ಜೇಮ್ಸ್ ಡೈಸನ್ ಪ್ರಶಸ್ತಿ ಗೆದ್ದ ಎನ್ಐಡಿ ವಿದ್ಯಾರ್ಥಿಯ ಶೂನ್ಯ ತ್ಯಾಜ್ಯ ಉತ್ಪಾದನಾ ಪ್ರಕ್ರಿಯೆ
ಉತ್ಪಾದನಾ ತ್ಯಾಜ್ಯವನ್ನು ಇತರ ಉತ್ಪನ್ನಗಳನ್ನು ತಯಾರಿಸಲು ಬಳಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಎನ್ಐಡಿ ವಿದ್ಯಾರ್ಥಿ ಶಶಾಂಕ್ ನಿಮ್ಕಾರ್ ಅವರಿಗೆ ಜೇಮ್ಸ್ ಡೈಸನ್ ಇಂಡಿಯಾ ಪ್ರಶಸ್ತಿ ನೀಡಲಾಗಿದೆ.
ಕಚ್ಚಾ ವಸ್ತುಗಳನ್ನು ಗ್ರಾಹಕ ಉತ್ಪನ್ನಗಳಾಗಿ ಪರಿವರ್ತಿಸುವ ವೇಳೆ ಅದರ ಜತೆಗೆ ಹೆಚ್ಚಿನ ಮಟ್ಟದಲ್ಲಿ ತ್ಯಾಜ್ಯವು ಸೃಷ್ಟಿಯಾಗುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಡಿಸೈನ್(ಎನ್‌ಐಡಿ) ಅಹಮದಾಬಾದ್‌ನ ಶಶಾಂಕ ನಿಮ್ಕಾರ್ ಈ ರೀತಿಯ ತ್ಯಾಜ್ಯವನ್ನು ಉಪಯೋಗಿಸಿ ಇತರ ಉತ್ಪನ್ನಗಳನ್ನು ತಯಾರಿಸುವ ಮಾರ್ಗೋಪಾಯವೊಂದನ್ನು ಕಂಡುಕೊಂಡಿದ್ದಾರೆ.
ಅದರ ಹೆಸರು ‘ಅರ್ಥ್ ತತ್ವಾʼ, ಇದು ಇವರಿಗೆ 2020 ನೇ ಸಾಲಿನ ಜೇಮ್ಸ್ ಡೈಸನ್ ಇಂಡಿಯಾ ಪ್ರಶಸ್ತಿಯನ್ನು ತಂದುಕೊಟ್ಟಿದೆ ಎಂದು ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ.
ಜೇಮ್ಸ್ ಡೈಸನ್ ಪ್ರಶಸ್ತಿ ಅಂತರರಾಷ್ಟ್ರೀಯ ವಿನ್ಯಾಸ ಪ್ರಶಸ್ತಿಯಾಗಿದ್ದು ಅದು ಮುಂದಿನ ಪೀಳಿಗೆಯ ವಿನ್ಯಾಸ ಎಂಜಿನೀಯರ್‌ಗಳನ್ನು ಇದು ಪ್ರೋತ್ಸಾಹಿಸುತ್ತದೆ ಮತ್ತು ಪ್ರೇರೇಪಿಸುತ್ತದೆ.
ವಸ್ತುಗಳನ್ನು ತಯಾರಿಸುವಾಗ ಸೃಷ್ಟಿಯಾಗುವ ಗ್ರಾಗ್ ಅಥವಾ ಕ್ಲೇ ಎಂದು ಕರೆಯಲ್ಪಡುವ ಸಿರಾಮಿಕ್ ತ್ಯಾಜ್ಯದಿಂದ ನಿಮ್ಕಾರ್ ಹೊಚ್ಚ ಹೊಸ ವಸ್ತುಗಳನ್ನು ತಯಾರಿಸಿದ್ದಾರೆ. ಈ ಉತ್ಪನ್ನಗಳ ವಿಶೇಷತೆಯೆಂದರೆ ಇವುಗಳನ್ನು ಶೂನ್ಯ ತ್ಯಾಜ್ಯದ ವಿಧಾನದಲ್ಲಿ ತಯಾರಿಸಬಹುದು ಮತ್ತು ಹಲವು ಬಾರಿ ಮರುಬಳಕೆ ಮಾಡಬಹುದಾಗಿದೆ.
