ಕೊರೊನಾವೈರಸ್‌: ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸಿ ಸೌಲಭ್ಯವಂಚಿತರಿಗೆ ವಿತರಿಸುತ್ತಿದ್ದಾರೆ ಮನಿಪಾಲ್ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿನಿ

ಸಿಮರ್‌ ಶರ್ಮಾ ಕೊರೊನಾವೈರಸ್‌ ಮಹಾಮಾರಿಯ ನಡುವೆ 150 ಹ್ಯಾಂಡ್‌ ಸ್ಯಾನಿಟೈಸರ್‌ ಬಾಟಲಿಗಳನ್ನು ತಯಾರಿಸಿ ವಿತರಿಸಿದ್ದಾರೆ ಮತ್ತು ಇನ್ನೂ 600 ಲೀಟರ್‌ ಸ್ಯಾನಿಟೈಸರ್‌ ತಯಾರಿಸುವ ಗುರಿ ಹೊಂದಿದ್ದಾರೆ.

ಕೊರೊನಾವೈರಸ್‌: ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸಿ ಸೌಲಭ್ಯವಂಚಿತರಿಗೆ ವಿತರಿಸುತ್ತಿದ್ದಾರೆ ಮನಿಪಾಲ್ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿನಿ

Saturday May 02, 2020,

2 min Read

ಜಾಗತಿಕವಾಗಿ ಹರಡಿರುವ ಕೊರೊನಾವೈರಸ್‌ನಿಂದ ಹ್ಯಾಂಡ್‌ ಸ್ಯಾನಿಟೈಸರ್‌ ಮತ್ತು ಫೇಸ್‌ ಮಾಸ್ಕ್‌ಗಳ ಕೊರತೆಯುಂಟಾಗಿದೆ ಮತ್ತು ಇದು ಜನರಿಗೆ ಅವುಗಳನ್ನು ಎಲ್ಲಿಂದಲೋ ಖರೀದಿಸುವಂತೆಯೋ ಅಥವಾ ತಾವೇ ತಯಾರಿಸುವಂತೆ ಪ್ರೇರೆಪಿಸುತ್ತಿದೆ.


ವರ್ಡೋಮೀಟರ್‌ ಪ್ರಕಾರ ಇಂದಿಗೆ ಭಾರತದಲ್ಲಿ 31,331 ಕೋವಿಡ್‌-19 ಪ್ರಕರಣಗಳಿವೆ. ದಿನೇ ದಿನೇ ಹೆಚ್ಚುತ್ತಿರುವ ಈ ಪ್ರಕರಣಗಳು ಜಾಗತಿಕ ಸರಬರಾಜು ಸರಪಳಿ ಮತು ಆರ್ಥಿಕತೆಯ ಮೇಲೆ ತೀವ್ರವಾದ ಪರಿಣಾಮ ಬೀರಿವೆ.


ಇಂತಹ ಪರಿಸ್ಥಿತಿಯ ನಡುವೆ ಮನಿಪಾಲ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಯೋಟೆಕ್ನಾಲಜಿ ವಿಷಯದಲ್ಲಿ ಸ್ನಾತಕ ಪದವಿ ಓದುತ್ತಿರುವ ಕೊಲ್ಕಾತ್ತಾದ ಸಿಮರ್‌ ಶರ್ಮಾ ಕೊರೊನಾ ಬಿಕ್ಕಟ್ಟಿನಿಂದ ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಸೌಲಭ್ಯವಂಚಿತರ ನೆರವಿಗೆ ಬಂದಿದ್ದಾರೆ. ಅತೀಯಾದ ಬೇಡಿಕೆಯಿಂದ ಸ್ಯಾನಿಟೈಸರ್‌ಗಳ ಬೆಲೆ ಏರಿಕೆಯಾಗಿದ್ದು, ಹಲವರಿಗೆ ಅದು ಕೈಗೆಟುಕದಂತಾಗಿದೆ.


ಸಿಮರ್‌ ಶರ್ಮಾ (ಚಿತ್ರಕೃಪೆ: ಎಡೆಕ್ಸ್‌ ಲೈವ್‌)




ಈ ಕಾರಣಗಳಿಂದ ಸಿಮರ್‌ ಶರ್ಮಾ 150 ಬಾಟಲಿ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಐಸೋಪ್ರೋಪೈಲ್‌ ಆಲ್ಕೊಹಾಲ್‌, ಗ್ಲಿಸರಾಲ್‌, ಏಸನ್ಶಿಯಲ್‌ ಆಯಿಲ್ಸ್‌ ಮತ್ತು ನೀರನ್ನು ಬಳಸಿ ಮನೆಯಲ್ಲೆ ತಯಾರಿಸಿದ್ದಾರೆ. ತಯಾರಿಕಾ ಪ್ರಕ್ರಿಯೆಯಲ್ಲಿ ಸಿಮರ್‌ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ. ಈ ಹ್ಯಾಂಡ್‌ ಸ್ಯಾನಿಟೈಸರ್‌ಗಳು 80 ಪ್ರತಿಶತ ಆಲ್ಕೊಹಾಲ್‌ ಅವಲಂಬಿತವಾಗಿದ್ದು, ಮುಂಜಾಗೃತೆಯಿಂದ ತಯಾರಿಸಲಾಗಿದೆ.


