ವಿಕಲಚೇತನರಿಗೆ ಉದ್ಯೋಗ ನೀಡಿ ಅವರನ್ನು ಸಶಕ್ತರನ್ನಾಗಿಸುತ್ತಿರುವ ಫ್ಲಿಪ್‌ಕಾರ್ಟ್‌

ವಿಕಲಚೇತನರಿಗೆ ಉದ್ಯೋಗ ನೀಡಿ ಅವರನ್ನು ಸಶಕ್ತರನ್ನಾಗಿಸಲು ಮುಂದಾಗಿರುವ ಫ್ಲಿಪ್‌ಕಾರ್ಟ್‌ನ ಲಾಜಿಸ್ಟಿಕ್ಸ್ ವಿಭಾಗ ಇ-ಕಾರ್ಟ್, ಕಾರ್ಯಸ್ಥಳದಲ್ಲಿ ವಿಕಲಚೇತನರನ್ನು ಒಳಗೊಂಡಿರುವ ನೀತಿಯನ್ನು ಪ್ರಾರಂಭಿಸಿದೆ, ಇದು ವಿಕಲಚೇತನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಲ್ಲದೆ, ಅವರ ಬೆಂಬಲಕ್ಕೆ ನಿಲ್ಲಲು ಸಹಾಯಕವಾಗಿದೆ.

ವಿಕಲಚೇತನರಿಗೆ ಉದ್ಯೋಗ ನೀಡಿ ಅವರನ್ನು ಸಶಕ್ತರನ್ನಾಗಿಸುತ್ತಿರುವ ಫ್ಲಿಪ್‌ಕಾರ್ಟ್‌

Friday August 23, 2019,

3 min Read

2011 ರ ಜನಗಣತಿಯ ಪ್ರಕಾರ, ಭಾರತದ 121 ಕೋಟಿ ಜನಸಂಖ್ಯೆಯಲ್ಲಿ, 2.68 ಕೋಟಿ ಜನರು ಒಂದಲ್ಲ ಒಂದು ರೀತಿಯ ಅಂಗವೈಕಲ್ಯತೆಯನ್ನು ಹೊಂದಿದ್ದಾರೆ. ಇವರಲ್ಲಿ 55 ಪ್ರತಿಶತದಷ್ಟು ಜನರು ಸಾಕ್ಷರರಾಗಿದ್ದರೂ ಕೂಡ ಕೇವಲ ಶೇಕಡಾ 36 ಕ್ಕಿಂತ ಕಡಿಮೆ ಜನರು ಉದ್ಯೋಗದಲ್ಲಿದ್ದಾರೆ.


ಭಾರತದಲ್ಲಿ ವಿಕಲಚೇತನರ ಉದ್ಯೋಗದ ಪ್ರಮಾಣವು 1991 ರಲ್ಲಿ ಪ್ರತಿಶತಃ 42.7 ರಿಂದ 2002 ರಲ್ಲಿ 37.6ಕ್ಕೆ ಇಳಿದಿದೆ ಎಂದು 2007 ರ ವಿಶ್ವಬ್ಯಾಂಕ್ ವರದಿಯು ಹೇಳುತ್ತದೆ.


ಭಾರತದ ವಿಕಲಚೇತನರಲ್ಲಿ ಶೇಕಡಾ 36 ಕ್ಕಿಂತ ಕಡಿಮೆ ಜನರು ಉದ್ಯೋಗದಲ್ಲಿದ್ದಾರೆ. ಚಿತ್ರ ಕೃಪೆ: ಶಟರ್ ಸ್ಟಾಕ್


