ನಗರದ ನೀರು ಪೂರೈಕೆ ಸೌಲಭ್ಯ ನಿರ್ವಹಣೆಗೆ ರೊಬೊಟ್‌ ಬಳಸುತ್ತಿದೆ ಪುಣೆ ಮೂಲದ ‘ಫ್ಲುಯಿಡ್‌ ರೊಬೊಟಿಕ್ಸ್‌'

2016 ರಲ್ಲಿ ಆರಂಭವಾದ 'ಫ್ಲುಯಿಡ್‌ ರೊಬೊಟಿಕ್ಸ್‌' ನಗರದಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆ ಹಾಗೂ ಕಲುಷಿತ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನೀರಿನ ಶುದ್ಧತೆ ಪರೀಕ್ಷೆ ಹಾಗೂ ಕೊಳಕು ನೀರಿನ ಕೊಳವೆ ಜಾಲಗಳ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಬಳಸುತ್ತಿದೆ.

ನಗರದ ನೀರು ಪೂರೈಕೆ ಸೌಲಭ್ಯ ನಿರ್ವಹಣೆಗೆ ರೊಬೊಟ್‌ ಬಳಸುತ್ತಿದೆ ಪುಣೆ ಮೂಲದ ‘ಫ್ಲುಯಿಡ್‌ ರೊಬೊಟಿಕ್ಸ್‌'

Wednesday August 07, 2019,

4 min Read

ಭಾರತದ ನಗರದಲ್ಲಿಂದು ನೀರು ವಿತರಣೆ ಮತ್ತು ತ್ಯಾಜ್ಯ ನೀರಿನ ಸಂಸ್ಕರಣಾ ಜಾಲವು ಅಸಮರ್ಪಕವಾಗಿದೆ, ವಿತರಣೆಯ ವೇಳೆ ಸೋರಿಕೆ ಮತ್ತು ಅಕ್ರಮ ಟ್ಯಾಪ್‌ಗಳಿಂದ (ಆದಾಯೇತರ ನೀರು) ಶೇಕಡಾ 40 ರಿಂದ 50 ರಷ್ಟು ನೀರು ನಷ್ಟವಾಗುತ್ತಿದೆ. ಶೇಕಡಾ 20 ಕ್ಕಿಂತ ಕಡಿಮೆ ತ್ಯಾಜ್ಯ ನೀರನ್ನಷ್ಟೇ ಸಂಗ್ರಹಿಸಿ ಸಂಸ್ಕರಿಸಲಾಗುತ್ತಿದ್ದರೆ, ಉಳಿದ ನೀರು ನಮ್ಮ ಅಂತರ್ಜಲ, ಕೆರೆಗಳು, ನದಿಗಳು ಮತ್ತು ಕರಾವಳಿ ಪ್ರದೇಶಗಳನ್ನು ಸೇರಿ ಕಲುಶಿತಗೊಳಿಸುತ್ತಿವೆ. ಇದರ ಜತೆ ನೀರಿನ ನಷ್ಟ ಮತ್ತು ಮಾಲಿನ್ಯದ ಕುರಿತಾದ ಅಸಮರ್ಪಕ ಮಾಹಿತಿಯಿಂದಾಗಿ ಸ್ಥಳೀಯ ಸರ್ಕಾರಗಳನ್ನು ಅಣೆಕಟ್ಟು ನಿರ್ಮಿಸಲು ಮತ್ತು ನೀರಿನ ಹೊಸ ಮೂಲವನ್ನೊದಗಿಸಲು ಒತ್ತಾಯಿಸಲಾಗುತ್ತಿದೆ, ಪುನರಾಭಿವೃದ್ಧಿ ಮತ್ತು ನಗರದ ನೀರಿನ ಮೂಲ ಸೌಕರ್ಯದ ನಿರ್ವಹಣೆಯಿಂದ ಸಂಪನ್ಮೂಲಗಳನ್ನು ದೂರವಿಡಲಾಗುತ್ತಿದೆ.


