ನಗರವನ್ನು ಸ್ವಚ್ಚಗೊಳಿಸುತ್ತಿರುವ ಸಾಫ್ಟ್‌ವೇರ್ ಇಂಜಿನೀಯರನ ಪ್ಲಾಗಿಂಗ್ ಪ್ರೋಗ್ರಾಂ

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 24 ವರ್ಷದ ವಿವೇಕ್ ಗುರವ್ ಜೂನ್ 2019 ರಲ್ಲಿ ಪುಣೆಯಲ್ಲಿ ಪ್ಲಾಗಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಈಗ ನಗರವನ್ನು ಸ್ವಚ್ಚ ಗೊಳಿಸಲು ಪರಿಸರ ಪ್ರಜ್ಞೆಯನ್ನು ಹೊಂದಿರುವ ಸಮಾನ ಮನಸ್ಕ ನಾಗರಿಕರ ಗುಂಪಾದ ಪುಣೆ ಪ್ಲಾಗರ್ಸ್ ಅನ್ನು ನಡೆಸುತ್ತಿದ್ದಾರೆ.

ನಗರವನ್ನು ಸ್ವಚ್ಚಗೊಳಿಸುತ್ತಿರುವ ಸಾಫ್ಟ್‌ವೇರ್ ಇಂಜಿನೀಯರನ ಪ್ಲಾಗಿಂಗ್ ಪ್ರೋಗ್ರಾಂ

Thursday January 23, 2020,

3 min Read

ಹೌದು ಜಗತ್ತಿನ ತಾಪಮಾನ ಹೆಚ್ಚುತ್ತಿದೆ, ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸಮಸ್ಯೆಗೆ ಆಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಎಲ್ಲೆಂದರಲ್ಲಿ ಎಸೆಯುವ ಕಸದ ರಾಶಿ, ಹೆಚ್ಚುತ್ತಿರುವ ಮಾಲಿನ್ಯ, ಇವೆಲ್ಲವೂ ನಮ್ಮೆದುರಿಗೆ ಇರುವ ಸವಾಲುಗಳೇ ಸರಿ. ಹೆಚ್ಚಿನವರು ಇದೆಲ್ಲದರ ನಿರ್ವಹಣೆ ಸರಕಾರದ ಕರ್ತವ್ಯ ಎಂದು ಸುಮ್ಮನಾದರೆ ಕೆಲವರು ಮಾತ್ರ ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ.


ಅಂಥಹ ಕೆಲವರಲ್ಲಿ ಪ್ರಮುಖರಾದವರು, ವಿವೇಕ್ ಗುರವ್ ಅವರು. ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ವಿವೇಕ್ ತಮ್ಮ ಸುತ್ತಲಿನ ಪರಿಸರದ ಸಂರಕ್ಷಣೆಗೆ ನಾವೇ ಸಿದ್ಧರಾಗಬೇಕು ಎನ್ನುವುದನ್ನು ಅರಿತು ಮುನ್ನೆಡೆದವರು.


"ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯವಸ್ಥೆಯನ್ನು ಮತ್ತು ಸರ್ಕಾರವನ್ನು ದೂಷಿಸುವ ಬದಲು ನಾವೇ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಈ ಬದಲಾವಣೆಗೆ ಸಮುದಾಯದ ಭಾಗವಹಿಸುವಿಕೆಯ ಅಗತ್ಯವಿದೆ ಮತ್ತು ನಾನು ಬದಲಾವಣೆ ಮಾಡುವವನಾಗಲು ಪ್ರಯತ್ನಿಸುತ್ತೇನೆ,” ಎಂದು 24 ವರ್ಷದ ವಿವೇಕ್ ಗುರವ್ ಎನ್ ಡಿ ಟಿವಿ ಗೆ ಹೇಳುತ್ತಾರೆ.


ವಿವೇಕ್ ಗುರವ್ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ (ಚಿತ್ರಕೃಪೆ: ಎನ್‌ಡಿಟಿವಿ, ಯೂತ್ ಕಿ ಆವಾಜ್.)