ಸಾಮಾನ್ಯವಾಗಿ ಅಂಗವೈಕಲ್ಯತೆಯು ಅಸಮರ್ಥತೆ, ಅಸಮರ್ಪಕತೆ, ನಕಾರಾತ್ಮಕ ಚಿತ್ರಣ ಮತ್ತು ಒಂದೇ ಮಾದರಿಯ ನಡುವಳಿಕೆಗಳೊಂದಿಗೆ ಬೆಸೆದುಕೊಂಡಿರುತ್ತದೆ. ಇದರಿಂದಾಗಿ ಕಂಪನಿಗಳು ವಿಕಲಚೇತನರಿಗೆ (ಪಿಡಬ್ಲ್ಯುಡಿ) ಉದ್ಯೋಗವನ್ನು ನಿರಾಕರಿಸುತ್ತವೆ, ಇದೇ ಕಾರಣದಿಂದಾಗಿ ಅವರು ಬಡತನದ ಬೇಗೆಯಿಂದ ಹೊರಬರುವುದು ಕಠಿಣವಾಗುತ್ತದೆ. ಜೊತೆಗೆ ಸಂಸ್ಥೆಗಳು ಕೂಡ ಅವರನ್ನು ಒಳಗೊಂಡಿರುವ ಕಾರ್ಯಸ್ಥಳದ ನೀತಿಗಳು ಮತ್ತು ಸಂವೇದನಾಶೀಲ ಕಾರ್ಯಕ್ರಮಗಳನ್ನು ರೂಪಿಸಲು ಹಿಂದೇಟು ಹಾಕುತ್ತವೆ.


ಆದರೆ, ಫ್ಲಿಪ್‌ಕಾರ್ಟ್ ಬದಲಾವಣೆಗೆ ಚಾಲನೆ ನೀಡುತ್ತಿದೆ. ಭಾರತದ ಈ ಪ್ರಮುಖ ಇ-ಕಾಮರ್ಸ್ ಸಂಸ್ಥೆಯ ಲಾಜಿಸ್ಟಿಕ್ಸ್ ಆರ್ಮ್ ಇ-ಕಾರ್ಟ್, 2017 ರಲ್ಲಿ ವಿಕಲಚೇತನರಿಗಾಗಿ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.


ಶ್ರವಣ ಮತ್ತು ಮಾತಿನ ದೌರ್ಬಲ್ಯದಿಂದ ಬಳಲುತ್ತಿರುವ ನಂದೀಷಾ ಸಿ, ಫ್ಲಿಪ್‌ಕಾರ್ಟ್‌ನ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಾರೆ.


ಪ್ರಸ್ತುತ, ಫ್ಲಿಪ್‌ಕಾರ್ಟ್ ಈ ಕಾರ್ಯಕ್ರಮದ ಭಾಗವಾಗಿ ಬೇರ್ಪಡಿಸುವವರು, ಎತ್ತಿಕೊಂಡು ಸಾಗಿಸುವರು, ಮತ್ತು ವಿತರಣಾ ಅಧಿಕಾರಿಗಳು ಸೇರಿದಂತೆ 300 ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳನ್ನು ಹೊಂದಿದೆ.


“ಇದು ವಿಕಲಚೇತನರಿಗೆ ಸಮಾನ ವೇದಿಕೆಯನ್ನು ಒದಗಿಸುವ ಮತ್ತು, ಅವರ ವಿಶೇಷ ಅಗತ್ಯಗಳನ್ನು ಪೂರೈಸಿ ಅವರನ್ನು ಸುತ್ತುವರೆದಿರುವ ಕಳಂಕವನ್ನು ಹೋಗಲಾಡಿಸುವ ನಮ್ಮ ಪ್ರಯತ್ನವಾಗಿದೆ. ಈ ನಮ್ಮ ಪ್ರಯತ್ನವು ಗ್ರಾಹಕರು ಮತ್ತು ಇತರ ಪಾಲುದಾರರಿಂದ ಬಹಳವಾಗಿ ಸ್ವಾಗತಿಸಲ್ಪಟ್ಟಿದೆ. ಫ್ಲಿಪ್‌ಕಾರ್ಟ್ ಈ ಪ್ರಯತ್ನವನ್ನು ಮುಂದುವರೆಸುವ ಗುರಿ ಹೊಂದಿದೆ” ಎಂದು ಇ-ಕಾರ್ಟ್‌ನ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಸೋಷಿಯಲ್ ಸ್ಟೋರಿಗೆ ತಿಳಿಸಿದ್ದಾರೆ.


