ಪ್ರತಿದಿನ ವೆಂಬನಾಡ್ ಕೆರೆಯನ್ನು ಸ್ವಚ್ಛಗೊಳಿಸುವ 69ರ ಪಾರ್ಶ್ವವಾಯು ಪೀಡಿತ ರಾಜಪ್ಪನ್
ಪಾರ್ಶ್ವವಾಯುವಿಗೆ ಒಳಗಾದ ಎನ್.ಎಸ್.ರಾಜಪ್ಪನ್ ಪ್ರತಿದಿನ ವೆಂಬನಾಡ್ ಸರೋವರದಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಜೀವನ ಸಾಗಿಸುವುದರ ಜತೆಗೆ ಪರಿಸರವನ್ನು ಸ್ವಚ್ಛವಾಗಿಡುತ್ತಿದ್ದಾರೆ.
ಏಕ-ಬಳಕೆಯ ಪ್ಲಾಸ್ಟಿಕ್ ಆಧುನಿಕ ಜೀವನ ಶೈಲಿಯ ನಂಜಾಗಿ ಪರಿಣಮಿಸಿರುವುದರ ಜತೆಗೆ ಜಲಮೂಲಗಳು ಕಸ ಎಸೆಯುವ ತಾಣಗಳಾಗಿ ಮಾರ್ಪಡುತ್ತಿವೆ. ಸರ್ಕಾರ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಹಲವಾರು ಷರತ್ತುಗಳನ್ನು ಜಾರಿಗೊಳಿಸಿದ್ದರೂ, ಅದರಿಂದಾಗುವ ಪರಿಸರ ಮಾಲಿನ್ಯ ಕಡಿಮೆಯಾಗುತ್ತಿಲ್ಲ.
ಇದರ ನಡುವೆ, 69 ವರ್ಷದ ಎನ್ ಎಸ್ ರಾಜಪ್ಪನ್ ತಮ್ಮ ಮನೆಯ ಸಮೀಪದಲ್ಲಿರುವ ಕೆರೆಯಲ್ಲಿ ಬಿಸಾಡಿದ ಏಕ-ಬಳಕೆಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಕೆರೆಯನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ. ಕೇರಳದ ಕೊಟ್ಟಾಯಮ ಜಿಲ್ಲೆಯವರಾದ ಇವರು ಪ್ರತಿದಿನ ದೋಣಿ ಬಾಡಿಗೆ ಪಡೆದು ವೆಂಬನಾಡ್ ಕೆರೆಯಲ್ಲಿರುವ ಪ್ಲಾಸ್ಟಿಕ್ ಕಸವನ್ನು ತೆಗೆಯುತ್ತಾರೆ.
“ನನಗೆ ಇದರಿಂದ ಹೆಚ್ಚೆನು ಸಿಗುವುದಿಲ್ಲ. ಪೂರ್ತಿ ದೋಣಿಯಷ್ಟು ಪ್ಲಾಸ್ಟಿಕ್ ಬಾಟಲಿಗಳಿದ್ದರು ಅದು 1 ಕೆ.ಜಿ.ಗಿಂತಲೂ ಕಡಿಮೆಯಾಗಿರುತ್ತದೆ. ಆದರೆ ಯಾರೊಬ್ಬರಾದರೂ ಕಸವನ್ನು ತೆಗೆಯಲೆಬೇಕು. ನನ್ನ ಪೂರ್ತಿ ಜೀವನವನ್ನು ಈ ನೀರಿನ ಸುತ್ತಲೆ ಕಳೆದಿದ್ದೇನೆ. ನನ್ನ ಕೈಯಿಂದಾದಷ್ಟು ನಾನು ಮಾಡುತ್ತಿದ್ದೇನೆ,” ಎಂದು ರಾಜಪ್ಪನ್ ದಿ ನ್ಯೂಸ್ ಮಿನಿಟ್‌ಗೆ ಹೇಳಿದರು.
ಚಿಕ್ಕ ವಯಸ್ಸಿನಲ್ಲೆ ರಾಜಪ್ಪನ್ ಪೋಲಿಯೊಮೈಲಿಟಿಸ್ನಿಂದ ಬಳಲುವಂತಾಗಿ, ಮೊನಕಾಲಿನ ಕೆಳಭಾಗ ಪಾರ್ಶ್ವವಾಯುಪೀಡಿತವಾಯಿತು. ಈ ಕಾರಣದಿಂದ ಅವರು ಯಾವ್ಯಾವುದೋ ಕೆಲಸ ಮಾಡುವಂತಾಯಿತು. ಕೆರೆಯನ್ನು ಸ್ವಚ್ಛಗೊಳಿಸುವ ಇವರ ಕೆಲಸ ಕಳೆದ ಅರ್ಧ ದಶಕದಿಂದ ಸಾಗಿದೆ. ದೋಣಿಯನ್ನು ಚಲಾಯಿಸುವುದು ತುಂಬಾ ಸುಲಭವೆನ್ನುತ್ತಾರೆ ಅವರು.
“ನನಗೆ ಮೊದಲಿನಿಂದಲೂ ದೋಣಿ ನಡೆಸುವುದು ಗೊತ್ತು. ನನಗೊಂದು ದೊಡ್ಡ ದೋಣಿ ಬೇಕಾಗಿದೆ, ಅದರಿಂದ ನಾನು ಹೆಚ್ಚು ಸಮಯವನ್ನು ಇಲ್ಲೆ ಕಳೆಯಬಹುದು ಮತ್ತು ಹೆಚ್ಚು ಪ್ಲಾಸ್ಟಿಕ್ ಅನ್ನು ಸಂಗ್ರಹಿಸಬಹುದು,” ಎಂದು ಅವರು ತಿಳಿಸಿದರು.
ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ವಿವಿಧ ಚೀಲಗಳಿಗೆ ತುಂಬಿಡುತ್ತಾರೆ, ನಂತರ ೨, ೩ ತಿಂಗಳಿಗೊಮ್ಮೆ ಸ್ಥಳೀಯ ಸಂಸ್ಥೆ ಅವುಗಳನ್ನು ತೆಗೆದುಕೊಳ್ಳುತ್ತದೆ.
ಲಾಕ್‌ಡೌನ್‌ನಿಂದ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕುಸಿದಿದ್ದು, ಅದರ ಪರಿಣಾಮ ಕೆರೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುವುದು ಕಡಿಮೆಯಾಗಿದೆ. ಕೋವಿಡ್-19 ರಾಜಪ್ಪನ್ ಅವರ ಆದಾಯಕ್ಕೆ ಹೊಡೆತ ನೀಡಿದ್ದರು, ಖುಷಿಯಿಂದಲೆ ಕೆರೆಯನ್ನು ಸ್ವಚ್ಛಗೊಳಿಸುತ್ತಾರೆ.