ಹಸಿವು ಮತ್ತು ಬಾಯಾರಿಕೆಯನ್ನು ನಿಭಾಯಿಸುತ್ತಿರುವ ಲೆಟ್ಸ್ ಫೀಡ್ ಬೆಂಗಳೂರು
26 ವರ್ಷದ ಹರ್ಷಿಲ್ ಮಿತ್ತಲ್ 2015 ರಲ್ಲಿ ಬಡ ಮತ್ತು ದೀನದಲಿತರಿಗೆ ಆಹಾರ ನೀಡುವುದಕ್ಕಾಗಿ ಲೆಟ್ಸ್ ಫೀಡ್ ಬೆಂಗಳೂರು ಎಂಬ ಉಪಕ್ರಮವನ್ನು ಆರಂಭಿಸಿದರು. ಇದು ಇಂದು ನಾಲ್ಕು ಸಾವಿರ ಸ್ವಯಂಸೇವಕರು ಹಾಗೂ ದಾನಿಗಳಿಂದ ಕೂಡಿರುವ ಸಂಸ್ಥೆ, ಇವರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸಂಗ್ರಹಿಸಿ ಐದು ನಗರಗಳಲ್ಲಿ ಲಕ್ಷಾಂತರ ಬಡಜನರಿಗೆ ಹಂಚುತ್ತಾರೆ.
ಹಸಿವಿನಿಂದ ನರಳುತ್ತಿರುವವರನ್ನು ಕಂಡಾಗಲೆಲ್ಲ ಭಾರತ ಆಹಾರ ಉತ್ಪಾದನೆ ವಲಯದಲ್ಲಿ ಸ್ವಾವಲಂಬಿ ಎಂದರೆ ವಿಪರ್ಯಾಸವೆನಿಸುತ್ತದೆ. ಆಹಾರ ಮತ್ತು ಕೃಷಿ ಸಂಸ್ಥೆ 2015 ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಭಾರತದಲ್ಲಿ 194.6 ದಶಲಕ್ಷ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಪ್ರತಿ ದಿನ ಹಸಿವು, ಬಾಯಾರಿಕೆ ಹಾಗೂ ಅದರಿಂದಾಗಿ ಅಂಟಿಕೊಳ್ಳುವ ರೋಗಗಳಿಂದ ಸುಮಾರು 3,000 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ.
ಈ ವಿಷಯದಲ್ಲಿ ಹಲವರ ಹಾಗೆ ನಾವೂ ಕುರುಡರಂತೆ ನಟಿಸುವಾಗ, 26 ವರ್ಷದ ಹರ್ಷಿಲ್ ಮಿತ್ತಲ್ ಇದರ ವಿರುದ್ಧವಾಗಿ ಏನಾದರು ಮಾಡಲು ತೀರ್ಮಾನಿಸಿದರು. ಅವರ ವಿಚಾರ ಸರಳವಾಗಿತ್ತು - ಮನೆಗಳಲ್ಲಿ ಹೆಚ್ಚು ಅಡುಗೆ ಮಾಡಲು ಹೇಳುವುದು ಮತ್ತು ಅದನ್ನು ದೀನದಲಿತರಿಗೆ, ಬಡವರಿಗೆ ಹಂಚುವುದು.
ತಮ್ಮ ಸ್ನೇಹಿತರ ಸಹಾಯದಿಂದ ಸೆಲೀನಾ ಎಲಿಯಾಸ್, ಅಶುತೋಷ್ ಶರ್ಮಾ ಮತ್ತು ರಿಷಿಯೋಮ್ ಷಾ, ಹರ್ಷಿಲ್ 2015 ರಲ್ಲಿ ಲೆಟ್ಸ್ ಫೀಡ್ ಬೆಂಗಳೂರು ಅಭಿಯಾನ ಆರಂಭಿಸಿದರು. ಈ ನಾಲ್ವರು ಮೊದಲು ನಲವತ್ತು ಆಹಾರ ಪೊಟ್ಟಣಗಳನ್ನು ವಿತರಿಸಿದರು; ಇಂದು ಸಂಸ್ಥೆಗೆ ನಾಲ್ಕು ಸಾವಿರ ನೊಂದಾಯಿತ ದಾನಿಗಳಿದ್ದು, ಈ ಯೋಜನೆಯು ಐದು ನಗರಗಳ ಲಕ್ಷಾಂತರ ಬಡವರಿಗೆ ಆಹಾರ ನೀಡುತ್ತಿದೆ, ಎನ್ನುತ್ತಾರೆ ಹರ್ಷಿಲ್.
