ಕೋವಿಡ್‌-19 ಪರಿಹಾರ ನಿಧಿಗಾಗಿ 3.7 ಲಕ್ಷ ರೂ. ಸಂಗ್ರಹಿಸಿದ 5 ವರ್ಷದ ಬಾಲಕ

ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವನಾದ 5ರ ಪೋರ ಅನೀಶ್ವರ್‌ ಕುಂಚಾಲಾ ಕೋವಿಡ್‌-19 ಪರಿಹಾರ ನಿಧಿಗಾಗಿ ಹಣ ಸಂಗ್ರಹಿಸಲು ತನ್ನ ಸ್ನೇಹಿತರೊಂದಿಗೆ 4500 ಕಿ.ಮೀ. ಸೈಕಲ್‌ ಓಡಿಸಿದ್ದಾನೆ.

ಕೋವಿಡ್‌-19 ಪರಿಹಾರ ನಿಧಿಗಾಗಿ 3.7 ಲಕ್ಷ ರೂ. ಸಂಗ್ರಹಿಸಿದ 5 ವರ್ಷದ ಬಾಲಕ

Thursday August 06, 2020,

2 min Read

ಮಾಂಚೆಸ್ಟರ್‌ನ ವಾರಿಂಗ್ಟನ್‌ ನಗರದ 5 ವರ್ಷದ ಬಾಲಕ ಅನೀಶ್ವರ್‌ ಕುಂಚಾಲಾ ಭಾರತದ ಕೊರೊನಾವೈರಸ್‌ ಪರಿಹಾರ ನಿಧಿಗಾಗಿ ಸುಮಾರು ರೂ. 3.7 ಲಕ್ಷದಷ್ಟು ಹಣವನ್ನು ಸಂಗ್ರಹಿಸಿ ಹಲವರಿಗೆ ಮಾದರಿಯಾಗಿದ್ದಾನೆ.


ದಿ ನ್ಯೂಸ್‌ ಮಿನಿಟ್‌ ಪ್ರಕಾರ ಅನೀಶ್ವರ್‌ ಯು ಕೆ ಮೂಲದ 100ರ ಯುದ್ಧ ಅನುಭವಿ ಕಾಪ್ಟನ್‌ ಟಾಮ್‌ ಮೂರೆಯವರು ತಮ್ಮ ಉದ್ಯಾನದಲ್ಲಿ 100 ಸುತ್ತುಗಳನ್ನು ಸುತ್ತಿ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಸೇವೆಗಳಿಗಾಗಿ ಹಣ ಸಂಗ್ರಹಿಸುವುದನ್ನು ನೋಡಿದಾಗ ಪ್ರೇರೆಪಿತನಾಗಿ ಈ ಕೆಲಸ ಶುರುಮಾಡಿದ್ದಾನೆ.


5 ವರ್ಷದ ಬಾಲಕ ಅನೀಶ್ವರ್‌ ಕುಂಚಾಲಾ


ನಂತರ ತಮ್ಮ ತಂದೆ ಅನಿಲ್‌ ಕುಂಚಾಲಾ ಅವರಿಂದ ಟಾಂ ಅವರು ಆ ರೀತಿ ಏಕೆ ಮಾಡುತ್ತಿದ್ದಾರೆಂಬ ಕಾರಣ ತಿಳಿದು ಅನೀಶ್ವರ್‌ ತಾನು ಏನಾದರೂ ಮಾಡಬೇಕೆಂದು ನಿಶ್ಚಯಿಸಿ ಏಪ್ರಿಲ್‌ನಲ್ಲಿ ಕ್ರಿಕೆಟ್‌ ಅಭ್ಯಸಿಸಿ ‘10 ದಿನದಲ್ಲಿ 1000 ಹಿಟ್‌ಗಳೆಂಬʼ ಸವಾಲನ್ನು ತೆಗೆದುಕೊಂಡು ಎನ್‌ಎಚ್‌ಎಸ್‌ಗಾಗಿ ಹಣ ಕೂಡಿಸತೊಡಗಿದ.


