ಹಿಂದೂ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು
ಲಾಕ್ ಡೌನ್ ಹಿನ್ನಲೆಯಲ್ಲಿ ವಾಹನ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಇಂದೋರಿನ ಮೃತ ದ್ರೌಪದಿ ಬಾಯಿಯವರ ಅಂತ್ಯ ಸಂಸ್ಕಾರಕ್ಕೆ ಅವರ ಪುತ್ರನ ಜೊತೆ ಅಕ್ಕಪಕ್ಕದ ಮನೆಯ ಮುಸ್ಲಿಂ ಯುವಕರು ನೆರವಾಗಿದ್ದಾರೆ.
ಭಾರತವನ್ನು ಕರಗಿಸುವ ಮೂಸೆ ಎಂದು ಸುಮ್ಮನೆ ಕರೆದಿಲ್ಲ. ಹಲವು ಜಾತಿ ಮತಗಳು ಹಲವು ಭಾಷೆ ಸಂಸ್ಕೃತಿಯು ಒಂದೆಡೆಯಲ್ಲಿ ಸೇರಿ ವೈವಿಧ್ಯಮಯವಾದ ನಾಡು ನುಡಿ ಸಂಸ್ಕೃತಿ ನಮ್ಮದಾಗಿದ್ದು, ಎಲ್ಲಾ ವಿಭಿನ್ನತೆಗೂ ಮೀರಿ ನಾವು ಏಕತೆಯನ್ನು ಸಾಧಿಸಿದ್ದೇವೆ.
ಹಿಂದೂ…ಮುಸ್ಲಿಂ… ಕ್ರೈಸ್ತ… ಇವೆಲ್ಲವೂ ಕೇವಲ ವಿವಿಧ ಮತಗಳ ಹೆಸರಷ್ಟೇ ಮೂಲತಃ ನಮ್ಮೆಲ್ಲರಲ್ಲೂ ಜಾಗ್ರತವಾಗಿರುವುದು ಮಾನವೀಯತೆ. ಈಗ ನಾವು ಹೇಳಹೊರಟಿರುವುದು ಈ ರೀತಿ ಮತಗಳ ಅಂತರದ ಎಲ್ಲೆ ಮೀರಿ ತಮ್ಮ ಪಕ್ಕದ ಮನೆಯಲ್ಲಿನ ಮೃತ ಹಿಂದೂ ಮಹಿಳೆಯ ಶವಸಂಸ್ಕರಕ್ಕೆ ನೆರವಾದ ಮುಸ್ಲಿಂ ಯುವಕರ ಬಗ್ಗೆ.
ಮಧ್ಯಪ್ರದೇಶದ ಇಂದೋರ್ ನ ದಕ್ಷಿಣ ಭಾಗದ ತೋಡದಲ್ಲಿ ತಮ್ಮ ಹಿರಿಯ ಮಗನೊಂದಿಗೆ ವಾಸಿಸುತ್ತಿದ್ದ ಪಾರ್ಶ್ವವಾಯು ಪೀಡಿತರಾಗಿದ್ದ 65 ವರ್ಷದ ದ್ರೌಪದಿ ಬಾಯಿ, ನಿನ್ನೆ ಕೊನೆಯುಸಿರೆಳೆದಿದ್ದಾರೆ.
ಇಂದು ದೇಶವೇ ಕೊರೊನಾ ವೈರಸ್ ವಿರುದ್ಧ ಹೋರಾಡಲು 21 ದಿನಗಳ ಲಾಕ್ ಡೌನ್‌ಗೆ ಶರನಾಗಿದೆ. ಈ ಹಿನ್ನಲೆಯಲ್ಲಿ ವಾಹನ ವ್ಯವಸ್ಥೆನ್ನು ಜನಸಂಚಾರವನ್ನು ನಿರ್ಬಂಧಿಸಲಾಗಿದೆ.
ಮೃತ ದ್ರೌಪದಿ ಬಾಯಿ ಅವರ ಮಕ್ಕಳು ಯಾವುದೇ ಸಂಬಂಧಿಕರ ಸಹಕಾರವಿಲ್ಲದೆ ಅಂತ್ಯ ಸಂಸ್ಕಾರ ನಡೆಸುವ ಕುರಿತು ಕಂಗಾಲಾದ ಸಮಯದಲ್ಲಿ, ಅವರ ಮನೆಯ ಪಕ್ಕದ ಮುಸ್ಲಿಂ ಸಮುದಾಯದ ಯುವಕರು ಸಹಾಯ ಹಸ್ತ ಚಾಚಿದ್ದಾರೆ.
