ವಿಶ್ವದ ನೂರು ಪ್ರಭಾವಶಾಲಿ ಮಹಿಳೆಯರ ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ಕು ಭಾರತೀಯ ಮಹಿಳೆಯರು

ವಿಶ್ವದ ಅತ್ಯಂತ ಪ್ರಭಾವಶಾಲಿ 100 ಮಹಿಳೆಯರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತೀಯ ಮಹಿಳೆಯರಾದ ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ಮಜುಂದಾರ್ ಶಾ ಸ್ಥಾನ ಪಡೆದಿದ್ದಾರೆ.

ವಿಶ್ವದ ನೂರು ಪ್ರಭಾವಶಾಲಿ ಮಹಿಳೆಯರ ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ಕು ಭಾರತೀಯ ಮಹಿಳೆಯರು

Monday December 23, 2019,

2 min Read

ಫೋರ್ಬ್ಸ್ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ 2019ರ ತನ್ನ ಪಟ್ಟಿಯನ್ನು ಪ್ರಕಟಿಸಿದೆ. ಜರ್ಮನಿಯ ಛಾನ್ಸೆಲರ್ ಏಂಜೆಲಾ ಮರ್ಕೆಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟಿನ್ ಲಗಾರ್ಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇದ್ದಾರೆ.


ಈ ಪಟ್ಟಿಯಲ್ಲಿ ನಾಲ್ಕು ಭಾರತೀಯ ಮಹಿಳೆಯರು - ನಿರ್ಮಲಾ ಸೀತಾರಾಮನ್, ಕಿರಣ್ ಮಜುಂದಾರ್-ಶಾ, ರೋಶ್ನಿ ನಾಡರ್ ಮಲ್ಹೋತ್ರಾ ಮತ್ತು ರೇಣುಕಾ ಜಗ್ತಿಯಾನಿ ಸಹ ಸ್ಥಾನ ಪಡೆದಿದ್ದಾರೆ.


ಎಡದಿಂದ ಬಲಕ್ಕೆ: ರೇಣುಕಾ ಜಗ್ತಿಯಾನಿ, ಕಿರಣ್ ಮಜುಂದಾರ್ ಶಾ, ರೋಶ್ನಿ ನಾಡರ್ ಮಲ್ಹೋತ್ರಾ ಮತ್ತು ನಿರ್ಮಲಾ ಸೀತಾರಾಮನ್.


ಈ ವರ್ಷದ ಮೇ ತಿಂಗಳಲ್ಲಿ ನೇಮಕಗೊಂಡ ಭಾರತದ ಮೊದಲ ಪೂರ್ಣಾವಧಿಯ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಪಟ್ಟಿಯಲ್ಲಿ 34 ನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ಮಾಜಿ ರಕ್ಷಣಾ ಸಚಿವರಾಗಿದ್ದಾರೆ ಮತ್ತು ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಈ ಪಟ್ಟಿಯಲ್ಲಿ 54 ನೇ ಸ್ಥಾನದಲ್ಲಿರುವ ಎಚ್‌ಸಿಎಲ್ ಎಂಟರ್‌ಪ್ರೈಸ್‌ನ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರೋಶ್ನಿ ನಾಡರ್ ಮಲ್ಹೋತ್ರಾ ಸ್ಥಾನ ಪಡೆದಿದ್ದಾರೆ. ಅವರು ಎಚ್‌ಸಿಎಲ್‌ನ ಸಂಸ್ಥಾಪಕ ಶಿವ ನಾಡರ್ ಅವರ ಪುತ್ರಿ ಮತ್ತು ಕುಟುಂಬದ ವ್ಯವಹಾರದ ಆಡಳಿತವನ್ನು ವಹಿಸಿಕೊಂಡಿದ್ದಾರೆ. ತಾಯಿ ಮತ್ತು ಉದ್ಯಮಿಯಾಗಿರುವ ಅವರು ಕುಟುಂಬದ ಲಾಭರಹಿತ ಶಿವ ನಾಡರ್ ಫೌಂಡೇಶನ್ ಮೂಲಕ ಸಾಕಷ್ಟು ಲೋಕೋಪಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ.


ಮೊದಲ ತಲೆಮಾರಿನ ಉದ್ಯಮಿ ಕಿರಣ್ ಮಜುಂದಾರ್-ಶಾ ಈ ಪಟ್ಟಿಯಲ್ಲಿ 65 ನೇ ಸ್ಥಾನದಲ್ಲಿದ್ದಾರೆ. ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ಉದ್ಯಮ ಬಯೋಕಾನ್ ಮುಖ್ಯಸ್ಥರಾಗಿರುವ ಅವರು ದೇಶದ ಅತ್ಯಂತ ಯಶಸ್ವಿ ಮಹಿಳಾ ವ್ಯಾಪಾರಿಗಳಲ್ಲಿ ಒಬ್ಬರು. ಅವರು ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿ ಈ ಮೊದಲು ಫೋರ್ಬ್ಸ್‌ ಪಟ್ಟಿಗೆ ಎರಡು ಬಾರಿ ಆಯ್ಕೆಯಾಗಿದ್ದರು. ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯ $ 3.1 ಬಿಲಿಯನ್.


ಈ ಪಟ್ಟಿಯಲ್ಲಿ 96 ನೇ ಸ್ಥಾನದಲ್ಲಿರುವ ರೇಣುಕಾ ಜಗ್ತಿಯಾನಿ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಅಧ್ಯಕ್ಷೆ ಮತ್ತು ಸಿಇಒ ಆಗಿದ್ದು, ದುಬೈ ಮೂಲದ ಈ ಚಿಲ್ಲರೆ ವ್ಯಾಪಾರ ಮತ್ತು ಆತಿಥ್ಯ ಸಂಘಟನೆಯನ್ನು ರೇಣುಕಾ ಅವರ ಪತಿ ಮಿಕ್ಕಿ ಪ್ರಾರಂಭಿಸಿದ್ದರು. ಎರಡು ದಶಕಗಳಿಂದ, ರೇಣುಕಾ ಕಂಪನಿಯ ಸಾಂಸ್ಥಿಕ ಕಾರ್ಯತಂತ್ರ ಮತ್ತು ಹೊಸ ಮಾರುಕಟ್ಟೆಗಳಲ್ಲಿ ಅದರ ವಿಸ್ತರಣೆಯನ್ನು ಮುನ್ನಡೆಸಿದ್ದಾರೆ.


ಈ ಪಟ್ಟಿಯಲ್ಲಿರುವ ಇತರ ಜನಪ್ರಿಯ ಹೆಸರುಗಳಲ್ಲಿ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್, ನಟಿ, ನಿರ್ಮಾಪಕಿ ಮತ್ತು ಉದ್ಯಮಿ ರೀಸ್ ವಿದರ್ಸ್ಪೂನ್, ಗಾಯಕಿ ರಿಹಾನ್ನಾ, ಲೋಕೋಪಕಾರಿ ಮೆಲಿಂಡಾ ಗೇಟ್ಸ್ ಮತ್ತು ಟೆನಿಸ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಸೇರಿದ್ದಾರೆ.