ಪೋರ್ಟಬಲ್ ವೆಂಟಿಲೇಟರ್ ಸಿದ್ಧಪಡಿಸಿದ ಬೆಂಗಳೂರು ಮೂಲದ ಸ್ಟಾರ್ಟಪ್
ಬಯೋಡಿಸೈನ್‌ನ ಎಂಡಿ ಮತ್ತು ಸಿಇಒ ಗೌತಮ್ ಪಸುಪುಲೆಟಿ ಯುವರ್‌ಸ್ಟೋರಿ ಸಂಸ್ಥಾಪಕಿ ಮತ್ತು ಸಿಇಒ ಶ್ರದ್ಧಾ ಶರ್ಮಾ ಅವರೊಂದಿಗೆ ಮಾತನಾಡುತ್ತಾ, ಬಯೋಡಿಸೈನ್‌ನ ಉತ್ಪನ್ನ ರೆಸ್ಪಿರ್‌ಎಐಡಿ ಸಕಾರಾತ್ಮಕ ಒತ್ತಡದ ವಾತಾಯನವನ್ನು ಒದಗಿಸುತ್ತದೆ ಮತ್ತು ಇದನ್ನು ಕೈಯಿಂದ ನಿರ್ವಹಿಸುವಂತಹ ವಾತಾಯನ ವ್ಯವಸ್ಥೆಗೆ ವಿಶ್ವಾಸಾರ್ಹ ಪರ್ಯಾಯವಾಗಿ ಬಳಸಬಹುದು ಎಂದರು.
ಕೊರೊನಾ ಸೋಂಕಿತ ರೋಗಿಗಳಲ್ಲಿ ವೈರಸ್ ಉಸಿರಾಟದ ತೊಂದರೆಯನ್ನುಂಟು ಮಾಡುವುದರಿಂದ ಭಾರತದಲ್ಲಿ ವೆಂಟಿಲೇಟರ್ ಮೂಲಸೌಕರ್ಯವ್ಯವಸ್ಥೆಗೆ ಬೇಡಿಕೆಯುಂಟಾಗಿದೆ. ಹಲವಾರು ಜನರು, ಸಂಸ್ಥೆಗಳು ಈ ಬಿಕ್ಕಟ್ಟನ್ನು ಪರಿಹರಿಸಲು ನಿಂತಿರುವ ನಡುವೆಯೆ, ಬೆಂಗಳೂರು ಮೂಲದ ಸ್ಟಾರ್ಟಪ್ ಬಯೋಡಿಸೈನ್ ಇನ್ನೋವೆಷನ್ ಲ್ಯಾಬ್ಸ್ ಪೋರ್ಟಬಲ್ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿದೆ.
ಯುವರ್‌ಸ್ಟೋರಿ ಸಂಸ್ಥಾಪಕಿ ಮತ್ತು ಸಿಇಒ ಶ್ರದ್ಧಾ ಶರ್ಮಾ ಅವರೊಂದಿಗಿನ ಸಂವಾದದಲ್ಲಿ ಬಯೋಡಿಸೈನ್ ನ ನಿರ್ವಹಣಾ ನಿರ್ದೇಶಕ ಮತ್ತು ಸಿಇಒ ಗೌತಮ್ ಪಸುಪುಲೆಟಿ ಮಾತನಾಡುತ್ತಾ, ಆಸ್ಪತ್ರೆಗಳು ಮತ್ತು ಅದರ ಉಸ್ತುವಾರಿಗಳಿಗೆ ಕಡಿಮೆ ಸೌಲಭ್ಯಗಳು ಲಭ್ಯವಿರುವುದರಿಂದ ಅಂಬು ಬ್ಯಾಗ್ ಬಳಸಿ ಕೈಯಿಂದ ನಿರ್ವಹಿಸಬೇಕಾದಂತಹ ವಾತಾಯನ ವ್ಯವಸ್ಥೆಗೆ ಅವರು ಮೊರೆ ಹೋಗುತ್ತಾರೆ. ಆದರೆ ಇವುಗಳು ಅಸ್ಥಿರವಾದ ವಾತಾಯನ ಮಾನದಂಡಗಳನ್ನು ಹೊಂದಿವೆ ಎಂದರು.
