ಸೋನು ಸೂದ್‌ ಹೆಸರಿನಲ್ಲಿ ಉಚಿತ ಆಂಬ್ಯೂಲೆನ್ಸ್‌ ಸೇವೆ ಪ್ರಾರಂಭಿಸಿದ ಹೈದರಾಬಾದ್‌ ನಿವಾಸಿ

ಲಾಕ್‌ಡೌನ್‌ನಲ್ಲಿ ನಟ ಸೋನು ಸೂದ್‌ ಅವರು ಬಡವರಿಗೆ ಮಾಡಿದ ಸಹಾಯದಿಂದ ಸ್ಪೂರ್ತಿ ಪಡೆದು ಹೈದರಾಬಾದ್‌ ನಿವಾಸಿ ಉಚಿತ ಆಂಬ್ಯೂಲೆನ್ಸ್‌ ಸೇವೆ ಆರಂಭಿಸಿದ್ದಾರೆ.

ಸೋನು ಸೂದ್‌ ಹೆಸರಿನಲ್ಲಿ ಉಚಿತ ಆಂಬ್ಯೂಲೆನ್ಸ್‌ ಸೇವೆ ಪ್ರಾರಂಭಿಸಿದ ಹೈದರಾಬಾದ್‌ ನಿವಾಸಿ

Friday January 22, 2021,

1 min Read

ಕೊರೊನಾ ಹಾವಳಿಯ ನಡುವೆ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚುವ ನಟ ಸೋನು ಸೂದ್‌ ನಿಜ ಜೀವನದಲ್ಲಿ ನಾಯಕನಾಗಿ ಹಲವರಿಗೆ ಸಹಾಯಮಾಡಿದ್ದಾರೆ. ಸಾವಿರಾರು ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಿದ ಇವರ ಕೆಲಸ ಅಲ್ಲಿಗೆ ಕೊನೆಯಾಗದೆ ಇನ್ನೂ ಅನೇಕರಿಗೆ ಈ ರೀತಿಯ ಕಾರ್ಯಗಳಲ್ಲಿ ತೊಡಗುವಂತೆ ಪ್ರೇರೆಪಿಸುತ್ತಿದೆ.


ಸೋನು ಸೂದ್‌ ಅವರ ಮಾನವೀಯತೆಯಿಂದ ಪ್ರೇರಣೆ ಪಡೆದು ಶಿವ ಎನ್ನುವ ಹೈದರಾಬಾದ್‌ನ ನಿವಾಸಿ ಅವರ ಹೆಸರಲ್ಲಿ ಉಚಿತ ಆಂಬ್ಯೂಲೆನ್ಸ್‌ ಸೇವೆ ಆರಂಭಿಸಿದ್ದಾರೆ. ಅದರ ಉದ್ಘಾಟನೆಗೆ ಸೋನು ಅವರು ಹಾಜರಿದ್ದದ್ದು ವಿಶೇಷ.


"ಆಂಬ್ಯೂಲೆನ್ಸ್‌ ಸೇವೆಯ ಉದ್ಘಾಟನೆಗೆ ಬಂದದ್ದು ನನ್ನ ಅದೃಷ್ಟ. ಎಲ್ಲ ಶ್ರೇಯ ಶಿವ ಅವರಿಗೆ ಸಲ್ಲುತ್ತದೆ. ಜನರಿಗೆ ಶಿವ ಅವರು ಮಾಡುವ ಸಹಾಯದ ಬಗ್ಗೆ ತುಂಬಾ ಕೇಳಿದ್ದೇನೆ. ಶಿವ ಅಂತವರು ನಮ್ಮ ಸಮಾಜಕ್ಕೆ ಬೇಕು. ಹೀಗೆ ಎಲ್ಲರು ಮುಂದೆ ಬಂದು ಇತರರಿಗೆ ಸಹಾಯ ಮಾಡಬೇಕು,” ಎಂದು ನಟ ಸೋನು ಸೂದ್‌ ಇಂಡಲ್ಜ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