q

ಫ್ಲುಯಿಡ್‌ ರೊಬೊಟಿಕ್ಸ್‌ನ ಸಂಸ್ಥಾಪಕರು


ಸಿಲಿಕಾನ್‌ ವ್ಯಾಲಿಯಿಂದ ಮುಂಬೈಗೆ ಹಿಂದಿರುಗಿದ ಅಸಿಮ್‌ ಭಲೇರಾವ್‌ರವರ ಅನುಭವದ ಫಲವಾಗಿ 2016 ರಲ್ಲಿ ಫ್ಲುಯಿಡ್‌ ರೊಬೊಟಿಕ್ಸ್‌ ಜನ್ಮತಾಳಿತು. ಕೊಳವೆಗಳ ಸಂಪರ್ಕದ ಕೊರತೆಯಿಂದ ‘ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನೀರಿಲ್ಲ’ ಎನ್ನುವ ಫಲಕವನ್ನು ವಸತಿ ಸಂಘ ಮತ್ತು ಕಚೇರಿ ಆವರಣಗಳಲ್ಲಿ ನಿಯಮಿತವಾಗಿ ಹಾಕುತ್ತಿರುವುದನ್ನು ಅವರು ಗಮನಿಸಿದ್ದರು.


ಆಳವಾಗಿ ಅಗೆದ ನಂತರ, ಕೊಳವೆಗಳ ಸರಿಯಾದ ನಕ್ಷೆಯನ್ನು ಸರ್ಕಾರ ಹೊಂದಿಲ್ಲವೆನ್ನುವುದನ್ನು ಅಸಿಮ್‌ರವರು ಕಂಡುಕೊಂಡರು, ಕೆಲವೊಮ್ಮೆ ಅಗೆಯಲು ಒಂದು ವಾರವೇ ಹಿಡಿಯುತ್ತಿತ್ತು. ಅವರು ಕೊಳವೆಯ ಮೇಲ್ಮೈ ತಲುಪಿದ ನಂತರ ಧ್ವನಿ ರಾಡ್‌ಗಳ ಜತೆ ತುಂಬಾ ಹಳೆಯ ಕಾಲದ ತಂತ್ರಜ್ಞಾನವನ್ನು ಬಳಸಿಕೊಂಡರು, ಇದು ಕೊಳವೆಗಳು ಚೆನ್ನಾಗಿವೆಯೋ ಅಥವಾ ಕೆಟ್ಟು ಹೋಗಿವೆಯೋ ಎಂದು ತಿಳಿಯಲು ಸಹಾಯಕವಾಗುತ್ತಿತ್ತು.


ನಗರದಲ್ಲಿ ಹೆಚ್ಚುತ್ತಿರುವ ನೀರಿನ ನಷ್ಟ ಮತ್ತು ಜಲ ಮಾಲಿನ್ಯ ಸಮಸ್ಯೆಯನ್ನು ನಿವಾರಿಸಲು ಕೃತಕ ಬುದ್ಧಿಮತ್ತೆ ಬಳಸಿ ನೀರು ಮತ್ತು ತ್ಯಾಜ್ಯ ನೀರಿನ ಕೊಳವೆಯನ್ನು ಪತ್ತೆಹಚ್ಚಲು ಅಸಿಮ್‌ರವರನ್ನು ಇದು ಪ್ರೇರೇಪಿಸಿತು. ನೀರಿನ ಸಮಸ್ಯೆ ಬಗೆಹರಿಸಲು ತಂತ್ರಜ್ಞಾನ ಬಳಸಿದ ಮೊದಲ ಕಂಪೆನಿ ಎಂದು ಫ್ಲುಯಿಡ್‌ ರೊಬೊಟಿಕ್ಸ್‌ ಹೇಳಿಕೊಂಡಿದೆ.


