ಶೂ ಗಳಿಲ್ಲದ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡು ಓಡಿದ 11 ವರ್ಷದ ಬಾಲೆ 3 ಚಿನ್ನದ ಪದಕದ ಒಡತಿ
ಫಿಲಿಪೈನ್ಸ್ನ 11 ವರ್ಷದ ರಿಯಾ ಬುಲೋಸ್ ತನ್ನ ಕಾಲುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು, ಇಲೊಯಿಲೊ ಸ್ಪೋರ್ಟ್ಸ್ ಕೌನ್ಸಿಲ್ ಮೀಟ್ನಲ್ಲಿ ಓಡಿ 3 ಚಿನ್ನದ ಪದಕಗಳನ್ನು ಗೆದ್ದಿದ್ದಾಳೆ.
ಅದು 1953 ರ ಕಾಲಘಟ್ಟ ಪಂಜಾಬಿನ, ಪುಟ್ಟ ಬಾಲಕ, ಬರಿಯ ಕಾಲುಗಳಲ್ಲಿ ಓದುವ ರೈಲಿನ ಬೆನ್ನು ಹತ್ತುತ್ತಿದ್ದ, ಅದೇ ಬಾಲಕ ಮಿಲ್ಕಾ ಸಿಂಗ್ ಮುಂದೆ ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ. ಬಹುಶಃ ಫರಾನ್ ಅಕ್ತರ್ ಅವರ ಭಾಗ್ ಮಿಲ್ಕಾ ಭಾಗ್ ಚಲನಚಿತ್ರ ನೋಡಿದವರಿಗೆ ಈ ಘಟನೆಗಳು ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ಯಾವುದೇ ಶೂಗಳಿಲ್ಲದೆ ಬರಿಯ ಕಾಲಿನಲ್ಲಿ ಓಡಿ ಗುರಿ ಮುಟ್ಟಿದ ಮಿಲ್ಕಾ ಸಿಂಗ್ ಅದೆಷ್ಟೋ ಜನರಿಗೆ ಸ್ಪೂರ್ತಿಯನ್ನು ತುಂಬಿದ್ದಾರೆ.
ಪ್ರತಿಭೆಗೆ ಬಡತನ ಸಿರಿತನ ಎಂಬ ಭೇದವಿಲ್ಲ. ಸತತ ಪರಿಶ್ರಮ, ಕಠಿಣ ಅಭ್ಯಾಸ, ಸಾಧಿಸುವ ಛಲ, ಇವುಗಳು ಮಾತ್ರ ಮುಖ್ಯ. ಇದೇ ರೀತಿಯ ಸ್ಪೂರ್ತಿದಾಯಕ ಕತೆ ಫಿಲಿಪೈನ್ಸ್ನ 11 ರ ರಿಯಾ ಬುಲೋಸ್ ಬಾಲೆಯದ್ದು.
ಫಿಲಿಪೈನ್ಸ್ನ 11 ವರ್ಷದ ಕ್ರೀಡಾಪಟು ರಿಯಾ ಬುಲೋಸ್ ಇಲೊಯಿಲೊ ಸ್ಪೋರ್ಟ್ಸ್ ಕೌನ್ಸಿಲ್ ಮೀಟ್ನಲ್ಲಿ 400 ಮೀಟರ್, 800 ಮೀಟರ್ ಮತ್ತು 1,500 ಮೀಟರ್ ಡ್ಯಾಶ್ ಓಟ ದಲ್ಲಿ ಭಾಗವಹಿಸಿದ್ದರು. ಸಾಮಾನ್ಯವಾಗಿ ಇತರ ಮಕ್ಕಳು ವಿವಿಧ ಬ್ರಾಂಡ್ ಗಳ ಶೂ ಧರಿಸಿ ಕಣಕ್ಕಿಳಿದರೆ ಬುಲೋಸ್ ತಮ್ಮ ಕಾಲಿಗೆ ಬ್ಯಾಂಡೇಜ್ ಅನ್ನು ಸುತ್ತಿ ಅದರ ಮೇಲೆ ನೈಕ್ ಕಂಪನಿಯ ಲೋಗೋ ಹಾಗೂ ನೈಕ್ ಎಂದು ಬರೆದುಕೊಂಡಿದ್ದರು, ವರದಿ ಟೈಮ್ಸ್ ನೌ ನ್ಯೂಸ್.
ಈಕೆಯ ಫೋಟೋವನ್ನು ಆಕೆಯ ತರಬೇತುದಾರ ರಾದ ಪ್ರಿಡಿರಿಕ್ ಬಿ. ವೇಲೆನ್ಜುವೆಲಾ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಇದು ಬರೋಬ್ಬರಿ 1,000 ಕ್ಕೂ ಹೆಚ್ಚು ಷೇರುಗಳನ್ನು ಪಡೆದಿದೆ ಮತ್ತು 2,400 ಲೈಕ್ಗಳನ್ನು ಹೊಂದಿದೆ. ಬಾಲಕಿಯ ಸಮರ್ಪಣೆ ಮತ್ತು ಉತ್ಸಾಹವನ್ನು ಸಾವಿರಾರು ಜನರು ಶ್ಲಾಘಿಸುವುದರೊಂದಿಗೆ ಚಿತ್ರಗಳನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಬುಲೋಸ್ನ ಕಥೆ ಫಿಲಿಪಿನೋ-ಅಮೇರಿಕನ್ ತರಬೇತುದಾರ ಜೆಫ್ ಕರಿಯಾಸೊ ಅವರ ಗಮನ ಸೆಳೆಯಿತು, ಅವರು ಹುಡುಗಿ ಮತ್ತು ಅವರ ಅವರ ತರಬೇತುದಾರ ರೊಂದಿಗೆ ಮಾತನಾಡಲು ಅಪೇಕ್ಷಿಸಿ ಟ್ವೀಟ್ ಕೂಡಾ ಮಾಡಿದ್ದಾರೆ.
ಆಕೆಯ ಪರಿಶ್ರಮಕ್ಕೆ ಮೆಚ್ಚಿ ಜಗತ್ತಿನ ಹಲವು ಮೂಲೆಗಳಿಂದ ಜನರು ಶೂ ಅನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಆಕೆಗೆ ಪ್ರೋತ್ಸಾಹದ ಮಾತುಗಳ ಮೂಲಕ ಹುರಿದುಂಬಿಸುತ್ತಿದ್ದಾರೆ. ನೈಕ್ ಕಂಪನಿ ಕೂಡ ಇದರತ್ತ ಗಮನ ಹರಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ರಿಯಾ ಆವರ ಮನಮಿಡಿಯುವ ಈ ಸಾಧನೆ ಅವಳಂತೆ ಬಡತನದಲ್ಲಿ, ಇದ್ದೂ ಅಪಾರ ಪ್ರತಿಭೆಯನ್ನು ಹೊಂದಿರುವ ಮಕ್ಕಳಲ್ಲಿ ಹೊಸ ಭರವಸೆಯನ್ನು ಮೂಡಿಸಲಿ ಎಂದು ಆಶಿಸೋಣ, ರಿಯಾ ಮುಂದಿನ ದಿನಗಳಲ್ಲಿ ತನ್ನೆಲ್ಲಾ ಅಡೆತಡೆಗಳನ್ನು ಮೀರಿ ಉತ್ತಮ ಕ್ರೀಡಾ ಪಟು ಆಗಲಿ ಎಂದು ಹಾರೈಸೋಣ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.