ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ಸಾವಯವ ಕೃಷಿ ಪದ್ದತಿಯ ಹರಿಕಾರರಾಗಿರುವ ಮಾದರಿ ಗೃಹಣಿ ಲಲಿತ ಮುಕತಿ

ತಮ್ಮ ಹೊಲಗಳಲ್ಲಿ ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿರುವ ಲಲಿತ ಮುಕತಿ ಇತರ ರೈತರನ್ನು ಈ ಸ್ವಾಭಾವಿಕ ಕೃಷಿಯ ಪ್ರಯೋಜನ ಪಡೆದುಕೊಳ್ಳುವಂತೆ ಹುರಿದುಂಬಿಸುತಿದ್ದಾರೆ.

ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ಸಾವಯವ ಕೃಷಿ ಪದ್ದತಿಯ ಹರಿಕಾರರಾಗಿರುವ ಮಾದರಿ ಗೃಹಣಿ ಲಲಿತ ಮುಕತಿ

Wednesday September 04, 2019,

4 min Read

ಮಧ್ಯಪ್ರದೇಶದ ಸಾಮಾನ್ಯ ಹಳ್ಳಿಯೊಂದರಲ್ಲಿ ಸದ್ದುಗದ್ದಲವಿಲ್ಲದೆ ಮಹತ್ವದ ಕ್ರಾಂತಿಯೊಂದು ನಡೆಯುತ್ತಿದೆ. ಇಲ್ಲಿ ಬೆಳೆಯುವ ಬೆಳೆಗಳ ಇಳುವರಿ ಗಣನೀಯವಾಗಿ ಹೆಚ್ಚಿದ್ದು ರೈತರು ಹಿಂದೆ ಎಂದೂ ಕಾಣದಷ್ಟು ಆದಾಯವನ್ನು ಗಳಿಸುತಿದ್ದಾರೆ. ಈ ಕ್ರಾಂತಿಯ ಯಶಸ್ಸು ಐವತ್ತು ವರ್ಷ ವಯಸ್ಸಿನ ಗೃಹಿಣಿ ಲಲಿತ ಮುಕತಿಯವರಿಗೆ ಸಲ್ಲುತ್ತದೆ.


ಇದು ಲಲಿತ ಮುಕತಿ ಮತ್ತು ಅವರ ಗ್ರಾಮವಾದ ಬೋರ್ಲಾಯಿಯ ಕಥೆ.


ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಲಲಿತ ತಮ್ಮ ಹೊಲಗಳಲ್ಲಿ ಸೀತಾಫಲ, ಬಾಳೆ, ನಿಂಬೆ, ಹತ್ತಿ, ಸಪೋಟ ಬೆಳೆಗಳನ್ನು ಬೆಳೆದು ತಿಂಗಳಿಗೆ ಸರಾಸರಿ ಎಂಬತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಆದಾಯವನ್ನು ಗಳಿಸುತಿದ್ದಾರೆ.


ಸೀತಾಫಲ ಬೆಳೆಯಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ಕ್ರಮದಿಂದಾಗಿ ಅವರು ಕೃಷಿ ವಿಜ್ಞಾನ ಕೇಂದ್ರ ನೀಡುವ ಶ್ರೇಷ್ಠ ರೈತ ಮಹಿಳೆ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.


ಸಾಂಪ್ರದಾಯಿಕ ಕೃಷಿಯಿಂದ ಸಾವಯವ ಕೃಷಿಯವರೆಗೆ


ಆದರೆ ಇದು ಅವರಿಗೆ ಸುಲಭವಾದ ಕೆಲಸವೇನೂ ಆಗಿರಲಿಲ್ಲ. ಅವರ ಪತಿ ಸುರೇಶ ಚಂದ್ರ ಮುಕತಿ ತಮ್ಮ 36 ಎಕರೆ ಜಮೀನಿನ ನಿರ್ವಹಣೆಯ ಹೊಣೆಗಾರಿಕೆ ಹೊಂದಿದ್ದರು ಮತ್ತು ಲಲಿತರಿಗೆ ಕೃಷಿಯ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಪತಿ ಕೃಷಿ ವಿಜ್ಞಾನ ದ ಸ್ನಾತಕೋತ್ತರ ಪದವಿಧರರಾಗಿದ್ದು ಸುಧಾರಿತ ಕೃಷಿ ತಂತ್ರಜ್ಞಾನದ ಅದ್ಯಯನಕ್ಕಾಗಿ ಉನ್ನತ ವ್ಯಾಸಂಗಕ್ಕೆ ತೆರಳಿದರು.