ಮನೆಯಲ್ಲಿ ತಯಾರಿಸಲಾಗಿರುವ ಈ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಸಿಮರ್‌, ಕೊಲ್ಕಾತ್ತಾದ ದಿನಗೂಲಿ ಕಾರ್ಮಿಕರಿಗೆ, ತರಕಾರಿ ವ್ಯಾಪಾರಿಗಳಿಗೆ, ಮೀನು ಮಾರಾಟಗಾರರಿಗೆ ಮತ್ತು ಸ್ಲಂ ನಲ್ಲಿ ವಾಸಿಸುವವರಿಗೆ ವಿತರಿಸಿದ್ದಾರೆ.


"ಇವುಗಳ ಹೆಚ್ಚು ಅಗತ್ಯವಿರುವ ಮಾರುಕಟ್ಟೆಗಳಲ್ಲಿ ಮತ್ತು ಕೊಳೆಗೇರಿಗಳಲ್ಲಿ ವಿತರಿಸಲು ನಾನು ಪೊಲೀಸರೊಂದಿಗೆ ಸಹಯೋಗ ಹೊಂದಿದ್ದೇನೆ ಮತ್ತು ದೇಣಿಗೆಗಳ ಸಹಾಯದಿಂದ ನನ್ನ ಎರಡನೇ ಬ್ಯಾಚ್‌ಗೆ ಈಗಾಗಲೇ ರಾಸಾಯನಿಕಗಳು ಮತ್ತು ಬಾಟಲಿಗಳಿಗೆ ಆರ್ಡರ್‌ ನೀಡಿದ್ದೇನೆ," ಎಂದು ಅವರು ಎಡೆಕ್ಸ್‌ ಲೈವ್‌ಗೆ ತಿಳಿಸಿದರು.


ಅವರ ಈ ಉಪಕ್ರಮದ ಬಗ್ಗೆ ಜನತೆಗೆ ತಿಳಿಯತೊಡಗಿದಾಗ, ದೇಶದ ವಿವಿಧ ಭಾಗಗಳಿಂದ ದೇಣಿಗೆ ಹರಿದು ಬಂದಿದೆ. ಅದರಿಂದ ಸಿಮರ್‌, 600 ಲೀಟರ್‌ ಹೆಚ್ಚಿನ ಹ್ಯಾಂಡ್‌ ಸ್ಯಾನಿಟೈಸರ್‌ಅನ್ನು ತಯಾರಿಸುವಂತಾಗಿದೆ. ಮೂರು ಬ್ಯಾಚ್‌ಗಳಲ್ಲಿ ಇದನ್ನು ತಯಾರಿಸಲಿರುವ ಅವರು ಎರಡನೇ ಬ್ಯಾಚ್‌ ನ ಕೆಲಸದಲ್ಲಿ ನಿರತರಾಗಿದ್ದಾರೆ. ಸ್ಥಳೀಯ ಪೋಲಿಸರೊಂದಿಗೆ ಸಹಯೋಗಗೊಂಡಿರುವ ಸಿಮರ್‌, ಅವಶ್ಯಕತೆ ಇದ್ದವರಿಗೆ ಈ ಬಾಟಲಿಗಳನ್ನು ತಲುಪಿಸುತ್ತಿದ್ದಾರೆ.


“ನನ್ನ ಕೆಲಸದ ಮೇಲೆ ನಂಬಿಕೆಯಿರುವ ನನ್ನ ಸ್ನೇಹಿತರು ಡಿಜಿಟಲ್‌ ಪಾವತಿಯ ಮೂಲಕ ಈ ಸಾಮಾಜಿಕ ಕೆಲಸಕ್ಕೆ ಧನ ಸಹಾಯ ಮಾಡಿದ್ದಾರೆ. ಹೆಚ್ಚಿನ ಉತ್ಪಾದನೆಗಾಗಿ ಸಮಾಜದಿಂದ ಹಣ ಪಡೆದಾಗ, ಪಡೆದ ಹಣಕ್ಕೆ ನಾನು ಜವಾಬ್ದಾರಳಾಗಿರುತ್ತೇನೆ. ನೀಡಿದ ಹಣವನ್ನು ಒಳ್ಳೇಯ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದೆನೆಂಬ ನಂಬಿಕೆ ಬರುವಂತೆ ಮಾಡಲು ಎಲ್ಲವನ್ನೂ ಪಾರದರ್ಶಕವಾಗಿಟ್ಟಿದ್ದೇನೆ,” ಎಂದರು ಸಿಮರ್‌, ವರದಿ, ದಿ ಟೈಮ್ಸ್‌ ಆಫ್‌ ಬೆಂಗಾಲ.


ಪ್ರಸ್ತುತ ಸಿಮರ್‌ ತಮ್ಮ ದಿನನಿತ್ಯದ ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಎಂಜಿನಿಯರಿಂಗ್ ಪರಿಕಲ್ಪನೆಗಳನ್ನು ಬಳಸಿಕೊಂಡು ಬಿಕ್ಕಟ್ಟಿನ ಸಮಯದಲ್ಲಿ ಸಮಾಜಕ್ಕೆ ಹೇಗೆ ಸಹಾಯ ಮಾಡಬಹುದೆಂಬುದರತ್ತ ಯೋಚಿಸುತ್ತಿದ್ದಾರೆ.