ಆರೋಗ್ಯ ಸೇತು ಎಂಬ ಬಹುಭಾಷಾ ಕೊರೊನಾವೈರಸ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಪ್ರಾರಂಭಿಸಿದ ಸರ್ಕಾರ

ಆರೋಗ್ಯ ಸೇತು ಎಂಬುದು ಮೀಟಿವೈ ಅಭಿವೃದ್ಧಿಪಡಿಸಿದ ಲೋಕೇಶನ್ ಆಧಾರಿತ ಕೊರೊನಾವೈರಸ್ ಟ್ರ್ಯಾಕರ್ ಮತ್ತು ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ.

ಆರೋಗ್ಯ ಸೇತು ಎಂಬ ಬಹುಭಾಷಾ ಕೊರೊನಾವೈರಸ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಪ್ರಾರಂಭಿಸಿದ ಸರ್ಕಾರ

Friday April 03, 2020,

2 min Read

ಕೇಂದ್ರ ಸರ್ಕಾರವು ಇಂದು ಆರೋಗ್ಯ ಸೇತು ಎಂಬ ಲೋಕೇಶನ್ ಆಧಾರಿತ ಕೊರೊನಾವೈರಸ್ ಟ್ರ್ಯಾಕಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.


ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೀಟಿವೈ) ಅಡಿಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರವು ಅಭಿವೃದ್ಧಿಪಡಿಸಿದ ಈ ಅಪ್ಲಿಕೇಶನ್, ನಡೆಯುತ್ತಿರುವ ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ಮಾಹಿತಿ ನೀಡುವ ಗುರಿಯನ್ನು ಹೊಂದಿದೆ.


ಸಾರ್ವಜನಿಕವಾಗಿ ಜನರು ಒಟ್ಟುಗೂಡಿ ಕೋವಿಡ್-19 ಅನ್ನು ಸೋಲಿಸಬಹುದು. ಅಲ್ಲದೇ ಅಪ್ಲಿಕೇಶನ್ ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಆರೋಗ್ಯ ಸೇತು ಸೋಂಕಿನ ಅಪಾಯ, ಸ್ವಯಂ-ಮೌಲ್ಯಮಾಪನ ಸಾಧನಗಳು ಮತ್ತು ಸಂದರ್ಭೋಚಿತ ಸಲಹೆಗಳೊಂದಿಗೆ ಉತ್ತಮ ಮಾಹಿತಿಯನ್ನು ಜನರಿಗೆ ನೀಡುತ್ತದೆ ಎಂದು ಸರ್ಕಾರ ತಿಳಿಸಿದೆ.




ಕೋವಿಡ್ -19 ಸೋಂಕಿತ ವ್ಯಕ್ತಿಯು ನಿಮ್ಮ ಆರು ಅಡಿಗಳ ಹತ್ತಿರದಲ್ಲಿ ಇದ್ದಾಗ ನಿಮ್ಮನ್ನು ಎಚ್ಚರಿಸಲು ಅಪ್ಲಿಕೇಶನ್ ನಿಮ್ಮ ಫೋನ್‌ನ ಬ್ಲೂಟೂತ್ ಮತ್ತು ಜಿಪಿಎಸ್ ವ್ಯವಸ್ಥೆಗಳನ್ನು ಬಳಸುತ್ತದೆ.


ಸರ್ಕಾರದ ರೋಗಿ ಮತ್ತು ಪ್ರದೇಶದ ಮಾಹಿತಿಯ ಮೂಲಕ ಎಚ್ಚರಿಕೆಗಳನ್ನು ರಚಿಸಲಾಗುತ್ತದೆ. ಹೇಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಆರೋಗ್ಯ ಸಚಿವಾಲಯದ ಸೂಚನೆಗಳು ಸಹ ಅದರಲ್ಲಿ ಇರುತ್ತವೆ.


ಆರೋಗ್ಯ ಸೇತು ಇಂಗ್ಲೀಷ್ ಮತ್ತು ಹಿಂದಿ ಸೇರಿದಂತೆ 11 ಭಾಷೆಗಳಲ್ಲಿ ಲಭ್ಯವಿದೆ. ಅಪ್ಲಿಕೇಶನ್ ದೇಶದಾದ್ಯಂತ ಮೊದಲ ದಿನದಿಂದಲೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸರ್ಕಾರ ಘೋಷಿಸಿದೆ.


ನೀವು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಬ್ಲೂಟೂತ್ ಮತ್ತು ಜಿಪಿಎಸ್ ಆನ್ ಮಾಡಬೇಕು. ಅಲ್ಲದೇ ಲೋಕೇಶನ್ ಶೇರಿಂಗ್ ಯಾವಾಗಲೂ ಆನ್ ಇರಬೇಕು. ನಂತರ ಒಟಿಪಿ ಆಧಾರಿತ ಮೊಬೈಲ್ ಸಂಖ್ಯೆ ಪರಿಶೀಲನೆಯ ಮೂಲಕ ಸೈನ್ ಇನ್ ಮಾಡಬೇಕು.


