ಕಳೆದ 35 ವರ್ಷಗಳಿಂದ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತಿರುವ ಹರಿಯಾಣದ ಟ್ರೆಕ್ ಡ್ರೈವರ್
60 ವರ್ಷದ ದೇವದಾಸ ಗೋಸ್ವಾಮಿ ನಿರ್ಗತಿಕರಿಗಾಗಿ ಎರಡು ಮನೆಗಳನ್ನು ನಡೆಸುತ್ತಿದ್ದು, ನೂರಾರು ಜನರಿಗೆ ಹೊಸ ಜೀವನವನ್ನು ನೀಡಿದ್ದಾರೆ.
"ಜೀವಗದಲ್ಲಿ ಅತ್ಯಂತ ಸಂತೋಷವೆಂದರೆ ಇನ್ನೊಬ್ಬರಿಗೆ ನೀಡುವುದರಿಂದ ಬರುವ ಸಂತೋಷ," ಇದಕ್ಕೆ ಉತ್ತಮ ಉದಾಹರಣೆ ದೇವದಾಸ್ ಗೋಸ್ವಾಮಿ.
ಗೋಸ್ವಾಮಿಯವರು ಹೊಸದಿಲ್ಲಿಯಿಂದ ಉತ್ತರಕ್ಕೆ 62 ಕಿಲೋಮೀಟರ್ ದೂರದಲ್ಲಿರುವ ಹರಿಯಾಣದ ಸೋನಿಪತ್ ಜಿಲ್ಲೆಯ ಗನೌರ್ ಎಂಬ ಸಣ್ಣ ನಗರದಿಂದ ಬಂದಿದ್ದಾರೆ. ಈ ನಗರದಲ್ಲಿ ಹೆಚ್ಚಿನ ನಿವಾಸಿಗಳು ಜೀವನದಲ್ಲಿ ಬರಿಯ ಹಣಸಂಪಾದನೆಯಲ್ಲಿ ನಿರತರಾಗಿದ್ದರೆ, 60 ವರ್ಷ ವಯಸ್ಸಿನವರಾದ ಗೋಸ್ವಾಮಿಯವರು ಬಡವರು ಮತ್ತು ಮನೆಯಿಲ್ಲದವರ ಉನ್ನತಿಗಾಗಿ ತಮ್ಮ ಜೀವನವನ್ನು ಅರ್ಪಿಸುತ್ತಿದ್ದಾರೆ.
1978 ರಲ್ಲಿ ಗೋಸ್ವಾಮಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಈ ಸಮಾಜಸೇವೆಯು ಪ್ರಾರಂಭವಾಯಿತು. ಹೆದ್ದಾರಿಗಳ ಮೂಲಕ ಮತ್ತು ಅನೇಕ ರಾಜ್ಯಗಳಲ್ಲಿ ಓಡಾಡುತ್ತಿರುವಾಗ, ಹಸಿದ ಮತ್ತು ಅಸಹಾಯಕ ಜನರು ರಸ್ತೆಗಳ ಪಕ್ಕದಲ್ಲಿ ಕುಳಿತಿರುವ ದೃಶ್ಯವು ಅವರ ಮನಕಲುಕಿತು. ಹೇಗಾದರೂ, ಈ ಜನರ ಕಷ್ಟವನ್ನು ಬಗೆಹರಿಸಲು ಗೋಸ್ವಾಮಿ ಅವರು ನಿರ್ಧರಿಸಿದರು.
