ಬಾಣಸಿಗರಾಗಿ ಪ್ರಸಿದ್ದಿಯಾಗಿರುವ ಮಾಜಿ ಪತ್ರಕರ್ತರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್ ನಿಂದಾಗಿ 1,000 ಅನಾಥ ಮಕ್ಕಳಿಗೆ ಆಹಾರ ಒದಗಿಸುತ್ತಿದ್ದಾರೆ

ನವಾಬ್ಸ್ ಕಿಚನ್ ಎಂಬ ಯೂಟ್ಯೂಬ್ ಚಾನೆಲ್‌ ಮೂಲಕ ‌ಜನಪ್ರಿಯತೆ ಗಳಿಸಿರುವ ಮಾಜಿ ಪತ್ರಕರ್ತ ಖ್ವಾಜಾ ಮೊಯಿನುದ್ದೀನ್ ತಮ್ಮ ಯೂಟ್ಯೂಬ್‌ನ ಆದಾಯದಿಂದ ಪ್ರತಿ ತಿಂಗಳು ಹೈದರಾಬಾದಿನಾದ್ಯಂತ ಇರುವ 1,000 ಅನಾಥ ಮಕ್ಕಳಿಗೆ ಆಹಾರ ನೀಡುತ್ತಿದ್ದಾರೆ.

ಬಾಣಸಿಗರಾಗಿ ಪ್ರಸಿದ್ದಿಯಾಗಿರುವ ಮಾಜಿ ಪತ್ರಕರ್ತರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್ ನಿಂದಾಗಿ 1,000 ಅನಾಥ ಮಕ್ಕಳಿಗೆ ಆಹಾರ ಒದಗಿಸುತ್ತಿದ್ದಾರೆ

Monday August 05, 2019,

2 min Read

39 ವರ್ಷದ ಮಾಜಿ ಪತ್ರಕರ್ತ, ಈಗ ಅಡುಗೆ ಭಟ್ಟರಾಗಿರುವ ಖ್ವಾಜಾ ಮೊಯಿನುದ್ದೀನ್ ಅವರ ಯೂಟ್ಯೂಬ್ ಚಾನೆಲ್, ಡೋಮಿನೋಸ್ ಶೈಲಿಯ ಪಿಜ್ಜಾದಿಂದ ಹಿಡಿದು ಬಿರಿಯಾನಿಯವರೆಗೆ ಎಲ್ಲ ಥರಹದ ಆಡುಗೆಯನ್ನು ಹೇಳಿಕೊಡುತ್ತದೆ.


ಆದರೆ ಈ ಹೈದರಾಬಾದಿನ ನಿವಾಸಿಯ ಯೂಟ್ಯೂಬ್ ಖಾತೆ ಬೇರೆಲ್ಲ ಗೃಹಶೈಲಿಯ ಬಾಣಸಿಗರಿಗಿಂತ ವಿಶಿಷ್ಟ ಎನಿಸೋದು ಅವರ ಸಾಮಾಜಿಕ ಕೆಲಸದಿಂದ.


ಪ್ರತಿ ತಿಂಗಳು, ಖ್ವಾಜಾ ನಗರದ ವಿವಿಧ ಅನಾಥಾಶ್ರಮಗಳಿಗೆ ತೆರಳಿ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆಹಾರವನ್ನು ನೀಡುತ್ತಾರೆ.‌


ಕ

ಅನಾಥ ಮಕ್ಕಳಿಗಾಗಿ ನೂಡಲ್ಸ್ ತಯಾರಿಸುತ್ತಿರುವ‌ ಖ್ವಾಜಾ


ತಮ್ಮ ಬಳಿ ಇರುವ ಒಂದೇ ಒಂದು ಅಡುಗೆ ಪುಸ್ತಕದಿಂದ ಅಡುಗೆ ಕಲಿತ ಇವರು, ಅನಾಥ ಮಕ್ಕಳಿಗಾಗಿ ಪಾವ್ ಬಜಿಯಿಂದಾ ಬ್ಲ್ಯಾಕ್ ಫಾರೆಸ್ಟ್ ಕೇಕಿನವರೆಗೂ, ತಂದೂರಿ ಚಿಕನ್ ಹಾಗೂ ಟ್ಯೂನ ಸ್ಟೀಕ್ ಗಳನ್ನೂ ಸಹ ತಯಾರಿಸುತ್ತಾರೆ. ಮಿಲಿಯನ್ ಗಟ್ಟಲೆ ವೀಕ್ಷಣೆಯಾಗುವ ಇವರ‌ ವೀಡಿಯೋಗಳಲ್ಲಿ ಅಡುಗೆ ಮಾಡುವುದರಿಂದ ಶುರುವಾಗಿ, ಆ ಮಕ್ಕಳಿಗಾಗಿ ಡಬ್ಬಿಯಲ್ಲಿ ಊಟವನ್ನು ಪ್ಯಾಕ್ ಮಾಡುವವರೆಗೂ ನೋಡಬಹುದು.


