ದೆಹಲಿ ಅಗ್ನಿ ದುರಂತದಲ್ಲಿ ಕಟ್ಟಡದಲ್ಲಿ ಸಿಲುಕಿದ್ದ 11 ಜನರನ್ನು ಪ್ರಾಣ ಒತ್ತೆಯಿಟ್ಟು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಕಾರ್ಖಾನೆಯ ಬೆಂಕಿ ಅವಘಡದಲ್ಲಿ ಸಿಲುಕಿದ್ದ ಜನರನ್ನು ಕಾಪಾಡಲು ರಾಜ್ಯ ಅಗ್ನಿಶಾಮಕ ಇಲಾಖೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಫೈರ್‌ಮ್ಯಾನ್ ರಾಜೇಶ್ ಶುಕ್ಲಾರವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಭೇಟಿ ಮಾಡಿದ್ದಾರೆ.

ದೆಹಲಿ ಅಗ್ನಿ ದುರಂತದಲ್ಲಿ ಕಟ್ಟಡದಲ್ಲಿ ಸಿಲುಕಿದ್ದ 11 ಜನರನ್ನು ಪ್ರಾಣ ಒತ್ತೆಯಿಟ್ಟು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Tuesday December 10, 2019,

2 min Read

ಭಾನುವಾರದಂದು ದೆಹಲಿಯ ಝಾನ್ಸಿ ರಸ್ತೆಯ ಅನಾಜ್ ಮಂಡಿ ಪ್ರದೇಶದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅನಾಹುತದಲ್ಲಿ ಸುಮಾರು 43 ಜನರು ಪ್ರಾಣ ಕಳೆದುಕೊಂಡಿದ್ದು, 50 ಜನರು ಗಾಯಗೊಂಡಿದ್ದಾರೆ. ಬೆಂಕಿ ಹೊತ್ತಿ ಉರಿದ ಕಟ್ಟಡವನ್ನು ಸುಧಾರಿಸಲು ರಾಜ್ಯ ಅಗ್ನಿಶಾಮಕ ಇಲಾಖೆಗೆ 150 ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಸತತ ಐದು ಗಂಟೆಗಳ ಕಾಲವಕಾಶ ಬೇಕಾಯಿತು.


ಅಗ್ನಿಶಾಮಕ ದಳದ ಸಿಬ್ಬಂದಿಗಳಲ್ಲಿ, ಫೈಯರ್‌ಮ್ಯಾನ್ ರಾಜೇಶ್ ಶುಕ್ಲಾ ಅವರು ತಮ್ಮ‌ ಪ್ರಾಣವನ್ನೂ ಲೆಕ್ಕಿಸದೇ ಬೆಂಕಿ ಹೊತ್ತಿದ್ದ ಕಟ್ಟಡದ ಒಳಹೊಕ್ಕಿ 11 ಗಾಯಾಳುಗಳನ್ನು ರಕ್ಷಿಸಿದ್ದಾರೆ. ನಂತರ ಗಾಯಾಳುಗಳನ್ನು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆ (ಎಲ್ಎನ್ಜೆಪಿ), ಆರ್‌ಎಂಎಎಲ್ ಆಸ್ಪತ್ರೆ, ಲೇಡಿ ಹಾರ್ಡಿಂಗ್ ಆಸ್ಪತ್ರೆ ಹಾಗೂ ಹಿಂದೂ ರಾವ್ ಆಸ್ಪತ್ರೆಗಳಂತಹ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.


ಪಿಟಿಐ ಜೊತೆ ಮಾತನಾಡಿದ ರಾಜೇಶ್,


"ನಾನು ಇದುವರೆಗೂ ಸುಮಾರು 7,000 ಅಗ್ನಿಶಾಮಕ ರಕ್ಷಣೆಗಾಗಿ ಕರೆಗಳನ್ನು ನಿಭಾಯಿಸಿದ್ದೇನೆ ಹಾಗೂ ಕರೋಲ್ ಬಾಗ್‌ನಲ್ಲಿನ ಹೋಟೆಲ್ ಆರ್ಪಿಟ್ ಪ್ಯಾಲೇಸ್ ನಲ್ಲಿ ಸಂಭವಸಿದ ಬೆಂಕಿ ಮತ್ತು ಇತ್ತೀಚಿನ ಏಮ್ಸ್ ಆಸ್ಪತ್ರೆಯ ಬೆಂಕಿಯ ಸಂದರ್ಭದಲ್ಲಿ ನಮ್ಮ ತಂಡದ ರಕ್ಷಣಾ ಕಾರ್ಯಾಚರಣೆಯ ಒಂದು ಭಾಗವಾಗಿತ್ತು. ನಿಜಕ್ಕೂ ಸಾವುನೋವುಗಳ ವಿಷಯದಲ್ಲಿ ಇದೊಂದು ದೊಡ್ಡ ಅಪಾಯಕಾರಿ ಬೆಂಕಿಯಾಗಿದೆ," ಎಂದು ಇಂಡಿಯಾ ಟುಡೆ ವರದಿ ಮಾಡಿದೆ.