ಬಹು ಸಂವೇದಕ ರೋಬೋಟ್‌ಗಳು


ಕಂಪೆನಿಯು ಸದ್ಯ ಬಹು ಸಂವೇದಕ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಆರು ಇಂಚುಗಳಷ್ಟು ಚಿಕ್ಕ ವ್ಯಾಸ ಹೊಂದಿರುವ ಕೊಳವೆಗಳನ್ನು ಮತ್ತು 5X5 ಮೀಟರ್ ಗಳಷ್ಟು ದೊಡ್ಡ ಸುರಂಗಗಳನ್ನು ಪರಿಶೀಲಿಸುತ್ತದೆ. ಇದನ್ನು ಎರಡು ನಿರ್ಣಾಯಕ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ.


  • ಕೊಳವೆಗಳ ಉತ್ತಮ ನಿರ್ವಹಣೆಗಾಗಿ
  • ಕೆರೆಗಳ ಮತ್ತು ನದಿಗಳ ಸ್ವಚ್ಛತೆಗಾಗಿ


“ನಾವು ಈ ಉತ್ಪನ್ನದ ಉಪಯುಕ್ತತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ತಾಂತ್ರಿಕ ಹಿನ್ನೆಲೆ ಇಲ್ಲದವರೂ ಸಹ ಸುಲಭವಾಗಿ ಬಳಸಲು ಸಾಧ್ಯವಾಗುವಂತೆ ತಯಾರಿಸಿದ್ದೇವೆ” ಎಂದು ಅಸಿಮ್‌ರವರು ಹೇಳುತ್ತಾರೆ.


ದೋಷ ಪತ್ತೆ ಮಾಡಲು ಸಿಬ್ಬಂದಿಗಳಿಗೆ ಬದಲಾಗಿ ಯಂತ್ರಗಳಿಗೆ ಅವಕಾಶ ಮಾಡಿಕೊಡುವಂತಹ ಸಾಮರ್ಥ್ಯಹೊಂದಿರುವ ಕೃತಕ ಬುದ್ದಿಮತ್ತೆಯನ್ನು ಸಿದ್ದಪಡಿಸಲಾಗಿದೆ, ಇವು ಡೇಟಾ ಕುಶಲತೆಯನ್ನು ತಡೆಯುವಾಗ ತಡೆರಹಿತ ಡೇಟಾ ಸ್ವಾಧೀನಕ್ಕೆ ಮತ್ತು ದೃಶ್ಯೀಕರಣಕ್ಕೆ ಅನುವು ಮಾಡಿಕೊಡುತ್ತದೆ. ಕೊಳಕು ಮತ್ತು ಅಪಾಯಕಾರಿಯಾಗಿರುವ ಆಳವಾದ ಪೈಪ್‌ಲೈನ್‌ಗಳನ್ನು ಪರಿಶೀಲಿಸಲು ಮಾನವ ಘಟಕವನ್ನು ತೆಗೆದುಹಾಕುವುದಲ್ಲದೇ ದತ್ತಾಂಶ ವ್ಯಾಖ್ಯಾನದಲ್ಲಿಯೂ ಮಾನವ ಶ್ರಮವನ್ನು ಇದು ಕಡಿಮೆ ಮಾಡುತ್ತದೆ.


ಫ್ಲುಯಿಡ್‌ ರೊಬೊಟಿಕ್ಸ್‌ಗಳು ರೋಬೋಟ್‌-ಆಸ್-ಎ-ಸರ್ವಿಸ್‌ ಬಿಸನೆಸ್ ಮಾಡಲ್ (ರೋಬೋಟ್ ಸೇವಾ ವ್ಯವಹಾರ ಮಾದರಿ) ಅನ್ನು ಅವಲಂಬಿಸಿದೆ, ಯೋಜನೆಯ ವ್ಯಾಪ್ತಿ ಅಥವಾ ಚಂದಾದರಿಕೆಯ ಮೂಲಕ ಕಂಪೆನಿಯು ಶುಲ್ಕವನ್ನು ವಿಧಿಸುತ್ತದೆ. ಇದು ಸಾಫ್ಟ್‌ವೇರ್‌-ಆಸ್-ಎ-ಸರ್ವಿಸ್‌(ಸಾಸ್‌) ಮಾದರಿಯನ್ನು ಹೋಲುತ್ತದೆ, ಆದರೆ ರೋಬೋಟ್‌ಗಳನ್ನು (ಹಾರ್ಡ್‌ವೇರ್ + ಸಾಫ್ಟ್‌ವೇರ್) ವಾರ್ಷಿಕ ಆಧಾರದ ಮೇಲೆ ಗ್ರಾಹಕರಿಗೆ ಸೇವೆ/ಚಂದಾದಾರಿಕೆಯಾಗಿ ನೀಡಲಾಗುತ್ತದೆ.


