ಭಿಕ್ಷುಕರ ಪಾಲಿಗೆ ವರವಾದ ಪುಣೆಯ ಈ ವೈದ್ಯ ದಂಪತಿ

ಡಾ.ಅಭಿಜಿತ್ ಸೋನವಾನೆ ಮತ್ತು ಅವರ ಪತ್ನಿ 160ಕ್ಕೂ ಹೆಚ್ಚು ಭಿಕ್ಷುಕರಿಗೆ ಕಣ್ಣಿನ ಪೊರೆಯ ಚಿಕಿತ್ಸೆ ನೀಡಿದ್ದು ಮತ್ತು 50 ಹಿರಿಯ ಭಿಕ್ಷುಕರಿಗೆ ಭಿಕ್ಷಾಟನೆಯನ್ನು ತ್ಯಜಿಸುವಂತೆ ಮಾಡುವಲ್ಲಿ ಸಹಕರಿಸಿದ್ದಾರೆ.

ಭಿಕ್ಷುಕರ ಪಾಲಿಗೆ ವರವಾದ ಪುಣೆಯ ಈ ವೈದ್ಯ ದಂಪತಿ

Monday August 05, 2019,

4 min Read

q

ಡಾ ಅಭಿಜಿತ್ ಸೋನವಾನೆ ಮತ್ತು ಡಾ.ಮನಿಷಾ ಸೋನವಾನೆ


ಪುಣೆ ನಗರದ ಬೀದಿಗಳಲ್ಲಿ ವೈದ್ಯರು ಆಗಾಗ್ಗೆ ಭಿಕ್ಷುಕರಿಗೆ ಉಚಿತ ಚಿಕಿತ್ಸೆ ನೀಡುವುದಕ್ಕಾಗಿ ಜೌಷಧಿಗಳ‌ ಚೀಲಗಳನ್ನು ತೆಗೆದುಕೊಂಡು ಹೋಗುವುದನ್ನು ಕಾಣಬಹುದು. ಮಾನಸಿಕ ಮತ್ತು ಉಚಿತ ವೈದ್ಯಕೀಯ ಸೌಲಭ್ಯವನ್ನು ನೀಡುವ ಮೂಲಕ ಬಡವರು ಹಾಗೂ ಮನೆಯಿಲ್ಲದವರಿಗೆ ಪುನರ್ವಸತಿ ಕಲ್ಪಿಸುವುದು ನಮ್ಮ‌ ಮುಖ್ಯ ಉದ್ದೇಶವಾಗಿದೆ ಎಂದು 43 ವರ್ಷದ ಡಾ.ಅಭಿಜಿತ್ ಸೋನವಾನೆ ಹೇಳುತ್ತಾರೆ. ಅವರೊಂದಿಗೆ ಅವರ ಪತ್ನಿ ಡಾ.ಮನಿಷಾ ಸೋನವಾನೆ ಕೂಡ ಸಾಥ್ ನೀಡಿದ್ದಾರೆ.


"ಈ ಜಗತ್ತಿನಲ್ಲಿ ಬದುಕುಳಿಯಲು ಭಿಕ್ಷೆ ಬೇಡುತ್ತಿರುತ್ತಾರೆ. ನಾವು ಅವರ ಕುಟುಂಬಗಳಿಂದ ಕೈಬಿಡಲ್ಪಟ್ಟ ವಯಸ್ಸಾದ ಭಿಕ್ಷುಕರಿಗೆ ಎಲ್ಲಾ ಮೂಲಭೂತ ಸೌಕರ್ಯ ಹಾಗೂ ಚಿಕಿತ್ಸೆ ನೀಡುವ ಮೂಲಕ ಅವರ ಅವಶ್ಯಕತೆಗಳನ್ನು ಪೂರೈಸುತ್ತೇವೆ” ಎಂದು ಡಾ.ಅಭಿಜಿತ್ ಹೇಳುತ್ತಾರೆ.


ಪ್ರತಿದಿನ ಬೆಳಿಗ್ಗೆ ಡಾ.ಅಭಿಜಿತ್ ದೇವಾಲಯ, ಮಸೀದಿ ಹಾಗೂ ಚರ್ಚುಗಳಂತಹ‌ ವಿವಿಧ ಸ್ಥಳಗಳಿಗೆ ತೆರಳುತ್ತಾರೆ, ಅಲ್ಲಿ ಹೆಚ್ಚಿನದಾಗಿ ವೃದ್ಧ ಭಿಕ್ಷುಕರು ಸೇರುತ್ತಾರೆ. ಅಭಿಜಿತ್ ತಮ್ಮೊಂದಿಗೆ ಮೂಲಭೂತ ವೈದ್ಯಕೀಯ ಸಾಮಗ್ರಿಗಳನ್ನು ಕೊಂಡೊಯ್ದು ಭಿಕ್ಷುಕರಿಗೆಲ್ಲ‌ ತಪಾಸಣೆ ನಡೆಸುತ್ತಾರೆ. ಮತ್ತು ಅಗತ್ಯವಿರುವವರಿಗೆ ಜೌಷಧಿಯನ್ನು‌ ಒದಗಿಸುತ್ತಾರೆ.


q

ಡಾ. ಸೋನವಾನಿ ಬೀದಿಗಳಲ್ಲಿ ಭಿಕ್ಷುಕ ಮಹಿಳೆಗೆ ಔಷಧಿ ನೀಡುತ್ತಿರುವುದು


ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡುವ ಉದ್ದೇಶದಿಂದ, ಈ‌ ಜೋಡಿಯು ವಿಶೇಷ, ಸಮರ್ಥ‌ರಾದ ಹಿರಿಯರಿಗೆ ಹಾಗೂ ಮನೆಯಿಲ್ಲದವರಿಗೆ‌ ವೃಧ್ಧಾಶ್ರಮಗಳಿಗೆ‌ ಸ್ಥಳಾಂತರಗೊಳ್ಳಲು‌ ಸಹಾಯ ಮಾಡುತ್ತಾರೆ. ಕೆಲವೊಮ್ಮೆ ಅವರು ಸಣ್ಣ‌ ಉದ್ಯಮಗಳನ್ನು ಸ್ಥಾಪಿಸಲು ಆರ್ಥಿಕವಾಗಿ ಸಹಾಯ‌ ಮಾಡಿದ್ದಾರೆ. ಏಪ್ರಿಲ್‌ 2017 ರಿಂದ ಈ ದಂಪತಿಯು 50 ವೃದ್ಧ ಭಿಕ್ಷುಕರನ್ನು ಭಿಕ್ಷಾಟನೆ ವೃತ್ತಿಯನ್ನು ತೊರೆಯಲು ಬೆಂಬಲಿಸಿದ್ದಾರೆ.


ಈ ಜೋಡಿಯು ಇನ್ನೊಂದು ಹೆಜ್ಜೆ ಮುಂದಕ್ಕೆ ಸಾಗಿ ಯಾವುದೇ ಲಾಭೋದ್ದೇಶವಿಲ್ಲದ "ಸೋಮನ್ ಟ್ರಸ್ಟ್" ಅನ್ನು ಸ್ಥಾಪಿಸಿ ಅದರ ಮೂಲಕ ಅವರು ಹಣವನ್ನು ಸಂಗ್ರಹಿಸಿ, ಅದನ್ನು ದೀನದಲಿತರ ಚಿಕಿತ್ಸೆಗೆ‌ ಉಪಯೋಗಿಸುತ್ತಾರೆ. ಅಲ್ಲದೇ ಪುಣೆಯ ಗ್ರಾಮೀಣ ಪ್ರದೇಶಗಳಲ್ಲಿ ಹದಿಹರೆಯದವರಿಗೆ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿಯವರೆಗೆ ಈ ವೈದ್ಯ‌ ದಂಪತಿಗಳು 1,100ಕ್ಕೂ ಹೆಚ್ಚು ಭಿಕ್ಷುಕರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಅವರಿಗೆ ಸಹಾಯ ಮಾಡಿದ್ದಾರೆ.


ರಕ್ಷಣೆಗೆ ಬಂದ ಬಿಕ್ಷುಕರು


ಮಹಾರಾಷ್ಟ್ರದ ಸತಾರ ಜಿಲ್ಲೆಯ‌ ಒಂದು ಸಣ್ಣ ಹಳ್ಳಿಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ‌ ಡಾ. ಅಭಿಜಿತ್ ಅವರ ಪೋಷಕರು ತಮ್ಮ ಮಗನ ಶಿಕ್ಷಣಕ್ಕಾಗಿ ಎಲ್ಲವನ್ನೂ ಹೂಡಿಕೆ ಮಾಡುತ್ತಾರೆ. 1999 ರಲ್ಲಿ ಪುಣೆಯ ತಿಲಕ್ ಆಯುರ್ವೇದ‌ ಮಹಾವಿದ್ಯಾಲಯದಲ್ಲಿ ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪಡೆದ ನಂತರ, ಅದಾಗ್ಯೂ ಅವರು ಕೆಲಸ‌ ಪಡೆಯುವಲ್ಲಿ ವಿಫಲರಾದರು. ಹಣಕಾಸಿನ ನೆರವು ಕಡಿಮೆ ಇರುವುದರಿಂದ ಅಭಿಜಿತ್ ಅವರು ತಮ್ಮದೇ ಆದ ಕ್ಲಿನಿಕ್ ಅನ್ನು ಪ್ರಾರಂಭಿಸಲು‌ ಸಾಧ್ಯವಾಗಲಿಲ್ಲ. ಆದ್ದರಿಂದ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಮೂಲಕ ಹಣವನ್ನು‌‌ ಸಂಪಾದಿಸುವ ಆಶಯವನ್ನು ಹೊಂದಿ ಅವರು ಮನೆ ಮನೆಗೆ ಭೇಟಿ‌ ನೀಡತೊಡಗಿದರು.


ತಮ್ಮ ಹಳೆಯ ನೆನಪುಗಳನ್ನು‌ ನೆನಪಿಸಿಕೊಳ್ಳುತ್ತಾ, ‌"ಪ್ರತಿದಿನ ನಾನು ವೈದ್ಯಕೀಯ ಉಪಕರಣಗಳನ್ನು ಹಾಗೂ ನನ್ನ ಸ್ಟೆತೋಸ್ಕೋಪ್ ಅನ್ನು ನನ್ನ ಚೀಲದಲ್ಲಿ ತೆಗೆದುಕೊಂಡು ಮನೆ ಮನೆಗಳಿಗೆ ಭೇಟಿ ನೀಡಿ, ಮನೆಯ ಬಾಗಿಲು ಬಡಿದು ಯಾರಿಗಾದರೂ ವೈದ್ಯಕೀಯ ನೆರವು ಅಗತ್ಯವಿದೆಯೇ ಎಂದು ಕೇಳುತ್ತಿದ್ದೆ, ಆದರೂ ಜನರು ನನ್ನನ್ನು ತಿರಸ್ಕರಿಸಿದರು. ಕೆಲವರು ನನ್ನನ್ನು ಅವಮಾನಿಸಿದರು. ವೈದ್ಯರು ಮನೆ ಮನೆಗಳಿಗೆ ಬಂದು ಸೇವೆ ನೀಡುತ್ತಾರೆಯೆ ಎಂದು ಪ್ರಶ್ನಿಸಿದ್ದರು,” ಎಂದು ತಮ್ಮ ಗತಕಾಲಕ್ಕೆ‌ ಜಾರಿದರು.


ಹಣಕಾಸಿನ ಸಂಪನ್ಮೂಲಗಳ ಕೊರತೆಯಿಂದ ಹಸಿವಿನಿಂದನೆಲೆ ದಿನಗಳನ್ನು ದೂಡುವಂತಾಯಿತು, ಆಗ ಎರಡು ದಿನಗಳಿಗೊಮ್ಮೆ ಊಟ ಮಾಡಿದಂತಹ ಸಂದರ್ಭ ಬಂದೊದಗಿತ್ತು.


ಅಂತಹ ಒಂದು ಸಂದರ್ಭದಲ್ಲಿ ಒಂದು ಹಳ್ಳಿಗೆ ಭೇಟಿ ನೀಡಿದಾಗ ಅಭಿಜಿತ್ ಅನಾರೋಗ್ಯದಿಂದ ಬಳಲುತ್ತಿದ್ದರು, ಆ ಸಮಯದಲ್ಲಿ ಭಿಕ್ಷುಕ ದಂಪತಿಗಳು ಅವರನ್ನು ಆದರಿಸಿ‌ ಉಪಚರಿಸಿ ಮರಳಿ ಅವರಿಗೆ ಶಕ್ತಿಯನ್ನು ಪಡೆಯಲು ಸಹಾಯ ಮಾಡಿದರು. ಅವರು ಊಟವನ್ನು ನೀಡಿ, ಸಮಾಜಕ್ಕೆ ಸೇವೆ ಸಲ್ಲಿಸುವ ಗುರಿಯಲ್ಲಿ ಸಕಾರಾತ್ಮಕವಾಗಿರುವಂತೆ ಅಭಿಜಿತ್ ಅವರನ್ನು ಪ್ರೋತ್ಸಾಹಿಸಿದರು.


"ಆ ಸಮಯದಲ್ಲಿ ನಾನು ತುಂಬಾ ನಿರಾಸೆಗೊಂಡಿದ್ದೆ, ನನ್ನ ಮೇಲಿನ ಅವರ ನಂಬಿಕೆ ನನಗೆ ಬಲವನ್ನು ನೀಡಿತು ಮತ್ತು‌ ಇಂದು ನಾನು ಹೀಗಿರುವುದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಅಭಿಜಿತ್ ಹೇಳುತ್ತಾರೆ.


ಬದಲಾವಣೆ ತರುವ ಉತ್ಸಾಹದಲ್ಲಿ


ಆದಾಗ್ಯೂ ಮುಂದಿನ ವರ್ಷಗಳ ಅಭಿಜಿತ್ ಪಾಲಿಗೆ ವರದಾನವಾಗಿ ಮಾರ್ಪಟ್ಟವು. ಡಾ.ಅಭಿಜಿತ್ ಅವರು ಗ್ರಾಮೀಣ ಮಟ್ಟದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಬಯಸುವ ಅಂತರಾಷ್ಟ್ರೀಯ ಸಂಘಟನೆಯೊಂದಿಗೆ ಕೆಲಸ ಮಾಡಲು ಅವಕಾಶವನ್ನು ಪಡೆದರು. ಮುಂದಿನ ದಶಕದಲ್ಲಿ ಡಾ‌. ಅಭಿಜಿತ್ ತಮ್ಮ ಶ್ರೇಣಿಯಲ್ಲಿ ಉತ್ತಮ ಮಟ್ಟಕ್ಕೆ ಏರಿದರು ಮತ್ತು ತಿಂಗಳಿಗೆ 3 ಲಕ್ಷ ರೂ. ಗಳ ಸಂಬಳವನ್ನು ಗಳಿಸಲಾರಂಭಿಸಿದರು.


2010 ರಲ್ಲಿ, ವಯಸ್ಸಾದ ಭಿಕ್ಷುಕ ದಂಪತಿಗಳನ್ನು ಭೇಟಿಯಾಗಲು ಅವರ ಹಳ್ಳಿಗೆ ತೆರಳಿದಾಗ, ಅವರ ಸಾವಿನ ಬಗ್ಗೆ ತಿಳಿದು ಅವರು ಆಘಾತಕ್ಕೊಳಗಾದರು. ಅವರ ಅಂತ್ಯಕ್ರಿಯೆಯ ಸೇವೆಗಳಿಗೆ ಸಹಾಯ‌ ಮಾಡಲು ಯಾರು ಇರಲಿಲ್ಲ ಎಂಬ ವಿಷಯ ಅಭಿಜಿತ್ ಅವರಿಗೆ ಕಾಡತೊಡಗಿತು. ಅಂದಿನಿಂದ‌ ತಪ್ಪಿತಸ್ಥ ಮನೋಭಾವ ನನ್ನನ್ನು ತುಂಬಾ ಕಾಡಿದೆ ಎಂದು ಡಾ.ಅಭಿಜಿತ್ ಹೇಳುತ್ತಾರೆ.


"ಅವರು ನನಗೆ ತುಂಬಾ ಸಹಾಯ ಮಾಡಿದರು. ಅವರ ಕಾರಣದಿಂದಾಗಿ ನಾನು ಆ ಆರಂಭಿಕ ವರ್ಷಗಳಲ್ಲಿ ಬದುಕುಳಿದೆ. ಅವರಿಗೆ ನನ್ನ ಅಗತ್ಯವಿದ್ದಾಗ ನಾನು ಅವರಿಗೆ ಲಭ್ಯವಾಗಲಿಲ್ಲ. ಅದಕ್ಕಾಗಿ ನಾನು ಈ ಸಮುದಾಯಕ್ಕೆ ಮರಳಿ ಬದುಕು ನೀಡುವ ಮಾರ್ಗಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ" ಎಂದ ಅವರು ಹೇಳುತ್ತಾರೆ.


ವರ್ಷಗಳು ಉರುಳಿದಂತೆ ಆ ಆಲೋಚನೆ ಅವರನ್ನು ಬಿಡದೆ ಕಾಡುತ್ತಿತ್ತು. ಭಿಕ್ಷುಕ‌ ಸಮುದಾಯಕ್ಕಾಗಿ ಕೆಲಸ ಮಾಡುವ ಆಶಯದ ಕುರಿತು ಅಭಿಜಿತ್ ತಮ್ಮ ಪತ್ನಿಗೆ ತಿಳಿಸುತ್ತಾರೆ. ಕಾಲೇಜು ದಿನಗಳಿಂದಲೂ ಅವರೊಂದಿಗೆ ಜೊತೆಯಾಗಿದ್ದ ಡಾ.ಮನಿಷಾ ಅವರ ನಿರ್ಧಾರವನ್ನು ಬೆಂಬಲಿಸಿದರು.


ಮುಂದಿನ ಎರಡು ವರ್ಷಗಳು ಡಾ.ಅಭಿಜಿತ್ ಅವರ ಕನಸನ್ನು ಬೆಂಬಲಿಸಲು ಅದರ ಹಣಕಾಸು ಯೋಜನೆ ಮತ್ತು ಸಂಘಟನೆಯಲ್ಲೆ ಕಳೆದರು. ಆಗಸ್ಟ್‌ 15, 2015 ರಂದು ಡಾ.ಅಭಿಜಿತ್ ತಮ್ಮ ಕೆಲಸವನ್ನು ತ್ಯಜಿಸಲು‌ ನಿರ್ಧರಿಸಿದರು. ಈ ಹೊತ್ತಿಗೆ ಅವರ ಪತ್ನಿ ಕ್ಲಿನಿಕ್ ಮೀರಿ‌ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲಾರಂಭಿಸಿದ್ದರು. ಯೋಗ ಕೇಂದ್ರವನ್ನು ಆರಂಭಸಿದರು. ಆಯುರ್ವೇದ ಔಷಧಿ ಮತ್ತು ಗಿಡಮೂಲಿಕೆಗಳನ್ನು ಮಾರಾಟ ಮಾಡುವ ವ್ಯಾಪಾರ ಶುರುಮಾಡಿದರು.


ತಮ್ಮ ಸ್ವಂತ ಉಳಿತಾಯ ಹಾಗೂ ಅವರ ಹೆಂಡತಿಯ ಆದಾಯದ‌ 30 ಪ್ರತಿಶತದಷ್ಟು ಹಣವನ್ನು‌ ಬಳಸಿಕೊಂಡು‌ ಡಾ.ಅಭಿಜಿತ್‌ "ಡಾಕ್ಟರ್ ಫಾರ್ ಬೆಗ್ಗರ್ಸ್ (ಬಿಕ್ಷುಕರಿಗಾಗಿ ವೈದ್ಯರು)" ಎಂಬ ಉಪಕ್ರಮವನ್ನು ಪ್ರಾರಂಭಿಸಿದರು.


'ಉದ್ಯಮಿಗಳಾಗುವತ್ತ ಭಿಕ್ಷುಕರು' ಉಪಕ್ರಮ


ಪ್ರತಿ ಸೋಮವಾರದಿಂದ‌ ಶನಿವಾರದವರೆಗೆ ಬೆಳಿಗ್ಗೆ 10 ರಿಂದ‌ ಸಂಜೆ 4 ಗಂಟೆಯವರೆಗೆ ಡಾ. ಅಭಿಜಿತ್ ಭಿಕ್ಷುಕರೊಂದಿಗೆ‌‌ ಸಮಯ ಕಳೆಯುತ್ತಾರೆ. ಅವರು ವೈದ್ಯಕೀಯ ತಪಾಸಣೆಗಳನ್ನು ನಡೆಸುತ್ತಾರೆ ಮತ್ತು ಇತರೆ ಸಂಬಂಧಿತ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾರೆ.‌ ಈ ದಂಪತಿಗಳು‌ ಭಿಕ್ಷುಕರಿಗಾಗಿ ಉಚಿತವಾಗಿ 160 ಕ್ಕೂ ಹೆಚ್ಚಿನ ಕಣ್ಣಿನ‌ ಪೊರೆಯ ಚಿಕಿತ್ಸೆ ನೀಡಿದ್ದಾರೆ.


"ನಾನು ಭಿಕ್ಷುಕ ಕುಟುಂಬಗಳೊಂದಿಗೆ ವರ್ಷದ ಐದು‌ ತಿಂಗಳುಗಳನ್ನು ಕಳೆಯುತ್ತೇನೆ. ಅವರ ಅಗತ್ಯತೆಗಳ‌‌ ಕುರಿತು ಅರ್ಥ ಮಾಡಿಕೊಳ್ಳುತ್ತೇನೆ. ಅವರ ಆಹಾರವನ್ನು ತಿನ್ನುತ್ತೇನೆ. ಅವರಿಗೆ‌ ಸಹಾಯವನ್ನು ಮಾಡುತ್ತೇನೆ. ನಾವು ಅವರೊಂದಿಗೆ‌ ಕುಟುಂಬ ಸದಸ್ಯರಂತಹ ಬಂಧ ಏರ್ಪಡುವಂತೆ ಮಾಡುತ್ತೇವೆ.‌ ಒಮ್ಮೆ ನಾವು ಅವರೊಂದಿಗೆ ಒಡನಾಟವನ್ನು‌ ಬೆಳಸಿಕೊಂಡರೆ‌ ಈ ಭಿಕ್ಷಾಟನೆಯನ್ನು‌ ತೊರೆಯುವಂತೆ ಮನವೊಲಿಸಲು ಪ್ರಾರಂಭಿಸುತ್ತೇವೆ" ಎಂದು ಡಾ.ಅಭಿಜಿತ್ ಹೇಳುತ್ತಾರೆ.


ಡಾ.ಅಭಿಜಿತ್ ತಮ್ಮ ‘ಉದ್ಯಮಿಗಳಾಗುವತ್ತ ಭಿಕ್ಷುಕರು’ ಎಂಬ ಈ ಯೋಜನೆಯ ಮೂಲಕ, ಈ ವೃತ್ತಿಯಲ್ಲಿರುವ ಭಿಕ್ಷುಕರಿಗೆ ತೀವ್ರ ಅಗತ್ಯಗಳು ಮತ್ತು ಆರ್ಥಿಕ ಪರಿಸ್ಥತಿಗಳ ಕುರಿತು ಸಲಹೆ ನೀಡುತ್ತಾರೆ. ಅವರ ವ್ಯವಹಾರ ಸಾಮರ್ಥ್ಯ, ಕೌಶಲ್ಯಗಳು ಮತ್ತು ಅವರ ಸಂಭಾವ್ಯ ವ್ಯವಹಾರ ಕಲ್ಪನೆಯ ಬಗ್ಗೆ ವಿಚಾರಿಸಿದ ನಂತರ, ಅವರು ತಮ್ಮ ಸ್ವಂತ ವ್ಯವಹಾರವನ್ನು ಹೊಂದುವಂತೆ ಮಾಡಲು ಅವರಿಗೆ ಸಹಾಯ ಮಾಡುತ್ತಾರೆ.


ಉದಾಹರಣೆಗೆ, ಒಬ್ಬ ಮಹಿಳೆ ಅಂಕಿ-ಸಂಖ್ಯೆಗಳೊಂದಿಗೆ ಉತ್ತಮವಾಗಿದ್ದರೆ, ಅವರು ಸ್ಕಾರ್ಫ್‌ಗಳು, ಬಳೆಗಳು ಮತ್ತು ಇತರ ಪರಿಕರಗಳನ್ನು ಮಾರಾಟ ಮಾಡಲು ರಸ್ತೆ ಪಕ್ಕದಲ್ಲಿ ಅಂಗಡಿಯನ್ನು‌ ಸ್ಥಾಪಿಸಲು ಸಹಾಯ ಮಾಡುತ್ತಾರೆ. ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವುದು ಮತ್ತು ದಿನಕ್ಕೆ ಎರಡು ಹೊತ್ತು ಊಟ ಗಳಿಸಲು ಸಹಾಯ ಮಾಡುವುದು ನಮ್ಮ ಮುಖ್ಯ ಉದ್ದೇಶ ಎಂದು ಅಭಿಜಿತ್ ಹೇಳುತ್ತಾರೆ.


"ನಾನು ಅವರಿಗೆ ನೀವು ಮಾಡುವುದರ ಬಗ್ಗೆ ಪೂರ್ತಿಯಾಗಿ ಒಪ್ಪಿಗೆ ಇದೆಯೇ ಎಂದು ಸಾವಿರ ಬಾರಿ ಕೇಳುತ್ತೇನೆ. ಇದು ಬರೀ ಒಂದು ಬಾರಿ ಮಾಡುವ ಸಹಾಯವಲ್ಲ. ನಂತರ ಅವರು ಭಿಕ್ಷಾಟನೆಗೆ ಹಿಂತಿರುಗುವುದಿಲ್ಲ ಎಂದು ನನಗೆ ಭರವಸೆ ನೀಡಬೇಕು. ನಾನು ಅವರಿಗೆ ನೇರ ಹಣಕಾಸು ನೀಡುವುದಿಲ್ಲ. ಬದಲಾಗಿ ಅವರಿಗೆ ಅಂಗಡಿಯನ್ನು ಸ್ಥಾಪಿಸಲು ಅಗತ್ಯವಾದ ವಸ್ತುಗಳನ್ನು ನಾನು ಖರೀದಿಸುತ್ತೇನೆ ಅಥವಾ ಅವರು ಕೆಲಸ ಮಾಡುವ ಜನರೊಂದಿಗೆ ಸಂಪರ್ಕ ಸಾಧಿಸಲು ಏರ್ಪಡಿಸುತ್ತೇನೆ" ಎಂದು ಅಭಿಜಿತ್ ಹೇಳುತ್ತಾರೆ.


ಡಾ.ಮನಿಷಾ ಮತ್ತು ಡಾ.ಅಭಿಜಿತ್ ಇಬ್ಬರೂ "ಮಾನವಕುಲದ ಸೇವೆಯೆ ಎಲ್ಲಕ್ಕಿಂತ ಹೆಚ್ಚು" ಎಂಬ ವಿಷಯನ್ನು ಅರಿತಿದ್ದಾರೆ. ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅವರಿಗೆ ಹಣದ ಅಗತ್ಯವಿದೆ. ಅದಕ್ಕಾಗಿ, ಅವರು ಪ್ರಸ್ತುತ ತಮ್ಮ ಸೇವೆಗಳನ್ನು ವಿಸ್ತರಿಸಲು ಮತ್ತು ಹೆಚ್ಚಿನ ಭಿಕ್ಷುಕರು ಗೌರವದಿಂದ ಜೀವನ ನಡೆಸುವಂತೆ ಮಾಡಲು ಹಣವನ್ನು ಸಂಗ್ರಹಿಸುತ್ತಿದ್ದಾರೆ.