ವಿವೇಕ ಅವರ ಈ ಮಾತುಗಳೇ ಸಾಕು ಪರಿಸರದ ಕುರಿತ ಅವರ ಕಾಳಜಿಯನ್ನು ವ್ಯಕ್ತಪಡಿಸಲು. ಈ ಹಿನ್ನಲೆಯಲ್ಲಿ ಪುಣೆ ಪ್ಲಾಗರ್ಸ್ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು ಇದು ವಾರದ ಕೊನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ರಜೆಯ ಮೂಡಿನಲ್ಲಿರುವಾಗ ವಿವೇಕ್ ಎಲ್ಲರಲಿಗೂ ಪರಿಸರ ಸಂರಕ್ಷಣೆಯಲ್ಲಿ ಭಾಗವಹಿಸಲು ಅನುವುಮಾಡಿಕೊಡುತ್ತಾರೆ.


ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 24 ವರ್ಷದ ವಿವೇಕ್ ಗುರವ್, ಅವರು ಜೂನ್ 2019 ರಲ್ಲಿ ಪುಣೆಯಲ್ಲಿ ಪ್ಲಾಗಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಈಗ ನಗರವನ್ನು ಸ್ವಚ್ಛ ಗೊಳಿಸಲು ಪರಿಸರ ಪ್ರಜ್ಞೆಯನ್ನು ಹೊಂದಿರುವ ಸಮಾನ ಮನಸ್ಕ ನಾಗರಿಕರ ಗುಂಪಾದ ಪುಣೆ ಪ್ಲಾಗರ್ಸ್ ಅನ್ನು ನಡೆಸುತ್ತಿದ್ದಾರೆ.


ಪುಣೆ ಪ್ಲಾಗರ್ಸ್‌ನ ವಿಶೇಷತೆ

ಇದು ಕೇವಲ ಪ್ಲಾಸ್ಟಿಕ್ ಕಸವನ್ನು ಆಯ್ದು ಪರಿಸರವನ್ನು ಸ್ವಚ್ಚವಾಗಿಡುವುದಲ್ಲದೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಜಾಗಿಂಗ್ ಅನ್ನು ಸಹ ಒಳಗೊಂಡಿದೆ. ಜಾಗಿಂಗ್ ಜೊತೆಗೆ ಪ್ಲಾಗಿಂಗ್ ಆಗಿದ್ದು ಮುಂಜಾನೆ ಜಾಂಗಿಂಗ್ ಮಾಡುತ್ತಾ, ರಸ್ತೆಯ ಬದಿಗಳಲ್ಲಿ, ಬಸ್ ನಿಲ್ದಾಣದಲ್ಲಿ, ಅಂಗಡಿ ಮುಂಗಟ್ಟುಗಳಿಲ್ಲ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನು ಆಯುವ ಸ್ವಚ್ಛತಾ ಕಾರ್ಯಕ್ರಮವನ್ನು ಒಳಗೊಂಡಿದೆ.


ಪ್ಲಾಗಿಂಗ್‌ಗು ಮುನ್ನ ಜಾಗಿಂಗ್ ಮಾಡುತ್ತಿರುವುದು (ಚಿತ್ರಕೃಪೆ: ಎನ್‌ಡಿಟಿವಿ)




ಎಲ್ಲೆಲ್ಲಿ ಪ್ಲಾಗಿಂಗ್…??

ವಾರದ ಕೊನೆಯಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ವಿವೇಕ್ ಅವರು ತಮ್ಮ ಟೆಕ್ಕಿಗಳೊಂದಿಗೆ ಹಾಗೂ ಇತರ ಆಸಕ್ತರೊಂದಿಗೆ ಸೇರಿ ನಗರ ವಿವಿದೆಡೆಗಳಲ್ಲಿ ಈಗಾಗಲೇ ಪ್ಲಾಗಿಂಗ್ ಅನ್ನು ನಡೆಸಿದ್ದಾರೆ. "ಬ್ಯಾನರ್ ಹಿಲ್ಸ್ ಮತ್ತು ಡಿಘಿ ಹಿಲ್ಸ್ ಈ ತಾಣಗಳಲ್ಲಿ ಶೇಕಡಾ 80 ರಷ್ಟು ಕಸವನ್ನು ಸ್ವಚ್ ಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ," ಎಂದು ಪುಣೆ ಪ್ಲಾಗರ್ಸ್ ಸಂಸ್ಥಾಪಕ ವಿವೇಕ್ ಹೇಳುತ್ತಾರೆ.