ಈ ಸೇವೆಯ ಜತೆಗೆ ಪೋಟೋಗ್ರಾಫಿಕ್‌ ಸಮೀಕ್ಷೆ, ಹರಿವಿನ ಸಮೀಕ್ಷೆ, ಜಲ ವಿಜ್ಞಾನ ಮತ್ತು ಹೈಡ್ರಾಲಿಕ್‌ ಮಾಡೆಲಿಂಗ್‌ಗಳು ಸೇರಿವೆ, ಇವು ನದಿ ಅಥವಾ ಕೆರೆಗಳನ್ನು ನವೀಕರಿಸುವ ಕೆಲಸವನ್ನು ಮಾಡುತ್ತದೆ


ಕೊಳವೆಯ ಗಾತ್ರ ಮತ್ತು ಕೆಲಸದ ಸಂಕೀರ್ಣತೆಯ ಆಧಾರದ ಮೇಲೆ ಬೆಲೆಗಳು ಬದಲಾಗುತ್ತವೆ. ಉದಾಹರಣೆಗೆ, ಹೊಸ ಪೈಪ್‌ ಲೈನ್‌ಗಳ ಗುಣಮಟ್ಟವನ್ನು ಪರಿಶೀಲಿಸುವುದು ಹಾಗೂ ನಕ್ಷೆ ಮಾಡದೇ ಇರುವ ಆಳವಾದ ಚರಂಡಿಗಳಲ್ಲಿ ಅಡೆತಡೆಗಳನ್ನು ಪತ್ತೆ ಮಾಡುವುದು. ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ಟೆಂಡರ್‌ ಮೂಲಕ ಪರಿಹಾರ ಒದಗಿಸಲು, ಫ್ಲುಯಿಡ್‌ ರೊಬೊಟಿಕ್ಸ್‌ಗಳು ವಿವಿಧ ಭೂಪ್ರದೇಶಗಳಲ್ಲಿ ದೊಡ್ಡ ಖಾಸಗಿ ಕಂಪೆನಿಗಳೊಂದಿಗೆ ಕಾರ್ಯತಂತ್ರದ ಸಹಭಾಗಿತ್ವವನ್ನು ರೂಪಿಸಿದೆ.


ಜಲ ಮಾಲಿನ್ಯ ತಡೆಯಲು ಕೃತಕ ಬುದ್ಧಿಮತ್ತೆ


"ಗ್ರೇಟರ್‌ ಮುಂಬೈನ ಮುನ್ಸಿಪಲ್‌ ಕಾರ್ಪೋರೇಷನ್‌(ಎಂಸಿಜಿಎಂ) ಕಂಪೆನಿಯ ಮೂಲಕ ನದಿ ಮತ್ತು ಕೆರೆಗಳ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ದೇಶದಲ್ಲಿ ಮೊದಲ ಬಾರಿಗೆ ರೊಬೊಟಿಕ್ಸ್‌ ಕೃತಕ ಬುದ್ದಿಮತ್ತೆಯನ್ನು ಬಳಸಿಕೊಳ್ಳಲಾಯಿತು," ಎಂದು ಅಸಿಮ್‌ರವರು ಹೇಳುತ್ತಾರೆ.


