ಔಷಧ ತಲುಪಿಸುವುದಕ್ಕಾಗಿ 420 ಕಿ.ಮೀ ದೂರವನ್ನು ಬೈಕ್‌ನಲ್ಲಿ ಕ್ರಮಿಸಿದ ಬೆಂಗಳೂರಿನ ಕಾನ್ಸಟೇಬಲ್

ಬೆಂಗಳೂರಿನ ಹೆಡ್‌ ಕಾನ್ಸಟೇಬಲ್‌ ಎಚ್‌ ಕುಮಾರಸ್ವಾಮಿ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿರುವ ಸಮಯದಲ್ಲಿ ಕ್ಯಾನ್ಸರ್‌ ರೋಗಿಗೆ ಸಹಾಯ ಮಾಡಲು ಧಾರವಾಡದವರೆಗೂ ಬೈಕ್‌ ನಲ್ಲಿ ಪ್ರಯಾಣಿಸಿದ್ದಾರೆ.

ಔಷಧ ತಲುಪಿಸುವುದಕ್ಕಾಗಿ 420 ಕಿ.ಮೀ ದೂರವನ್ನು ಬೈಕ್‌ನಲ್ಲಿ ಕ್ರಮಿಸಿದ ಬೆಂಗಳೂರಿನ ಕಾನ್ಸಟೇಬಲ್

Friday April 17, 2020,

2 min Read

ಕೊರೊನಾವೈರಸ್‌ ಮಹಾಮಾರಿ ಜಗತ್ತಿನಾದ್ಯಂತ ಭಯ ಹುಟ್ಟಿಸಿದೆ. ಸೋಂಕು ತಗಲುವ ಭಯದಲ್ಲಿ ಜನರು ಮನೆಯಲ್ಲೆ ಕಾಲಕಳೆಯುತ್ತಿದ್ದಾರೆ.


ಭಾರತದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರುತ್ತಲಿದ್ದು, ಅದನ್ನು ತಡೆಯುವುದಕ್ಕಾಗಿ ಸರ್ಕಾರ ಲಾಕ್‌ಡೌನ್‌ ಅನ್ನು ಮೇ 3 ರ ವರೆಗೂ ವಿಸ್ತರಿಸಿದೆ.


ಇದೆಲ್ಲದರ ನಡುವೆ ಹಲವು ಜನರು, ಸರ್ಕಾರೇತರ ಸಂಸ್ಥೆಗಳು ತಮ್ಮ ಜೀವವನ್ನೆ ಮುಡಿಪಾಗಿಟ್ಟು ಊಟ, ವಸತಿ ಇಲ್ಲದವರನ್ನು ತಲುಪಿ ತಮ್ಮ ಕೈಲಾದ ಸಹಾಯ ಮಾಡುತ್ತಿವೆ.


ಧಾರವಾಡದಲ್ಲಿ ಎಚ್‌ ಕುಮಾರಸ್ವಾಮಿ(ಎಡ) ಹಾಗೂ ಉಮೇಶ(ಬಲ) (ಚಿತ್ರಕೃಪೆ: ದಿ ಟೆಲಿಗ್ರಾಫ್‌ ಇಂಡಿಯಾ)




ಇಲ್ಲಿದ್ದಾರೆ ಕ್ಯಾನ್ಸರ್‌ ನಿಂದ ಬಳಲುತ್ತಿರುವ ರೋಗಿಗೆ ಸಹಾಯ ಮಾಡಲು ಬೆಂಗಳೂರಿನಿಂದ ಧಾರವಾಡಕ್ಕೆ 420 ಕಿಮೀ ದೂರವನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿ ಔಷಧಿ ನೀಡಿದ 47ರ ಬೆಂಗಳೂರಿನ ಹೆಡ್‌ ಕಾನ್ಸ್ಟೆಬಲ್‌ ಎಚ್‌ ಕುಮಾರಸ್ವಾಮಿ.


ಸುದ್ದಿ ವಾಹಿನಿಯ ಮಾಹಿತಿಯಿಂದ ರೋಗಿಯು ಕಷ್ಟದಲ್ಲಿದ್ದು, ಅವರಿಗೆ ಔಷಧಿಯ ಅಗತ್ಯವಿದೆಯೆಂದು ಕುಮಾರಸ್ವಾಮಿಯವರಿಗೆ ತಿಳಿಯಿತು. ರೋಗಿಯು ಸಾಮಾನ್ಯವಾಗಿ ತಮ್ಮ ಔಷಧಿಗಳನ್ನು ಬೆಂಗಳೂರಿನ ಆಸ್ಪತ್ರೆಯೊಂದರಿಂದ ಕೋರಿಯರ್‌ ಮಾಡಿಕೊಂಡು ಪಡೆಯುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದ ಅವರಿಗೆ ಔಷಧಿ ತಲುಪಿರಲಿಲ್ಲ.