ಇಲ್ಲಿಯವರೆಗೆ, ತಂಡವು 88 ಪ್ಲಾಗಿಂಗ್ ಕಾರ್ಯಕ್ರಮಗಳನ್ನು ನಡೆಸಿದೆ ಮತ್ತು ಬಿಯರ್ ಬಾಟಲಿಗಳು, ಏಕ-ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ, ಕಾಗದ, ನೈರ್ಮಲ್ಯ ತ್ಯಾಜ್ಯ, ಸಾವಯವ ತ್ಯಾಜ್ಯ ಮತ್ತು ಇ-ತ್ಯಾಜ್ಯ ಸೇರಿದಂತೆ 38,000 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿದೆ. ಜನವರಿ 26 ರಂದು ತಂಡವು 100 ಪ್ಲಾಗಿಂಗ್ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಿದೆ, ವರದಿ ಎನ್‌ಡಿಟಿವಿ.


ತ್ಯಾಜ್ಯ ನಿರ್ವಹಣೆ ಹೇಗೆ.?

ವಿವಿದೆಡೆಗಳಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಮರುಬಳಕೆಗೆ ಯೋಗ್ಯವಾಗುವಂತೆ ಪರಿವರ್ತಿಸಿ ಅವುಗಳನ್ನು ಮಾರಾಟಮಾಡುವ ವ್ಯವಸ್ಥೆಯನ್ನು ಸಹ ವಿವೇಕ್ ಜಾರಿಗೆ ತಂದಿದ್ದಾರೆ.


ತ್ಯಾಜ್ಯವನ್ನು ಒಣ ತ್ಯಾಜ್ಯ, ಹಸಿ ತ್ಯಾಜ್ಯ, ಬಯೋಮೆಡಿಕಲ್ ತ್ಯಾಜ್ಯ, ಇ-ತ್ಯಾಜ್ಯ, ಪ್ಲಾಸ್ಟಿಕ್ ಬಾಟಲಿಗಳು, ಕಾಗದ ಮುಂತಾದ ವಿವಿಧ ವರ್ಗಗಳಾಗಿ ವಿಂಗಡಿಸುತ್ತೇವೆ ಎಂದು ವಿವೇಕ್ ಹೇಳುತ್ತಾರೆ.


ಮೊದಲಿಗೆ ಮುನ್ಸಿಪಾಲಿಟಿ ಈ ತ್ಯಾಜ್ಯವನ್ನು ಇಂಧನವಾಗಿ ಬಳಸಲು ನಿರ್ಧರಿಸಿದೆ ನಂತರದಲ್ಲಿ ಇನ್ನು ಹಲವಾರು ರೀತಿಯ ಆಯ್ಕೆಗಳನ್ನು ಅಳವಡಿಸಿಕೊಂಡು ಅದರಿಂದ ಆದಾಯವನ್ನು ಗಳಿಸುವ ಯೋಜನೆಯನ್ನು ವಿವೇಕ್ ಜಾರಿಗೆ ತಂದಿದ್ದಾರೆ.


ಮುಖ್ಯವಾಗಿ ಉಪಯೋಗಿಸಿ ಎಸೆದ ಬಿಯರ್ ಬಾಟಲಿಯಲ್ಲಿ ಮಹಿಳೆಯರ ಅಲಂಕಾರಿಕ ಸಾಮಗ್ರಿಗಳನ್ನು ಮತ್ತು ಇತರ ಕರಕುಶಲ ವಸ್ತುಗಳನ್ನು ಶರಥಿ ಎಂಬ ಮಹಿಳೆಯರ ಸ್ವಸಹಾಯ ಗುಂಪು ತಯಾರಿಸುತ್ತಿದ್ದು ಈ ಮರುಬಳಕೆಯ ವಸ್ತುಗಳು ಸುಮಾರು 80 ರೂಪಾಯಿಯಿಂದ 250 ರೂಪಾಯಿಗಳವರೆಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಬಿಯರ್ ಬಾಟಲಿಗಳ ಮರುಹುಟ್ಟು (ಚಿತ್ರಕೃಪೆ: ಎನ್‌ಡಿಟಿವಿ)