"ನಾವು ಪ್ರತಿ ಭಾನುವಾರ ಮನೆಗಳವರಿಗೆ ಹೆಚ್ಚು ಅಡುಗೆ ಮಾಡುವಂತೆ ಹಾಗೂ ಅದನ್ನು ಡಬ್ಬಿಗಳಿಗೆ ಹಾಕಿ ಪ್ಯಾಕ್ ಮಾಡುವಂತೆ ಕೇಳಿ ಕೊಳ್ಳುತ್ತೇವೆ. ಅದನ್ನು ನಮ್ಮ ಸ್ವಯಂಸೇವಕರು ಸಂಗ್ರಹಿಸಿ ಅಗತ್ಯವಿರುವವರಿಗೆ ಹಂಚುತ್ತಾರೆ.”
ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುವುದು ನಮಗಿಂತ ಕಡಿಮೆ ಸವಲತ್ತು ಹೊಂದಿರುವ ಜನರಿಗೆ ಸೇವೆ ಸಲ್ಲಿಸಲು ಅವಕಾಶವನ್ನು ನೀಡುತ್ತದೆ ಹಾಗೂ ಸ್ವಯಂ ತೃಪ್ತಿಯ ಭಾವವನ್ನು ತರಿಸುತ್ತದೆ ಎಂದು ನಂಬಿದ್ದಾರೆ ಹರ್ಷಿಲ್. “ಹಸಿವು ಮತ್ತು ಅನಾರೋಗ್ಯವಿಲ್ಲದ ಜೀವನವನ್ನು ನಡೆಸಲು ಪ್ರತಿಯೊಬ್ಬರೂ ಅರ್ಹರು. ಆ ಜೀವನ ಶೈಲಿಯಲ್ಲಿ ಬದುಕುವುದಕ್ಕೆ ಅವರಿಗೆ ಅನುವು ಮಾಡಿಕೊಡಲಿಕ್ಕೆ ಪೌಷ್ಠಿಕ ಆಹಾರ ನೀಡುವುದೊಂದೇ ಉತ್ತಮ ಮಾರ್ಗವಾಗಿದೆ," ಎನ್ನುತ್ತಾರೆ ಹರ್ಷಿಲ್.
2017 ರ ನಮ್ಮ ಬೆಂಗಳೂರು ಅವಾರ್ಡ್ಸ್ ನಲ್ಲಿ ಅವರಿಗೆ 'ರೈಸಿಂಗ್ ಸ್ಟಾರ್' ಎಂಬ ಶಿರೋನಾಮೆ ನೀಡಲಾಯಿತು.
ಚಿಂತನೆಗಾಗಿ ಆಹಾರ
ಹರ್ಷಿಲ್ ಅವರು ಕ್ಸೇವಿಯರ್ ವಿಶ್ವವಿದ್ಯಾಲಯ ಭುವನೇಶ್ವರ (ಎಕ್ಸ್‌ಯುಬಿ) ದಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಅಕ್ಸೆಂಚರ್ ಕಂಪನಿಯ ಸಿಎಸ್‌ಆರ್ ತಂಡದ ಜೊತೆ ಕೆಲಸ ಮಾಡಿದ್ದಾರೆ.
"ನನ್ನ ಕೆಲಸದ ಅವಧಿಯಲ್ಲಿ, ಕಾರ್ಪೊರೇಟ್ ಸಂಸ್ಥೆಗಳು ಕೇವಲ ಜನಪ್ರಿಯ ಎನ್.ಜಿ.ಒ. ಗಳೊಂದಿಗೆ ಮಾತ್ರ ಸೇರಿಕೊಳ್ಳುತ್ತಾರೆ ಎಂಬುದನ್ನು ಅರಿತೆ. ಇದರ ಮಧ್ಯೆ ಅವರೆಲ್ಲ ನಿಜವಾದ ಸಹಾಯ ಮಾಡುವ ಸಾರವನ್ನು ಕಳೆದುಕೊಂಡಿದ್ದಾರೆ ಎನಿಸಿತು. ಆಗ ನಾನೇ ಸ್ವಂತವಾಗಿ ಏನಾದರು ಮಾಡಬೇಕೆಂದು ಯೋಚಿಸಿದೆ. ಸೆಲೀನಾ ಎಲಿಯಾಸ್, ಅಶುತೋಷ್ ಶರ್ಮಾ, ಮತ್ತು ರಿಷಿಯೋಮ್ ಷಾ ರ ಚಿಂತನೆಗಳು ಸಹ ನನ್ನ ರೀತಿಯವೇ ಆದ್ದರಿಂದ ಅವರೂ ನನ್ನ ಜೊತೆ ಸೇರಿದರು."
