ಅಡುಗೆ ಮನೆಯ ಹಸಿ ಕಸದಿಂದ ಗೊಬ್ಬರ ತಯಾರಿಸುತ್ತಿದ್ದಾರೆ ಈ ನಿವೃತ್ತ ವೈದ್ಯೆ

ತಮ್ಮ ವೈದ್ಯಕೀಯ ವೃತ್ತಿಯಿಂದ ನಿವೃತ್ತಿಯಾಗುವ ಮುಂಚಿನ ನಾಲ್ಕು ವರ್ಷಗಳಲ್ಲಿ ಅಡುಗೆ ಮನೆಯ ಹಸಿ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸುವ ವಿಧಾನ ಅಭ್ಯಸಿಸಿದ ಪ್ರಸೂತಿ ರೋಗ ತಜ್ಞೆ ಡಾ. ಶಾಂತಾ ಭಟ್‌, ನಂತರದ ವರ್ಷಗಳಲ್ಲಿ ತಮ್ಮ ರಸ್ತೆಯ ಮಹಿಳಾ ನಿವಾಸಿಗಳಿಗೆ ತಿಳಿಸಿಕೊಟ್ಟು ಹಸಿ ತ್ಯಾಜ್ಯದ ವಿಲೇವಾರಿಯನ್ನು ಕಡಿಮೆಮಾಡಿದ್ದಾರೆ.

ಅಡುಗೆ ಮನೆಯ ಹಸಿ ಕಸದಿಂದ ಗೊಬ್ಬರ ತಯಾರಿಸುತ್ತಿದ್ದಾರೆ ಈ ನಿವೃತ್ತ ವೈದ್ಯೆ

Saturday September 07, 2019,

2 min Read

ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಅತ್ಯಂತ ಕಷ್ಟದ ಕೆಲಸವಾಗಿದೆ. ಮನೆಗಳಲ್ಲಿ ತ್ಯಾಜ್ಯವನ್ನು ವಿಂಗಡಿಸಿ ಕಸ ಸಂಗ್ರಹಿಸುವವರಿಗೆ ಕೊಟ್ಟರೂ ಅದನ್ನು ಅವರು ಒಂದೇ ಕಡೆ ಶೇಖರಿಸುವುದರಿಂದ ವಿಂಗಡಣೆಯೂ ಪ್ರಯೋಜನವಾಗುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಕರ್ನಾಟಕದ ದಾವಣಗೆರೆಯ ಎಸ್ ಎಸ್‌ ಬಡಾವಣೆಯ ಈ ವೈದ್ಯೆ ಅಡುಗೆ ಮನೆಯ ಹಸಿ ಕಸದಿಂದ ಗೊಬ್ಬರವನ್ನು ತಯಾರಿಸುವ ಕೆಲಸ ಮಾಡಿ, ಅದನ್ನು ಮನೆಯ ಚಿಕ್ಕ ಉದ್ಯಾನದಲ್ಲಿನ ಗಿಡಗಳಿಗೆ ಬಳಸುತ್ತಾರೆ.


ಗೊಬ್ಬರ ತಯಾರಿಕೆಗೆ ಬೇಕಾದ ಬಿನ್‌ ಹಾಗೂ ಕಾಂಪೋಸ್ಟ್‌ ಪೌಡರ್.


ಇದೆಲ್ಲ ಶುರುವಾದದ್ದು ಹೇಗೆ?