ಹೆಸರು, ವಯಸ್ಸು, ಲಿಂಗ, ವೃತ್ತಿ, ಪ್ರಯಾಣದ ಇತಿಹಾಸ ಮುಂತಾದ ವೈಯಕ್ತಿಕ ವಿವರಗಳನ್ನು ನೀವು ನಮೂದಿಸಬಹುದು. ನಿಮ್ಮ ಮಾಹಿತಿ ಭಾರತ ಸರ್ಕಾರಕ್ಕೆ ಮಾತ್ರ ತಿಳಿದಿರುತ್ತದೆ. ನಿಮ್ಮ ಹೆಸರು ಮತ್ತು ಸಂಖ್ಯೆಯನ್ನು ಅಪ್ಲಿಕೇಶನ್ ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದು ಎನ್ಐಸಿ ಹೇಳಿದೆ.


ಆರೋಗ್ಯ ಸೇತು ಅಪ್ ನಿಮಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟೋಲ್-ಫ್ರೀ ಸರ್ಕಾರಿ ಸಹಾಯವಾಣಿಗಳ ನಂಬರ್ ನೀಡುತ್ತದೆ ಮತ್ತು ನಿಮ್ಮ ಪ್ರಶ್ನೆಗಳಿಗೆ ಅಪ್ಲಿಕೇಶನ್‌ನಲ್ಲಿರುವ ಚಾಟ್ ಮೂಲಕ ಉತ್ತರಿಸುತ್ತದೆ. ನಿಮ್ಮ ರೋಗಲಕ್ಷಣಗಳನ್ನು ನಮೂದಿಸುವ ಮೂಲಕ ನೀವು ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ನೀವು ಸುರಕ್ಷಿತವಾಗಿದ್ದೀರಾ ಅಥವಾ ಅಪಾಯದಲ್ಲಿದ್ದೀರಾ ಎಂದು ತಿಳಿಯಲು ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ.


ಆರೋಗ್ಯ ಸೇತು ಒಂದು ಸಮಗ್ರ, ಸಂವಾದಾತ್ಮಕ ಮತ್ತು ಕ್ರಿಯಾಶೀಲ ಆಧಾರಿತ ಅಪ್ಲಿಕೇಶನ್ ಆಗಿದೆ.


ಸಾರ್ವಜನಿಕ ಆರೋಗ್ಯ ಸಲಹೆಗಳು, ನೈರ್ಮಲ್ಯ ಸಲಹೆಗಳು, ಯಾವುದನ್ನು ಮಾಡಬೇಕು ಮತ್ತು ಮಾಡಬಾರದು ಸೇರಿದಂತೆ ಇತರ ಉಪಯುಕ್ತ ಮಾಹಿತಿಗಳನ್ನು ಈ ಅಪ್ಲಿಕೇಶನ್ ನೀಡುತ್ತದೆ.






ಇದು ಭಾರತ ಸರ್ಕಾರದ, ವಿಶೇಷವಾಗಿ ಆರೋಗ್ಯ ಇಲಾಖೆಯ ಯೋಜನೆಯನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ, ಕೋವಿಡ್-19 ಅನ್ನು ಒಳಗೊಂಡಿರುವ ಅಪಾಯಗಳು, ಉತ್ತಮ ಅಭ್ಯಾಸಗಳು ಮತ್ತು ಸಂಬಂಧಿತ ಸಲಹೆಗಳ ಬಗ್ಗೆ ಬಳಕೆದಾರರು ಇಲ್ಲಿ ಮಾಹಿತಿಯನ್ನು ಪಡೆಯಬಹುದು,” ಎಂದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಎನ್ ಐ ಸಿ ಹೇಳಿದೆ.


ಇದು ಒಮ್ಮೆಗೇ ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳ ವಿತರಣೆ ಮತ್ತು ರಾಷ್ಟ್ರಕ್ಕೆ ರೋಗ ಮುಕ್ತ ಮತ್ತು ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಲು ಯುವ ಭಾರತದ ಶಕ್ತಿಯ ನಡುವಿನ ಸೇತುವೆಯಾಗಿದೆ. ಆರೋಗ್ಯ ಸೇತುಯೊಂದಿಗೆ ನಮ್ಮನ್ನು ಮತ್ತು ನಮ್ಮ ಕುಟುಂಬ ಮತ್ತು ಪ್ರೀತಿಪಾತ್ರರನ್ನು ರಕ್ಷಿಸಲು ಒಂದು ಹೆಜ್ಜೆ ಮುಂದಿಡೋಣ ಎಂದು ಸರ್ಕಾರ ಹೇಳಿದೆ.