ಈ ಅನ್ವೇಷಣೆ ನೈಸರ್ಗಿಕ ಸಂಪನ್ಮೂಲಗಳಿಗಾಗಿ ಮಾಡುವ ಗಣಿ ಚಟುವಟಿಕೆಗಳನ್ನು ಮತ್ತು ತ್ಯಾಜ್ಯ ಎಸೆಯುವಿಕೆಯನ್ನು 60 ಪ್ರತಿಶತದಷ್ಟು ಕಡಿಮೆ ಮಾಡಬಹುದು ಎನ್ನುತ್ತಾರೆ ಅವರು.
"ನಾವು ‘ಗ್ರಾಗ್' ಎಂದು ಕರೆಯಲ್ಪಡುವ ಈ ತ್ಯಾಜ್ಯವನ್ನು 60-70 ಪ್ರತಿಶತದಷ್ಟು ಕಚ್ಚಾ ವಸ್ತುಗಳ ಪ್ರಮುಖ ಭಾಗವಾಗಿ ಬಳಸುತ್ತೇವೆ, ಮತ್ತು ಜೇಡಿಮಣ್ಣನ್ನು ಸೇರಿಸುತ್ತೇವೆ," ಎಂದು ನಿಮ್ಕಾರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಶಶಾಂಕ್ ಅವರ ಈ ಅನ್ವೇಷಣೆ ಅವರಿಗೆ 2020ನೇ ಸಾಲಿನ ಜೇಮ್ಸ್ ಡೈಸನ್ ಪ್ರಶಸ್ತಿ ತಂದುಕೊಟ್ಟಿರುವುದಲ್ಲದೆ, £2,000 (1.90 ಲಕ್ಷ ರೂ) ನಗದು ಬಹುಮಾನವನ್ನು ಪಡೆಯುವಂತೆ ಮಾಡಿದೆ. ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುವಾಗ ಯೋಜನೆಯ ಭಾಗವಾಗಿ ಈ ಅನ್ವೇಷಣೆಯ ಬೀಜ ಅವರಲ್ಲಿ ಮೊಳಕೆಯೊಡೆದಿತ್ತು.
“ತ್ಯಾಜ್ಯವನ್ನು ಅಮೂಲ್ಯವಾದ ಸಂಪನ್ಮೂಲವಾಗಿ ಪರಿವರ್ತಿಸುವುದು ನನಗಿಷ್ಟವಾದ ಆಲೋಚನೆ. ವಿನ್ಯಾಸಗಳ ಮೇಲೆ ಕೆಲಸ ಮಾಡುವಾಗ ನನಗೆ ಉತ್ಪನ್ನಗಳು ಮತ್ತು ವಸ್ತುಗಳು ಕೊನೆಗೆ ಏನಾಗುತ್ತವೆ ಎಂಬ ಯೋಚನೆ ಕಾಡುತ್ತಿತ್ತು. ಈ ಯೋಜನೆಯಲ್ಲಿ ನನಗೆ ನಾನೇ “ಕೇವಲ ಕ್ರಿಯಾತ್ಮಕ ಅಥವಾ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಹೇಗೆ ನಾನು ಇದಕ್ಕೆ ಮೌಲ್ಯವನ್ನು ಸೇರಿಸಬಹುದು” ಎಂದು ಕೇಳಿಕೊಂಡೆ. ಹೀಗೆ ಈ ಯೋಜನೆ ರೂಪಗೊಂಡಿತು,” ಎಂದರು ಶಶಾಂಕ.