ಆಹಾರ ನೀಡುವ ಈ ಯೋಜನೆಯ ಬಗ್ಗೆ ಹರ್ಷಿಲ್ ಪರಿಕಲ್ಪಿಸಿದಾಗ, ಎಲ್ಲರೂ ತಿಲಕ್ ನಗರದ ನಿವಾಸಿಗಳಿಗೆ ಯೋಜನೆಯನ್ನು ವಿವರಿಸಿ ಇಷ್ಟವಿದ್ದರೆ ಭಾಗವಹಿಸಬಹುದಾಗಿ ಹೇಳಿದರು.
"ಇದರಲ್ಲಿ ಯಾವುದೇ ಹಣ ಸಹಾಯದ ಪ್ರಸ್ತಾಪವಿಲ್ಲದಿದ್ದರಿಂದ, ಬಹಳ ಜನ ಭಾಗಿಯಾದರು, ನಾವು ನಮ್ಮ ಮೊದಲ ಕೆಲಸವೆಂಬಂತೆ ನಲವತ್ತು ಸ್ಲಮ್ ನಿವಾಸಿಗಳಿಗೆ ಆಹಾರ ನೀಡಿದೆವು.”
ಭಾರತದಾದ್ಯಂತ ಯೋಜನೆಯ ತರಂಗಗಳ ರೂಪಿಸುವತ್ತ
ಸಮಯ ಕಳೆದಂತೆ ಲೆಟ್ಸ್ ಫೀಡ್ ಬೆಂಗಳೂರು ಇದೇ ರೀತಿಯ ಅನೇಕ ಕಾರ್ಯಕ್ರಮಗಳು ದೆಹಲಿ, ವಾರಂಗಲ್, ಕೋಲ್ಕತಾ ಮತ್ತು ಪುಣೆಯಲ್ಲಿಯೂ ನಡೆದವು. ಹರ್ಷಿಲ್, ನಮ್ಮ ಈ ಉಪಕ್ರಮವು ಹಸಿವನ್ನು ನೀಗಿಸದಿದ್ದರೂ ಜನರಿಗೆ ಸಹಾಯ ಮಾಡುವ ಅವಕಾಶ ಕಲ್ಪಿಸಿದೆ ಎನ್ನುತ್ತಾರೆ.
"ನನಗಿನ್ನೂ ನೆನಪಿದೆ, ನಾವು ಬಿರಿಯಾನಿ ವಿತರಿಸಿದ ನಂತರ ಅವರೊಲ್ಲೊಬ್ಬ ಬಾಲಕ ಬಂದು ಊಟ ಕೊಡುವಂತೆ ಕೇಳಿದ. ನಾನು ಆಗಲೆ ಬಿರಿಯಾನಿ ನೀಡಿರುವುದಾಗಿ ಹೇಳಿದೆ. ಆಗ ಅವನ ತಾಯಿ ಬಂದು 'ಅವನು ಇಷ್ಟು ದಿವಸ ಬಿಳಿ ಅನ್ನವನ್ನು ಬಿಟ್ಟು ಬೇರೇನೂ ನೋಡಿಲ್ಲ , ಅವನಿಗೆ ಬಣ್ಣದ ಅನ್ನ ಹಾಗೂ ತರಕಾರಿಗಳಿಂದ ಮಾಡಿದ ಖಾದ್ಯವನ್ನು ಗುರುತಿಸಲು ಆಗಿಲ್ಲ' ಅಂದಾಗಲೇ ನಮಗೆ ಅರಿವಾಗಿದ್ದು ಈ ಉಪಕ್ರಮವು ಜನರ ಜೀವನದಲ್ಲಿ ಬದಲಾವಣೆ ತರುತ್ತಿದೆ ಎಂದು," ಹರ್ಷಿಲ್ ನೆನಪಿಸಿಕೊಳ್ಳುತ್ತಾರೆ.
ಸಂಸ್ಥೆಯು ಆಹಾರ ಹಂಚುವುದಷ್ಟೇ ಅಲ್ಲದೆ, 20,000 ಜೊತೆ ಬಟ್ಟೆಗಳನ್ನು , 60,000 ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಹಾಗೂ ಲೇಖನ ಸಾಮಗ್ರಿಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ವಿತರಿಸಿದೆ.
