ಅಗ್ಗದ ವೆಂಟಿಲೇಟರ್ ನಿರ್ಮಿಸಿದ ವಿದ್ಯಾರ್ಥಿಗಳ ಸ್ಟಾರ್ಟಪ್
ಲಕ್ಷಾಂತರ ರೂಪಾಯಿ ಬೆಲೆಬಾಳುವ ವೆಂಟಿಲೇಟರ್ ಅನ್ನು ಅಗ್ಗದ ದರದಲ್ಲಿ ತಯಾರಿಸಿ ಕೊರೊನಾ ವಿರುದ್ಧದ ಯುದ್ಧದ ತುರ್ತು ಸಂದರ್ಭದಲ್ಲಿ ಭಾರತಕ್ಕೆ ಸಹಕಾರ ನೀಡುತ್ತಿರುವ ಕೊಯಮತ್ತೂರಿನ ವಿದ್ಯಾರ್ಥಿಗಳ ಸ್ಟಾರ್ಟಪ್.
ಮಾರ್ಚ್ 22 ರಂದು ಪ್ರಧಾನಿ ದೇಶಾದ್ಯಂತ ಕೊರೊನಾ ಮಾಹಾಮಾರಿ ವಿರುದ್ಧ ಜನತಾ ಕರ್ಫ್ಯೂ ಘೋಷಿಸಿದ್ದ ಸಮಯದಲ್ಲಿ, ಕೊಯಮತ್ತೂರಿನ ಎಐಸಿ ರೈಸ್ ನ ಮುಖ್ಯ ನಿರ್ವಾಹಕ ಎಬಿನ್ ಎಫ್ರಂ ಎಲವತಿಂಗಲ ಮತ್ತು ಅವರ ಕೆಲವು ವಿದ್ಯಾರ್ಥಿಗಳಿಗೆ ತಕ್ಷಣದ ಅವಶ್ಯಕತೆ ಮತ್ತು ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದು ಯೋಚನೆ ಹೊಳೆಯಿತು.
ಆ ಯೋಚನೆ ಕೇವಲ ನಾಲ್ಕೆ ದಿನಗಳಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡಲು ಅತ್ಯವಶ್ಯಕವಾದಂತಹ ಲಕ್ಷಾಂತರ ರೂ. ಬೆಲೆಬಾಳುವ ವೆಂಟಿಲೇಟರ್ ಅನ್ನು ಕೇವಲ 25 ಸಾವಿರ ರೂಪಾಯಿಗಳಲ್ಲಿ ತಯಾರಿಸುವುದಕ್ಕೆ ಮುನ್ನುಡಿ ಬರೆಯಿತು.
ಈ ವೆಂಟಿಲೇಟರ್ ನಿರ್ಮಾಣದ ಹಿಂದಿರುವವರು ವಿದ್ಯಾರ್ಥಿಗಳ ಸ್ಟಾರ್ಟಪ್ ಜೆ ಕೆ ಡಾಟಾ ಸಿಸ್ಟಮ್ಸ್ ನ ಕಾರ್ತಿಕ ಎಸ್ ಮತ್ತು ಗೌತಮ್ ಎಸ್. ಈ ತಂಡವು ಎಬಿನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿತು.
“ಇಟಲಿ ಮತ್ತು ಇತರ ದೇಶಗಳಲ್ಲಿ ಕೊರೊನಾ ಮಹಾಮಾರಿಯ ಪರಿಣಾಮಗಳನ್ನು ನೋಡುತ್ತಿದ್ದ ನಮಗೆ, ನಮ್ಮ ದೇಶದಲ್ಲಿ ಈ ಪರಿಸ್ಥಿತಿ ಎದುರಾದಾಗ ಎಲ್ಲ ಸೌಲಭ್ಯಗಳೊಂದಿಗೆ ಸಜ್ಜಾಗಿರುವುದು ಅತೀ ಮುಖ್ಯವಾಗಿದೆ ಎಂದು ತಿಳಿದಿತ್ತು, ಅದರಲ್ಲೂ ಅಂತಹ ಸಮಯದಲ್ಲಿ ವೆಂಟಿಲೇಟರ್ ಅತ್ಯವಶ್ಯಕ ಸಾಧನವಾಗಿರುತ್ತದೆ ಎಂಬ ಅರಿವಿತ್ತು,” ಎಂದೆನ್ನುತ್ತಾರೆ ಎಬಿನ್ ಎಫ್ರಂ ಎಲವತಿಂಗಲ.
ಆದರೆ ಇವರ್ಯಾರು ಮುಂಚೆ ಈ ತರಹದ ಆರೋಗ್ಯ ಸಾಧನಗಳನ್ನು ತಯಾರಿಸಿರಲಿಲ್ಲ ಮತ್ತು ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿರಲಿಲ್ಲ. ಜಾಸ್ತಿ ಸಮಯ ವ್ಯರ್ಥ ಮಾಡದೆ ವೆಂಟಿಲೇಟರ್‌ಗಳ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿ, ಸಾಧನಕ್ಕೆ ತಮ್ಮದೇ ಆದ ರೂಪುರೇಷೆ ನೀಡತೊಡಗಿತು ತಂಡ.