30 ವರ್ಷಗಳಿಂದ ದಾವಣಗೆರೆ ನಗರದಲ್ಲಿ ವೈದ್ಯರಾಗಿರುವ ಶಾಂತಾ ಭಟ್‌, ತಮ್ಮ ನಿವೃತ್ತಿಗೆ ಇನ್ನು ನಾಲ್ಕು ವರ್ಷಗಳಿದ್ದಾಗ, ಅಂದರೆ 2010 ರಲ್ಲಿ ಅವರು ಕಿಚನ್‌ ವೇಸ್ಟ್‌ ಟು ಕಾಂಪೊಸ್ಟ್‌ ಎಂಬ ಪ್ರಯೋಗ ಮಾಡಿದರು. ಅದರಲ್ಲಿ ಯಶಸ್ವಿಯಾದ ಅವರು, ತಾವು ತಯಾರಿಸಿದ ಗೊಬ್ಬರವನ್ನು ತಮ್ಮ ಮನೆಯ ಗಿಡಗಳಿಗೆ ಹಾಕಿ ಬೆಳೆಸಿದರು. ತಮ್ಮ ಪ್ರಯತ್ನವು ಎಲ್ಲರಿಗೂ ತಲುಪಲಿ, ಕಸದ ಶೇಖರಣೆ ಕಡಿಮೆಯಾಗಲಿ ಎಂಬ ನಿಟ್ಟಿನಲ್ಲಿ ಅವರು ಜಿಲ್ಲೆಯ ಕೃಷಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಗೊಬ್ಬರವನ್ನು ಇನ್ನೂ ಸುಲಭದ ವಿಧಾನದಲ್ಲಿ ತಯಾರಿಸುವುದನ್ನು ಕಲಿತರು.


ಫಲಪುಷ್ಪ ಪ್ರದರ್ಶನದಲ್ಲಿ ತಯಾರಾದ ಗೊಬ್ಬರವನ್ನು ವೀಕ್ಷಿಸುತ್ತಿರುವ ಜಿಲ್ಲಾಧಿಕಾರಿಗಳು.


ತಮ್ಮ ಈ ಕೆಲಸದ ಬಗ್ಗೆ ಯುವರ್‌ಸ್ಟೋರಿ ಕನ್ನಡದೊಂದಿಗೆ ಮಾತನಾಡುತ್ತಾ,


“2010 ರಲ್ಲಿ ಪತ್ರಿಕೆಯೊಂದರಲ್ಲಿ ಅಡುಗೆ ಮನೆಯ ಹಸಿ ಕಸವನ್ನು ಮನೆಯಲ್ಲಿಯೇ ಗೊಬ್ಬರವಾಗಿ ತಯಾರಿಸಬಹುದು ಎಂಬ ಮಾಹಿತಿ ಇದ್ದ ಲೇಖನವೊಂದನ್ನು ನಾನು ಓದಿದ್ದೆ. ಅದರಂತೆಯೇ ಮೊದಲ ಸಾರಿ ಪ್ರಯತ್ನಪಟ್ಟೆ, ಒಂದು ತಿಂಗಳಲ್ಲಿ ತಯಾರಾದ ಗೊಬ್ಬರವನ್ನು ಗಿಡಗಳಿಗೆ ಹಾಕಿ ಪೋಷಿಸಿದೆ. ನಂತರದಲ್ಲಿ ನಾನು ನಿವೃತ್ತಿಗೊಂಡ ಮೇಲೆ, ನಮ್ಮ ರಸ್ತೆಯ ಮಹಿಳಾ ನಿವಾಸಿಗಳು ಇದನ್ನು ಕಲಿತುಕೊಳ್ಳಲಿ ಹಾಗೂ ಕಡಿಮೆ ತ್ಯಾಜ್ಯವನ್ನು ವಿಲೇವಾರಿ ಮಾಡುವ ದಾರಿಯಲ್ಲಿ ನಡೆಯಲಿ ಎಂಬ ಆಸೆಯಿಂದ ಅವರಿಗೂ ಇದನ್ನು ತಿಳಿಸಿಕೊಟ್ಟೆ” ಎಂದರು.