"ನಾವು ಆಹಾರ, ಬಟ್ಟೆ ಹಾಗೂ ಇತರೆ ಸಾಮಾಗ್ರಿಗಳನ್ನು ವಿತರಿಸುವ ಮುಂಚೆ, ಸ್ಲಮ್ ನಿವಾಸಿಗಳಿಗೆ ನೈರ್ಮಲ್ಯ, ಆರೋಗ್ಯ, ಶಿಕ್ಷಣ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ತಿಳಿಸಿಕೊಡುತ್ತೇವೆ. ಇದು ಜನರಿಗೆ ಸಹಾಯವಾಗುವುದಷ್ಟೇ ಅಲ್ಲದೆ, ಅವರ ಜೀವನಶೈಲಿಯನ್ನು ಸುಧಾರಿಸುತ್ತದೆ." ಎಂದು ಯುವರ್ ಸ್ಟೋರಿಗೆ, ಹರ್ಷಿಲ್ ಹೇಳಿದರು.
ಸುವ್ಯವಸ್ಥಿತ ಆಹಾರ ವಿತರಣಾ ವ್ಯವಸ್ಥೆ
ವರ್ಷಗಳು ಕಳೆದಂತೆ, ಸಾಮಾಜಿಕ ಜಾಲತಾಣದಲ್ಲಿ ಈ ಉಪಕ್ರಮದ ಬಗ್ಗೆ ಪ್ರಚಾರ ಹೆಚ್ಚಾಯಿತು ಹಾಗೆಯೇ ಆಹಾರ ವಿತರಣೆಯು ಹೆಚ್ಚಿತು. ಹರ್ಷಿಲ್ ಹಾಗೂ ಸ್ನೇಹಿತರು ಆಹಾರವನ್ನು ಸಂಗ್ರಹಿಸುವ ಹಾಗೂ ವಿತರಿಸುವ ವ್ಯವಸ್ಥೆಯನ್ನು ಸುಧಾರಿಸಲು ಕೆಲಸ ಮಾಡಿದರು. 2016 ರಲ್ಲಿ ಈ ಯೋಜನೆಯ ಹೆಸರನ್ನು 'ಲೆಟ್ಸ್ ಸ್ಪ್ರೆಡ್ ಲವ್' ಎಂದು ಮರುನಾಮಕರಣ ಮಾಡಿದರು, ಹರ್ಷಿಲ್.
"ನಾವು ಪ್ರತಿಯೊಬ್ಬ ದಾನಿಗು ಒಬ್ಬ ಸ್ವಯಂಸೇವಕರನ್ನು ನೇಮಿಸಿದೆವು. ಅವರು ಅಲ್ಲಿಂದ ಬಂದ ಆಹಾರ ಸಮರ್ಪಕವಾಗಿ ತಲುಪಿಸುವ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು. ಇದು ದಾನಿಗಳಿಗೂ ಕಾರ್ಯಕರ್ತರ ಮೇಲ್ವಿಚಾರಣೆ ನಡೆಸುವುದಕ್ಕೆ ಸಹಾಯವಾಯಿತು. ನಾವು ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಿ ವಿತರಣಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಳ್ಳುವಂತೆ, ಸಹಯೋಗ ಹೊಂದಿರುವಂತೆ ಕೇಳಿಕೊಳ್ಳುತ್ತೇವೆ."
ಎಲ್ಲೆಲ್ಲಿ ಎಷ್ಟು ಅಗತ್ಯವಿದೆ ಎಂದು ತಿಳಿಯಲು ಕಾರ್ಯಕರ್ತರನ್ನು ಸ್ಲಮ್ ಗಳಿಗೆ ಕಳುಹಿಸಿ, ಅವರೊಂದಿಗೆ ಮಾತನಾಡಿ ಅವರ ಕಷ್ಟಗಳನ್ನು ಅರ್ಥಮಾಡಿಕೊಂಡ ನಂತರವೇ ಆಹಾರ ವಿತರಣಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.
ಕಷ್ಟದಲ್ಲಿರುವವರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡಲು ಯಾವ ಪ್ರಯತ್ನವೂ ಸಣ್ಣದಲ್ಲ. ಹರ್ಷಿಲ್, ತಮ್ಮ ಲೆಟ್ಸ್ ಫೀಡ್ ಬೆಂಗಳೂರು ಅಭಿಯಾನದೊಂದಿಗೆ ಯಾವ ಜೀವವೂ ಹಸಿವಿನಿಂದ ನಿದ್ರೆ ಮಾಡಬಾರದು ಎಂದು ಜನರಿಗೆ ಖಚಿತವಾಗಿ ತಿಳಿಸುತ್ತಿದ್ದಾರೆ.