಯಾವುದೇ ಸಂಶಯವಿಲ್ಲ. ಐಎಎಸ್ ಅಧಿಕಾರಿ ರಾಮ್ ಸಿಂಗ್ ಇಂತಹ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದಾರೆ.


ರಾಮ್ ಸಿಂಗ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಸ್ಥಳೀಯ ಮಾರುಕಟ್ಟೆಯಿಂದ ವಾಪಾಸಾಗುತ್ತಿರುವುದು. (ಚಿತ್ರಕೃಪೆ: ಈಸ್ಟ್ ಮೋಜೋ)




ರಾಮ್ ಸಿಂಗ್ ತಾವು ನಂಬಿರುವ ತತ್ವಗಳನ್ನು ಜೀವನದಲ್ಲಿಯೂ ಅಳವಡಿಸಿಕೊಂಡಿದ್ದಾರೆ. ಮೇಘಾಲಯದ ಪಶ್ಚಿಮ ಗಾರೋ ಗುಡ್ಡಗಳ ಜಿಲ್ಲಾಧಿಕಾರಿಯಾಗಿರುವ ಇವರು ವಾರಕ್ಕೊಮ್ಮೆ ಸಾವಯವ ಉತ್ಪನ್ನಗಳನ್ನು ಖರೀದಿಸಲು 10 ಕಿಲೋಮೀಟರ್ ದೂರ ನಡೆದುಕೊಂಡೇ ಹೋಗುತ್ತಾರೆ. ಸೂಪರ್ ಮಾರ್ಕೆಟ್ಟುಗಳ ಗ್ರಾಹಕರಾಗಿರುವ ಇಂದಿನ ಜನರ ಮನೋಭಾವನೆಯನ್ನು ಅವರು ಅಳವಡಿಸಿಕೊಂಡಿರುವುದಿಲ್ಲ. ಪ್ಲಾಸ್ಟಿಕ್ ಬ್ಯಾಗಿನ ಬದಲಾಗಿ ಬಿದಿರಿನ ಬುಟ್ಟಿಯೊಂದನ್ನು ಹೆಗಲಿಗೆ ತಗುಲುಹಾಕಿಕೊಂಡು ಖರೀದಿಸಿದ ಪದಾರ್ಥಗಳನ್ನು ಮನೆಗೆ ಒಯ್ಯುವ ಇವರು ನೀಳಕಾಯದ ಸದೃಢ ದೇಹಿಯಾಗಿದ್ದಾರೆ.


ಅವರು ತಮ್ಮ ಪರಿಸರ ಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಈಸ್ಟ್ ಮೊಜೋ ದೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದ್ದಾರೆ,


“ಬಹಳಷ್ಟು ಜನರು ತರಕಾರಿ ತುಂಬಿದ ಚೀಲವನ್ನೊತ್ತು ನಡೆಯುವುದು ಸಾಧ್ಯವಾಗದ ಮಾತು ಎಂದು ನನಗೆ ಹೇಳಿದರು. ನಾನು ಅವರಿಗೆ ಚೀಲದ ಬದಲಾಗಿ ಕೋಕ್ ಚೆಂಗ್ (ಸ್ಥಳೀಯ ಬಿದಿರಿನ ಬುಟ್ಟಿ) ಬಳಸಲು ಸಲಹೆ ನೀಡಿದೆ. ಇದರಿಂದಾಗಿ ಪ್ಲಾಸ್ಟಿಕ್ಕಿನ ಬಳಕೆ ನಿಲ್ಲುತ್ತದೆ ಎಂದು ಹೇಳಿದೆ. ಕೆಲವರು ಇದನ್ನು ಕೇಳಿ ನಕ್ಕರು. ನಾನು ನನ್ನ ಪತ್ನಿಯ ಜೊತೆ ಸ್ಥಳೀಯ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸಿ ಬಿದಿರಿನ ಬುಟ್ಟಿಯಲ್ಲಿ ತುಂಬಿಕೊಂಡು ಅದನ್ನು ನನ್ನ ಹಿಂದೆ ನೇತುಹಾಕಿಕೊಂಡು ಬಂದೆ. ಇದು ನನಗೆ ಬಹಳಷ್ಟು ಸಹಕಾರಿ ಎಂಬುದು ಅರಿವಾಯಿತು. ಇಂದಿನ ಯುವಕೆರು ಸದೃಡವಾಗಿಲ್ಲ. ಅವರು ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಅವರು ಸೇವಿಸುವ ಆಹಾರದ ಬಗ್ಗೆ ನಿಯಂತ್ರಣ ಹೊಂದಿರಬೇಕು.”


ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ ರಾಮ್ ಸಿಂಗ್ ಹಿಮಾಚಲ ಪ್ರದೇಶದವರಾಗಿದ್ದು 2017 ರ ಡಿಸೆಂಬರ್ ಒಂದರಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದಾರೆ.


ವಾರಾಂತ್ಯಗಳಲ್ಲಿ 21 ಕಿಲೋಗ್ರಾಮ್ ತರಕಾರಿ ಖರೀದಿ, ಪ್ಲಾಸ್ಟಿಕ್ನನ ಬಳಕೆ ಇಲ್ಲ, ವಾಹನ ಮಾಲಿನ್ಯ ಇಲ್ಲ, ಟ್ರಾಪಿಕ್ ಜಾಮ್ ಇಲ್ಲ, ಸದೃಢ ಭಾರತ, ಸದೃಢ ಮೇಘಾಲಯ, ಸಾವಯವ ಆಹಾರ ಮಾತ್ರ ತಿನ್ನುವುದು, 10 ಕಿಲೋಮೀಟರ್ ಬೆಳಗಿನ ನಡಿಗೆ, ಈ ಎಲ್ಲಾ ವಿಷಯಗಳನ್ನು ರಾಮ್ ಸಿಂಗ್ ತಾವು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ನಡೆಯುತ್ತಿರುವ ಚಿತ್ರದ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


ಒಂದು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರ ಜೊತೆಗೆ ರಾಮ್ ಸಿಂಗ್ ಸದೃಢ ದೇಹವನ್ನು ಹೊಂದಿರಬೇಕಾದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳುತ್ತಾರೆ. ಸಂಚಾರ ದಟ್ಟಣೆಯ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಸದೃಢತೆಯ ಅವಶ್ಯಕತೆಯನ್ನು ಎತ್ತಿಹಿಡಿಯಲು ಅವರು ತೂರಾ ನಗರದಲ್ಲಿ ನಡೆದುಕೊಂಡೇ ಓಡಾಡುತ್ತಾರೆ. ಇದು ಇತರರಿಗೆ ಮಾದರಿಯಾಗಿದೆ. ವರದಿಗಳ ಪ್ರಕಾರ ಕಳೆದ ಆರು ವರ್ಷಗಳಿಂದ ತಮ್ಮ ಕಚೇರಿಯಲ್ಲಿ ಸಿಹಿ ಹಂಚುವುದನ್ನು ನಿಷೇಧಿಸಿದ್ದಾರೆ.


ಒಬ್ಬ ಮನುಷ್ಯನ ಕಾರ್ಯಗಳು ಇನ್ನೊಬ್ಬರಿಗೆ ಸ್ಪೂರ್ತಿ ನೀಡಬಲ್ಲವು ಎಂಬುದನ್ನು ನಂಬಿರುವ ರಾಮ್ ಸಿಂಗ್ “ಆಧುನಿಕ ಸಮಸ್ಯೆಗಳಿಗೆ ಸಾಂಪ್ರದಾಯಿಕ ಪರಿಹಾರಗಳಿವೆ. ಇವುಗಳನ್ನು ಅನುಸರಿಸುವ ಮೂಲಕ ನಾವು ಸದೃಢರಾಗಿ ಇರಬಹುದು” ಎಂದು ಅವರು ಎನ್ ಡಿ ಟಿವಿ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.