ಪ್ರತಿ ತಿಂಗಳು ತಾವು ಗಳಿಸುತ್ತಿದ್ದ 500 ರೂ.ಪಾಯಿಗಳಲ್ಲಿಯೇ ತಮ್ಮ ಟ್ರಕ್‌ನಲ್ಲಿ ಸೀಮೆಎಣ್ಣೆ ಒಲೆ ಸ್ವಲ್ಪ ಆಹಾರವನ್ನು ತಯಾರಿಸಿ ಪ್ರಯಾಣದ ಸಮಯದಲ್ಲಿ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರವನ್ನು ಒದಗಿಸುವಲ್ಲಿ ಯಶಸ್ವಿಯಾದರು. ಇವರ ಈ ಸೇವೆ 35 ವರ್ಷಗಳಿಗಿಂತ ಹೆಚ್ಚು ಸಮಯದಿಂದ ನಡೆದುಕೊಂಡು ಬಂದಿದೆ, ಮತ್ತು ಇಂದಿಗೂ ಅವರು ನಿರ್ಗತಿಕರಿಗೆ ಸೇವೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ. ಬಡವರಿಗೆ ಆಹಾರವನ್ನು ನೀಡುವುದರ ಹೊರತಾಗಿ, ಗೋಸ್ವಾಮಿ ಅವರ ಪತ್ನಿ ತಾರಾ ಅವರೊಂದಿಗೆ ಈಗ ಬಡವರಿಗಾಗಿ ಎರಡು ಮನೆಗಳನ್ನು ದೆಹಲಿಯ ದ್ವಾರಕಾದಲ್ಲಿ ಮತ್ತು ಇನ್ನೊಂದು ಗನೌರ್‌ನಲ್ಲಿ ನಡೆಸುತ್ತಿದ್ದಾರೆ. ಅವರು ಅಲ್ಲಿ ವಾಸಿಸುವ ಎಲ್ಲಾ 130 ಜನರಿಗೆ ಆಹಾರ, ಬಟ್ಟೆ, ಆಶ್ರಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.
ಗೋಸ್ವಾಮಿಯವರ ಮಾನವೀಯ ಕಾರ್ಯವು ನೂರಾರು ಜನರಿಗೆ ಹೊಸ ಜೀವನವನ್ನು ನೀಡಿದೆ. 60 ವರ್ಷ ವಯಸ್ಸಿನ ಗೋಸ್ವಾಮಿಯವರು ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುವುದರಿಂದ ತನಗಿಂತ ಕಡಿಮೆ ಸವಲತ್ತು ಹೊಂದಿರುವ ಜನರಿಗೆ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ ಮತ್ತು ಇದು ಸ್ವಯಂ ತೃಪ್ತಿಯ ಭಾವವನ್ನು ನೀಡುತ್ತದೆ ಎಂದು ನಂಬುತ್ತಾರೆ.
“ನಾನು ಒಂದು ಸಮಯದಲ್ಲಿ ಮನೆಯಿಲ್ಲದವನು ಮತ್ತು ಬಡತನದಿಂದ ಬಳಲುತ್ತಿದ್ದೆ. ನನ್ನ ಹೊಟ್ಟೆಯಲ್ಲಿ ಆಹಾರವಿಲ್ಲ ಎಂಬ ಸಂವೇದನೆ ನನಗೆ ನೋವು ಮತ್ತು ಕಿರಿಕಿರಿಯನ್ನು ಉಂಟುಮಾಡಿತು. ಇದು ಖಂಡಿತವಾಗಿಯೂ ನಾನು ಅನುಭವಿಸಿದ ಅತ್ಯಂತ ಕಠಿಣ ಹಂತವಾಗಿದೆ. ನನ್ನ ಜೀವನದ ಈ ಅನುಭವವೇ ಇಂದು ನನಗೆ ಈ ಕೆಲಸಗಳಿಗೆ ಪ್ರೇರಣೆಯಾಗಿದೆ" ಎಂದರು.
ಬೆಳೆದು ಬಂದ ಹಾದಿ...
ದೇವದಾಸ್ ಗೋಸ್ವಾಮಿ ಹರಿಯಾಣದಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಭಾರತೀಯ ಸೇನೆಯ ಭಾಗವಾಗಿದ್ದರಿಂದ, ಅವರು ತಮ್ಮ ಬಾಲ್ಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕಾಗಿತ್ತು. 15 ವರ್ಷದವರಿದ್ದಾಗ, ಗೋಸ್ವಾಮಿಯವರು ಶಾಲೆಯಿಂದ ಹೊರಗುಳಿದರು, ಸಣ್ಣಪುಟ್ಟ ಕೆಲಸಗಳನ್ನು ಮಾಡಿ ದಿನಕ್ಕೆ 50-60 ರೂಪಾಯಿ ಸಂಪಾದಿಸುತ್ತಿದ್ದರು. ಕೆಲವು ವರ್ಷಗಳ ನಂತರ, ಅವರು ತಮ್ಮದೇ ಆದ ಹಾದಿಯನ್ನು ನೋಡಿಕೊಳ್ಳಲು ಮನೆಯಿಂದ ಹೊರಬಂದರು.