“ಅತ್ಯಾಧುನಿಕ ಸಾಂಪ್ರದಾಯಿಕ ವೆಂಟಿಲೇಟರ್ ಗಳನ್ನು ತಯಾರಿಸಲು ಸೌಲಭ್ಯಭರಿತ ಯಂತ್ರಗಳ ಬೇಕು. ನಮ್ಮ ಹತ್ತಿರ ಆ ಸೌಲಭ್ಯಗಳಿರಲಿಲ್ಲ. ತುರ್ತು ಸಮಯದಲ್ಲಿ ಉಪಯೋಗಿಸಬಹುದಾದಂತಹ ವೆಂಟಿಲೇಟರ್‌ನ ಪ್ರಥಮ ಮೂಲ ಮಾದರಿಯನ್ನು ನಮ್ಮ ಬಳಿ ಇರುವ ವಸ್ತುಗಳನ್ನು ಬಳಸಿ ನಿರ್ಮಿಸಿದೆವು,” ಎನ್ನುತ್ತಾರೆ ಎಬಿನ್.
ವೆಂಟಿಲೇಟರ್ ತಯಾರಿಕೆಗೆ ಕೀಬೋರ್ಡ್ ನಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ಸಹ ಬಳಸಲಾಗಿದೆ. ಈ ವೆಂಟಿಲೇಟರ್ ಅನ್ನು ವೈದ್ಯರು ಪರೀಕ್ಷಿಸಿ ಹಸಿರು ನಿಶಾನೆ ತೋರಿಸಿದರು. ಎಬಿನ್ ಪ್ರಕಾರ ತುಲನಾತ್ಮಕವಾಗಿ ಈ ಉಸಿರಾಟದ ಸಾಧನ ನಾಲ್ಕೈದು ತಿಂಗಳು ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ. ನಂತರ ಅಂಬು ಬ್ಯಾಗ್ ಅನ್ನು ಬದಲಿಸಿ ದೀರ್ಘ ಕಾಲದವರೆಗೂ ಬಳಸಬಹುದಾಗಿದೆ. ಇದರ ಬೆಲೆ 10 ಸಾವಿರ ರೂ.
ಸಾಂಪ್ರದಾಯಿಕ ವೆಂಟಿಲೇಟರ್ ನಲ್ಲಿರುವ ಐಯು ರೇಷೋ, ಬ್ರೀಥ್ ಪರ್ ಮಿನಿಟ್ ಇತ್ಯಾದಿ ಸೌಲಭ್ಯಗಳಿರುವ ಈ ಸಾಧನದ ಸುಧಾರಿತವಾದ ಎರಡನೇ ಆವೃತ್ತಿಯನ್ನು ಕೆಲವೆ ದಿನಗಳಲ್ಲಿ ಬಿಡುಗಡೆಗೊಳಿಸಿದರು. ಇದರ ಬೆಲೆ 25 ಸಾವಿರ ರೂ ಆಗಿದ್ದು ತಂಡ ದಿನಕ್ಕೆ ಇಂತಹ 100 ಸಾಧನಗಳನ್ನು ತಯಾರಿಸಲು ಸಿದ್ಧವಾಗಿದೆ. ಪ್ರಸ್ತುತ ಸಾಧನಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಮ್‌ಆರ್) ಯಿಂದ ಪರವಾನಗಿಯನ್ನು ಕೋರಲಾಗಿದೆ.
ಇಷ್ಟೇ ಅಲ್ಲದೆ ಈ ತಂಡ ಆರೋಗ್ಯ ಕಾರ್ಯಕರ್ತರಿಗಾಗಿ ಫೇಸ್ ಶೀಲ್ಡ್‌ಗಳನ್ನು ತಯಾರಿಸಿದೆ. ಈಗಾಗಲೇ ಭಾರತದಲ್ಲಿ 2 ಲಕ್ಷ ಶೀಲ್ಡ್‌ಗಳನ್ನು ಪೂರೈಸಲಾಗಿದೆ.
ಮುಂದಿನ ಯೋಜನೆ
ಅಗ್ಗದ ಈ ವೆಂಟಿಲೇಟರ್ ಗೆ ಯುರೋಪ್‌ನಿಂದ ಕೂಡ ಬೇಡಿಕೆ ಬಂದಿದೆ. ತಂಡವು ಪರವಾನಗಿ ಸಿಕ್ಕ ತಕ್ಷಣ ಸಾಧನದ ಪೂರೈಕೆಯಲ್ಲಿ ನಿರತರಾಗಲು ಉತ್ಸುಕವಾಗಿದೆ. ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಲು ನೆರವಾಗುವಂತಹ ಇನ್ನೊಂದು ವಸ್ತು ವಿತರಕ ಸಾಧನದ ಮೇಲೂ ಕೆಲಸ ನಡೆಸುತ್ತಿದೆ ತಂಡ. ಇದರ ವಿಶೇಷವೆಂದರೆ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ಸ್ವೈಪ್ ಮಾಡುವ ಮೂಲಕ ಮುಟ್ಟದೆ ಪಡೆಯಬಹುದು. ಇದು ಅನಾವಶ್ಯಕವಾಗಿ ಸೋಂಕಿನ ಹರುಡುವಿಕೆಯನ್ನು ತಡೆಗಟ್ಟುತ್ತದೆ.