ಸಾಧನೆಯ ಹಾದಿಯಲ್ಲಿ ವಿವೇಕ್ ಗುರವ್

ಯುಎನ್‌ಡಿಪಿ ಬ್ಯಾಂಕಾಕ್ ಪ್ರಾದೇಶಿಕ ಹಬ್ ಮತ್ತು ವಿಶ್ವಸಂಸ್ಥೆಯ ಎಸ್‌ಡಿಜಿ ಆಕ್ಷನ್ ಅಭಿಯಾನದ ನೇತೃತ್ವದ ಎಂವೈ ವರ್ಲ್ಡ್ 2030 ಏಷ್ಯಾ-ಪೆಸಿಫಿಕ್ ಅಡ್ವೊಕಸಿ ಕಾರ್ಯಕ್ರಮದಲ್ಲಿ ವಿವೇಕ್ ಗುರವ್ ಭಾರತವನ್ನು ಪ್ರತಿನಿಧಿಸಿದ್ದಾರೆ. ಹವಾಮಾನ ಕ್ರಮ, ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಜಾಗೃತಿ ಮೂಡಿಸುವ ಜನರನ್ನು ಅವರು ತಲುಪಿದ್ದಾರೆ ಮತ್ತು ಯುಎನ್ ನಡೆಸುತ್ತಿರುವ ಮೈವರ್ಲ್ಡ್ ಸಮೀಕ್ಷೆಯನ್ನು ಸಲ್ಲಿಸುವಂತೆ ಅವರಿಗೆ ಮನವಿ ಮಾಡಿದೆ.


ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವಿವೇಕ್, ಯುವಕರನ್ನು ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಯುವ ಖೇಲ್ ಖುದ್ ಮಹಾಸಂಗದಿಂದ ಭಾರತೀಯ ಯುವ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಮಾತ್ರವಲ್ಲದೆ ವಿವಿಧ ಸಾಮಾಜಿಕ ವಿಷಯಗಳಿಗೆ ಸಕ್ರಿಯವಾಗಿ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಆರ್ ಈ ಎಕ್ಸ್ ಕರ್ಮವೀರ್ ಚಕ್ರ ಪ್ರಶಸ್ತಿನೀಡಿ ಗೌರವಿಸಿದೆ, ವರದಿ ಯೂತ್ ಕಿ ಆವಾಜ್.


ವಿವೇಕ್ ಅವರ ಈ ಯೋಜನೆ ಇಂದು ಸಾವಿರಾರು ಜನರನ್ನ ಒಳಗೊಂಡು ವಿದ್ಯಾರ್ಥಿಗಳು, ಐ ಟಿ ಉದ್ಯಮದ ಉದ್ಯೋಗಿಗಳು, ಇತರ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ. ಪುಣೆ ನಗರದಲ್ಲಿ ಸಂಭವಿಸಿದ ತೀವ್ರ ಮಳೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಶೇಖರಣೆಯಿಂದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡ ಘಟನೆ ವಿವೇಕ್ ಅವರನ್ನು ಈ ಕಾರ್ಯಕ್ಕೆ ಸಿದ್ಧರಾಗಲು ಪ್ರೇರೇಪಿಸಿತು. ಎಲ್ಲವೂ ಸರಕಾರದ ಕೆಲಸ ಎಂದು ಕೈಕಟ್ಟಿಕೂರುವ ನಮ್ಮ ಜಡ್ಡು ಹಿಡಿದ ಮನಃಸ್ಥಿತಿ ವಿವೇಕ್ ಗುರವ್ ಅವರ ಕಾರ್ಯಗಳಿಂದ ಬದಲಾಗಬೇಕಿದೆ, ಸುಸ್ಥಿರ ಸುಂದರ ಪರಿಸರ ನಿರ್ಮಾಣಕ್ಕೆ ನಾವು ಅವರೊಂದಿಗೆ ಕೈಜೋಡಿಸೋಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.