"ಎಂಸಿಜಿಎಂನೊಂದಿಗಿನ (ಪೊವಾಯಿ ಕೆರೆ ಮತ್ತು ಮಿಥಿ ನದಿ ನವೀಕರಣಗೊಳಿಸುವಿಕೆ) ನಮ್ಮ ಮೊದಲೆರಡು ಯೋಜನೆಗಳೊಂದಿಗೆ, ಹೊಸ ಸಂಸ್ಕರಣ ಸಾಮರ್ಥ್ಯವನ್ನು ನಿರ್ಮಿಸುವ ಅಗತ್ಯವಿಲ್ಲದೆ, ಈ ಹಿಂದೆ ಜಲ ಮೂಲಗಳಿಗೆ ಹರಿಯುತ್ತಿದ್ದ ಸಂಸ್ಕರಿಸಲ್ಪಡದ 400 ಎಂಎಲ್‌ಡಿ ತ್ಯಾಜ್ಯ ನೀರನ್ನು ತಡೆಗಟ್ಟಲು, ತಿರುಗಿಸಲು ಮತ್ತು ಸಂಸ್ಕರಿಸಲು ಅವರಿಗೆ ಸಹಾಯ ಮಾಡಿದ್ದೇವೆ. ಅಷ್ಟೇ ಅಲ್ಲದೇ ಸಾವಿರಾರು ಗಂಟೆಗಳ ಮ್ಯಾನುಯೆಲ್‌ ಸ್ಕ್ಯಾವೆಂಜಿಂಗ್‌ ತಡೆಯಲು ಮತ್ತು 20 ಎಂಎಲ್‌ಡಿಗಿಂತ ಹೆಚ್ಚಿನ ನೀರು ಸೋರಿಕೆಯನ್ನು ಗುರುತಿಸಲು ಸಮರ್ಥರಾಗಿದ್ದೇವೆ."


ಕಂಪೆನಿಯು ಪುಣೆ, ಹೈದ್ರಾಬಾದ್ ಮತ್ತು ಬೆಂಗಳೂರು ಸೇರಿದಂತೆ ದೇಶದ ಹಲವಾರು ನಗರಗಳ ನದಿ ಮತ್ತು ಕೆರೆಗಳ ನವೀಕರಣ ಮತ್ತು ನಗರಗಳ ಜಲಮಾಲಿನ್ಯ ಸಮಸ್ಯೆ ಬಗೆಹರಿಸುವ ಕೆಲಸದಲ್ಲಿ ಯಶಸ್ವಿಯಾಗಿದೆ. 2018 ರಲ್ಲಿ ನವದೆಹಲಿಯಲ್ಲಿ ನಡೆದ ವಾಟರ್ ಅವಾರ್ಡ್‌ನಲ್ಲಿ ವಾಟರ್‌ ಆಟೋಮೇಷನ್‌ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಉನ್ನತ ಮಟ್ಟದ ಮನ್ನಣೆ ಗಳಿಸಿದೆ.


ಜಲ ಮಾಲಿನ್ಯದಿಂದ ಪರಿಣಾಮ ಬೀರುವ ಪ್ರದೇಶಗಳಲ್ಲಿ ತಂಡವು ಇಪ್ಪತ್ನಾಲ್ಕು ಗಂಟೆಯೂ ಇರಬೇಕಾದ ಕೆಲಸದ ಸ್ವರೂಪವು ಒಂದು ಸವಾಲಾಗಿತ್ತು ಎಂದು ಅಸಿಮ್‌ ವಿವರಿಸುತ್ತಾರೆ.


"ನಮ್ಮ ಕೆಲವು ಸೈಟ್‌ಗಳು ಕೊಳಗೇರಿಯ ಒಳಗೆ ಇದ್ದು ಅಲ್ಲಿನ ನಿವಾಸಿಗಳು ತಮ್ಮ ಮನೆ ಅಥವಾ ಅಂಗಡಿ ದೀಪಗಳನ್ನು ಇಟ್ಟುಕೊಂಡಿದ್ದಾರೆ, ಆದ್ದರಿಂದ ನಮ್ಮ ತಂಡವು ರಾತ್ರಿ ವೇಳೆ ಸುಲಭವಾಗಿ ಸಂಚರಿಸಬಹುದು ಮತ್ತು ಕೆಲವೊಮ್ಮೆ ಬಿಡುವಿನ ಸಮಯದಲ್ಲಿ ಅವರ ಜತೆ ಕ್ಯಾರಂ ಅಥವಾ ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಳ್ಳುತ್ತೇವೆ. ಅವರ ಬೆಂಬಲವು ನಮಗೆ ವಿನಮ್ರವಾಗಿದೆ ಮತ್ತು ಲಾಭದಾಯಕವಾಗಿದೆ."