ಇಡಿಎಬಿ ಕಾರ್ಯಕ್ರಮ


ಅಮೆರಿಕದ ಖ್ಯಾತ ಉದ್ಯಮಿ ಮತ್ತು ಲೇಖಕ ಎರಿಕ್ ರೈಸ್ ಒಮ್ಮೆ ಹೀಗೆ ಹೇಳಿದರು, “ಪ್ರತಿಭೆಯ ಮೇಲೆ ನೇಮಕ ಮಾಡಿಕೊಳ್ಳುವುದು ಉತ್ತಮವಾಗಿದೆ. ಆದರೆ ಜನರನ್ನು ಅವರ ಕೆಲಸ ಮತ್ತು ಫಲಿತಾಂಶಗಳ ಆಧಾರದ ಮೇಲೆ ನಿರ್ಣಯಿಸಬೇಕು, ಅವರ ಮೇಲ್ನೋಟದ ಗುಣಗಳಿಂದಲ್ಲ.”


ಈ ಧ್ಯೇಯವು ಪ್ಲಿಪ್‌ಕಾರ್ಟ್‌ನ ಇಡಿಎಬಿ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು. ಆರಂಭದಲ್ಲಿ, ತಂಡವು ಅಸ್ತಿತ್ವದಲ್ಲಿರುವ ಅಂತರಗಳನ್ನು ಮತ್ತು ಅವುಗಳನ್ನು ತುಂಬಲು ಯಾವ ರೀತಿಯ ತರಬೇತಿಯನ್ನು ನೀಡಬೇಕು ಎಂಬುದನ್ನು ನಿರ್ಧರಿಸಲು ಮೂರು ತಿಂಗಳುಗಳನ್ನು ತೆಗೆದುಕೊಂಡಿತು. ಮಾದರಿ ಕಾರ್ಯಕ್ರಮದ ಯಶಸ್ಸಿನ ನಂತರ, ಸಂಸ್ಥೆ ಅದನ್ನು ತನ್ನ ಶಾಶ್ವತ ಮಾನವ ಸಂಪನ್ಮೂಲ ನೀತಿಯ ಭಾಗವಾಗಿ ಅಳವಡಿಸಿಕೊಳ್ಳಲು ನಿರ್ಧರಿಸಿತು.


ಫ್ಲಿಪ್ಕಾರ್ಟ್ನ ಎಲ್ಲಾ ಉದ್ಯೋಗಿಗಳಿಗೆ ವಿಕಲಚೇತನರು ಎಲ್ಲರಂತೆ ಸಮಾನರೆಂದು ಮನವರಿಕೆ ಮಾಡಲು ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದೆ.


“ನೇಮಕಾತಿಗೊಂಡ ವಿಕಲಚೇತನರಿಗಾಗಿ ಸಮಗ್ರ ಇಂಡಕ್ಷನ್ ಕಾರ್ಯಕ್ರಮಗಳನ್ನು ಸೇರಿಸಲು ಕರಡು ನೀತಿಯನ್ನು ರೂಪಿಸಲಾಗಿದೆ. ಇದರ ಅನ್ವಯ ಸಂಕೇತ ಭಾಷಾ ವ್ಯಾಖ್ಯಾನಕಾರರು ಮತ್ತು ಸ್ಥಳೀಯ ಎನ್‌ಜಿಒಗಳ ಸಹಯೋಗದೊಂದಿಗೆ ತರಗತಿಗಳಲ್ಲಿನ ಬೋಧನೆಯೊಂದಿಗೆ ಉದ್ಯೋಗದ ಸ್ಥಳದಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ಇದಲ್ಲದೆ ಶ್ರವಣದೋಷವುಳ್ಳ ವಿತರಣಾ ಅಧಿಕಾರಿಗಳು ಸುಲಭವಾಗಿ ಸಂವಹನ ನಡೆಸಲು ಸಾಧ್ಯವಾಗುವಂತೆ ಅವರಿಗೆ ಫ್ಲಿಪ್‌ಕಾರ್ಟ್ ಬ್ಯಾಡ್ಜ್‌ಗಳು ಮತ್ತು ಫ್ಲ್ಯಾಷ್‌ಕಾರ್ಡ್‌ಗಳನ್ನು ಒದಗಿಸಲಾಗುತ್ತದೆ. ವಿಕಲಚೇತನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಸಂಸ್ಥೆಯು ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ತುರ್ತುಸೂಚಕ ವೈಶಿಷ್ಟ್ಯವನ್ನು ಕಡ್ಡಾಯಗೊಳಿಸಿದೆ” ಎಂದು ಅಮಿತೇಶ್ ಹೇಳುತ್ತಾರೆ.