ಜೊತೆಗೆ,


“ಗಾರ್ಡೆನಿಂಗ್‌ ಮುಂಚಿನಿಂದಲೂ ನನ್ನ ಹವ್ಯಾಸವಾಗಿದೆ. ನಾನು ಎಲ್ಲಿದ್ದರೂ ಗಿಡಗಳನ್ನು ಬೆಳೆಯುತ್ತಿರುತ್ತೇನೆ. ಆಗ ನನಗೆ ಪ್ರತೀ ವರ್ಷ ಗೊಬ್ಬರಕ್ಕೆಂದೇ ಸುಮಾರು 1500 ರೂ. ಖರ್ಚಾಗುತ್ತಿತ್ತು. ಡೈಲಿಡಂಪ್‌ ಎಂಬ ಸಂಸ್ಥೆ ಬರೆದ ಲೇಖನ ಓದಿದ ನಂತರ ನಾನು ಹಸಿ ಕಸದಿಂದ ಗೊಬ್ಬರವನ್ನು ತಯಾರಿಸುವುದನ್ನು ಕಲಿತೆ” ಎಂದು ಮತ್ತಷ್ಟು ಮಾಹಿತಿ ನೀಡಿದರು.


ಬಿನ್‌ಗಳನ್ನು ವಿತರಣೆ ಮಾಡುತ್ತಿರುವುದು


2014ರಲ್ಲಿ ತಾವು ನಿವೃತ್ತಿಗೊಂಡ ನಂತರ, ವಾರಕ್ಕೊಮ್ಮೆ ತಮ್ಮ ಮನೆಯಲ್ಲಿ ನೆರೆಹೊರೆಯ ಹಾಗೂ ತಮ್ಮ ರೋಗಿಗಳ ಕಡೆಯ ಮಹಿಳೆಯರಿಗೆ ಮನವಿ ಮಾಡಿ ಅವರನ್ನು ಒಮ್ಮೆಗೆ 15 ಜನರಂತೆ ಒಟ್ಟುಗೂಡಿಸಿ ಅವರಿಗೆ ಅಡುಗೆ ಮನೆಯ ತರಕಾರಿ ಹಾಗೂ ಉಳಿದ ಹಸಿ ತ್ಯಾಜ್ಯದಿಂದ ಸುಲಭವಾಗಿ ಮನೆಯಲ್ಲಿಯೇ ಗೊಬ್ಬರ ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು.


ಗೊಬ್ಬರ ತಯಾರಿಕೆಯ ವಿವಿಧ ಹಂತಗಳು.


2014ರ ನವೆಂಬರ್‌ನಲ್ಲಿ ಈ ಯೋಜನೆಯನ್ನು ಸಾಧ್ಯವಾದ ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಮಾಡಲು ಇಚ್ಚಿಸಿದ ಇವರು, ಕೃಷಿವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಅವರ ಸಹಾಯ ಪಡೆದು ಬೆಂಗಳೂರಿನಿಂದ ದೊಡ್ಡ ಬಿನ್‌ಗಳನ್ನು ತರಿಸಿಕೊಂಡರು. ಮೊದಲ ಹಂತದಲ್ಲಿ 200 ಬಿನ್ಗಳನ್ನು ತರಿಸಿ 100 ಮಹಿಳೆಯರಿಗೆ ಹಂಚಿದ ಇವರು, ಇದರ ಕುರಿತಾಗಿ ಶಾಲೆಗಳಲ್ಲಿ, ವೈದ್ಯಕೀಯ ಕಾಲೇಜುಗಳಲ್ಲಿ, ಮಹಿಳಾ ಸಂಘಗಳಲ್ಲಿ ಹಾಗೂ ಜಿಲ್ಲಾಡಳಿತ ಆಯೋಜಿಸುವ ಫಲಪುಷ್ಪ ಪ್ರದರ್ಶನಗಳಲ್ಲಿಯೂ ಇದರ ಬಗ್ಗೆ ಜನರಿಗೆ ತಿಳಿಸಿಕೊಟ್ಟರು.