ಯೂಟ್ಯೂಬ್ ಚಾನೆಲ್ ಶುರುಮಾಡಬೇಕು ಎಂಬ ಕಲ್ಪನೆ ಹೊಳೆದದ್ದು ಖ್ವಾಜ ತಮ್ಮ ಸ್ನೇಹಿತನೊಂದಿಗೆ ಮಾತನಾಡುವಾಗ. ನ್ಯೂಸ್ ಮಿನಿಟ್ ನೊಂದಿಗೆ ಮಾತನಾಡುತ್ತಾ, ಖ್ವಾಜಾ,


"ನಾನು ಮೊದಲು ತೆಲುಗು ಸುದ್ದಿ ಮಾಧ್ಯಮ ಒಂದರಲ್ಲಿ ‘ಶಾಸಕರೊಂದಿಗೆ ಒಂದು ದಿನ’ ಅಥವಾ ಇನ್ಯಾವುದಾದರೂ ರಾಜಕಾರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೆ. ಇವು ನನಗೆ ಹಣವನ್ನು ನೀಡುತ್ತಿದ್ದವೇ ವಿನಃ, ನಾನು ಇಷ್ಡಪಡುವ ಕೆಲಸವನ್ನು ಮಾಡುವ ಆಸೆಯನ್ನು ತಣಿಸುತ್ತಿರಲಿಲ್ಲ."


ನಂತರ 2018 ರಲ್ಲಿ ಖ್ವಾಜಾ ತಮ್ಮ ಸ್ನೇಹಿತರಾದ ಭಗತ್ ಹಾಗೂ ಶ್ರೀನಾಥ್ ರೊಂದಿಗೆ ಸೇರಿ ಯೂಟ್ಯೂಬ್ ಚಾನೆಲ್ ಒಂದನ್ನು ಶುರುಮಾಡಿದರು. ಖ್ವಾಜಾ ಅಡುಗೆ ಮಾಡಿದರೆ, ಉಳಿದಿಬ್ಬರು ಅದನ್ನು ಚಿತ್ರೀಕರಿಸಿ ಸಂಕಲನ ಮಾಡುತ್ತಿದ್ದರು.


ಕ

ತಮ್ಮ ಸ್ನೇಹಿತರೊಂದಿಗೆ ಖ್ವಾಜಾ. ಇವರು ವಿಡಿಯೊಗಳನ್ನು ಸಂಪಾದಿಸಲು ಮತ್ತು ಚಿತ್ರೀಕರಿಸಲು ಸಹಾಯ ಮಾಡುತ್ತಿದ್ದರು (ಚಿತ್ರ: ನ್ಯೂಸ್ ಮಿನಿಟ್)


ಮೊದಲು ಅವರಿಗೆ ಯೂಟ್ಯೂಬ್ ಚಾನೆಲ್ ಮಾಡುವುದರ ಹಿಂದೆ ಇದ್ದ ಉದ್ದೇಶ ಕೇವಲ ಅಡುಗೆಯನ್ನು ಹೇಳಿಕೊಡುವುದಾಗಿತ್ತು. ಆದರೆ ನಂತರದಲ್ಲಿ ಮೂವರು, ನಗರದ ಹಲವು ಅನಾಥ ಆಶ್ರಮಗಳೊಂದಿಗೆ ಸೇರಿ ಅವರಿಗೆ ಆಹಾರ ನೀಡಲು‌ ಪ್ರಾರಂಭಿಸಿದರು.


ದಿ ಸಿಟಿಜೆನ್ ನೊಂದಿಗೆ ಮಾತನಾಡುತ್ತಾ, ಖ್ವಾಜಾ,


"ಒಮ್ಮೆ, ನಾನು ಚಿಕ್ಕವನಿದ್ದಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆಗ‌ ಹೊರಗೆ ಕಸದ ಬುಟ್ಟಿಯಲ್ಲಿ ಬಿದ್ದ ಆಹಾರವನ್ನು ತೆಗೆದುಕೊಂಡು ತಿಂದ ಮಕ್ಕಳನ್ನು ನೋಡಿದೆ. ಆ ನೆನಪು ನನ್ನಲ್ಲಿ ಹಾಗೆಯೇ ಉಳಿದಿದೆ"


