ಲಾಕ್‌ಡೌನ್‌: ಹಸಿದವರ ಪಾಲಿನ ಅನ್ನದಾತ ಬೆಂಗಳೂರಿನ ಈ ಲೊಕೊ ಪೈಲೆಟ್

ಪ್ರತಿದಿನ 3000 ರೂ. ಖರ್ಚು ಮಾಡಿ ಅಡುಗೆ ಮಾಡಿ 100 ಜನರ ಹಸಿವನ್ನು ನೀಗಿಸುತ್ತಿದ್ದಾರೆ ಲೋಕೊ ಪೈಲೆಟ್‌ ಬಿ ರವಿ.

ಲಾಕ್‌ಡೌನ್‌: ಹಸಿದವರ ಪಾಲಿನ ಅನ್ನದಾತ ಬೆಂಗಳೂರಿನ ಈ ಲೊಕೊ ಪೈಲೆಟ್

Thursday April 16, 2020,

2 min Read

ಕೊರೊನಾವೈರಸ್‌ ಹರಡದಂತೆ ದೇಶದಾದ್ಯಂತ ಲಾಕ್‌ಡೌನ್‌ ಹೇರಲಾಗಿದೆ. ಆದರೆ ಈ ಸಮಯದಲ್ಲಿ ಹಲವಾರು ಜನರಿಗೆ ಊಟ ಸಿಗದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಕಠಿಣ ಸಮಯದಲ್ಲಿ ಕೆಲವು ಜನರು ಮುಂದೆ ಬಂದು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಅಂಥವರಲ್ಲಿ ಬೆಂಗಳೂರಿನ ದಕ್ಷಿಣ ರೈಲ್ವೆ ವಿಭಾಗದಲ್ಲಿ ಲೋಕೊ ಪೈಲೆಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಿ. ರವಿ ಕೂಡ ಒಬ್ಬರು.


ಹಸಿದವರಿಗಾಗಿ ಆಹಾರ ತಯಾರಿಸುತ್ತಿರುವ ರವಿ ಮತ್ತು ಅವರ ಕುಟುಂಬ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್ಪ್ರೆಸ್)

ಪ್ರತಿದಿನ ತಾವು ಮತ್ತು ತಮ್ಮ ಇನ್ನಿಬ್ಬರು ಗೆಳೆಯರ ಜೊತೆ ಸೇರಿ, 3000 ರೂ. ಖರ್ಚು ಮಾಡಿ ದಿನಕ್ಕೆ 100 ರಿಂದ 120 ಊಟದ ಪ್ಯಾಕೆಟ್‌ಗಳನ್ನು ತಯಾರಿಸಿ ಅವಶ್ಯವಿದ್ದವರಿಗೆ ನೀಡುತ್ತಿದ್ದಾರೆ.


“ನಾನು ನನ್ನ ಮನೆಯವರು ಮತ್ತು ಅಕ್ಕಪಕ್ಕದವರ ಸಹಾಯದಿಂದ ಅಡುಗೆ ಮಾಡಿ, ಪ್ರತಿದಿನ ಸುಮಾರು ೧೦೦ ರಿಂದ ೧೨೦ ಊಟದ ಪ್ಯಾಕೆಟ್‌ಗಳನ್ನು ತಯಾರಿಸಿ ಅಗತ್ಯವಿರುವವರಿಗೆ ತಲುಪಿಸುತ್ತಿದ್ದೇವೆ. ಲಾಕ್‌ಡೌನ್‌ ಹೇರಲಾಗಿರುವ ಇಂತಹ ತುರ್ತು ಸಂದರ್ಭದಲ್ಲಿ ಅದನ್ನು ನೋಡುತ್ತ ಸುಮ್ಮನೆ ಕುಳಿತಿರಲು ನನ್ನಿಂದಾಗದು,” ಎಂದರು ಬಿ. ರವಿ.


ಇವರ ಈ ಕಾರ್ಯವನ್ನು ಶ್ಲಾಘಿಸಿ ಬೆಂಗಳೂರು ರೈಲ್ವೆ ವಿಭಾಗದ ಮುಖ್ಯಸ್ಥ ಅಶೋಕ ಕುಮಾರ ವರ್ಮ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ನಡೆಗೆ ವ್ಯಾಪಕ ಮನ್ನಣೆ ದೊರೆತಿದೆ.



ತಮ್ಮ ಈ ಕಾರ್ಯದ ಬಗ್ಗೆ ವಿವರಿಸಿದ ರವಿ,


“ಗೆಳೆಯ ಸೋಮಶೇಖರ ಮತ್ತು ನಾನು ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿದ್ದೇವೆ. ಏಪ್ರಿಲ್‌ ೭ ರಿಂದಲೇ ಈ ಕೆಲಸ ಪ್ರಾರಂಭವಾಗಿದೆ ಮತ್ತು ಲಾಕ್‌ಡೌನ್‌ ಮುಗಿಯುವವರೆಗೂ ಇದನ್ನು ಮುಂದವರೆಸುವ ಇಚ್ಛೆ ನಮಗಿದೆ. ಈಗ ನಮ್ಮ ಕುಟುಂಬದವರು ಮತ್ತು ಅಕ್ಕ ಪಕ್ಕದ ಮನೆಯವರು ಸಹ ಅಕ್ಕಿ, ತರಕಾರಿ ನೀಡುತ್ತಿರುವುದಲ್ಲದೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದಾರೆ,” ಎಂದರು.


ಬೆಳಿಗ್ಗೆ 9 ಗಂಟೆಗೆ ಅಡುಗೆ ಕೆಲಸ ಪ್ರಾರಂಭಿಸಿದರೆ ಮಧ್ಯಾಹ್ನ 12.30 ರ ವೇಳೆಗೆ ಅಡುಗೆ ಸಿದ್ಧವಾಗಿರುತ್ತದೆ.


ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದ ಹಸಿವಿನಿಂದ ಬಳಲುತ್ತಿರುವುದನ್ನು ಪ್ರತಿದಿನ ನಾನು ಪತ್ರಿಕೆಯಲ್ಲಿ ಓದುತ್ತಿದ್ದೇನೆ. ಅದಕ್ಕಾಗಿ ನಾವು 3 ಜನ ಗೆಳೆಯರು ಸೇರಿ ಈ ಕೆಲಸ ಶುರು ಮಾಡಿದೆವು. ಪ್ರತಿದಿನ ಸುಮನಹಳ್ಳಿ ಮತ್ತು ಕಾಮಾಕ್ಷಿಪಾಳ್ಯದ ಸ್ಲಂ ಗಳಿಗೆ ಆಹಾರ ವಿತರಣೆ ಮಾಡುತಿದ್ದೇವೆ ಎನ್ನುತ್ತಾರೆ ರವಿ.