"ನಾನು ಟ್ರಕ್ ಡ್ರೈವರ್ ಆಗಬೇಕೆಂದು ಬಯಸಿದ್ದೆ, ಆದರೆ ನನ್ನ ಕುಟುಂಬವು ಅದರ ಬಗ್ಗೆ ಹೆಚ್ಚು ಆಸಕ್ತಿಹೊಂದಿರಲಿಲ್ಲ. ಆದ್ದರಿಂದ, ನಾನು ದೂರ ಹೋಗಲು ನಿರ್ಧರಿಸಿದೆ ಮತ್ತು ರೈಲ್ವೆ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದೆ. ಒಂದು ನಿರ್ದಿಷ್ಟ ಹಂತವನ್ನು ಮೀರಿ ನನ್ನ ಹಸಿವನ್ನು ಸಹಿಸಲಾಗದಿದ್ದಾಗ, ನಾನು ಆಹಾರದ ಅಂಗಡಿಯೊಂದನ್ನು ಸಂಪರ್ಕಿಸಿದೆ. ಕೌಂಟರ್‌ನ ಹಿಂದಿರುವ ವ್ಯಕ್ತಿ ನನಗೆ ಒಂದಕ್ಕಿಂತ ಹೆಚ್ಚು ಪುರಿಗಳನ್ನು ನೀಡಲು ನಿರಾಕರಿಸಿದರು ಮತ್ತು ನನ್ನನ್ನು ನಿಂದಿಸಿದರು. ಒಂದು ದಿನ ಸಾಧ್ಯವಾದಷ್ಟು ಹಸಿದ ಜನರಿಗೆ ಆಹಾರವನ್ನು ಒದಗಿಸಬೇಕೆಂದು ನಾನು ಆಗಲೇ ನಿರ್ಧರಿಸಿದೆ,” ಎಂದು ತಮ್ಮ ಅನುಭವವನ್ನು ವಿವರಿಸಿದರು.
ಕೆಲವು ದಿನಗಳ ಹೋರಾಟದ ನಂತರ, ಗೋಸ್ವಾಮಿ ಪಂಜಾಬ್‌ನ ಲುಧಿಯಾನದಲ್ಲಿರುವ ನಾರ್ದರ್ನ್ ಕ್ಯಾರಿಯರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಟ್ರಕ್ ಚಾಲಕನಾಗಿ ಸೇರಲು ಯಶಸ್ವಿಯಾದರು. ಆದಾಗ್ಯೂ, ರಸ್ತೆಗಳ ಮೂಲಕ ವಾಹನ ಚಲಾಯಿಸುವುದು, ಸರಕುಗಳನ್ನು ಲೋಡ್ ಮಾಡುವುದು ಮತ್ತು ಗಡುವನ್ನು ಪೂರೈಸುವಲ್ಲಿಯೇ ಅವರು ತಮ್ಮ ಜೀವನವನ್ನು ಕಳೆಯಲಿಲ್ಲ.
“ಜನರು ಸರಿಯಾದ ಬಟ್ಟೆ, ಆಶ್ರಯ ಅಥವಾ ಆಹಾರವಿಲ್ಲದೆ ರಸ್ತೆಗಳಲ್ಲಿ ಮಲಗಿರುವುದನ್ನು ನೋಡಿದಾಗಲೆಲ್ಲಾ ನಾನು ಟ್ರಕ್ ಅನ್ನು ಒಂದು ಮೂಲೆಯಲ್ಲಿ ನಿಲ್ಲಿಸಿ, ಸ್ವಲ್ಪ ದಾಲ್, ರೊಟಿ ಮತ್ತು ತರಕಾರಿಗಳನ್ನು ಬೇಯಿಸಿ ಅವರಿಗೆ ವಿತರಿಸುತ್ತಿದ್ದೆ. ನಂತರ, ನಾನು ಅವರಿಗೆ ಸ್ನಾನ ಮತ್ತು ಕ್ಷೌರವನ್ನು ನೀಡಲು ಪ್ರಾರಂಭಿಸಿದೆ. ಎಲ್ಲದರ ನಂತರ ಅವರ ಮುಖದಲ್ಲಿ ಕಿರುನಗೆ ನೋಡುವುದು, ನನಗೆ ತೃಪ್ತಿಯನ್ನು ತರುತ್ತಿತ್ತು” ಎಂದು ಗೋಸ್ವಾಮಿ ಹೇಳುತ್ತಾರೆ.
