ಐಐಟಿ ಮಂಡಿಯ ಆವಿಷ್ಕಾರವು ನದಿಗಳಲ್ಲಿರುವ ಸಾವಯವ ಮಾಲಿನ್ಯಕಾರಕಗಳನ್ನು ಮತ್ತು ತೈಲಗಳನ್ನು ತೆಗೆದು ಹಾಕುವ ಸಾಮರ್ಥ್ಯ ಹೊಂದಿದೆ.
ಐಐಟಿ ಮಂಡಿಯ ಸಂಶೋಧಕರು ನೀರಿನಿಂದ ತೈಲವನ್ನು ಬೇರ್ಪಡಿಸುವ ಪರಿಹಾರ ಕ್ರಮವನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ನದಿಯ ನೀರನ್ನು ಸ್ವಚ್ಛಗೊಳಿಸಲು ಸಹ ವರದಾನವಾಗಲಿದೆ.
ಮಾಲಿನ್ಯವಾಗಿರುವ ಜಗತ್ತಿನ ಪ್ರಮುಖ ನದಿಗಳಲ್ಲಿ ಭಾರತದ ಗಂಗಾ ಮತ್ತು ಯಮುನಾ ನದಿಗಳು ಮುಂಚುಣಿಯಲ್ಲಿವೆ. ಈ ನದಿಗಳು ಹರಿಯುವ ರಾಜ್ಯಗಳಲ್ಲಿ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳನ್ನು ಹೊರಹಾಕುತ್ತಿರುವುದು ಒಂದು ಕಳವಳಕಾರಿ ಸಂಗತಿಯಾಗಿದೆ. ಗಂಗೆಯ ಭೀಕರ ಸ್ಥಿತಿಯನ್ನು ಈ ಸಂಖ್ಯೆಯು ಪ್ರತಿಫಲಿಸುತ್ತದೆ: ಹತ್ತಿರವಿರುವ ಟ್ಯಾನರಿಗಳಿಂದ ಪ್ರತಿನಿತ್ಯ 2,900 ಲೀಟರ್ ಕೊಳಚೆ ನೀರು ನದಿಯನ್ನು ಸೇರುತ್ತದೆ.
ಈ ಭೀತಿಯನ್ನು ನಿಗ್ರಹಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ನಮಾಮಿ ಗಂಗೆ ಎಂಬ ನದಿಯನ್ನು ಉಳಿಸುವ ಕಾರ್ಯಾಚರಣೆಯನ್ನು ಆರಂಭಿಸಿತ್ತು, ಇದರಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವೂ ಸೇರಿದೆ. ಅಂದಿನ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿಗಳು, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವರಾಗಿದ್ದ ನಿತಿನ್ ಗಡ್ಕರಿಯವರು ಹೀಗೆ ಹೇಳಿದ್ದರೆಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಗಂಗಾ ನದಿಯು 2020ರ ಮಾರ್ಚ್ ವೇಳೆಗೆ ಶೇಕಡಾ 100ರಷ್ಟು ಸ್ವಚ್ಛವಾಗಲಿದೆ ಎನ್ನುವ ಭಾವನೆಯಿದೆ.
ಸರ್ಕಾರಿ ಸಂಸ್ಥೆಗಳಲ್ಲದೇ ಕೆಲವು ಪರಿಸರ ಪ್ರೇಮಿಗಳು ನದಿಯ ಮಾಲಿನ್ಯ ಸಮಸ್ಯೆಯನ್ನು ನಿಭಾಯಿಸಲು ಕೆಲವು ಸ್ಥಳೀಯ ಪರಿಹಾರ ಕ್ರಮವನ್ನು ತಂದಿದ್ದಾರೆ.
ಐಐಟಿ ಮಂಡಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಹುಲ್ ವೈಶ್‌ರವರು ನದಿಗಳಿಂದ ಸಾವಯವ ಮಾಲಿನ್ಯಕಾರಕ ಮತ್ತು ತೈಲವನ್ನು ತೆಗೆದುಹಾಕುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಡಾ. ವೈಶ್ ಮತ್ತು ತಂಡದವರು ಡೀಸೆಲ್ ನಿಷ್ಕಾಸ ಮಸಿಯನ್ನು ಪಾಲಿಮರ್ ಸ್ಪಂಜುಗಳಲ್ಲಿ ಸಂಯೋಜಿಸಿ ನೀರಿನಿಂದ ತೈಲ ಮತ್ತು ಇತರ ಸಾವಯವ ವಸ್ತುಗಳನ್ನು ಹೊರ ಹೀರುವ ಸಾಮರ್ಥ್ಯದ ಕುರಿತು ಅಧ್ಯಯನ ನಡೆಸಿದ್ದಾರೆ.