ಫೈರ್‌ಮ್ಯಾನ್ ರಾಜೇಶ್ ಶುಕ್ಲಾ (ಎಡಬದಿಯಲ್ಲಿ) ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವ ಡಾ. ಹರ್ಶ್ವ್ ವರ್ಧನ್ (ಚಿತ್ರಕೃಪೆ: ದಿ ಟ್ರಿಬ್ಯೂನ್)




ಬೆಳಿಗ್ಗೆ 5:22 ರ ಸುಮಾರಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ದಪ್ಪ ಕಪ್ಪು ಹೊಗೆಯಿಂದ ಕಟ್ಟಡ ಆವರಿಸಿತ್ತು. ಇದರ ಹೊರತಾಗಿಯೂ, ಅಪಾಯದಲ್ಲಿ ಸಿಲುಕಿದ್ದವರ ರಕ್ಷಣೆಗೆ ತಮ್ಮ‌ ಪ್ರಾಣ ಒತ್ತೆಯಿಟ್ಟು ರಾಜೇಶ್ ಸುಮಾರು 12 ಬಾರಿ ಕಟ್ಟಡದೊಳಗೆ ಪ್ರವೇಶಿಸಬೇಕಾಯಿತು. ಈ ಸಮಯದಲ್ಲಿ ಬೆಂಕಿ ಕಾವಿಗೆ ಅವರಿಗೆ ತೀವ್ರವಾಗಿ ಗಾಯವಾಗಿರುವುದಲ್ಲದೇ ಕಪ್ಪಾದ ದಟ್ಟ ಹೊಗೆ ತೀವ್ರವಾದ ತಲೆನೋವನ್ನು ಉಂಟುಮಾಡಿದೆ.


ಜಾರ್ಖಂಡ್‌ನ ನಾಮ್‌ಕುಮ್‌ನ ಟೀತ್ರಿ ಟೋಲಿಯ ನಿವಾಸಿಯಾದ ರಾಜೇಶ್, ದೆಹಲಿ ಅಗ್ನಿಶಾಮಕ ಇಲಾಖೆಯಲ್ಲಿ ಹಳೆಯ ದೆಹಲಿಯ ಅಸಿಸ್ಟೆಂಟ್ ಡಿವಿಷನಲ್ ಅಧಿಕಾರಿಯಾಗಿರುವ ಅವರು 2004 ರಿಂದ ಇಲಾಖೆಯ ಸದಸ್ಯರಾಗಿದ್ದಾರೆ.


ಕಾರ್ಯಾಚರಣೆಯ ಕೊನೆಯವರಗೆ ಸುಮಾರು 63 ಗಾಯಾಳುಗಳನ್ನು ಕಟ್ಟಡದಿಂದ ರಕ್ಷಿಸಲಾಗಿದೆ. ಎನ್‌ಡಿಟಿವಿಯ ವರದಿ ಪ್ರಕಾರ, ಫೈಯರ್‌ಮ್ಯಾನ್‌ನ ಈ ಸಾಹಸ ಪ್ರಯತ್ನವನ್ನು ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್ ಪ್ರಶಂಸಿದ್ದಾರೆ.


ಮಾತನಾಡಿದ ಅವರು, “ಫೈರ್‌ಮ್ಯಾನ್ ರಾಜೇಶ್ ಶುಕ್ಲಾ ನಿಜವಾದ ನಾಯಕ. ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಪ್ರವೇಶಿಸಿದ ಮೊದಲ ಅಗ್ನಿಶಾಮಕ ಸಿಬ್ಬಂದಿಯಾಗಿದ್ದು, ಅವರು ಸುಮಾರು 11 ಜೀವಗಳನ್ನು ಉಳಿಸಿದ್ದಾರೆ. ಅವರ ಮೂಳೆಗೆ ಗಾಯವಾಗಿದ್ದರೂ ಕೊನೆಯವರೆಗೂ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಈ ಧೈರ್ಯಶಾಲಿ ನಾಯಕನಿಗೆ ನಮಸ್ಕಾರ,” ಎಂದರು.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.