ಗೌತಮ್ ಪ್ರಕಾರ, ಬಯೋ ಡಿಸೈನ್‌ನ ರೆಸ್ಪಿರ್‌ಎಐಡಿ ಎಂಬ ಪೊರ್ಟಬಲ್(ಸಾಗಿಸಬಹುದಾದ) ವೆಂಟಿಲೇಟರ್ ಕೈಯಿಂದ ನಿರ್ವಹಿಸಬೇಕಾದ ವೆಂಟಿಲೇಟರ್ ಗೆ ವಿಶ್ವಾಸಾರ್ಹವಾದ ಪರ್ಯಾಯವಾಗಿದೆ.
ವಾತಾಯನವನ್ನು ಸುಲಭಗೊಳಿಸುವುದು
ಆದಿತ್ಯ ಪಸುಪುಲೆಟಿ ಮತ್ತು ಅವರ ಸಹೋದರ ಗೌತಮ್ ಪಸುಪುಲೆಟಿ 2017 ರಲ್ಲಿ ಸ್ಥಾಪಿಸಿದ ಬಯೋಡಿಸೈನ್ ಭಾರತಕ್ಕೆ ಅಗ್ಗದ ವಾತಾಯನದ ಸೌಲಭ್ಯ ನೀಡುವ ಗುರಿ ಹೊಂದಿದೆ. ಭಾರತದಲ್ಲಿ ವೆಂಟಿಲೇಟರ್‌ಗಳಿಲ್ಲದೆ ಹಲವು ರೋಗಿಗಳು ಪ್ರಾಣಕಳೆದುಕೊಳ್ಳುವುದನ್ನು ನೋಡಿ ಸಹೋದರರು ಸ್ಟಾರ್ಟಪ್ ಪ್ರಾರಂಭಿಸಿದರು.
ಗೌತಮ್ ಪ್ರಕಾರ, ಬಯೋಡಿಸೈನ್ ನ ಸಾಧನವಾದ ರೆಸ್ಪರ್‌ಎಐಡಿ ಒಂದು ಯಾಂತ್ರಿಕ ವೆಂಟಿಲೇಟರ್ ಆಗಿದ್ದು, ಅದು ಅಂಬು ಬ್ಯಾಗ್ ಅಥವಾ ಮ್ಯಾನುವಲ್ ವೆಂಟಿಲೇಟರ್‌ಗಳಿಂದುಂಟಾಗುವ ಅಸ್ಥಿರತೆಯನ್ನು ನಿವಾರಿಸುತ್ತದೆ.
ಸಾಧನವು ಮಧ್ಯಂತರ ಧನಾತ್ಮಕ ಒತ್ತಡದ ವಾತಾಯನವನ್ನು ಒದಗಿಸುತ್ತದೆ ಮತ್ತು ಅದರ ಪೋರ್ಟಬಲ್ ಗಾತ್ರವು ಆರೋಗ್ಯ ವೃತ್ತಿಪರರಿಗೆ ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ.
ಅಂಬು ಬ್ಯಾಗ್ ಅಥವಾ ಹಸ್ತಚಾಲಿತ ಪುನರುಜ್ಜೀವನಗೊಳಿಸುವಿಕೆ ಅಥವಾ ಸ್ವಯಂ-ಉಬ್ಬಿಕೊಳ್ಳುವ ಚೀಲವು ಕೈಯಲ್ಲಿ ಹಿಡಿಯುವ ಸಾಧನವಾಗಿದ್ದು, ಇದನ್ನು ರೋಗಿಗಳಿಗೆ ಸಕಾರಾತ್ಮಕ ಒತ್ತಡದ ವಾತಾಯನವನ್ನು ಒದಗಿಸಲು ಬಳಸಲಾಗುತ್ತದೆ. ಆದಾಗ್ಯೂ, ಗೌತಮ್ ಪ್ರಕಾರ, ಅಂತಹ ಕೈಯಿಂದ ನಿರ್ವಹಿಸಬೇಕಾದಂತಹ ವಾತಾಯನ ವ್ಯವಸ್ಥೆಯು ಅಸಮಂಜಸವಾಗಬಹುದು ಮತ್ತು ಬಳಲಿಕೆಗೆ ಕಾರಣವಾಗಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸಿವೆ ಎನ್ನುತ್ತಾರೆ.