ಭಾರತದಲ್ಲಿ, ವಿಕಲಚೇತನರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ ಮತ್ತು ಅವರು ಒಂದು ರೀತಿಯ ಕಳಂಕಿತರೆಂಬ ಅಪವಾದವನ್ನು ಎದುರಿಸುತ್ತಾರೆ. ಇದನ್ನು ಪರಿಹರಿಸಲು, ಫ್ಲಿಪ್ಕಾರ್ಟ್ ಎಲ್ಲಾ ಉದ್ಯೋಗಿಗಳಿಗೆ ವಿಕಲಚೇತನರೂ ಕೂಡ ಎಲ್ಲರಂತೆ ಸಮಾನರೆಂಬುದನ್ನು ಮನವರಿಕೆ ಮಾಡಿಕೊಡಲು ಸಂವೇದನಾಶೀಲ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ.


ಒಳಗೊಳ್ಳುವಿಕೆಯತ್ತ ಒಂದು ಹೆಜ್ಜೆ


ಅಮರೇಂದ್ರ ಡಿ ಹುಟ್ಟಿನಿಂದಲೇ ಮಾತು ಮತ್ತು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಸಂಪೂರ್ಣ ಅರ್ಹತೆಯಿದ್ದರೂ, ಅವರಿಗೆ ದೀರ್ಘಕಾಲದವರೆಗೆ ಕೆಲಸ ಸಿಗಲಿಲ್ಲ.


"ನನ್ನ ತಂದೆ ಬಹಳಷ್ಟು ಸಾಲ ಮಾಡಿದ್ದಾರೆ ಮತ್ತು ಅವುಗಳನ್ನು ತೀರಿಸಲು ನಾನು ಅವರಿಗೆ ಸಹಾಯ ಮಾಡಲು ಇಚ್ಚಿಸುತ್ತೇನೆ. ಆದರೆ ನಾನು ಅರ್ಜಿ ಸಲ್ಲಿಸಿದ ಹೆಚ್ಚಿನ ಕಂಪನಿಗಳು ನನ್ನ ಅಂಗವೈಕಲ್ಯದ ಆಧಾರದ ಮೇಲೆ ನನ್ನ ಅರ್ಜಿಯನ್ನು ತಿರಸ್ಕರಿಸಿದವು. ಅಂತಿಮವಾಗಿ, ಫ್ಲಿಪ್ಕಾರ್ಟ್ ಅವರ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಕೆಲಸ ಮಾಡಲು ನನಗೆ ಅವಕಾಶ ನೀಡಿತು. ಈಗ, ನನ್ನ ಗುರಿ ನಾನು ಎಷ್ಟು ಸಾಧ್ಯವೋ ಅಷ್ಟು ಕಲಿಯುವುದು ಮತ್ತು ಮುಂದಿನ ದಿನಗಳಲ್ಲಿ ತಂಡದ ನಾಯಕನಾಗುವುದು” ಎಂದು ಅಮರೇಂದ್ರ ಹೇಳುತ್ತಾರೆ.