"ನನ್ನ ಪತಿ ಹೊಲಗಳಲ್ಲಿ ಕೆಲಸ ಮಾಡುವಾಗ ನಾನು ಮಕ್ಜಳ ಲಾಲನೆ ಪಾಲನೆಯಲ್ಲಿ ತೊಡಗಿದ್ದೆ. ಮಕ್ಕಳು ದೊಡ್ಡ ವರಾದ ಮೇಲೆ ನನಗೆ ಮನೆಯಲ್ಲಿ ಹೆಚ್ಚು ಕೆಲಸವಿಲ್ಲದಂತಾಯಿತು. ಇದರಿಂದಾಗಿ ನನ್ನ ಪತಿಗೆ ಸಹಾಯ ಮಾಡಲು ನಿರ್ಧರಿಸಿದೆ. ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿದ ನಂತರ ಹೊಲಗಳ ನಿರ್ವಹಣೆಯ ಜವಾಬ್ದಾರಿಯನ್ನು ನಾನು ಹೊತ್ತುಕೊಂಡೆ."


ಮೊದಲ ವರ್ಷಗಳಲ್ಲಿ ಲಲಿತಾ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಅನುಸರಿಸಿ ರಾಸಾಯನಿಕ ಗೊಬ್ಬರ ಮತ್ತು ಕೀಟ ನಾಶಕಗಳನ್ನು ಉಪಯೋಗಿಸಿ ಬೆಳೆಗಳನ್ನು ಬೆಳೆಯುತಿದ್ದರು.


"ರಾಸಾಯನಿಕ ಗೊಬ್ಬರಗಳಿಂದ ಹೆಚ್ಚಿನ ಪ್ರಯೋಜನವಿರಲಿಲ್ಲ. ಬದಲಾಗಿ ನಾವು ಶೇಕಡಾ 70 ರಿಂದ 80 ಭಾಗ ಹಣವನ್ನು ಇವುಗಳಿಗೆ ಖರ್ಚು ಮಾಡಬೇಕಾಗಿತ್ತು. ಇದರಿಂದ ನಮಗೆ ಹಣ ಉಳಿತಾಯ ಮಾಡುವುದು ಸಾಧ್ಯವಾಗುತ್ತಿರಲಿಲ್ಲ."


ಸಾವಯುವ ಕೃಷಿ ಪದ್ದತಿ ಯನ್ನು ಅಳವಡಿಸಿ ಕೊಂಡ ನಂತರ ನಾವು ಹೆಚ್ಚಿನ ಹಣ ಉಳಿತಾಯ ಮಾಡಲು ಸಾಧ್ಯವಾಯಿತು. ಸಾಂಪ್ರದಾಯಿಕ ಕೃಷಿ ಯಲ್ಲಿ 10 ಸಾವಿರ ರೂಪಾಯಿ ಖರ್ಚಾಗುತಿದ್ದ ಕೆಲಸವನ್ನು ಈಗ ೩ ಸಾವಿರ ರೂಪಾಯಿ ಗಳಲ್ಲಿ ಮುಗಿಸಬಹುದಾಗಿದೆ.


ಲಲಿತ 2015 ರಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ತಮ್ಮ ಮನೆಯಲ್ಲಿಯೇ ಗೋಮೂತ್ರ‌ ಮತ್ತು ಸಗಣಿಯನ್ನು ಬಳಸಿ ತಮ್ಮದೇ ಆದ ಸಾವಯವ ಗೊಬ್ಬರ ಮತ್ತು ಕೀಟ ನಾಶಕಗಳನ್ನು ತಯಾರಿಸಿಕೊಳ್ಳಲು ಪ್ರಾರಂಭಿಸಿದರು.