“ಶಿವ ಅಂತವರು ಇತರರಿಗೆ ಪ್ರೇರನೆ ನೀಡುತ್ತಾರೆ, ಇತರರು ಸಮಾಜಕ್ಕೆ ಪ್ರೇರಣೆ ನೀಡುತ್ತಾರೆ. ಅವಷ್ಯಕತೆ ಇದ್ದವರ ಪಾಲಿಗೆ ಸಹಾಯ ಮಾಡುತ್ತಾ ಹಲವಾರು ಜೀವಗಳನ್ನು ಉಳಿಸುವ ಈ ಕೆಲಸವನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ,” ಎಂದರು ಅವರು.

ಚಿತ್ರಕೃಪೆ: ತೆಲಂಗಾಣಾ ಟುಡೇ

ತೆಲಂಗಾಣಾ ಟುಡೇಯೊಂದಿಗೆ ಮಾತನಾಡುತ್ತಾ ಶಿವ, “ಆಂಬ್ಯುಲೆನ್ಸ್‌ ಸೇವೆಗೆ ಸೋನು ಸೂದ್‌ ಆಂಬ್ಯುಲೆನ್ಸ್‌ ಸರ್ವಿಸ್‌ ಎಂದು ಹೆಸರಿಟ್ಟಿದ್ದೇನೆ ಏಕೆಂದರೆ ಅವರ ಒಳ್ಳೇಯ ಕೆಲಸದಿಂದ ಸ್ಪೂರ್ತಿ ಪಡೆದಿದ್ದೇನೆ,” ಎಂದರು.


ಹುಸ್ಸೇನ್‌ನಗರ ಕೆರೆಯಲ್ಲಿ ಮುಳುಗುತ್ತಿರುವವರನ್ನು ಕಾಪಾಡುವುದಕ್ಕೆ ಶಿವ ಹೆಸರುವಾಸಿಯಾಗಿದ್ದಾರೆ. ಹಲವು ವರದಿಗಳ ಪ್ರಕಾರ ಶಿವ ಇಲ್ಲಿಯವರೆಗೂ ನೂರಕ್ಕೂ ಅಧಿಕ ಜನರನ್ನು ಕಾಪಾಡಿದ್ದಾರೆ. ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಕಾಪಾಡುವ ಶಿವ ಅವರನ್ನು ʼಟ್ಯಾಂಕ್‌ ಬಂಡ್‌ ಶಿವಾʼ ಎಂದೂ ಕರೆಯುತ್ತಾರೆ. ಕೆರೆಯಲ್ಲಿ ತಮ್ಮ ಸಹೋದರ ಮುಳುಗಿ ಕೊನೆಯುಸಿರೆಳೆದಾಗಿನಿಂದ ಶಿವ ಅವರು ಈ ಕೆಲಸ ಮಾಡುತ್ತಿದ್ದಾರೆ.


ಅದಲ್ಲದೆ ಸ್ಥಳೀಯ ಪೊಲೀಸರಿಗೆ ಕೆರೆಯಿಂದ ಶವ ಹೊರತೆಗೆಯಲು ಇವರು ಸಹಾಯ ಮಾಡುತ್ತಿದ್ದಾರೆ.


ಇವರ ಸೇವೆಯನ್ನು ಗಮನಿಸಿ ಹಲವರು ಅವರಿಗೆ ಹಣ ದೇಣಿಗೆ ನೀಡುತ್ತಿದ್ದಾರೆ. ಆ ಹಣದಿಂದ ಅವರು ಆಂಬ್ಯುಲೆನ್ಸ್‌ ಕೊಂಡಿದ್ದಾರೆ. ಉಚಿತ ದೂರವಾಣಿ ಸಂಖ್ಯೆಯ ಮುಖಾಂತರ ಆಂಬ್ಯುಲೆನ್ಸ್‌ ಅನ್ನು ಸಂಪರ್ಕಿಸಬಹುದಾಗಿದೆ.