ಫ್ಲಿಪ್ಕಾರ್ಟ್ನನ ಪ್ರಯತ್ನವು ವಿಕಲಚೇತನರನ್ನು ಸುತ್ತುವರೆದಿರುವ ಕಳಂಕಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವಾಗಿದೆ. ವಿಕಲಚೇತನ ಸಮುದಾಯವನ್ನು ಕಾರ್ಯಪಡೆಗೆ ಸಂಯೋಜಿಸುವ ಮೂಲಕ ಈ ಇ-ಕಾಮರ್ಸ್ ಕಂಪನಿಯು ಅವರನ್ನು ಸಶಕ್ತರನ್ನಾಗಿಸುವುದಲ್ಲದೆ ಅಂಗವೈಕಲ್ಯತೆಗೆ ಸಂಬಂಧಿಸಿದ ತಾರತಮ್ಯ ಮತ್ತು ನಕಾರಾತ್ಮಕ ವರ್ತನೆಗಳನ್ನು ತಡೆಯಲು ಹೋರಾಡುತ್ತಿದೆ.


ಫ್ಲಿಪ್‌ಕಾರ್ಟ್‌ನಂತೆಯೇ, ಇತರ ಅನೇಕ ಸಂಸ್ಥೆಗಳು ವಿಕಲಚೇತರನ್ನು ಒಳಗೊಂಡ ಕೆಲಸದ ಸಂಸ್ಕೃತಿಯನ್ನು ಉತ್ತೇಜಿಸಲು ಪ್ರಾರಂಭಿಸಿವೆ. ಚಿತ್ರ ಕೃಪೆ: ಶಟರ್ ಸ್ಟಾಕ್


ಅಂತೆಯೇ, ವಿಶಾಲ್ ಮೆಗಾ ಮಾರ್ಟ್, ಲ್ಯಾಂಡ್‌ಮಾರ್ಕ್, ಮತ್ತು ಕೆಫೆ ಕಾಫಿ ಡೇ ಮುಂತಾದ ಇತರ ಸಂಸ್ಥೆಗಳೂ ಸಹ ವಿಕಲಚೇತನರನ್ನು ನೇಮಿಸಿಕೊಂಡು ಅವರಿಗೆ ಬೆಂಬಲವನ್ನು ನೀಡುವ ಮೂಲಕ ವಿಕಲಚೇತನರನ್ನೊಳಗೊಂಡ ಕಾರ್ಯಸ್ಥಳವನ್ನು ರೂಪಿಸಲು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಪ್ರಾರಂಭಿಸಿವೆ.

“ಇದು ಎಲ್ಲರನ್ನೂ ಒಳಗೊಂಡ ಕೆಲಸದ ಸ್ಥಳವನ್ನು ನಿರ್ಮಿಸುವತ್ತ ನಮ್ಮ ಮೊದಲ ಹೆಜ್ಜೆಯಾಗಿದೆ. ಸಾಧಿಸಬೇಕಾದ್ದು ಇನ್ನೂ ಬಹಳಷ್ಟಿದೆ. ಸ್ಟಾರ್ಟಪ್ಗಳ ಪರಿಸರ ವ್ಯವಸ್ಥೆ ಮತ್ತು ಭಾರತದ ಕಾರ್ಪೊರೇಟ್ ಸಂಸ್ಥೆ ಎರಡೂ ಕೂಡ ವಿಕಲಚೇತನರ ಒಳಗೊಳ್ಳುವಿಕೆಯನ್ನು ಸಾಧಿಸಲು ಒಟ್ಟಾಗಿ ಸೇರಬೇಕಾಗಿದೆ. ಇದಕ್ಕಾಗಿ ಸಾಮೂಹಿಕ ಪ್ರಯತ್ನಗಳು ಅವಶ್ಯವಾಗಿವೆ” ಎಂದು ಅಮಿತೇಶ್ ಹೇಳುತ್ತಾರೆ.