ಫ್ಲುಯಿಡ್‌ ರೊಬೊಟಿಕ್ಸ್‌ನ ನಿರ್ದೇಶಕರಾದ ನಿಧಿ ಜೈನ್‌ರವರು ಮುಂದುವರಿದು ಹೀಗೆ ಹೇಳುತ್ತಾರೆ "ಭಾರತೀಯ ಸರ್ಕಾರಿ ವ್ಯವಸ್ಥೆಯನ್ನು ತಿಳಿಯುವುದು ಸಿಲಿಕಾನ್‌ ವ್ಯಾಲಿಯಲ್ಲಿ ದಶಕದವರೆಗೆ ಜೀವನ ನಡೆಸಿದ ನಂತರ ಕಷ್ಟಕರವಾಗಿತ್ತು. ಜಲ ಸಂಪನ್ಮೂಲ ನಿರ್ವಹಣೆಯೊಂದಿಗೆ ದೇಶದ ಕೆಲವು ಮೂಲಭೂತ ಸವಾಲುಗಳನ್ನು ಪರಿಹರಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಆದಾಗ್ಯೂ ನಾವು ಕೆಲವು ಸ್ಥಳೀಯ ಸರ್ಕಾರ ಮತ್ತು ಸ್ಟಾರ್ಟ್‌ಅಫ್‌ ಎಕ್ಸಲರೇಟರ್ಸ್‌ಗಳಿಂದ ಅಸಾಧಾರಣ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾದೆವು.”


ನೀರಿನ ಸಮಸ್ಯೆ ಮತ್ತು ತ್ಯಾಜ್ಯ ನೀರಿನ ನಡುವೆ ಆಂತರಿಕ ಸಂಬಂಧವನ್ನು ಹೊಂದಿವೆ ಹಾಗೂ ದೇಶಕ್ಕೆ ವಾರದಲ್ಲಿ ಇಪ್ಪತ್ನಾಲ್ಕು ಗಂಟೆಯೂ ನೀರಿನ ಸೌಲಭ್ಯ ಮತ್ತು ಶೂನ್ಯ ಜಲ ಮಾಲಿನ್ಯದ ಅವಶ್ಯಕತೆಯಿದ್ದರೆ ಎರಡೂ ಸಮಸ್ಯೆಯನ್ನು ಒಟ್ಟಿಗೇ ಬಗೆಹರಿಸಬೇಕು ಎನ್ನುವುದು ಅಸಿಮ್‌ರವರ ನಂಬಿಕೆಯಾಗಿದೆ. “ಒಂದು ಕಂಪೆನಿಯು ಒಬ್ಬಂಟಿಯಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ನೀರಿನ ವಿಷಯದಲ್ಲಿ ದೊಡ್ಡ ಪ್ರಮಾಣದ ಪರಿಣಾಮವನ್ನುಂಟು ಮಾಡಲು ಸಹಯೋಗದಿಂದ ಕೆಲಸ ಮಾಡುವುದು ಬಹಳ ಮುಖ್ಯ,” ಎಂದು ಅವರು ಹೇಳುತ್ತಾರೆ.





ದಿಸಿಟಿಫಿಕ್ಸ್‌ ಲ್ಯಾಬ್‌ ಇಂಡಿಯಾ ಎಕ್ಸಲರೇಟರ್ಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ 10 ಸ್ಟಾರ್ಟ್‌ಅಫ್‌ಗಳಲ್ಲಿ ಫ್ಲುಯಿಡ್‌ ರೊಬೊಟಿಕ್ಸ್‌ ಕೂಡ ಒಂದು.