ತಮ್ಮ ಯೂಟ್ಯೂಬ್ ಚಾನೆಲ್ ನಿಂದ ಅವರು ವಾರಕ್ಕೆ ಎರಡು ಬಾರಿಯಾದರೂ ಅನಾಥ ಮಕ್ಕಳಿಗೆ ಆಹಾರ ನೀಡುತ್ತಾರೆ. ಅವರ ವಿಡಿಯೋದ ಜನಪ್ರಿಯತೆ ತಿಳಿದದ್ದು ಗುಜರಾತಿನ ಪೋಲಿಸರು ಅವರನ್ನು ಭೇಟಿಯಾದಾಗ. ಎಂಟು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗುವೊಂದು ಖ್ವಾಜಾ ಅವರ ಫೇಸ್ಬುಕ್ ವಿಡಿಯೋ ಒಂದರಲ್ಲಿ ಕಂಡಿತ್ತು.


ಖ್ವಾಜಾ ನ್ಯೂಸ್ ಮಿನಿಟ್ ಗೆ,


"ನಾನು ಅವರನ್ನು ಅನಾಥಾಶ್ರಮದವರಿಗೆ ಪರಿಚಯ ಮಾಡಿಸಿದೆ. ನನಗಿನ್ನೂ ನೆನಪಿದೆ ಎಂಟು ವರ್ಷಗಳೇ ಕಳೆದರೂ, ಮಾನಸಿಕ ಖಾಯಿಲೆ ಇರುವ ಆ ಹುಡುಗ ಅವನ ಅಪ್ಪನನ್ನು ನೋಡುತ್ತಲೆ ಓಡಿಬಂದು ತಬ್ಬಿಹಿಡಿದ!"


ಆದರೆ ಲೋಕೋಪಕಾರಿಯಾದ ಯೂಟ್ಯೂಬ್ ಚಾನೆಲ್ ನೆಡೆಸುವಾಗ ಹಲವು ಸವಾಲುಗಳು ಈ ಮೂವರಿಗೂ ಎದುರಾದವು. ಮೂರು ವಿಡಿಯೋಗಳಿಗೆ ಇವರ ಬಳಿ ಇದ್ದ ಹಣವೆಲ್ಲಾ ಖಾಲಿಯಾಯಿತು ಅವರಿಗೆ ಅಲ್ಲಿಂದ ಮುಂದುವರೆಯಲು ಆಗಲಿಲ್ಲ.


ಕ

ಅನಾಥಾಶ್ರಮ ಮಕ್ಕಳಿಗೆ ಆಹಾರ ನೀಡುವಾಗ ಖ್ವಾಜಾ (ಚಿತ್ರ: ನ್ಯೂಸ್ ಮಿನಿಟ್ )


ಆಗ ಖ್ವಾಜಾ ಯೂಟ್ಯೂಬ್ ನಲ್ಲಿ ಅನಾಥ ಮಕ್ಕಳಿಗೆ ಆಹಾರ ನೀಡುವ ಹಾಗೂ ಚಾನೆಲ್ ಅನ್ನು ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿ ಸಹಾಯ ಕೋರಿದರು. ಆ ರಾತ್ರಿಯೇ 18 ಜನ ಸಹಾಯ ನೀಡುವುದಾಗಿ ಈ ಮೇಲ್ ಮಾಡಿದ್ದರು ಹಾಗೂ ಅಂದಿನಿಂದ ನವಾಬ್ಸ್ ಕಿಚನ್ ಅನುದಾನಿತ ಹಣದಲ್ಲೆ ನಡೆಯುತ್ತಿದೆ.


ತಮ್ಮ ಮುಂದಿನ ನಡೆಯ ಬಗ್ಗೆ ಮಾತನಾಡುತ್ತಾ, ಖಾಜ್ವಾ,

"ನನ್ನ ಮುಂದಿನ ರೆಸಿಪಿ ಮ್ಯಾಗಿ ನೂಡಲ್ಸ್. ಹಿಂದೊಮ್ಮೆ ನಾನು ಅನಾಥ ಆಶ್ರಮವೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಮಕ್ಕಳು ತಾವು ಮ್ಯಾಗಿ ನೂಡಲ್ಸ್ ಅನ್ನು ತಿಂದೆ ಇಲ್ಲ ಅಂತ ಹೇಳಿದರು. ನಾನು ಹಿಂದೊಮ್ಮೆ ಮ್ಯಾಗಿ ಮಾಡಿದ್ದರು ಈಗ ಮತ್ತೆ ಮಕ್ಕಳ ಸಲುವಾಗಿ ಇನ್ನೊಮ್ಮೆ ಮಾಡುತ್ತೇನೆ‌."