ಸಾವಯವ ಸಾಬೂನು ಮಾರಾಟದ ಮೂಲಕ ದುರ್ಬಲ ವರ್ಗದ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಜೂನ್ ರೋಸ್ ವಾಫಿ

ಮಣಿಪುರ ಮೂಲದ ಸಾಮಾಜಿಕ ಕಾರ್ಯಕರ್ತೆ ಮತ್ತು ಉದ್ಯಮಿ ಜೂನ್ ರೋಸ್ ವಾಫಿ 2017 ನೇ ಇಸವಿಯಿಂದ ತಮ್ಮ ಸಾವಯವ ಸಾಬೂನು ಉದ್ಯಮದ ಮೂಲಕ ಅನಾಥ ಮಕ್ಕಳ ಶಿಕ್ಷಣಕ್ಕೆ ನೆರವಾಗುತಿದ್ದಾರೆ.

ಸಾವಯವ ಸಾಬೂನು ಮಾರಾಟದ ಮೂಲಕ ದುರ್ಬಲ ವರ್ಗದ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಜೂನ್ ರೋಸ್ ವಾಫಿ

Friday November 01, 2019,

2 min Read

ಶಿಕ್ಷಣವು ದೇಶದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಎಲ್ಲರಿಗೂ ತಿಳಿದಿದ್ದರೂ ಕೂಡ ಬಹಳಷ್ಟು ಸಂಖ್ಯೆಯ ಭಾರತೀಯ ಮಕ್ಕಳು ಇಂದಿಗೂ ಅದರಿಂದ ವಂಚಿತರಾಗುತಿದ್ದಾರೆ. ಈ ಅಭಿವೃದ್ಧಿಯ ಮೂಲತಂತ್ರದಿಂದ ಮಕ್ಕಳು ವಂಚಿತರಾಗುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಶಾಲಾ ಸೌಲಭ್ಯಗಳಿಲ್ಲದೇ ಇರುವುದು, ಅಸಮರ್ಪಕ ಸಂಪನ್ಮೂಲಗಳು, ಸಂಪರ್ಕಕ್ಕೆ ಸಿಗದ ದೇಶದ ಮೂಲೆಗಳಲ್ಲಿರುವ ಪ್ರದೇಶಗಳಲ್ಲಿನ ನಿರ್ಬಂಧಿತ ಸಾಮಾಜಿಕ-ಆರ್ಥಿಕ ವಾತಾವರಣ ಮುಂತಾದವು ಇದಕ್ಕೆ ಕಾರಣವಾಗಿವೆ.


ಆದರೂ ಮಣಿಪುರದ ಜೂನ್ ರೋಸ್ ವಾಫಿಯಂತಹ ಮಹನೀಯರು ಎಲ್ಲರಿಗೂ ಶಿಕ್ಷಣ ಸಿಗಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಉದ್ಯಮಿಯಾಗಿರುವ ಜೂನ್ ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತಿದ್ದಾರೆ.


ಜೂನ್ ರೋಸ್ ವಾಫಿ (ಚಿತ್ರ ಕೃಪೆ: ಎಎನ್ಐ)




ಜೂನ್, 2017 ರಲ್ಲಿ ಪ್ರಾರಂಭಿಸಿದ ಸಾವಯವ ಸಾಬೂನು ತಯಾರಿಕಾ ಉದ್ಯಮದ ಮೂಲಕ ಈ ಕಾರ್ಯವನ್ನು ಕೈಗೊಂಡಿದ್ದಾರೆ. ನಿಂಬೆ, ಗುಲಾಬಿ, ಲೋಳಸರ ಮತ್ತು ಹಣ್ಣುಗಳಿಂದ ರಸ ತೆಗೆದು ಸಾಬೂನು ತಯಾರಿಸಿ ಲಕ್ಸುರಿ ಸೂತ್ ಹ್ಯಾಂಡ್ ಮೇಡ್ ಸೋಪ್ಸ್ ಎಂಬ ಬ್ರಾಂಡಿನ ಮೂಲಕ ಮಾರಾಟ ಮಾಡುತ್ತಾರೆ. ಅವರು ತಯಾರಿಸಿದ ಸಾಬೂನು ಒಂದಕ್ಕೆ 150 ರಿಂದ 250 ರೂಪಾಯಿಗಳ ಬೆಲೆಯನ್ನು ನಿಗದಿಸಲಾಗಿದೆ ಮತ್ತು ವಿವಿಧ ಆಕಾರ, ಅಳತೆ ಮತ್ತು ಸುವಾಸನೆಗಳಲ್ಲಿ ದೊರೆಯುತ್ತದೆ.