ಇಂಗಾಲದ ನ್ಯಾನೋಟ್ಯೂಬ್‌ಗಳು, ಫಿಲ್ಟರ್ ಪೇಪರ್‌ಗಳು, ಮೆಶ್ ಫಿಲ್ಮ್ಸ್‌ಗಳು ಮತ್ತು ಗ್ರ್ಯಾಫೀನ್‌ಗಳು ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುತ್ತವೆ ಎಂದು ಯುವರ್ ಸ್ಟೋರಿ ಯೊಂದಿಗೆ ಮಾತನಾಡುತ್ತಾ ಡಾ. ವೈಶ್‌ರವರು ಹೇಳುತ್ತಾರೆ. ಮಸಿಯು ಶೇಕಡಾ 90 ರಿಂದ 98 ರಷ್ಟು ಇಂಗಾಲವನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ.
ಆದ್ದರಿಂದ, ಐಐಟಿ ಮಂಡಿಯ ತಂಡವು ಈ ಮಾಲಿನ್ಯಕಾರಕವನ್ನು ನೀರಿನಲ್ಲಿರುವ ತೈಲ ಮತ್ತು ಸಾವಯವ ಮಾಲಿನ್ಯಕಾರಕವನ್ನು ಹೀರಿಕೊಳ್ಳಲು ಬಳಸಿಕೊಳ್ಳಲು ನಿರ್ಧರಿಸಿತು. ಇದಕ್ಕಾಗಿ ತಂಡವು ನೀರನ್ನು ಹೀರಿಕೊಳ್ಳದ ಸ್ಪಂಜನ್ನು ಅಭಿವೃದ್ಧಿಪಡಿಸಿತು, ಇದು ಸಂಕೀರ್ಣ ಪೂರ್ವ ಚಿಕಿತ್ಸೆಗಳ ಅಗತ್ಯವಿಲ್ಲದೆ ವಿವಿಧ ತೈಲಗಳಿಗೆ ಹೆಚ್ಚಿನ ಹೊರಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಎಂಜಿನ್ ಎಣ್ಣೆಗೆ ಹೆಚ್ಚಿನ ಅಂದರೆ 39 ಗ್ರಾಂ/ಗ್ರಾಂ ತೈಲ ಹೊರಹೀರುವಿಕೆಯ ಸಾಮರ್ಥ್ಯವಿದೆ ಎಂದು ಅವರು ಕಂಡುಕೊಂಡರು. ಸ್ಪಂಜುಗಳು ಮರುಬಳಕೆ ಮಾಡಬಹುದಾದವು ಎಂದು ಕಂಡುಬಂದಿದೆ, ಮತ್ತು 10 ಬಾರಿ ಬಳಕೆಯ ನಂತರವೂ ಶೆಕಡಾ 95ರಷ್ಟು ದಕ್ಷತೆಯನ್ನು ಉಳಿಸಿಕೊಂಡಿದೆ.
ಪರಿಹಾರ ಕ್ರಮವನ್ನು ವಿವರಿಸುತ್ತಾ ಡಾ. ವೈಶ್‌ರವರು ಹೇಳುತ್ತಾರೆ,
ಸ್ಪಂಜಿನ ಮೇಲೆ ಮಸಿಯನ್ನು ಸಂಯೋಜಿಸುವ ಪ್ರಕ್ರಿಯೆಯು ಕೇವಲ ಎರಡು ನಿಮಿಷ ತೆಗೆದುಕೊಳ್ಳುತ್ತದೆ. ಕಲುಷಿತ ನದಿಗಳು ಮತ್ತು ಜಲ ಮೂಲಗಳನ್ನು ಸ್ವಚ್ಛಗೊಳಿಸಲು ಕಡಿಮೆ ವೆಚ್ಚದ ಮತ್ತು ಸುಲಭ ಪರಿಹಾರವನ್ನು ರಚಿಸುವುದು ನಮ್ಮ ಯೋಚನೆಯಾಗಿದೆ. ಈಗ, ನಾವು ಕೇವಲ ಶೇಕಡಾ 50ರಷ್ಟನ್ನು ಶುದ್ಧೀಕರಿಸಲು ಸಮರ್ಥರಾಗಿದ್ದೇವೆ. ನಾವು ವಾಷಿಂಗ್ ಮಷಿನ್ ಒಂದನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಅದನ್ನು ಸಂಶೋಧನೆಯೊಂದಿಗೆ ಸಂಯೋಜಿಸಲಾಗುವುದು. ಇದು ಹೊರಸೂಸುವ ಮೊದಲು ನೀರಿನಲ್ಲಿರುವ ಶೇಕಡಾ 70ರಷ್ಟು ಮಾಲಿನ್ಯಕಾರಕವನ್ನು ಕಡಿಮೆ ಮಾಡುತ್ತದೆ.