ಕುಮಾರಸ್ವಾಮಿಯವರು ಆ ಸುದ್ದಿಯನ್ನು ಬಿತ್ತರಿಸಿದ್ದ ಸುದ್ದಿ ವಾಹಿನಿಯ ಕಛೇರಿಗೆ ತೆರಳಿ, ರೋಗಿಯ ವಿವರಗಳನ್ನು ಪಡೆದರು. ರೋಗಿಯ ಹೆಸರು ಉಮೇಶ ಎಂದು ತಿಳಿಯಿತು. ನಂತರ ಆಸ್ಪತ್ರೆಗೆ ತೆರಳಿ ಉಮೇಶ ಅವರಿಗೆ ಬೇಕಾದ ಔಷಧಿಗಳನ್ನು ತೆಗೆದುಕೊಂಡು ಶನಿವಾರ ಮುಂಜಾನೆ 4.30 ಕ್ಕೆ ಧಾರವಾಡಕ್ಕೆ ತಮ್ಮ ಹೊಂಡಾ ಆಕ್ಟೀವಾ ವಾಹನದಲ್ಲಿ ತೆರಳಲು ಸಜ್ಜಾದರು. ಅವರು ಕ್ರಮಿಸಿಬೇಕಾದ ದೂರ ಬರೋಬ್ಬರಿ 420 ಕಿಮೀ ಆಗಿತ್ತು.


“ನಾನೊಬ್ಬ ಪೋಲಿಸ್‌ ಕಾನ್ಸ್ಟೆಬಲ್‌ ಆಗಿದ್ದರೂ, ನಾನು ಏಕೆ ಹೋಗುತ್ತಿರುವ ಎಂದು ವಿವರಿಸಲು 6 ಪೋಲಿಸ್‌ ಚೆಕ್‌ ಪಾಯಿಂಟ್‌ಗಳಲ್ಲಿ ನಿಲ್ಲಬೇಕಾಯಿತು,” ಎಂದರು ಕುಮಾರಸ್ವಾಮಿ.


ಮಧ್ಯಾಹ್ನ 2.30 ಕ್ಕೆ ರೋಗಿಯ ಮನೆಗೆ ತಲುಪಿದರು. ಎರಡು ಗಂಟೆ ಅವರ ಜೊತೆ ಇದ್ದು 4.30 ಕ್ಕೆ ಬೆಂಗಳೂರಿನ ದಾರಿ ಹಿಡಿದರು. ಆ ರಾತ್ರಿ ಚಿತ್ರದುರ್ಗದಲ್ಲಿ ವಸತಿ ಮಾಡಿ ಮರುದಿನ ಬೆಳಿಗ್ಗೆ 10.30 ಕ್ಕೆ ಬೆಂಗಳೂರು ತಲುಪಿದರು.


“ನನ್ನ ಬಳಿಯಿದ್ದ ಔಷಧಿಗಳೆಲ್ಲವೂ ಖಾಲಿಯಾಗುತ್ತಿರುವುದು ಮತ್ತು ಅದನ್ನು ತರಲು ನನ್ನ ಕುಟುಂಬದವರು ಬೆಂಗಳೂರಿಗೆ ಲಾಕ್‌ಡೌನ್‌ ಕಾರಣದಿಂದ ಹೋಗಲಾಗದಿರುವುದು ನನಗೆ ಚಿಂತೆ ತರಿಸುತ್ತಿತ್ತು. ನನ್ನ ಔಷಧಿಗೊಸ್ಕರ ಕುಮಾರಸ್ವಾಮಿ ಅಷ್ಟು ದೂರ ಪ್ರಯಾಣಿಸಬೇಕಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ,” ಎಂದು ಉಮೇಶ ದಿ ಟೆಲಿಗ್ರಾಫ್‌ ಇಂಡಿಯಾ ಗೆ ಹೇಳಿದರು.


ಕಳೆದ 22 ವರ್ಷಗಳಿಂದ ಕುಮಾರಸ್ವಾಮಿಯವರು ಪೋಲಿಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಅವರನ್ನು ನಗರ ಪೋಲಿಸ್‌ ಕಮೀಷನರ್‌ ಕಛೇರಿಯ ನಿಯಂತ್ರಣಾ ಕೊಠಡಿಯಲ್ಲಿ ನಿಯೋಜಿಸಲಾಗಿದೆ. ಇವರಿಗೊಬ್ಬ ಮಗನಿದ್ದು, ಅವನು 12 ನೇ ತರಗತಿಯಲ್ಲಿ ಓದುತ್ತಿದ್ದಾನೆ.


“ಉಮೇಶ ಅವರ ಔಷಧಿಗಳು ಶುಕ್ರವಾರ ರಾತ್ರಿ ಖಾಲಿಯಾಗಿದ್ದವು. ಸರಿಯಾದ ಸಮಯಕ್ಕೆ ಔಷಧಿಯನ್ನು ತಲುಪಿಸಿದ್ದಕ್ಕೆ ನನಗೆ ಖುಷಿಯಿದೆ,” ಎಂದರು ಕುಮಾರಸ್ವಾಮಿ, ವರದಿ ಡೆಕ್ಕನ್‌ ಹೆರಾಲ್ಡ್‌.