ಭಾರತದ ಮೊದಲ ಮಹಿಳಾ ಸೈಬರ್ ಅಪರಾಧ ತನಿಖಾಧಿಕಾರಿ ಧನ್ಯಾ ಮೆನನ್
ಸೈಬರ್ ಅಪರಾಧ ತನಿಖಾಧಿಕಾರಿಯಾಗಿ, ಪಟ್ಟಾತಿಲ್ ಧನ್ಯಾ ಮೆನನ್ ಸೈಬರ್ ಸ್ಟಾಕಿಂಗ್ ಮತ್ತು ನಿಂದನೆ, ಹಣಕಾಸಿನ ವಂಚನೆ ಮತ್ತು ಡೇಟಾ ಕಳ್ಳತನ ಸೇರಿದಂತೆ ಎಲ್ಲಾ ರೀತಿಯ ಪ್ರಕರಣಗಳನ್ನು ತನಿಖೆ ಮಾಡುತ್ತಾರೆ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸದ್ಯದಲ್ಲಿಯೇ ಸೈಬರ್ ಸೆಕ್ಯುರಿಟಿ ಅಕಾಡೆಮಿ ತೆರೆಯುವ ಗುರಿಯನ್ನು ಹೊಂದಿದ್ದಾರೆ.
ಭಾರತದ ಮೊದಲ ಮಹಿಳಾ ಸೈಬರ್ ಅಪರಾಧ ತನಿಖಾಧಿಕಾರಿ ಪಟ್ಟತಿಲ್ ಧನ್ಯಾ ಮೆನನ್, ಇಂದಿನ ಅಗತ್ಯತೆಗೆ ತಕ್ಕುದಾದ ಅಸಾಮಾನ್ಯವಾದ ವೃತ್ತಿಯನ್ನು ಆಯ್ದುಕೊಂಡಿರುವುದು ಗಮನಾರ್ಹವಾಗಿದೆ. ಇಂದಿನ ಶತಮಾನದಲ್ಲಿ ಸೈಬರ್ ಸುರಕ್ಷತೆ ಮತ್ತು ಸೈಬರ್ ಅಪರಾಧಗಳು ಪ್ರಮುಖ ವಿಷಯಗಳಾಗಿ ಗಮನ ಸೆಳೆಯುತ್ತಿವೆ.
ಬ್ರಿಟಿಷ್ ಕೊಲಂಬಿಯಾದ ಓಪನ್ ಯೂನಿವರ್ಸಿಟಿಯಿಂದ (ಆಪ್ಟೆಕ್ ಮೂಲಕ) ಬಿ ಟೆಕ್ ಮುಗಿಸಿದ ನಂತರ ಧನ್ಯಾ ಇತರರಂತೆ ಒಂದು ಸಾಧಾರಣ ಕೆಲಸಕ್ಕೆ ಸೇರಿಕೊಂಡರು. ಉತ್ತಮ ನೃತ್ಯಪಟು ಆಗಿದ್ದ ಧನ್ಯ ಮದುವೆಯ ನಂತರ ನೃತ್ಯವನ್ನು ತ್ಯಜಿಸಿ ಅವರ ಗಂಡನೊಂದಿಗೆ ವ್ಯವಹಾರದಲ್ಲಿ ಕೈಜೋಡಿಸಿದರು.
ದುರದೃಷ್ಟವಶಾತ್ ಅವರ ವ್ಯವಹಾರವು ವಿಫಲವಾಯಿತು, ತಮ್ಮ ಗಂಡನಿಂದ ಬೇರ್ಪಟ್ಟ ನಂತರ ಧನ್ಯಾ ಮುಂದೆ ಬದುಕಿನ ಮಾರ್ಗಗಳ ಕುರಿತು ಚಿಂತಾಕ್ರಾಂತರಾಗಿದ್ದರು. ಆ ಸಮಯದಲ್ಲಿಯೇ ಅವರ ಅಜ್ಜನ ಸಹೋದರರೊಬ್ಬರು ಸೈಬರ್ ಕಾನೂನನ್ನು ಅಧ್ಯಯನ ಮಾಡಲು ಸೂಚಿಸಿದರು. ನಂತರ ಅವರು ಪುಣೆಯ ಏಷ್ಯನ್ ಸ್ಕೂಲ್ ಆಫ್ ಸೈಬರ್ ಕಾನೂನಿನಿಂದ ಸೈಬರ್ ಕಾನೂನಿನಲ್ಲಿ ಒಂದು ವರ್ಷದ ಡಿಪ್ಲೊಮಾವನ್ನು ಪೂರೈಸಿದರು.
