ವಿಶೇಷಚೇತನ ಮಕ್ಕಳು ಕೂಡ ಏರುತ್ತಿದ್ದಾರೆ ಮಲ್ಲಕಂಬ
ಏಳು ಅಡಿಯ ಎತ್ತರದ ಕಂಬದ ಮೇಲೆ ವಿಭಿನ್ನ ಬಗೆಯ ಯೋಗಾಸನ ಮಾಡುವುದು ಸಾಹಸ ಪ್ರವೃತ್ತಿಯಾಗಿದೆ. ಇಂತಹ ಸಾಹಸ ಕ್ರೀಡೆ ಸಾಮಾನ್ಯರಿಗಷ್ಟೇ ಸೀಮಿತವಾಗದೆ ವಿಶೇಷ ಚೇತನ ಮಕ್ಕಳು ಕಲಿಯುವಂತೆ ಮಾಡುತ್ತಿದ್ದಾರೆ ಕರ್ನಾಟಕದ ಗಿರೀಶ್ ಜಿದ್ದಿಮನಿ.
ಮೊದಲಿಗೆ ಕುಸ್ತಿಪಟುಗಳ ಸಾಧನೆಗಾಗಿ ಬಳಕೆಯಾಗುತ್ತಿದ್ದ ಮಲ್ಲಕಂಬ ಕ್ರಮೇಣ ಒಂದು ಕ್ರೀಡೆಯಾಗಿ ಬೆಳೆದು ಬಂದಿತು. ಮೂಲತಃ ಮಹಾರಾಷ್ಟ್ರದಲ್ಲಿ ಜನ್ಮ ತಾಳಿದರೂ ಕ್ರಮೇಣ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಬಹುಬೇಗನೆ ಜನಪ್ರಿಯತೆಯನ್ನು ಪಡೆಯಿತು. ಇದೊಂದು ದೇಸಿ ಕ್ರೀಡೆಯಾದರೂ ತದನಂತರ ಸ್ವತಂತ್ರ ಕ್ರೀಡೆಯಾಗಿ ಮಾರ್ಪಾಟು ಹೊಂದಿತು. ಕಲಾಪ್ರಕಾರವಾಗಿಯೂ ಇದು ಪ್ರದರ್ಶನಗೊಳ್ಳುತ್ತಿದೆ.
ಕೆಲವೆಡೆ ಮಾತ್ರ ಪ್ರದರ್ಶನಗೊಳ್ಳುತ್ತಿರುವ ಹಾಗೂ ನಿಧಾನವಾಗಿ ನಶಿಸುತ್ತಿರುವ ಈ ಕ್ರೀಡೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಕೆಲವು ಸಾಧಕರು ನಮಗೆ ಕಾಣ ಸಿಗುತ್ತಾರೆ. ಮಲ್ಲಕಂಬದ ಕುರಿತಾಗಿ ಜಾಗೃತಿ ಮೂಡಿಸುತ್ತಿರುವವರಲ್ಲಿ ಕರ್ನಾಟಕದ ಲಕ್ಷ್ನೇಶ್ವರದವರಾದ ಗಿರೀಶ್ ಜಿದ್ದಿಮನಿ ಕೂಡ ಒಬ್ಬರು.
ವಿಶೇಷ ಚೇತನರು ಕೂಡ ಮಲ್ಲಕಂಬ ಕಲಾವಿದರಾಗಬಹುದು
ಮಲ್ಲಕಂಬವನ್ನು ಕಲಿಯಲು ಕೇವಲ ಸಮರ್ಥ ಶರೀರದಿಂದ ಮಾತ್ರ ನಿರ್ವಹಿಸಬಹುದೆಂದರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿರಲು ಸಾಧ್ಯ. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕಿವುಡ ಹಾಗೂ ಮೂಕ ಮಕ್ಕಳು ಕೂಡ ಇದನ್ನು ಮಾಡಲು ಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ ಗಿರೀಶ್ ಜಿದ್ದಿಮನಿ.