ಸಾವಯವ ಕೃಷಿಯ ಆರಂಭದಲ್ಲಿ ಸೀತಾಫಲ, ಸಪೋಟ ಮತ್ತು ಹತ್ತಿಯನ್ನು ಬೆಳೆಯತೊಡಗಿದರು.


ಅವರು ಅಡುಗೆ ಮನೆಯ ತ್ಯಾಜ್ಯ ಮತ್ತು ವರ್ಮಿಕಾಂಪೋಸ್ಟನ್ನೂ ಸಹ ಉಪಯೋಗಿಸುತಿದ್ದರು. ಅವರ ಮನೆಯಲ್ಲಿ ತಯಾರಿಸಿದ ಕೀಟನಾಶಕಗಳನ್ನು ‌ವಾಣಿಜ್ಯ ಉದ್ದೇಶಕ್ಕಾಗಿ‌ ಮಾರುವ ಮನಸ್ಸಿದೆಯೇ 


ಎಂದು ಕೇಳಿದಾಗ "ನನಗೆ ಇವುಗಳನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಿ ಮಾರುವ ಮನಸ್ಸಿಲ್ಲ. ಇವುಗಳನ್ನು ತಯಾರಿಸಲು ಬೇಕಾದ ಸಂಪನ್ಮೂಲ ವಸ್ತುಗಳು ಎಲ್ಲರಿಗೂ ದೊರೆಯುತ್ತವೆ. ಯಾರಿಗಾದರೂ ಬೇಕಾದಲ್ಲಿ ಯಾವುದೇ ಹಣವನ್ನು ಪಡೆಯದೆ ನಾನು ಅವರಿಗೆ ಇವುಗಳನ್ನು ‌ನೀಡುತ್ತೇನೆ” ಎಂದು ಲಲಿತ ಹೇಳುತ್ತಾರೆ.


ಇತರರಿಗೆ ‌ಮಾದರಿಯಾದ ಲಲಿತ ಮುಕತಿ


೨೦೧೬ ರಲ್ಲಿ ಅವರ ಒಡೆತನದ ಭೂಮಿಯನ್ನು ಮಧ್ಯಪ್ರದೇಶದ ಬಯೋಲಾಜಿಕಲ್ ಸರ್ಟಿಫಿಕೇಷನ್ ಬೋರ್ಡ್ ಸಾವಯವ ಕೃಷಿ ಭೂಮಿ ಎಂದು ನೋಂದಾಯಿಸಿಕೊಂಡಿತು. ಇದರಿಂದಾಗಿ ಅವರು ತಮ್ಮ ಕೃಷಿ ಉತ್ಪನ್ನಗಳನ್ನು ಮಹಾರಾಷ್ಟ್ರ, ‌ದೆಹಲಿ ಮತ್ತು ಗುಜರಾತ್ ರಾಜ್ಯಗಳಲ್ಲಿ ಯೂ ಮಾರಬಹುದಾಗಿದೆ.


ಜನರು ಸಾವಯವ ಕೃಷಿ ಪದ್ದತಿಯ ಅನುಕೂಲಗಳನ್ನು ಮನಗಂಡಿದ್ದಾರೆ. ಆದರೆ ಹಣಕಾಸಿನ ತೊಂದರೆಗಳಿಂದಾಗಿ ಇದನ್ನು ಅನುಸರಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಈ ಪದ್ದತಿಯನ್ನು ಅಳವಡಿಸಿ ಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.


ಸರ್ಕಾರ ಮತ್ತು ಇತರ ಜಿಲ್ಲಾ ಅಧಿಕಾರಿಗಳು ಸಾವಯವ ಕೃಷಿ ಪದ್ದತಿಗೆ ನೀಡಿದ ಹೆಚ್ಚಿನ ಬೆಂಬಲದಿಂದಾಗಿ ಲಲಿತ ತಮ್ಮ ಗ್ರಾಮದ ಇತರ ರೈತರು ಈ ಪದ್ದತಿಯನ್ನು ಅಳವಡಿಸಿ ಕೊಂಡು ಕಾರ್ಯ ರೂಪಕ್ಕೆ ತರಲು ಸಹಾಯ ಮಾಡುತಿದ್ದಾರೆ. "ಸಾವಯವ ಕೃಷಿ ಪದ್ದತಿಯ ಬಗ್ಗೆ ಅರಿವು ಮೂಡಿಸುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿದೆ. ಜನರು ಇದರ ಫಲಿತಾಂಶಗಳನ್ನು ಪಡೆಯಲು ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ ಈ ಫಲಿತಾಂಶಗಳು ಫಲಕಾರಿಯಾಗಿರುತ್ತವೆ ಎಂದು ಲಲಿತ ಆಶಾಭಾವನೆ ವ್ಯಕ್ತಪಡಿಸುತ್ತಾರೆ.