ಸೈಬರ್ ಕೋಡ್ ಗಳನ್ನು ಬಿಡಿಸುವುದು
ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, “ಕೋರ್ಸ್‌ಗೆ ಸೇರಿದ ಕೇವಲ ಎರಡು ತಿಂಗಳುಗಳ ನಂತರ, ಪೊಲೀಸ್ ಮತ್ತು ನ್ಯಾಯಾಂಗ ಭ್ರಾತೃತ್ವಕ್ಕಾಗಿ ಸೈಬರ್ ಕಾನೂನಿನ ಕುರಿತು ಸಿದ್ಧಾಂತ ಆಧಾರಿತ ತರಗತಿಗಳನ್ನು ತೆಗೆದುಕೊಳ್ಳಲು ನನ್ನನ್ನು ಕೇಳಲಾಯಿತು. ಆ ಜನಸಂದಣಿಯಲ್ಲಿ ನಾನು ಒಬ್ಬಳೇ ಮಹಿಳೆಯಾಗಿದ್ದೆ. ಇಡೀ ಕೋರ್ಸ್ ಸ್ವಯಂ ಕಲಿಕೆಯಲ್ಲಿ ಒಂದು ವ್ಯಾಯಾಮವಾಗಿತ್ತು; ನಮಗೆ ಲೈವ್ ಪ್ರಕರಣಗಳನ್ನು ನೀಡಲಾಗುತ್ತಿತ್ತು, ಮತ್ತು ಅದು ನಮಗೆ ಬಹಳಷ್ಟು ಕಲಿಯಲು ಅವಕಾಶ ಮಾಡಿಕೊಟ್ಟಿತು.”
ಇದಾದ ನಂತರ, ಧನ್ಯಾ ತನಿಖಾಧಿಕಾರಿಯ ಪ್ರಮಾಣೀಕೃತ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದರು. “ಅಧ್ಯಯನ ಮಾಡಲು ಬಯಸುತ್ತೇನೆ ಎಂದು ನಿರ್ಧರಿಸುವುದು ನನಗೆ ಸುಲಭವಾಗಿರಲಿಲ್ಲ. ಆದರೆ ನನ್ನ ಅಜ್ಜ ಪ್ರತಿ ಹಂತದಲ್ಲೂ ನನ್ನೊಂದಿಗಿದ್ದರು, ಕಾಲೇಜು ಶುಲ್ಕವನ್ನು ಅವರೇ ಪಾವತಿಸಿದರು ಮತ್ತು ನನಗೆ ಬೇಕಾದ ಅತ್ಯಂತ ದುಬಾರಿ ಪುಸ್ತಕಗಳನ್ನು ಖರೀದಿಸಿಕೊಟ್ಟರು. ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದರಿಂದ ನನ್ನ ಸಾಮರ್ಥ್ಯಗಳು ಮತ್ತು ವಿಷಯದ ಬಗ್ಗೆ ಅವರಿಗೆ ತಿಳಿದಿತ್ತು” ಎಂದು ಧನ್ಯಾ ಹೇಳುತ್ತಾರೆ.
ಧನ್ಯಾ ಸ್ವತಂತ್ರ ತನಿಖಾಧಿಕಾರಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರ ದುಡಿಮೆಯಿಂದ, ಕುಟುಂಬವನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಅಂತೆಯೇ ಸೈಬರ್ ಕ್ಷೇತ್ರವು ಇನ್ನೂ ಹೊಸದಾಗಿರುವುದರಿಂದ ಸೈಬರ್ ಅಪರಾಧ ತನಿಖಾಧಿಕಾರಿಯ ಕೆಲಸ ಏನು ಎಂದು ಯಾರಿಗೂ ತಿಳಿದಿರಲಿಲ್ಲ.
“ನನಗಾಗ ಕೇವಲ 24 ವರ್ಷ ಮತ್ತು ನಾನೊಬ್ಬಳು ಒಂಟಿ ತಾಯಿಯಾಗಿದ್ದೆ. ಕೆಲವು ಶಾಲೆಗಳು ನನ್ನ ಮಗನಿಗೆ ನಾನು ನನ್ನ ಉದ್ಯೋಗದಿಂದ ಬೆಂಬಲಿಸಬಹುದೇ ಎಂದು ಖಚಿತವಾಗಿ ತಿಳಿದಿಲ್ಲವಾದ್ದರಿಂದ ಪ್ರವೇಶವನ್ನು ನಿರಾಕರಿಸಿದರು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
2004-2008 ವರ್ಷಗಳು ಧನ್ಯಾ ಜೀವನದಲ್ಲಿ ಕಠಿಣ ಹಂತವಾಗಿತ್ತು. ಅವರು ತಮ್ಮ ವೃತ್ತಿಜೀವನ ಎಲ್ಲಿಗೆ ಹೋಗುತ್ತಿದೆ ಅಥವಾ ತಾನು ಸರಿಯಾದ ಕೆಲಸವನ್ನು ಮಾಡುತ್ತಿದ್ದೇನೆಯೇ ಎಂದು ಅವರಿಗೆ ಖಚಿತವಾಗಿರಲಿಲ್ಲ. ಆದರೆ ಅಜ್ಜ ಇವರ ಸಾಮರ್ಥ್ಯಗಳ ಬಗ್ಗೆ ಇಟ್ಟಿದ್ದ ಅಚಲವಾದ ನಂಬಿಕೆಯು ಅವರನ್ನು ಪ್ರೇರೇಪಿಸಿತು.
"2008 ರ ಹೊತ್ತಿಗೆ, ನನ್ನ ಕೆಲಸಕ್ಕೆ ನಾನು ಮಾನ್ಯತೆ ಪಡೆಯಲಾರಂಭಿಸಿದೆ. ವರ್ಷಗಳಲ್ಲಿ ನಿಧಾನವಾಗಿ ವಿಸ್ತರಿಸಿದ ವಿಭಿನ್ನ ಕ್ಲೈಂಟ್‌ಗಳಿಗೆ ನಾನು ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದೇನೆ.” ಧನ್ಯಾ ಆರಂಭದಲ್ಲಿ ಮೊಬೈಲ್ ಸ್ಟಾಕಿಂಗ್, ಸ್ಪೈಕ್ಯಾಮ್ ಸಮಸ್ಯೆಗಳು ಮತ್ತು ಡೇಟಾ ಕಳ್ಳತನದಂತಹ ಕಾರ್ಪೊರೇಟ್ ತನಿಖೆಯಂತಹ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು.
ಇಂದು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಪ್ರಸರಣ ಮತ್ತು ಅಗ್ಗದ ಸ್ಮಾರ್ಟ್ ಫೋನ್‌ಗಳ ಲಭ್ಯತೆಯೊಂದಿಗೆ ಸೈಬರ್ ಅಪರಾಧವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
"ನಾನು ಒಂದು ತಿಂಗಳಲ್ಲಿ ಎಂಟರಿಂದ ಒಂಬತ್ತು ಕೇಸ್ಗಳೊಂದಿಗೆ ನನ್ನ ವೃತ್ತಿಯನ್ನು ಪ್ರಾರಂಭಿಸಿದೆ; ಈಗ ನನ್ನ ಕಚೇರಿ ಕನಿಷ್ಠ 200-300 ಕರೆಗಳೊಂದಿಗೆ ವ್ಯವಹರಿಸುತ್ತದೆ. ಇವುಗಳಲ್ಲಿ ಸೈಬರ್ ಸ್ಟಾಲ್ಕಿಂಗ್, ಸೈಬರ್ ಬೆದರಿಸುವಿಕೆ, ಒಟಿಪಿ ದುರುಪಯೋಗ, ಆರ್ಥಿಕ ವಂಚನೆಯಂತಹ ಪ್ರಕರಣಗಳು ಸೇರಿವೆ. ನಾವು ಗ್ರಾಹಕರ ಕಡೆಯಿಂದ ತನಿಖೆ ನಡೆಸುತ್ತೇವೆ ಮತ್ತು ಮೂರನೇ ವ್ಯಕ್ತಿಯ ಡೊಮೇನ್ ಬಳಸುವ ಸ್ವಾತಂತ್ರ್ಯವನ್ನು ಹೊಂದಿಲ್ಲ. ಇದು ಪೊಲೀಸ್ ದೂರು ಆಗಿದ್ದರೆ, ಅವರ ಕೋರಿಕೆಯ ಮೇರೆಗೆ ನಾವು ತನಿಖೆ ಮಾಡಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಪೊಲೀಸ್ ಪಡೆ, ಮಕ್ಕಳ ಸಹಾಯವಾಣಿಗಳು ಇತ್ಯಾದಿಗಳ ವಿನಂತಿಗಳಿಗೆ ನಾವು ನಿರಂತರವಾಗಿ ಸಹಾಯ ಮಾಡುತ್ತೇವೆ,” ಎಂದು ಅವರು ಹೇಳುತ್ತಾರೆ.
