Bengaluru Tech Summit 2020
View Brand Publisherಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಕರ್ನಾಟಕದ ಪ್ರಮುಖ ತಾಂತ್ರಿಕ ಶೃಂಗಸಭೆಯಾದ ಬೆಂಗಳೂರು ಟೆಕ್ ಸಮ್ಮಿಟ್ 2020 ಈ ಬಾರಿ ವರ್ಚುಅಲ್ ಆಗಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಉದ್ಘಾಟಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಸಿ ಎನ್ ಅಶ್ವಥನಾರಾಯಣ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
“ವಿಜ್ಞಾನ ಮತ್ತು ತಂತ್ರಜ್ಞಾನ ದೇಶವನ್ನು ಬದಲಿಸಬಲ್ಲದು ಎಂದು ಬಲವಾಗಿ ನಂಬಿರುವ ಪ್ರಧಾನಿ ಮೋದಿಯವರು ಬಿಟಿಎಸ್2020 ಅನ್ನು ಉದ್ಘಾಟಿಸಲಿದ್ದಾರೆ ಎಂಬ ವಿಚಾರ ಖುಷಿ ಕೊಡುತ್ತದೆ. ಕೊರೊನಾ ಕಾರಣದಿಂದ ಈ ವರ್ಷ ವರ್ಚುಅಲ್ ಆಗಿ ಸಭೆ ನಡೆಯುತ್ತಿದ್ದರೂ ಹಿಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರಲಿದೆ,” ಎಂದಿದ್ದಾರೆ.
ಕಳೆದ 22 ವರ್ಷದಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಬಿಟಿಎಸ್ ಮೊದಲು 1998ರಲ್ಲಿ ಬೆಂಗಳೂರು ಐಟಿ.ಕಾಂ ಎಂಬ ಹೆಸರಿನಿಂದ ಪ್ರಾರಂಭವಾಗಿತ್ತು. ನಂತರ 2001ರಲ್ಲಿ ಬೆಂಗಳೂರು ಬಯೋ ಎಂಬ ಜೈವಿಕ ತಂತ್ರಜ್ಞಾನ ಸಭೆ ಆರಂಭವಾಯಿತು. 2017 ರಲ್ಲಿ ಇವರೆಡರ ಸಂಗಮವೆ ಬಿಟಿಎಸ್ ಆಗಿ ರೂಪಾಂತರಗೊಂಡಿದೆ.
ನವೆಂಬರ್ 19 ರಿಂದ 21 ರವೆರೆಗೆ ನಡೆಯಲಿರುವ ಬಿಟಿಎಸ್2020 ನಲ್ಲಿ 25 ಕ್ಕೂ ಹೆಚ್ಚು ದೇಶಗಳು, 270 ಕ್ಕೂ ಹೆಚ್ಚು ಸ್ಪೀಕರ್‌ಗಳು, 4000 ಪ್ರತಿನಿಧಿಗಳು ಮತ್ತು 100 ಸ್ಟಾರ್ಟಪ್‌ಗಳು ಭಾಗವಹಿಸಲಿದ್ದು 250 ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. “ನೆಕ್ಸ್ಟ್ ಇಸ್ ನ್ಯೂ” ಎಂಬ ಧ್ಯೇಯದೊಂದಿಗೆ ಬಿಟಿಎಸ್2020 ನಡೆಯಲಿದೆ.
“ನಮ್ಮ ಜನಸಂಖ್ಯೆಯೇ ನಮ್ಮ ಶಕ್ತಿ. ಅದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು. ದೇಶದ ಶೇ. 50 ರಿಂದ 60 ರಷ್ಟು ಜನ ವ್ಯವಸಾಯದಲ್ಲಿ ತೊಡಗಿದ್ದಾರೆ ಆದರೆ ಜಿಎಸ್‌ಡಿಪಿಯಲ್ಲಿ ಅದರ ಕೊಡುಗೆ ಕೇವಲ 16 ಪ್ರತಿಶತವಿದೆ. ಇನ್ನೂ 5 ವರ್ಷದಲ್ಲಿ ಇದು ಶೇ. 30 ಕ್ಕೆ ತಲುಪಬೇಕು. ಅದಕ್ಕೆ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ಅಗತ್ಯವಿದೆ,” ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.
“ಎಲ್ಲವೂ ನಾವು ಮಾಡುವ ಆಲೋಚನೆಗಳ ಮೇಲೆ ಅವಲಂಬಿತವಾಗಿದೆ. ಇನ್ಫೋಸಿಸ್‌ನಂತಹ ದೊಡ್ಡ ಸಂಸ್ಥೆ ಮೊದಲು ಸಣ್ಣ ಸ್ಥಳದಲ್ಲಿ ಆರಂಭವಾಗಿದ್ದು. ಅವರ ಆಲೋಚನೆ ಅವರ ಯೋಚನೆ ಚೆನ್ನಾಗಿತ್ತು. ಯಾವುದೇ ಯಶಸ್ವಿ ಉದ್ಯಮಗಳ ಮೂಲ ಅದರ ಯೋಜನೆಯಾಗಿದೆ. ಅಂತಹ ಯೋಜನೆಗಳಿಗೆ ಬೆಂಗಳೂರು ಟೆಕ್ ಸಮ್ಮಿಟ್ ಒಂದು ವೇದಿಕೆ ಒದಗಿಸಿ ಅವುಗಳಿಗೆ ಬಲ ನೀಡುತ್ತದೆ,” ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಐಟಿ ವಿಷನ್ ಗ್ರೂಪ್‌ನ ಅಧ್ಯಕ್ಷ ಹಾಗೂ ಇನ್ಪೋಸಿಸ್‌ನ ಸಹ-ಸಂಸ್ಥಾಪಕರಾದ ಗೋಪಾಲಕೃಷ್ಣನ್ ಅವರು, “ಸಾಂಕ್ರಾಮಿಕದ ಈ ಕಾಲದಲ್ಲಿ ಭಾರತದ ಐಟಿ ಉದ್ಯಮ ಕೇವಲ ಉಳಿಯದೆ ಬೆಳೆಯುತ್ತ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದೆ,” ಎಂದರು.
ಬಿಟಿಎಸ್ ಅಂತಹ ಐಟಿ, ಬಿಟಿ ಉದ್ಯಮಗಳಿಗೆ ತಮ್ಮ ಹೊಸ ಆವಿಷ್ಕಾರಗಳನ್ನು, ಪರಿಹಾರಗಳನ್ನು ಪ್ರಸ್ತುತಪಡಿಸಲು ಒಂದು ಉತ್ತಮ ವೇದಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಬಿಟಿಎಸ್ ಉತ್ತಮವಾಗುತ್ತಾ ಹೋಗುತ್ತಿದೆ ಎಂದು ತಿಳಿಸಿದರು.
ಬಯೋಕಾನ್‌ನ ಕಿರಣ್ ಮಜುಂದಾರ್ ಶಾಹ್ ಮಾತನಾಡುತ್ತಾ, “ಕೋವಿಡ್ 19 ಎಲ್ಲರ ಗಮನವನ್ನು ಜೀವ ವಿಜ್ಞಾನದೆಡೆಗೆ ತಿರುಗಿಸಿದೆ ಹೇಗೆ ನಾವು ಅದರ ಉಪಯೋಗಬಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಗಮನ ಹರಿಸುವಂತೆ ಮಾಡಿದೆ. ಈ ವಿಷಯದ ಬಗ್ಗೆ ಬಿಟಿಎಸ್ ಹೆಚ್ಚಿನ ಬೆಳಕು ಚೆಲ್ಲಲಿದೆ,” ಎಂದರು.