ಚಿತ್ರ: ಅವರ ಸಾವಯವ ಕೀಟನಾಶಕ ತಯಾರಿಕೆಯ ಪ್ರದೇಶವೊಂದರ ಮುಂದೆ ನಿಂತಿರುವ ಲಲಿತಾ


ಬಿಎ ಪದವಿ ಪಡೆದಿರುವ ಲಲಿತ, ಅವರ ಪತಿ ಮತ್ತು ಸ್ಥಳೀಯ ಪತ್ರಿಕೆಗಳ ಸಾವಯವ ಕೃಷಿ ಮತ್ತು ಮನೆಯಲ್ಲಿಯೇ ಗೊಬ್ಬರ ಮತ್ತು ಕೀಟ ನಾಶಕಗಳನ್ನು ತಯಾರಿಸುವ ವಿಧಾನಗಳನ್ನು ಕಲಿತುಕೊಂಡರು. ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಒಂದಷ್ಟು ಸಮಯ ಬೇಕಾಗುತ್ತದೆ. ಮೂರು ವರ್ಷಗಳಿಂದ ಆರು ವರ್ಷಗಳ ಸಮಯವಾಗಬಹುದು. ಆದರೆ ಯಾರೂ ಇದನ್ನು ಮಧ್ಯದಲ್ಲಿ ಕೈಬಿಡಬಾರದು. ಈ ಕಾಯುವಿಕೆಯಿಂದ ಉತ್ತಮ‌ ಫಲಿತಾಂಶಗಳು ದೊರೆಯುತ್ತವೆ. ಈ ಫಲಿತಾಂಶಗಳು ರೋಗನಿವಾರಣೆ ಮಾತ್ರ ವಲ್ಲದೆ ಸುತ್ತಮುತ್ತಲಿನ ವಾತಾವರಣವನ್ನು ಹಸನುಗೊಳಿಸಿ ರೈತರಿಗೆ ದೀರ್ಘ ಕಾಲದ ಸೇವೆಯನ್ನು ನೀಡುತ್ತವೆ.


ಕೃಷಿ ಕ್ಷೇತ್ರದ ಕೊಡುಗೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಸನ್ಮಾನಕ್ಕೆ ಆಯ್ಕೆಯಾಗಿರುವ 112 ಜನ ಮಹಿಳೆಯರಲ್ಲಿ ಸಹ ಲಲಿತ ಒಬ್ಬರಾಗಿದ್ದಾರೆ.


ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಲಲಿತ ಎರೆಹುಳುಗಳನ್ನು ಸಾಕುತ್ತಾರೆ ಮತ್ತು ನೀರಿನಲ್ಲಿ ಬೆಳೆ ಬೆಳೆಯುವ ಹೈಡ್ರೋಪೊನಿಕ್ ಕೃಷಿ ಪದ್ದತಿಯನ್ನೂ ಸಹ ಅಳವಡಿಸಿಕೊಂಡಿದ್ದಾರೆ. ಈ ಪದ್ದತಿಯಲ್ಲಿ ಒಂದು ಸಣ್ಣ ಪ್ಲಾಸ್ಟಿಕ್ ಬ್ಯಾಗಿನಲ್ಲಿ ನೀರು ಸುರಿದು ಸ್ವಲ್ಪವೇ ಸ್ವಲ್ಪ ಮಣ್ಣು ಬೆರೆಸಿ ಅದರಲ್ಲಿ ಸಸ್ಯವನ್ನು ಬೆಳೆಸಬಹುದು.