"ನಮ್ಮ ಸಾಧನವು ರೋಗಿಗಳನ್ನು ಸ್ಥಿರಗೊಳಿಸಲು ಆಸ್ಪತ್ರೆಗಳು ಆಂಬ್ಯುಲೆನ್ಸ್ ಮತ್ತು ತುರ್ತು ವಾರ್ಡ್‌ಗಳಲ್ಲಿ ಬಳಸಬಹುದು. ಸಾಧನವು ಮಧ್ಯಂತರ ಧನಾತ್ಮಕ ಒತ್ತಡದ ವಾತಾಯನವನ್ನು ಒದಗಿಸುತ್ತದೆ ಮತ್ತು ವೈದ್ಯ ಅಥವಾ ಅರೆವೈದ್ಯರು ನಿಗದಿಪಡಿಸಿದಂತೆ ನಿರ್ದಿಷ್ಟ ಉಸಿರಾಟದ ಪ್ರಮಾಣವನ್ನು ನೀಡುತ್ತದೆ. ಇದು ಸೂಕ್ತವಾಗಿ ವಾತಾಯನವನ್ನು ಒದಗಿಸುತ್ತದೆ ಮತ್ತು ರೋಗಿಯನ್ನು ಸ್ಥಿರಗೊಳಿಸುತ್ತದೆ,” ಎಂದು ಗೌತಮ್ ಹೇಳಿದರು.
ಒಂದು ಸಾಧನವನ್ನು ಬಹುರೋಗಿಗಳಿಗೆ ಬಳಸಲಾಗುವುದಿಲ್ಲ ಎಂದು ಗೌತಮ್ ಸ್ಪಷ್ಟಪಡಿಸಿದರು.
ಸಾಧನಕ್ಕೆ ಬೇಡಿಕೆ
ಈ ತಿಂಗಳ ಆರಂಭದಲ್ಲಿ, ಬಯೋಡಿಸೈನ್ ಅನ್ನು ಬೆಂಗಳೂರು ಮೂಲದ ಇನ್ಕ್ಯುಬೇಟರ್ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಪ್ಲಾಟ್‌ಫಾರ್ಮ್ಸ್ (ಸಿ-ಸಿಎಎಮ್‌ಪಿ) ನಿಯೋಜನೆಗೆ ಸಿದ್ಧವಿರುವ ಕೊರೊನಾವೈರಸ್ ಅನ್ವೇಷಣೆ ಎಂದು ನಾಮನಿರ್ದೇಶನ ಮಾಡಿದೆ.
"ನಾವು ಕೆಲವು ಪ್ರಯೋಗಗಳನ್ನು ಮಾಡಿದ್ದೇವೆ, ಅದು ಉತ್ಪನ್ನಕ್ಕೆ ಭಾರಿ ಬೇಡಿಕೆಯನ್ನು ಉಂಟುಮಾಡಿದೆ. ಉದಾಹರಣೆಗೆ, ಕೇರಳದ ವಿತರಕರೊಬ್ಬರು 1,000 ವೆಂಟಿಲೇಟರ್‌ಗಳನ್ನು ಒದಗಿಸುವಂತೆ ಕೇಳುತ್ತಿದ್ದಾರೆ,” ಎಂದರು ಗೌತಮ್.
ಸ್ಟಾರ್ಟಪ್ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಉತ್ಪಾದನಾ ಪ್ರಕ್ರಿಯೆಯನ್ನು ಹೆಚ್ಚಿಸಲು ಹೂಡಿಕೆದಾರರು ಅಥವಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯನ್ನು ಹುಡುಕುತ್ತಿದೆ ಎಂದು ಅವರು ಹೇಳಿದರು.
"ಪ್ರಸ್ತುತ, ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ (ಬಿಐಆರ್‌ಎಸಿ) ನಮಗೆ ಬೆಂಬಲ ನೀಡುತ್ತಿದೆ. ನಮ್ಮಲ್ಲಿ ಸಂಶೋಧನಾ ಪ್ರಯೋಗಾಲಯವಿದೆ ಮತ್ತು ಈಗ ಉತ್ಪಾದನಾ ಮತ್ತು ಜೋಡಣೆ ಸೌಲಭ್ಯವನ್ನು ಸ್ಥಾಪಿಸುತ್ತಿದ್ದೇವೆ,” ಎಂದು ಗೌತಮ್ ಹೇಳಿದರು.