ಟ್ರಕ್ ಚಾಲಕನಾಗಿದ್ದ ಸಮಯದಲ್ಲಿ, ಗೋಸ್ವಾಮಿಯರು ಸರಿಯಾದ ಸಮಯಕ್ಕೆ ಸರಕುಗಳನ್ನು ಪೂರೈಸದ ಕಾರಣಕ್ಕಾಗಿ ವಿವಿಧ ಪ್ರಯಾಣ ಕಂಪನಿಗಳಿಂದ ಅನೇಕ ಬಾರಿ ವಜಾ ಮಾಡಲಾಯಿತು. ಆಹಾರವನ್ನು ತಯಾರಿಸಲು ಹಾಗೂ ಅದನ್ನು ಉಣಬಡಿಸಲು ಗೋಸ್ವಾಮಿ ಅವರಿಗೆ ಪ್ರತಿದಿನ ಕನಿಷ್ಠ ಒಂದು ಅಥವಾ ಎರಡು ಗಂಟೆ ಸಮಯ ಬೇಕಾಗುತ್ತಿತ್ತು. ಇದು ಅವರ ವೇಳಾಪಟ್ಟಿಯನ್ನು ವಿಳಂಬಗೊಳಿಸುತ್ತಿತ್ತು. ಆದ್ದರಿಂದ, ಅವರು ವರ್ಷಗಳವರೆಗೆ ಒಂದು ಉದ್ಯೋಗದಿಂದ ಇನ್ನೊಂದಕ್ಕೆ ಹೋಗಬೇಕಾಗಿತ್ತು.
ಪ್ರತಿ ತಿಂಗಳು ಅಲ್ಪ ಪ್ರಮಾಣದ ಹಣವನ್ನು ಗಳಿಸಿದರೂ, ಗೋಸ್ವಾಮಿ ತಮ್ಮ ಸ್ವಂತ ಉಳಿತಾಯವನ್ನು ಬಡವರಿಗೆ ಆಹಾರಕ್ಕಾಗಿ ಬಳಸುತ್ತಿದ್ದರು.
“ಅನೇಕ ಬಾರಿ, ನನ್ನ ಸ್ವಂತ ಕುಟುಂಬವನ್ನು ಪೂರೈಸಲು ನನ್ನ ಬಳಿ ಸಾಕಷ್ಟು ಹಣ ಇರಲಿಲ್ಲ. ಅವರ ಮೂಲಭೂತ ಅಗತ್ಯಗಳನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ನನ್ನ ಮಗಳಿಗೆ 30 ವರ್ಷದವಳಿದ್ದಾಗ ಮದುವೆ ಮಾಡಿದೆ, ಏಕೆಂದರೆ ಅಲ್ಲಿಯವರೆಗೆ ನನ್ನ ಬಳಿ ಸಾಕಷ್ಟು ಸಂಪನ್ಮೂಲಗಳಿಲ್ಲ. ಆದರೂ ನಾನು ಯಾಕೆ ಇಂತಹ ಕೆಲಸಕ್ಕೆ ನನ್ನನ್ನು ತೊಡಗಿಸಿಕೊಂಡೆ ಎಂದು ಯೋಚಿಸಲಿಲ್ಲ" ಎಂದು ಗೋಸ್ವಾಮಿ ಹೇಳುತ್ತಾರೆ.
ಬಡತನ ಮತ್ತು ಹಸಿವನ್ನು ದೂರ ಓಡಿಸುತ್ತಿರುವ ಚಾಲಕ
ಗೋಸ್ವಾಮಿ ತಾರಾರನ್ನು ಮದುವೆಯಾದ ನಂತರ, ಅವರು ಕೂಡ ಗೋಸ್ವಾಮಿಯವರ ಪ್ರಯತ್ನದಲ್ಲಿ ಅವರನ್ನು ಬೆಂಬಲಿಸಲು ಪ್ರಾರಂಭಿಸಿದರು. 2008 ರಲ್ಲಿ, ಗೋಸ್ವಾಮಿ ಟ್ರಕ್ ಚಾಲಕರಾಗಿ ತಮ್ಮ ಕೆಲಸವನ್ನು ತೊರೆದರು ಮತ್ತು ಇಬ್ಬರೂ ಒಟ್ಟಾಗಿ ನಿರ್ಗತಿಕರಿಗಾಗಿ ಎರಡು ಮನೆಗಳನ್ನು ಸ್ಥಾಪಿಸಿದರು. ತಮ್ಮ ಉಳಿತಾಯದಿಂದ ತಿಂಗಳಿಗೆ 17,000 ರೂ. ಪಾವತಿಸಿ ದ್ವಾರಕಾದಲ್ಲಿ ಅವರಲ್ಲಿ ಒಬ್ಬರಿಗೆ ತಮ್ಮ ಮನೆಯನ್ನು ಬಾಡಿಗೆಗೆ ನೀಡಿದರೆ, ಅವರು ಸೋನಿಪತ್‌ನಲ್ಲಿ ಇರುವ ತಮ್ಮದೇ ಆದ ಜಮೀನನ್ನು ಇನ್ನೊಂದನ್ನು ಮನೆ ನಿರ್ಮಿಸಲು ಬಳಸಿದರು.