ಶ್ರೀ ಬಿ.ಡಿ. ತಟ್ಟಿ ವಸತಿ ಶಾಲೆಯಲ್ಲಿ ಶ್ರವಣದೋಷ ಹೊಂದಿದ ಮಕ್ಕಳಿಗಾಗಿ ಕಳೆದ ಆರು ವರ್ಷಗಳಿಂದ ಮಲ್ಲಕಂಬದ ಕುರಿತಾಗಿ ಹೇಳಿ ಕೊಡಲಾಗುತ್ತಿದೆ. ಮಕ್ಕಳಿಗೆ ಇದನ್ನು ಬೋಧಿಸುವಲ್ಲಿ ತರಬೇತುದಾರರಾದ ಗಿರೀಶ್ ಜಿದ್ದಿಮನಿ ವಿಶೇಷ ಪಾತ್ರ ವಹಿಸುತ್ತಾರೆ.
ಇದರ ಕುರಿತು ಎಡೆಕ್ಸ್ ಲೈವ್ ವರದಿಯಲ್ಲಿ ಗಿರೀಶ್ ರವರು,
"ಒಂದು ಸಂದರ್ಭದಲ್ಲಿ, ಮಲ್ಲಕಂಬದ ಪ್ರವರ್ತಕರಾದ ಎನ್. ಎಸ್. ಪಾಟೀಲರವರು ಮಕ್ಕಳಿಗೆ ಈ ಕ್ರೀಡೆಯನ್ನು ಕಲಿಸಲು ಸಲಹೆ ನೀಡಿದರು. ಆ ಸಮಯದಲ್ಲಿ ಮಕ್ಕಳಿಗೆ ತರಬೇತಿ ನೀಡಲು ನನ್ನನ್ನು ಈ ಶಾಲೆಗೆ ನೇಮಿಸಲಾಯಿತು. ಆರಂಭಿಕ ದಿನಗಳಲ್ಲಿ ಅವರಿಗೆ ಮಾತನಾಡಲು ಹಾಗೂ ಕೇಳುಲು ಸಾಧ್ಯವಾಗದ ಕಾರಣ ಅವರಿಗೆ ಕಲಿಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ ಈಗ ಅದು ದೊಡ್ಡ ವಿಷಯವಲ್ಲ,” ಎಂದರು.
ನಾನು ಯಾವ ಭಂಗಿಗಳನ್ನು ಮಾಡುತ್ತೆನೆಯೊ ಅದನ್ನು ಅವರು ಗಮನಿಸುತ್ತಾರೆ. ಅದನ್ನು ಅನುಕರಿಸುತ್ತಾರೆ. ಪ್ರಸ್ತುತ 30 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಅವರಲ್ಲಿ ಕೆಲವರು ಮಲ್ಲಕಂಬವನ್ನು ದೋಷರಹಿತವಾಗಿ ನಿರ್ವಹಿಸಲು ಸಮರ್ಥರಾಗಿದ್ದಾರೆ.
ಪ್ರತಿದಿನ ಬೆಳಿಗ್ಗೆ 5.30ರಿಂದಲೇ ವಿದ್ಯಾರ್ಥಿಗಳ ಅಭ್ಯಾಸ ಪ್ರಾರಂಭವಾಗುತ್ತದೆ. ಮೊದಲಿಗೆ ಕೆಲವು ವ್ಯಾಯಾಮ ಹಾಗೂ ಯೋಗಾಸನಗಳನ್ನು ಮಾಡುತ್ತಾರೆ. ನಂತರ, ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಒಂದು ಗುಂಪು ಮಲ್ಲಕಂಬವನ್ನು ಅಭ್ಯಾಸ ಮಾಡಿದರೆ, ಮತ್ತೊಂದು ಗುಂಪು ಹಗ್ಗದ ಮಲ್ಲಕಂಬವನ್ನು ಅಭ್ಯಾಸ ಮಾಡುತ್ತದೆ.