ಕೆಲವೊಮ್ಮೆ ಪ್ರಕರಣಗಳು ಭಾವನಾತ್ಮಕವಾಗಿ ಕಠಿಣವಾಗಿವೆ ಎಂದು ಧನ್ಯಾ ಬಹಿರಂಗಪಡಿಸುತ್ತಾರೆ. ವಿವರಗಳನ್ನು ಬಹಿರಂಗಪಡಿಸದೆ, ಮಕ್ಕಳು ಮತ್ತು ಮಹಿಳೆಯರನ್ನು ಒಳಗೊಂಡ ತಮ್ಮ ಕೆಲಸದ ಕೆಲವು ಅಂಶಗಳು ಬಹಳ ನೋವನ್ನುಂಟುಮಾಡಿದೆ ಮತ್ತು ಅವುಗಳಿಗೆ ಹೋಲಿಸಿದರೆ ತಮ್ಮ ವೈಯಕ್ತಿಕ ಸಮಸ್ಯೆಗಳು ತೀರಾ ಕಡಿಮೆ ಎಂದು ಅವರು ಭಾವಿಸಿದ್ದಾರೆ.
ಅಂತರ್ಜಾಲದಲ್ಲಿ ಅನಾಮಧೇಯತೆ ಇಲ್ಲ
ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮವನ್ನು ಬಳಸುವ ಎಲ್ಲರಿಗೂ ಧನ್ಯಾ ಎಚ್ಚರಿಕೆ ನೀಡುತ್ತಾರೆ.
ನೀವು ಸೋಶಿಯಲ್ ಮೀಡಿಯಾದಲ್ಲಿ ಏನನ್ನಾದರೂ ಹೇಳಬಹುದು ಮತ್ತು ಅದರಿಂದ ದೂರವಿರಬಹುದು ಎಂದು ನೀವು ಭಾವಿಸಿದರೆ, ಅದು ತಪ್ಪು. ಒಮ್ಮೆ ಇಂಟರ್ನೆಟ್ ಅನ್ನು ದುರುಪಯೋಗ ಪಡಿಸಿಕೊಂಡರೆ ಶಿಕ್ಷೆ ಕಟ್ಟಿಟ್ಟಬುತ್ತಿ. ಆತ್ಮವಿಶ್ವಾಸದ ಹಮ್ ತಕ್ ನಹಿ ಆಯೆಂಗೆ(ನನ್ನ ಒರೆಗೂ ಅದು ಬರುವುದಿಲ್ಲ) ಎನ್ನುವ ಧೋರಣೆ ತಪ್ಪು.”
ಧನ್ಯಾ ಅವರು ಕೇರಳದ ತ್ರಿಶೂರ್‌ನಲ್ಲಿರುವ ತಮ್ಮ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಸೈಬರ್ ಜಾಗೃತಿ ಕಾರ್ಯಕ್ರಮ (ಸಿಎಪಿ) ಎಂಬ ಎನ್‌ಜಿಒ ಅನ್ನು ಸಹ ನಡೆಸುತ್ತಿದ್ದಾರೆ, ಇದು ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ತಮಿಳುನಾಡು ಮತ್ತು ಕರ್ನಾಟಕದ ಶಾಲೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.
ಮೊದಲು ಯಾವುದೇ ವಿಷಯವಾಗಲಿ ಅದನ್ನು ಅರಿತು ಬಳಸಬೇಕು ಎಂದು ಅವರು ನಂಬುತ್ತಾರೆ. "ಸಾಕಷ್ಟು ದಟ್ಟಣೆ ಇದೆ ಎಂದರೆ ಅಲ್ಲಿ ಅಪಘಾತಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಯಾವ ಪ್ಲಾಟ್‌ಫಾರ್ಮ್ ನಿಮಗೆ ಉಪಯುಕ್ತವಾಗಿದೆ ಎಂಬುದರ ಬಗ್ಗೆ ತಿಳಿದಿರಲಿ ಮತ್ತು ಅದನ್ನು ಮಾತ್ರ ಬಳಸಿ. ಜನಸಮೂಹವನ್ನು ಅನುಸರಿಸಬೇಡಿ. 99 ಪ್ರತಿಶತ ಮಾಹಿತಿಯು ಬೇಡವಾದದ್ದಾಗಿದೆ(ಜಂಕ್) ಎಂಬುದನ್ನು ನೆನಪಿಡಿ. ಅಲ್ಲದೆ, ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ಮೊಬೈಲ್ ಬಳಸುವ ಸಮಯವನ್ನು ಮಿತಿಗೊಳಿಸಬೇಕಾಗಿದೆ.”
ಮೊಬೈಲ್ ಚಟವು ಮಾದಕ ವ್ಯಸನಕ್ಕಿಂತ ಕೆಟ್ಟದಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ ಎಂದು ಧನ್ಯಾ ಹೇಳುತ್ತಾರೆ. ಸೈಬರ್ ನಿಂದನೆಯನ್ನು ವರದಿ ಮಾಡಲು ಜನರು ಹಿಂಜರಿಯುತ್ತಾರೆ ಎಂಬುವುದು ಅವರ ಅಭಿಪ್ರಾಯ. ಸೈಬರ್ ನಿಂದನೆಯನ್ನು ವರದಿ ಮಾಡಿದರೆ, ಗೆಳೆಯರು ಮತ್ತು ವಯಸ್ಕರಿಂದ ಕಳಂಕಿತರಾಗುತ್ತಾರೆ ಮತ್ತು ಅಪರಾಧವಾದಷ್ಟು ವೇಗದಲ್ಲಿ ತನಿಖೆ ನಡೆಯುವುದಿಲ್ಲ-ನ್ಯಾಯ ಒದಗಿಸಲಾಗುವುದಿಲ್ಲ ಎಂಬುದು ಜನರ ನಂಬಿಕೆ ಆಗಿದೆ.
ಸೈಬರ್ ಸುರಕ್ಷತೆಯನ್ನು ಈಗ ಜನರು ಮತ್ತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿರುವುದಕ್ಕೆ ಧನ್ಯಾ ಸಂತೋಷಪಟ್ಟಿದ್ದಾರೆ. “ನಾವು ಕಂಪ್ಯೂಟರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೇಳಿದಾಗ ಒಂದು ಉದಾಹರಣೆ ನನಗೆ ನೆನಪಿದೆ. ಪೊಲೀಸರು ಕೇವಲ ಸಿಪಿಯುಗಳನ್ನು ಬಿಟ್ಟು ಮಾನಿಟರ್‌ಗಳನ್ನು ಮಾತ್ರ ತಂದಿದ್ದರು. ಆದರೆ ಈಗ ಬಹಳಷ್ಟು ಬದಲಾಗಿದೆ,” ಎಂದು ಅವರು ಹೇಳುತ್ತಾರೆ.
ಇದು ಗ್ಲಾಮರಸ್ ಉದ್ಯೋಗ ಅಲ್ಲಾ
ಭಾರತದ ಮೊದಲ ಮಹಿಳಾ ಸೈಬರ್ ಅಪರಾಧ ತನಿಖಾಧಿಕಾರಿ ಧನ್ಯಾ ಅವರು ಯಾವುದೇ ಗ್ಲಾಮರಸ್ ಕೆಲಸದಲ್ಲಿ ಇಲ್ಲಾ “ಕೆಲವರು ನನ್ನನ್ನು ಸ್ತ್ರೀ ಪೆರ್ರಿ ಮೇಸನ್ ಎಂದು ಕರೆಯುತ್ತಾರೆ. ಆದರೆ ನಾನೊಬ್ಬಳು ಅಗಾಥಾ ಕ್ರಿಸ್ಟಿ ಆಗಲು ಬಯಸುತ್ತೇನೆ” ಎಂದೆನ್ನುತ್ತಾರೆ ಧನ್ಯಾ.
"ಯಾರು ಕಲ್ಪಿಸಿದಂತೆ ಈ ಕೆಲಸ ಸುಲಭವಲ್ಲ. ಯಾವುದೇ ನಿಗದಿತ ಕೆಲಸದ ಸಮಯಗಳಿಲ್ಲ ಅದಲ್ಲದೆ ನಾನು ಆಗಾಗ್ಗೆ ಪ್ರಯಾಣಿಸಬೇಕಾಗುತ್ತದೆ.”
ಭವಿಷ್ಯದಲ್ಲಿ ಅವರು ಸೈಬರ್ ಸೆಕ್ಯುರಿಟಿ ಅಕಾಡೆಮಿ ಮತ್ತು ಸಂಶೋಧನಾ ಕೇಂದ್ರವನ್ನು ತೆರೆಯಲು ಯೋಚಿಸುತ್ತಿದ್ದಾರೆ.
"ನಾನು ಏನು ಮಾಡುತ್ತಿದ್ದೆನೆಂದು ನನಗೆ ತಿಳಿದಿರಲಿಲ್ಲ. ಈ ವೃತ್ತಿಯೇ ನನ್ನನ್ನು ಆರಿಸಿತು. ಅದು ನನಗೆ ಹೆಚ್ಚು ಜವಾಬ್ದಾರಿಯುತವಾಗಿದೆ. ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದ್ದೆ ಇತರರನ್ನು ಅನುಕರಿಸಲು ನನಗೆ ಇಷ್ಟವಿರಲ್ಲ" ಎಂದು ಅವರು ಹೇಳುತ್ತಾರೆ.