"ಒಮ್ಮೆ ನಮ್ಮ ಪ್ರಯತ್ನಗಳ ಬಗ್ಗೆ ಮಾತು ಹರಡಲು ಪ್ರಾರಂಭಿಸಿದಾಗ, ಹಲವಾರು ವ್ಯಕ್ತಿಗಳು ಮನೆಗಳನ್ನು ನಡೆಸಲು ಹಣವನ್ನು ದಾನ ಮಾಡಲು ಮುಂದೆ ಬರಲು ಪ್ರಾರಂಭಿಸಿದರು. ಅವರ ಆಹಾರವನ್ನು, ವೈದ್ಯಕೀಯ ಅಗತ್ಯಗಳನ್ನು ನೋಡಿಕೊಳ್ಳಲು ಮತ್ತು ಇತರ ಖರ್ಚುಗಳನ್ನು ಪೂರೈಸಲು ಜನರು ಮುಂದೆಬಂದರು. ಈಗಲೂ ಸಹ, ನಾವು ವಿಭಿನ್ನ ಸಾಮರ್ಥ್ಯದ, ಮಾನಸಿಕ ವಿಕಲಚೇತನರನ್ನು ಮತ್ತು ಮನೆಯಿಂದ ಹೊರಗುಳಿದ ಜನರನ್ನು ಬೀದಿಗಳಿಂದ ರಕ್ಷಿಸುತ್ತೇವೆ ಮತ್ತು ಅವರನ್ನು ನಮ್ಮ ಮನೆಗಳಿಗೆ ಕರೆತರುತ್ತೇವೆ. ಒಮ್ಮೊಮ್ಮೆ, ಕೆಲವು ಸ್ವಯಂಸೇವಕರು ಸಹ ನಮ್ಮೊಂದಿಗೆ ಕೈ ಜೋಡಿಸುತ್ತಾರೆ” ಎಂದು ಗೋಸ್ವಾಮಿ ಹೇಳುತ್ತಾರೆ.
ಎರಡೂ ಮನೆಗಳಲ್ಲಿ ನಿರಾಶ್ರಿತರ ಆರೋಗ್ಯ ರಕ್ಷಣೆಗಾಗಿ ಗೋಸ್ವಾಮಿ, ಅವರು ಕ್ರೌಡ್‌ಸೋರ್ಸಿಂಗ್ ಪ್ಲಾಟ್‌ಫಾರ್ಮ್ ಮಿಲಾಪ್‌ನಲ್ಲಿ ಧನಸಹಾಯಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ. ಅವರ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ, 60 ವರ್ಷದ, ದೇವದಾಸ್ ಗೋಸ್ವಾಮಿಯವರು ಹೀಗೆ ಹೇಳುತ್ತಾರೆ,
"ನಾನು ಕನಿಷ್ಟ ಇನ್ನೂ 20 ವರ್ಷಗಳ ಕಾಲ ಬದುಕಲು ಬಯಸುತ್ತೇನೆ, ಇದರಿಂದಾಗಿ ವಂಚಿತರಿಗಾಗಿ ಅಂತಹ 20 ಮನೆಗಳನ್ನು ನಿರ್ಮಿಸಬಹುದು."
ಇಂದಿನ ವೇಗದ ಗತಿಯ ಜಗತ್ತಿನಲ್ಲಿ ಹೆಚ್ಚಿನ ಜನರು ತಮ್ಮ ಬದುಕಿನ ಬಗ್ಗೆಯಷ್ಟೇ ಯೋಚಿಸುತ್ತಾರೆ, ಇಂಥವರ ಮಧ್ಯ ಗೋಸ್ವಾಮಿಯಂತಹ ವ್ಯಕ್ತಿಗಳನ್ನು ಕಾಣುವುದು ಅಪರೂಪ.