ಕೆಲವೊಂದು ಬಾರಿ ಕಲಿಸುವಾಗ ನಾನು ಸಂಜ್ಞಾ ಭಾಷೆಯನ್ನು ಬಳಸುತ್ತೇನೆ. ಅವರು ತಮ್ಮ ಸ್ನೇಹಿತರು ಮಾಡುವುದನ್ನು ಗಮನವಿಟ್ಟು ನೋಡಿ ಅದನ್ನು ಅನುಕರಿಸುತ್ತಾರೆ. ದಸರಂಗಾಸನ, ಬಾಗಲುಟಿ, ವೀರಭದ್ರಾಸನ, ರಾಜಾಸನ, ಧ್ವಜಭಂಗಿ ಸೇರಿದಂತೆ 30 ವಿವಿಧ ಆಸನ ಹಾಗೂ ಭಂಗಿಗಳನ್ನು ಕಲಿಸಿದ್ದೇನೆ. ಕಂಬವನ್ನು ಏರುವ ಮೊದಲು ಅದಕ್ಕೆ ನಮಸ್ಕರಿಸುವುದು ಒಂದು ಅಭ್ಯಾಸ. ನಾವು ಇದನ್ನು ಸಲಾಮ್ ಎಂದು ಕರೆಯುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇದನ್ನು ಅನುಸರಿಸುತ್ತಾರೆ.
ಮಲ್ಲಕಂಬದ ಪ್ರಯೋಜನಗಳ ಕುರಿತಾಗಿ ಗಿರೀಶ್,
"ಕಂಬವನ್ನು ಹಿಡಿಯಲು ಏನೂ ಇರುವುದಿಲ್ಲ. ನೀವು ಅದನ್ನು ಹತ್ತಿ ಮೇಲ್ಮೈಯಲ್ಲಿ ಕುಳಿತುಕೊಂಡರೆ ಸ್ವತಂತ್ರರಾದ ಭಾವವಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ತಮ್ಮ ಬಗ್ಗೆ ವಿಶ್ವಾಸ ಮೂಡಿಸಲು ಹಾಗೂ ತಾವು ಕೂಡ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತಿಳಿಸಿಕೊಡುವುದಕ್ಕಾಗಿ ಮಲ್ಲಕಂಬವನ್ನು ಕಲಿಸಲಾಗುತ್ತದೆ. ಜೊತೆಗೆ, ಅವರು ಹೆಚ್ಚು ಸಕ್ರಿಯರಾಗಿರುತ್ತಾರೆ. ತಾರ್ಕಿಕ ಚಿಂತನೆಯ ಸಾಮರ್ಥ್ಯ ಹೆಚ್ಚಾಗುತ್ತದೆ. ತಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ" ಎಂದು ಹೇಳುತ್ತಾರೆ, ವರದಿ ಎಡೆಕ್ಸ್ ಲೈವ್.
ಮುಖ್ಯ ತರಬೇತುದಾರ ಗಿರೀಶ್ ಜಿದ್ದಿಮನಿ ದೈನಂದಿನವಾಗಿ ವಿವಿಧ ಮಲ್ಲಕಂಬ ಆಸನಗಳನ್ನು ಹೇಗೆ ಮಾಡಬೇಕೆಂದನ್ನು ಅವರಿಗೆ ಕಲಿಸುತ್ತಾರೆ. ಸಂಕೀರ್ಣವಾದ ಆಸನಗಳನ್ನು ಸಹ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ನಾಲ್ಕು ವರ್ಷಗಳಲ್ಲಿ ರಾಜ್ಯದಾದ್ಯಂತ ನಡೆದ ಹಲವಾರು ಮಲ್ಲಕಂಬ ಸ್ಪರ್ಧೆಗಳಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಿರುವುದು ಇವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.