ಅಂತರರಾಷ್ಟ್ರೀಯ ಮಾನ್ಯತೆ


೨೦೧೪ ರಲ್ಲಿ ಲಲಿತ ಮತ್ತು ಅವರ ಪತಿ ಮುಖ್ಯ ಮಂತ್ರಿಯವರ ರೈತ ವಿದೇಶ ಅಧ್ಯಯನ ಪ್ರವಾಸಕ್ಕೆ ಆಯ್ಕೆಯಾಗಿ ಜರ್ಮನಿ ‌ಮತ್ತು ಇಟಲಿಗೆ ಹೋಗಿ ಬಂದಿದ್ದಾರೆ. ಅಲ್ಲಿನ ತಂತ್ರಜ್ಞಾನಗಳಿಂದ ಉತ್ತೇಜಿತರಾಗಿ ಸೋಲಾರ್ ಪಂಪ್ ಬಳಸಲು ಪ್ರಾರಂಭಿಸಿದರು. ಅವರ ಮನೆ ಭಾಗಶಃ ಸೋಲಾರ್ ಫಲಕಗಳ ವಿದ್ಯುತ್ ನಿಂದ ನಡೆಯುತ್ತಿದೆ. ಎಲ್ ಪಿ ಜಿ ಅಡುಗೆ ಅನಿಲವನ್ನು ತ್ಯಜಿಸಿ ಜೈವಿಕ ಅನಿಲವನ್ನು ಉಪಯೋಗಿಸುತಿದ್ದಾರೆ.


ವಿದೇಶಗಳಲ್ಲಿ ಕೃಷಿ ಕೆಲಸಗಳಿಗಾಗಿ ಹೆಚ್ಚಾಗಿ ಸೋಲಾರ್ ಸಾಧನಗಳನ್ನು ಬಳಸುವುದನ್ನು ನೋಡಿದೆ. ನಮ್ಮ ಹೊಲಗಳಲ್ಲಿ ನೀರು ಹರಿಸುವುದು ಈಗ ಸುಲಭವಾಗಿದೆ. ಏಕೆಂದರೆ ಸೋಲಾರ್ ಪಂಪು ಹಗಲಿನಲ್ಲಿ ಕಾರ್ಯನಿರತವಾಗಿದ್ದು ರಾತ್ರಿಯಲ್ಲಿ ನಿಂತುಹೋಗುತ್ತದೆ.


ಮುಂದಿನ ದಾರಿ


ಲಲಿತಾ 21 ಜನ ಮಹಿಳೆಯರು ಸದಸ್ಯರಾಗಿರುವ ಮಾ ದುರ್ಗಾ ಮಹಿಳಾ ಸಂಘಟನೆಯ ಅದ್ಯಕ್ಷರಾಗಿದ್ದಾರೆ. ಅಲ್ಲಿನ ಪ್ರದೇಶದಲ್ಲಿ ಸಾವಯವ ಕೃಷಿ ಪದ್ದತಿಯ ಮಹತ್ವದ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಪ್ರತಿಯೊಂದು ಹೊಲಗಳಿಗೆ ಹೋಗಿ ಸಾವಯವ ಕೃಷಿ ಪದ್ದತಿಯ ಪ್ರಯೋಜನಗಳನ್ನು ರೈತರಿಗೆ ವಿವರಿಸುತ್ತಾರೆ.

ರಾಸಾಯನಿಕ ಗೊಬ್ಬರಗಳು ನಮ್ಮ ಪರಿಸರ ಮತ್ತು ಹೊಲಗಳ ಮೇಲೆ ಮಾಡುತ್ತಿರುವ ಹಾನಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನನ್ನ ಧ್ಯೇಯವಾಗಿದೆ. ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಪೋಷಕಾಂಶಭರಿತ ಆಹಾರ ದೊರೆಯುವುದಿಲ್ಲ. ಪ್ರಾರಂಭದಲ್ಲಿ ಸಾವಯವ ಕೃಷಿ ಅಳವಡಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು. ಆದರೆ ಅದು ನಮ್ಮ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ದೀರ್ಘಕಾಲದ ಪರಿಣಾಮವನ್ನು ಉಂಟುಮಾಡುತ್ತದೆ.