ಮೊದಲಿನಿಂದಲೂ ತಾಯಿ ದ್ರೌಪದಿ ಬಾಯಿ ಅವರು ನಮ್ಮ ಮೇಲೆ ತೋರಿಸಿದ ಪ್ರೀತಿ ಕಾಳಜಿ ಅಪಾರವಾದದ್ದು ಆದ್ದರಿಂದ ಇದು ನಮ್ಮ ಕರ್ತವ್ಯವಾಗಿದೆ ಎಂದು ಈ ಯುವಕರು ನಂಬಿದ್ದಾರೆ. ವಾಹನ ಸೌಲಭ್ಯವಿಲ್ಲದೆ, ಯಾವುದೇ ದೂರದ ಸಂಬಂಧಿಕರು ಬರಲಾರದೆ ಇದ್ದ ಸಂದರ್ಭದಲ್ಲಿ ಈ ಯುವಕರು ಮೃತ ದ್ರೌಪದಿ ಬಾಯಿಯವರ ಪಾರ್ತೀವ ಶರೀರವನ್ನು ಸುಮಾರು 2.5 ಕಿಮೀ ದೂರ ಹೊತ್ತು ಶ್ಮಶಾನಕ್ಕೆ ತಲುಪಿಸಿ ಅವರ ಪುತ್ರರಿಗೆ ತಾಯಿಯ ಶವಸಂಸ್ಕರಕ್ಕೆ ನೆರವಾಗಿದ್ದಾರೆ, ವರದಿ ಎನ್‌ಡಿಟಿವಿ.
ಮುಸ್ಲಿಂ ಯುವಕರು ಶವವನ್ನು ರಸ್ತೆಯಲ್ಲಿ ಹೊತ್ತು ತರುತ್ತಿರುವ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ದ ಭಾರತದ ಸಂಕೇತವಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಕಮಲ ನಾಥ್, ಡೆಕ್ಕನ್ ಹೆರಾಲ್ಡ್ ಜೊತೆ ಮಾತನಾಡುತ್ತಾ,
"ಮುಸ್ಲಿಂ ಸಮುದಾಯದ ವ್ಯಕ್ತಿಗಳು ಹಿಂದೂ ವೃದ್ಧೆಯ ಇಬ್ಬರು ಗಂಡು ಮಕ್ಕಳೊಂದಿಗೆ ಅಂತಿಮ ವಿಧಿಗಳಿಗಾಗಿ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡಿರುವುದು ನಿಜಕ್ಕೂ ಪ್ರಶಂಸನೀಯ. ಇದು ಸಮಾಜದಲ್ಲಿ ಒಂದು ಉದಾಹರಣೆಯಾಗಿದೆ. ಇದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅಂತಹ ದೃಶ್ಯಗಳು ಪರಸ್ಪರ ಪ್ರೀತಿ ಮತ್ತು ಸಹೋದರತೆಯನ್ನು ಹೆಚ್ಚಿಸುತ್ತವೆ," ಎಂದು ಅವರು ಹೇಳಿದರು.
ಎಲ್ಲರ ಮನೆಯಲ್ಲಿಯೂ ಸುಖ ದುಃಖ ಸಾಮಾನ್ಯ, ಹುಟ್ಟು ಸಾವಿಗೆ ಮತ, ಧರ್ಮ, ಜಾತಿ ವರ್ಣಗಳ ಬೇಧವಿಲ್ಲ. ಮಾನವೀಯತೆಗೂ ಮೀರದ ಯಾವುದೇ ಧರ್ಮ ಜಾತಿಗಳಿಲ್ಲ ಎಂಬುದಕ್ಕೆ ಇಂದೋರ್‌ನ ಈ ಘಟನೆ ಸಾಕ್ಷಿಯಾಗಿದೆ. ಈ ಪ್ರಜ್ಞೆ ಎಲ್ಲರಲ್ಲೂ ಜಾಗ್ರತವಾಗಲಿ ಎಂದು ಆಶಿಸೋಣ.