ತೆಂಜಿಂಗ್ ನೊರ್ಗಾಯ್ ರಾಷ್ಟ್ರೀಯ ಸಾಹಸ ಪ್ರಶಸ್ತಿ ಗೆದ್ದ ಭಾರತೀಯ ಮಹಿಳಾ ಪರ್ವತಾರೋಹಿ ಅನಿತಾ ಕುಂದು
ಪೊಲೀಸ್ ಸಬ್-ಇನ್ಸ್ಪೆಕ್ಟರ್ ಮತ್ತು ಉತ್ಸಾಹಿ ಪರ್ವತಾರೋಹಿಯಾದ ಅನಿತಾ ಕುಂದು, ನೇಪಾಳ ಮತ್ತು ಚೀನಾ ಎರಡೂ ಕಡೆಯಿಂದ ಎವರೆಸ್ಟ್ ಪರ್ವತವನ್ನು ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದ ಪರ್ವತರೋಗಿ ಅನಿತಾ ಕುಂದು ಅವರಿಗೆ ತೆಂಜಿಂಗ್ ನೊರ್ಗಾಯ್ ರಾಷ್ಟ್ರೀಯ ಸಾಹಸ ಪ್ರಶಸ್ತಿ 2019 ಅನ್ನು ಅಗಸ್ಟ್ 29 ರಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ನೀಡಿ ಗೌರವಿಸಲಿದ್ದಾರೆ. ಹರಿಯಾಣದ ಹಿಸರ ಎಂಬ ಪ್ರದೇಶದವರಾದ ಅನಿತಾ ಅವರಿಗೆ ಲ್ಯಾಂಡ್ ಅಡ್ವೆಂಚರ್ ವಿಭಾಗದಲ್ಲಿ ಪ್ರಶಸ್ತಿ ದೊರೆಯಲಿದೆ.
ನೇಪಾಳ ಮತ್ತು ಚೀನಾ ಎರಡೂ ಕಡೆಯಿಂದ ಜಗತ್ತಿನ ಎತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿರುವ ಅನಿತಾ, ಹರಿಯಾಣದಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
“ಚೀನಾ ಮತ್ತು ನೇಪಾಳ ಎರಡೂ ಕಡೆಯಿಂದ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ನಾನು. ಈ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ,” ಎಂದು ಪ್ರಶಸ್ತಿಗೆ ಭಾಜನರಾದ ಖುಷಿಯಲ್ಲಿ ಅನಿತಾ ಎಎನ್ಐ ಗೆ ಹೇಳಿದರು.
ಹರಿಯಾಣದ ಪೊಲೀಸ್ ಮಹಾನಿರ್ದೇಶಕರಾದ ಮನೋಜ್ ಯಾದವ್ ಅನಿತಾ ಅವರ ಸಾಧನೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
“ನಾನು 13 ವರ್ಷದವಳಿದ್ದಾಗ ನನ್ನ ತಂದೆ ತೀರಿಕೊಂಡ ಮೇಲೆ ನನ್ನನ್ನು ಸಾಕಿಬೆಳೆಸಿದ ನನ್ನ ತಾಯಿ ಮತ್ತು ನನ್ನ ಮಾವನಿಗೆ ನನ್ನ ಯಶಸ್ಸಿನ ಶ್ರೇಯಸ್ಸನ್ನು ಸಲ್ಲಿಸುತ್ತೇನೆ. ನನ್ನ ಗುರಿಗಳನ್ನು ಸಾಧಿಸಲು ಆರ್ಥಿಕವಾಗಿ ಸಹಾಯ ಮಾಡಿದ್ದಕ್ಕಾಗಿ ನಾನು ಬಿಜೆಪಿ ರಾಜ್ಯಸಭಾ ಸಂಸದ ಆರ್.ಕೆ. ಸಿನ್ಹಾ ಅವರ ಎಸ್ಐಎಸ್ ಕಂಪನಿಗೆ ಧನ್ಯವಾದ ಹೇಳಲು ಬಯಸುತ್ತೇನೆ ”ಎಂದು ಅನಿತಾ ದಿ ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದರು.
ಅನಿತಾ ಅವರ ಜತೆಗೆ ಪ್ಯಾರಾಷೂಟ್ ಜಂಪ್ ಇನ್ಸ್ಟ್ರಕ್ಟರ್ ವಿಂಗ್ ಕಮಾಂಡರ್ ಗಜಾನಂದ ಯಾದವ ಅವರಿಗೂ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಗಜಾನಂದ ಭಾರತೀಯ ವಾಯು ಸೇನೆಯ ಸ್ಕೈಡೈವಿಂಗ್ ತಂಡ ಆಕಾಶ ಗಂಗೆಯ ಸದಸ್ಯರಾಗಿದ್ದಾರೆ. ಭಾರತೀಯ ವಾಯು ಸೇನೆಯ ಪ್ರಕಾರ ಇಲ್ಲಿಯವರೆಗೂ ಅವರು 2,900 ಬಾರಿ ಜಂಪ್ ಮಾಡಿದ್ದಾರೆ.
ತೆಂಜಿಂಗ್ ನೊರ್ಗಾಯ್ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಭಾರತೀಯ ಸಾಹಸ ಕ್ರೀಡೆಗಳಲ್ಲಿ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯೆಂದೆ ಪರಿಗಣಿಸಲಾಗಿದೆ. 1953 ರಲ್ಲಿ ಎಡ್ಮಂಡ್ ಹಿಲರಿ ಜತೆ ಎವರೆಸ್ಟ್ ಪರ್ವತವನ್ನು ಹತ್ತಿದ ಟೆನ್ಜಿಂಗ್ ನೊರ್ಗಾಯ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಾರ್ಷಿಕವಾಗಿ ನೀಡುವ ಈ ಪ್ರಶಸ್ತಿ ಲ್ಯಾಂಡ್ ಅಡ್ವೆಂಚರ್, ಏರ್ ಅಡ್ವೆಂಚರ್, ವಾಟರ್ ಅಡ್ವೆಂಚರ್ ಮತ್ತು ಜೀವ ಮಾನ ಸಾಧನೆಯಂತರ ವಿವಿಧ ಕ್ಷೇತ್ರದಲ್ಲಿ ಜನರ ಸಾಧನೆಗಳನ್ನು ಗುರುತಿಸುತ್ತದೆ.
ಈ ಪ್ರಶಸ್ತಿ ನೀಡುವುದರ ಪ್ರಮುಖ ಗುರಿ ಯುವ ಸಾಹಸಿಗಳಿಗೆ ಪ್ರೋತ್ಸಾಹ ನೀಡುವುದು. ಪ್ರಶಸ್ತಿ ವಿಜೇತರಿಗೆ ಪ್ರತಿಮೆಗಳು, ಪ್ರಮಾಣಪತ್ರಗಳು ಮತ್ತು ತಲಾ 5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ.