300 ಮಕ್ಕಳ ಶಿಕ್ಷಣಕ್ಕಾಗಿ ದೆಹಲಿ ಮೆಟ್ರೋ ಬ್ರಿಡ್ಜ್ ಕೆಳಗೆ ಶಾಲೆ ನಿರ್ಮಿಸಿದ ಅಭೂತಪೂರ್ವ ಶಿಕ್ಷಕ

'ದಿ ಫ್ರೀ ಸ್ಕೂಲ್ ಅಂಡರ್ ಬ್ರಿಡ್ಜ್' ಎಂಬ ಶಾಲೆಯು ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸುತ್ತದೆ. ಇಲ್ಲಿ ನಾಲ್ಕರಿಂದ ಹದಿನಾಲ್ಕು ವರ್ಷದ ವಿದ್ಯಾರ್ಥಿಗಳಿದ್ದು, ಬಿಡುವಿನ ಸಮಯದಲ್ಲಿ ಕಲಿಸಲು ಇಚ್ಛಿಸಿರುವ 7 ಸ್ವಯಂಸೇವಕ ಶಿಕ್ಷಕರಿದ್ದಾರೆ.

300 ಮಕ್ಕಳ ಶಿಕ್ಷಣಕ್ಕಾಗಿ ದೆಹಲಿ ಮೆಟ್ರೋ ಬ್ರಿಡ್ಜ್ ಕೆಳಗೆ ಶಾಲೆ ನಿರ್ಮಿಸಿದ ಅಭೂತಪೂರ್ವ ಶಿಕ್ಷಕ

Tuesday October 01, 2019,

3 min Read

ಇಂದಿಗೂ‌ ಭಾರತದಲ್ಲಿ ಸಾಕಷ್ಟು‌ ಮಕ್ಕಳು ‌ಶಿಕ್ಷಣ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆಯಲು ಮಕ್ಕಳನ್ನು ಶಾಲೆಗೆ ಸೇರುವಂತೆ ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ವಿವಿಧ ಉಪಕ್ರಮಗಳಿದ್ದರೂ, ಹಲವು ಕಾರಣಗಳಿಂದಾಗಿ ಶಿಕ್ಷಣವನ್ನು ಮುಂದುವರಿಸಲು ಅನೇಕ ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ.


ಆದರೆ, ಇದಕ್ಕೆ ಪೂರಕವಾದ ಹಲವಾರು ಪ್ರಯತ್ನಗಳು ನಿರಂತರವಾಗಿ ಮುಂದುವರಿಯುತ್ತಿದ್ದು, ರಾಜೇಶ್ ಕುಮಾರ್ ಶರ್ಮಾ ಎಂಬುವವರು ಮಕ್ಕಳು ಜೀವನದಲ್ಲಿ ಮುಂದುವರಿಯಬೇಕಾದರೆ ಅಗತ್ಯವಾದ ಮೂಲಭೂತ ಶಿಕ್ಷಣವನ್ನು ಪಡೆಯಬೇಕೆಂದು ಅರಿತು ಅನೇಕ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಕಾರಣಕರ್ತರಾಗಿದ್ದಾರೆ.


ಕಳೆದ 13 ವರ್ಷಗಳಿಂದ ರಾಜೇಶ್ ದೆಹಲಿಯ ಯಮುನಾ ನದಿ ತೀರದ ಬಳಿ ಮೆಟ್ರೋ ಸೇತುವೆಯಡಿಯಲ್ಲಿ ಕಡುಬಡತನದ 300 ಮಕ್ಕಳಿಗೆ ಪ್ರತಿನಿತ್ಯ ಕಲಿಸುತ್ತಿದ್ದಾರೆ. ‘ದಿ ಫ್ರೀ ಸ್ಕೂಲ್ ಅಂಡರ್ ದಿ ಬ್ರಿಡ್ಜ್’ ಎಂದು ಹೆಸರಿಸಲಾದ ಈ ಶಾಲೆ ಎರಡು ಪಾಳಿಯಲ್ಲಿ ನಡೆಯುತ್ತದೆ. ಬೆಳಿಗ್ಗೆ 9 ರಿಂದ 11 ರವರೆಗೆ 120 ಬಾಲಕರಿಗೆ, ಮತ್ತು 180 ಬಾಲಕಿಯರಿಗೆ ಮಧ್ಯಾಹ್ನ 2 ಗಂಟೆಯಿಂದ 4: 30 ರವರೆಗೆ ತರಗತಿಗಳು ನಡೆಯುತ್ತವೆ. ಈ ಶಾಲೆಯಲ್ಲಿ ಏಳು ಶಿಕ್ಷಕರಿದ್ದು, ನಾಲ್ಕರಿಂದ ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಕಲಿಸುವ ಮೂಲಕ ಸ್ವಯಂ ಸೇವೆಯಲ್ಲಿ ತೊಡಗಿದ್ದಾರೆ.


ರಾಜೇಶ್ ಕುಮಾರ್ ಶರ್ಮ (ಚಿತ್ರಕೃಪೆ: ದರ್ಪಣ್ ಮ್ಯಾಗಜೀನ್)

ಇತರ ಶಾಲೆಗಳಿಗಿಂತ ಭಿನ್ನವಾಗಿ, ಸೇತುವೆಯ ಕೆಳಗೆ ಯಾವುದೇ ಕಟ್ಟಡವಿಲ್ಲದ ಈ ತೆರೆದ ಶಾಲೆಯಲ್ಲಿ ಕೇವಲ ಗೋಡೆಯ ಮೇಲೆ ಕಪ್ಪು ಬಣ್ಣದ ಕೋಟ್ ಪೇಂಟಿಂಗ್ ಮಾಡಿದ ಐದು ಬ್ಲ್ಯಾಕ್‌ಬೋರ್ಡ್‌ಗಳನ್ನು ಹೊರತುಪಡಿಸಿ ಇನ್ನೇನೂ ಇಲ್ಲ. ಶಾಲೆಯು ಶಿಕ್ಷಕರಿಗೆ ಸಹಾಯವಾಗುವ ಬಳಪ, ಡಸ್ಟರ್ಸ್, ಪೆನ್ನುಗಳು ಹಾಗೂ ಪೆನ್ಸಿಲ್‌ಗಳಂತಹ ಮೂಲ ಲೇಖನ ಸಾಮಗ್ರಿಗಳನ್ನು ಮಾತ್ರ ಹೊಂದಿದೆ. ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳನ್ನು ತಂದು ಕಾರ್ಪೆಟ್ ಹಾಸಿದ ನೆಲದ ಮೇಲೆ ಕುಳಿತು ಅಭ್ಯಸಿಸುತ್ತಾರೆ.


ಶಾಲೆಯಲ್ಲಿ ಬಾಲಕಿಯರು ಮತ್ತು ಬಾಲಕರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯವೂ ಇದ್ದು, ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಮೂಲಭೂತ ನೈರ್ಮಲ್ಯ ಮತ್ತು ಸ್ವಚ್ಛತೆಯ ಬಗ್ಗೆ ಸಹ ಕಲಿಸಲಾಗುತ್ತದೆ.


ತಮಗೆ ದೊರೆತ ಬೆಂಬಲದ ಕುರಿತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ರಾಜೇಶ್,


“ಆರಂಭದಲ್ಲಿ, ಕೆಲವು ಎನ್‌ಜಿಒಗಳು ನನ್ನನ್ನು ಸಂಪರ್ಕಿಸಿ ತಾತ್ಕಾಲಿಕ ಶಾಲೆಯೊಂದಿಗೆ ಜೊತೆಗೂಡಲೂ ಪ್ರಯತ್ನಿಸಿದವು. ಆದರೆ, ಅವರೆಲ್ಲರೂ ಅನುಮಾನಾಸ್ಪದವಾಗಿ ಕಾಣುತ್ತಿದ್ದರಿಂದ ನಾನು ಅವರಿಗೆ ಎಂದಿಗೂ ಅವಕಾಶ ನೀಡಲಿಲ್ಲ. ಮಕ್ಕಳ ಶಿಕ್ಷಣ ಮತ್ತು ಅವರ ಭವಿಷ್ಯದ ಬಗ್ಗೆ ಯಾರಲ್ಲಿಯೂ ಗಂಭೀರತೆ ಕಾಣಲಿಲ್ಲ. ಅವರು ಏನನ್ನಾದರೂ ತೋರಿಸುವುದರ ಮೂಲಕ ಮತ್ತು ಯಾವುದನ್ನಾದರೂ ಹೇಳಿಕೊಳ್ಳುವ ಮೂಲಕ ಹಣ ಸಂಪಾದಿಸುವುದರಲ್ಲಿ ಮಾತ್ರ ಆಸಕ್ತಿ ಹೊಂದಿದ್ದರು, ಹಾಗಾಗಿ ಅನೇಕ ಲೋಪದೋಷಗಳು ಹಾಗೂ ವ್ಯತ್ಯಾಸಗಳಿಗೆ ಕಾರಣವಾಗುವ ಅವರ ಕಾರ್ಯಚಟುವಟಿಕೆಗೆ ನಾನು ಒಪ್ಪಿಗೆ ನೀಡಲಿಲ್ಲ" ಎಂದರು


ಇಲ್ಲಿರುವ ಹೆಚ್ಚಿನ ವಿದ್ಯಾರ್ಥಿಗಳು ಚಿಂದಿ ಆಯುವವರು, ರಿಕ್ಷಾ ಎಳೆಯುವವರು ಮತ್ತು ಭಿಕ್ಷುಕರ ಮಕ್ಕಳಾಗಿರುವುದರಿಂದ, ಅವರಿಗೆ ಮೂಲಭೂತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.


ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರು (ಚಿತ್ರಕೃಪೆ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)



ಇಂಡಿಯಾ ಟುಡೆ ವರದಿಯ ಪ್ರಕಾರ, ಶಾಲೆಗೆ ಕೆಲವು ಅಂಗಡಿಯವರು ಕುಡಿಯುವ ನೀರನ್ನು ಸಹ ದಾನ ಮಾಡುತ್ತಿದ್ದಾರೆ. ಇದು ಬೇಸಿಗೆಯಲ್ಲಿ ಹೆಚ್ಚು ಸಹಾಯಕಾರಿಯಾಗಿದೆ.


ರಾಜೇಶ್ ಅವರ ಕುಟುಂಬದ ದುರ್ಬಲ ಆರ್ಥಿಕ ಪರಿಸ್ಥಿತಿಯ ಕಾರಣವಾಗಿ, ಅವರು ತಮ್ಮ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಹಾಗೂ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯ ಎಂದು ತಿಳಿದಿದ್ದ ಅವರು ತಮಗೆ ಆದ ಸಮಸ್ಯೆ ಮತ್ಯಾರಿಗೂ ಬರಬಾರದೆಂಬ ಸದುದ್ದೇಶದಿಂದಾಗಿ ಈ ಶಾಲೆಯನ್ನು ಆರಂಭಿಸಿದ್ದಾರೆ.


ಇದೀಗ ರಾಜೇಶ ಒಬ್ಬರೇ ತಮ್ಮ ಕುಟುಂಬದ ಐದು ಜನರಿಗೂ ಆಧಾರಸ್ತಂಭವಾಗಿರುವದರಿಂದ, ಅವರನ್ನು ಬೆಂಬಲಿಸಲು ಹತ್ತಿರದಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅಲ್ಲದೇ ಅವರ ಈ ಸಮಾಜಸೇವೆಗೆ ಲಕ್ಷ್ಮಿ ಚಂದ್ರ, ಶ್ಯಾಮ್ ಮಹತೋ, ರೇಖಾ, ಸುನೀತಾ, ಮನೀಷಾ, ಚೇತನ್ ಶರ್ಮಾ, ಮತ್ತು ಸರ್ವೇಶ್ ರಂತಹ ಶಿಕ್ಷಕರು ಬೆನ್ನೆಲುಬಾಗಿ ನಿಂತಿದ್ದಾರೆ.


ಶಾಲೆಗೆ ಜನರ ಪ್ರತಿಕ್ರಿಯೆಯ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ‌ರೊಂದಿಗೆ ಮಾತನಾಡಿದ ರಾಜೇಶ್,


“ಕೆಲವರು ಶಾಲೆಗೆ ಸಾಂದರ್ಭಿಕವಾಗಿ ಭೇಟಿ ನೀಡಿದಾಗ ಮಕ್ಕಳಿಗೆ ಬಿಸ್ಕೆಟ್ ಪ್ಯಾಕೆಟ್‌ಗಳು, ಹಣ್ಣುಗಳು, ನೀರಿನ ಬಾಟಲಿಗಳು ಮತ್ತು ಪ್ಯಾಕೇಜ್ ಮಾಡಿದ ಆಹಾರವನ್ನು ವಿತರಿಸುತ್ತಾರೆ. ಕೆಲವು ಯುವಕರು ತಮ್ಮ ಜನ್ಮದಿನವನ್ನು ಈ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಆಚರಿಸಿಕೊಳ್ಳುತ್ತಾರೆ ಹಾಗೂ ಸೇತುವೆಯ ಕೆಳಗೆ ಮಕ್ಕಳೊಂದಿಗೆ ಕುಳಿತುಕೊಳ್ಳುವ ಮೂಲಕ ಒಟ್ಟಿಗೆ ಆಹಾರವನ್ನು ಸೇವಿಸುತ್ತಾರೆ. ಅಂತಹ ಕೆಲವು ಸಂದರ್ಭಗಳು ಮಕ್ಕಳಿಗೆ ಅವರು ಎಲ್ಲಿ ವಾಸಿಸುತ್ತಿದ್ದಾರೆ ಹಾಗೂ ಅವರು ಯಾವ ಹಿನ್ನೆಲೆಯವರಾಗಿದ್ದರೂ ನಾವು ಸಹ ಸಮಾಜದ ಭಾಗವೆಂದು ಭಾವಿಸುವಂತಾಗುತ್ತದೆ" ಎಂದರು


(ಚಿತ್ರಕೃಪೆ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)

ರಾಜೇಶ್ ತಮ್ಮ ವಿದ್ಯಾರ್ಥಿಗಳ ಬಗ್ಗೆ ನಿಗಾವಹಿಸಲು ಹಾಜರಾತಿ ದಾಖಲೆಯನ್ನು ಸಹ ನಿರ್ವಹಿಸುತ್ತಿದ್ದು, ಯಾರಾದರೂ ದೀರ್ಘ ದಿನಗಳ ಕಾಲ ತರಗತಿಗಳಿಗೆ ಗೈರುಹಾಜರಾದರೆ ಅದಕ್ಕೆ ಕಾರಣವನ್ನು ತಿಳಿಯಲು ಅವನು ಪೋಷಕರನ್ನು ಭೇಟಿಮಾಡುತ್ತಾರೆ.


ಹಿಂದುಸ್ಥಾನ್ ಟೈಮ್ಸ್ ವರದಿಯ ಪ್ರಕಾರ, ಶಾಲೆಯ ಆರು ವರ್ಷದ ವಿದ್ಯಾರ್ಥಿನಿ ಸುನೀತಾ ಮಾತನಾಡಿ, “ನಾನು ನನ್ನ ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆಯಿದೆ. ಅದಕ್ಕಾಗಿಯೇ ನಾನು ಪ್ರತಿದಿನ ಮಧ್ಯಾಹ್ನ ಇಲ್ಲಿಗೆ ಬರುತ್ತೇನೆ. ಕೆಲವೊಮ್ಮೆ ಭಾರೀ ಮಳೆ ಅಥವಾ ಗುಡುಗಿನಂತಹ ಅಸಾಮಾನ್ಯ ವಾತಾವರಣದಲ್ಲಿ ಶಾಲೆಯನ್ನು ಮುಚ್ಚಲಾಗುತ್ತದೆ. ಆದರೆ ಇಂತಹವುಗಳಿಂದ ನನ್ನ ಅಧ್ಯಯನದಲ್ಲಿನ‌ ಉತ್ಸಾಹವು ಎಂದಿಗೂ ಕಡಿಮೆಯಾಗುವುದಿಲ್ಲ" ಎಂದಳು.



ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.