ರಾಸಾಯನಿಕಗಳನ್ನು ಬಳಸಿ ತಯಾರಿಸಿರುವ ಸಾಬೂನು ಚರ್ಮಕ್ಕೆ ಹಾನಿಕಾರಕವೆಂದು ತಿಳಿದು ಜೂನ್ ಸಾವಯವ ಸಾಬೂನು ತಯಾರಿಕೆ ಪ್ರಾರಂಭಿಸಿದರು.


ಲಾಫಿಂಗ್ ಕಲರ್ಸ್ ವರದಿಯ ಪ್ರಕಾರ ಜೂನ್ ತಾವು ತಯಾರಿಸಿದ ಸಾಬೂನಿಗೆ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ವ್ಯಾಪಕ ಪ್ರಚಾರ ನೀಡಿದರು. ಇದರಿಂದಾಗಿ ಈ ಸಾಬೂನು ತಕ್ಷಣವೇ ಜನಪ್ರಿಯತೆಯನ್ನು ಗಳಿಸಿತು. ಜೂನ್ ತಮ್ಮ ವ್ಯಾಪಾರದಿಂದ ಗಳಿಸಿದ ಸಂಪಾದನೆಯನ್ನು ಅನಾಥ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತಿದ್ದಾರೆ.


ಎಎನ್ಐ ನೊಂದಿಗೆ ಮಾತನಾಡುತ್ತಾ ಜೂನ್ ಹೀಗೆ ಹೇಳುತ್ತಾರೆ,


“ನಾನು ಬಡತನದ ಬೇಗೆಯಿಂದ ಬಳಲುತ್ತಿರುವ ಬಹಳಷ್ಟು ಬುದ್ಧಿವಂತ ಮಕ್ಕಳನ್ನು ನೋಡಿದ್ದೇನೆ. ಅವರ ಪೋಷಕರಿಗೆ ಅವರನ್ನು ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸುವ ಆರ್ಥಿಕ ಚೈತನ್ಯವಿರುವುದಿಲ್ಲ. ನಾನು ಸಂಪಾದಿಸಿದ ಹಣದಿಂದ ಈ ಮಕ್ಕಳಿಗೆ ಶಿಕ್ಷಣ ಕೊಡಿಸಲು ನನ್ನ ಕೈಲಾದ ಪ್ರಯತ್ನ ಮಾಡುತಿದ್ದೇನೆ”.


ನಾವು ಹುಟ್ಟಿ ಬೆಳೆದಿರುವ ಸಮಾಜಕ್ಕೆ ನಾವು ಏನನ್ನಾದರೂ ವಾಪಾಸು ನೀಡಬೇಕೆಂಬ ಸಂಕಲ್ಪ ಜೂನ್ ರಿಗೆ ಹೊಸತೇನೂ ಅಲ್ಲ. 1989 ರಲ್ಲಿ ಜಿಪಿ ಮಹಿಳಾ ಕಾಲೇಜಿನಿಂದ ಪದವೀಧರರಾದ ನಂತರದಿಂದ ಅವರು ಮಹಿಳೆಯರು ಮತ್ತು ಸಮಾಜದ ಸೇವೆಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಕಲ್ಯಾಣಕ್ಕಾಗಿ ಕೊಡುಗೆ ನೀಡಬೇಕೆಂಬ ಅವರ ಸಂಕಲ್ಪವು ಅವರನ್ನು ರಾಜ್ಯ ಮಹಿಳಾ ಆಯೋಗದ ಸದಸ್ಯರನ್ನಾಗಿ ಮಾಡಿದೆ. ಈ ಶಾಸನಬದ್ಧ ಅಂಗದೊಂದಿಗಿನ ಕೆಲಸದ ಭಾಗವಾಗಿ ಅವರು ತಮ್ಮ ಹಕ್ಕಗಳಿಂದ ವಂಚಿತರಾದ ಹಲವಾರು ಕುಂಟುಂಬಗಳು ಮತ್ತು ಮಕ್ಕಳಿಗೆ ಸಹಾಯ ಮಾಡಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.