ಈ ನಡುವೆ ಅನಿಲ್‌ ಮತ್ತು ಪತ್ನಿ ಸ್ನೇಹಾ ವಾಲ್ಮೆಟಿ ತಮ್ಮ ಮಗನ ಉಪಕ್ರಮದ ಬಗ್ಗೆ ಕ್ರೌಡ್‌ಫಂಡಿಂಗ್‌ ಕಾಂಪೆನ್‌ ಪ್ರಾರಂಭಿಸಿ ಅದರ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದರು.


ಯಶಸ್ವಿ ನಿಧಿಸಂಗ್ರಹದ ನಂತರ, ಅನೀಶ್ವರ್ ‘ಲಿಟಲ್ ಪೆಡಲರ್ಸ್' ಸವಾಲನ್ನು ಪ್ರಾರಂಭಿಸಿದ, ಇದು ಭಾರತದಲ್ಲಿ ಅಗತ್ಯವಾದ ವಸ್ತುಗಳು ಮತ್ತು ಪಿಪಿಇ ಕಿಟ್‌ಗಳ ವಿತರಣೆ ಮಾಡುವ ಉದ್ದೇಶದಿಂದ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ‘ಗಿವ್ ಇಂಡಿಯಾದ' ವೆಬ್‌ಸೈಟ್‌ನಲ್ಲಿ ಹಣವನ್ನು ಸಂಗ್ರಹಿಸುವ ಸಲುವಾಗಿ ಅನೀಶ್ ತನ್ನ ಸ್ನೇಹಿತರೊಂದಿಗೆ 4,500 ಕಿ.ಮೀ. ದೂರವನ್ನು ಸೈಕಲ್‌ ಓಡಿಸತೊಡಗಿದನು.

"ಪ್ರತಿದಿನ, ಅವನು ಐದರಿಂದ ಏಳು ಕಿಲೋಮೀಟರ್ ಸೈಕಲ್ ಓಡಿಸುತ್ತಿದ್ದ, ಅದು ಸುಮಾರು 45 ನಿಮಿಷದಿಂದ ಒಂದು ಗಂಟೆ ತೆಗೆದುಕೊಳ್ಳುತ್ತದೆ. ಆರಂಭದಲ್ಲಿ ಕೇವಲ ನಾಲ್ಕೈದು ಮಕ್ಕಳಿದ್ದರು. ಆದರೆ, ಈ ವಿಚಾರ ಹೆಚ್ಚಿನ ಜನತೆಗೆ ತಿಳಿಯುತ್ತಿದ್ದಂತೆ, ಸುಮಾರು 60 ಮಕ್ಕಳು ಸೇರಿಕೊಂಡರು,” ಎಂದು ಅನಿಲ್ ಹೇಳಿದರು.


ಮೂಲತಃ ಆಂಧ್ರಪ್ರದೇಶದ ಚಿತ್ತೂರಿಗೆ ಸೇರಿದ ಅನೀಶ್ವರ್ ಸಾಕಷ್ಟು ಪ್ರಸಿದ್ಧ ಕ್ರೀಡಾ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಂದ ಅಭಿನಂದನೆಗಳನ್ನು ಸ್ವೀಕರಿಸಿದ್ದಾನೆ. ನ್ಯೂಸ್ 18 ವರದಿಯ ಪ್ರಕಾರ ವಾರಿಂಗ್ಟನ್ ದಕ್ಷಿಣ ಸಂಸದ ಆಂಡಿ ಕಾರ್ಟರ್ ಇತ್ತೀಚೆಗೆ ಹುಡುಗನನ್ನು ಭೇಟಿ ಮಾಡಿದ್ದಾರೆ.


ಆಗಸ್ಟ್ 6 ರ ಹೊತ್ತಿಗೆ, ಭಾರತದಲ್ಲಿ 1.96 ದಶಲಕ್ಷ ಕೋವಿಡ್‌-19 ಪ್ರಕರಣಗಳು ವರದಿಯಾಗಿದ್ದು, 40,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.