ಗಿಡಕ್ಕೆ ಗೊಬ್ಬರ ಹಾಕುತ್ತಿರುವುದು


ಈ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಮಾಡುವ ಬಗ್ಗೆ ಅವರು,


“ಕೃಷಿ ಇಲಾಖೆಯು ನಡೆಸಿದ ಫಲಪುಷ್ಪ ಪ್ರದರ್ಶನಗಳಲ್ಲಿ ನಾವು ಕಸರಸ ಅಭಿಯಾನದ ಬಗ್ಗೆ ಹಾಗೂ ಮನೆಯಲ್ಲೇ ಗೊಬ್ಬರ ತಯಾರಿಸುವ ಬಗ್ಗೆ 3 ವರ್ಷಗಳಲ್ಲಿ ಸುಮಾರು 25,000 ಜನರಿಗೆ ತಿಳಿಸಿಕೊಟ್ಟಿದ್ದೇವೆ. ಇದರೊಟ್ಟಿಗೆ ಇಲಾಖೆಯ ಸಹಯೋಗದೊಂದಿಗೆ ಟೆರೆಸ್‌ ಗಾರ್ಡನಿಂಗ್‌ ಸಹ ಪ್ರಾರಂಭಿಸಲಿದ್ದೇವೆ” ಎಂದು ಯುವರ್‌ ಸ್ಟೋರಿಗೆ ಹೇಳಿದರು.


ಶ್ರಮದಾನದಲ್ಲಿ ನಿರತರಾಗಿರುವ ನಿವಾಸಿಗಳು

ಕೇವಲ ಮನೆಗಳ ಕಸವನ್ನಷ್ಟೇ ಏಕೆ? ತಮ್ಮ ರಸ್ತೆಯ ಕಸವನ್ನೂ ಸರಿಯಾಗಿ ನಿರ್ವಹಿಸಬಹುದಲ್ಲ ಎಂದು ಯೋಚಿಸಿದ ಅವರು, ತಮ್ಮ ರಸ್ತೆಯ ನಿವಾಸಿಗಳನ್ನೆಲ್ಲ ಸೇರಿಸಿ “ಮಾದರಿ ರಸ್ತೆ – ಆದರ್ಶ ಜನರು” ಎಂಬ ಘೋಷ ವಾಕ್ಯದಿಂದ ತಾವು ವಾಸವಾಗಿರುವ ಎಸ್‌ಎಸ್‌ ಬಡಾವಣೆಯ ನಾಗರಿಕ ಸಮಿತಿಯೊಂದನ್ನು ರಚಿಸಿದರು.


ಈ ಸಮಿತಿಯ ಮುಖ್ಯ ಗುರಿ, ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತೆ. ಈ ಸಮಿತಿಯ ಸದಸ್ಯರು ಪ್ರತಿ ಭಾನುವಾರ ಶ್ರಮಾದಾನ ಮಾಡಿ ತಮ್ಮ ರಸ್ತೆಯ ಕಸಗುಡಿಸಿ, ಖಾಲಿ ಇರುವ ನಿವೇಶನಗಳನ್ನು ಸ್ವಚ್ಛಗೊಳಿಸಿ ಅದನ್ನು ಮಕ್ಕಳಿಗೆ ಬ್ಯಾಡ್‌ಮಿಂಟನ್‌, ಬ್ಯಾಸ್ಕೆಟ್‌ಬಾಲ್‌ ಹಾಗೂ ಮಿನಿ ಕ್ರಿಕೆಟ್‌ ಮೈದಾನವನ್ನೂ ಮಾಡಿದ್ದಾರೆ. ಇಡೀ ಎಸ್‌ಎಸ್‌ ಬಡಾವಣೆಯ 1,600 ಮನೆಗಳ ಸದಸ್ಯತ್ವವನ್ನು ಮಾಡಿಸಿ ಪ್ರತಿ ಮನೆಯಿಂದ ವಿಂಗಡಿತ ಕಸವನ್ನು ಸಂಗ್ರಹಿಸಲಾಗುತ್ತದೆ. ಇಲ್ಲಿನ ಪ್ರತಿ ರಸ್ತೆಯ ಮರಗಳಿಗೆ ಬಿದಿರಿನ ಬುಟ್ಟಿಗಳನ್ನು ಕಸದಬುಟ್ಟಿಗಳ ರೂಪದಲ್ಲಿ ಇಡಲಾಗಿದೆ.