ತಾಯಿಯ ಕಷ್ಟ ನೋಡಲಾಗದೆ ಭತ್ತ ತುಂಬುವ ಯಂತ್ರ ಆವಿಷ್ಕರಿಸಿದ ಬಾಲಕನಿಗೆ ರಾಷ್ಟ್ರ ಪ್ರಶಸ್ತಿಯ ಗರಿ
ಮಾರಿಪಲ್ಲಿ ಅಭಿಷೇಕ್ ಒಂದು ಅನನ್ಯವಾದ ಹಾಗೂ ಕಡಿಮೆ ವೆಚ್ಚದ ಭತ್ತ ತುಂಬುವ ಯಂತ್ರವನ್ನು ಆವಿಷ್ಕರಿಸಿದ್ದು, ನಾಲ್ಕು ಜನ ಮಾಡಬಹುದಾದ ಕೆಲಸವನ್ನು ಇದೊಂದೇ ಯಂತ್ರ ಮಾಡುತ್ತದೆ. ಇದನ್ನು ನಾಗರಿಕ ಸರಬರಾಜು ಇಲಾಖೆಯು ಭತ್ತ ಖರೀದಿಸುವ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.
ಅವಶ್ಯಕತೆ ಆವಿಷ್ಕಾರಗಳ ಜನನಿ ಎಂಬ ಮಾತಿದೆ. ಆದರೆ 8 ನೇ ತರಗತಿಯ ಮಾರಿಪಲ್ಲಿ ಅಭಿಷೇಕ್ ಅವರ ಆವಿಷ್ಕಾರದ ಹಿಂದೆ ಇರುವುದು ಅವರ ತಾಯಿ. ಹಗಲು ರಾತ್ರಿಯೆನ್ನದೆ ಅವರು ಭತ್ತವನ್ನು ಗೋಣಿ ಚೀಲಗಳಿಗೆ ತುಂಬಲು ಪಡುವ ಕಷ್ಟವನ್ನು ನೋಡಲಾಗದೆ ಅಭಿಷೇಕ್ ಒಂದು ಯಂತ್ರವನ್ನು ವಿನ್ಯಾಸಗೊಳಿಸಲು ನಿರ್ಧರಿಸುತ್ತಾನೆ. ತೆಲಂಗಾಣದ ವೇಮುಲವಾಡದ ಹನ್ಮಾಜಿಪೇಟೆಯ ಜಿಲ್ಲಾ ಪರಿಷದ್ ಶಾಲೆಯಲ್ಲಿ ಓದುತ್ತಿರುವ ಈ ಬಾಲಕ ತನ್ನ ಯಂತ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿದ್ದಾರೆ.
ಅಭಿಷೆಕ್‌ರ ತಾಯಿ ರಾಜವ್ವ ತಮ್ಮ ಕೆಲಸದ ಅವಧಿಯಲ್ಲಿ ಭತ್ತವನ್ನು ಗೋಣಿ ಚೀಲಕ್ಕೆ ತುಂಬಲು ಬಹಳ ಕಷ್ಟ ಪಡುತ್ತಿದ್ದರು. ಅವರ ತಂದೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕೆಲಸ ಹುಡುಕುತ್ತಿದ್ದರೆ, ಇತ್ತ ತಾಯಿ ಸದಾ ಕೆಲಸದಲ್ಲಿ ಮುಳುಗಿರುತ್ತಿದ್ದರು ಆಗ ಅಭಿಷೇಕ್‌ಗೆ ಭತ್ತ ತುಂಬುವ ಯಂತ್ರ ವಿನ್ಯಾಸಗೊಳಿಸಿ ಸಹಾಯ ಮಾಡುವುದರ ಬಗ್ಗೆ ಕಲ್ಪನೆ ಮೂಡಿತು. ಇವರು ತಮ್ಮ ಮಾರ್ಗದರ್ಶಕ ವೆಂಕಟೇಶಂ ಅವರ ಜೊತೆಗೆ ಇದನ್ನು ಹಂಚಿಕೊಂಡಾಗ ಅವರು ಅಭಿಷೇಕ್‌ಗೆ ಸಹಾಯ ಮಾಡಿದರು.
ಮೂರು ಜನರ ಕೆಲಸವನ್ನು ಮಾಡುವ ಈ ಯಂತ್ರ ಸುಮಾರು 5,000 ದಿಂದ 7,000 ಬೆಲೆಬಾಳುತ್ತದೆ. ತೆಲಂಗಾಣ ಟುಡೇ ಪ್ರಕಾರ, ಯಂತ್ರವನ್ನು ಎರಡು ಚಕ್ರಗಳು, ಕಬ್ಬಿಣದ ಹಾಳೆ, ಕೆಲವು ಕಬ್ಬಿಣದ ಪೈಪ್ ರಾಡ್‌ಗಳು ಮತ್ತು ತೂಕ ಹಾಗೂ ಹೊಲಿಗೆ ಯಂತ್ರಗಳಿಂದ ತಯಾರಿಸಲಾಗಿದೆ. ಈ ಯಂತ್ರವನ್ನು ಮೆಕ್ಕೆಜೋಳ ಹಾಗೂ ಗೋಧಿಯನ್ನು ಚೀಲಕ್ಕೆ ತುಂಬಲು ಬಳಸಬಹುದಾಗಿದೆ.
ಅಭಿಷೇಕರ ಆವಿಷ್ಕಾರವು ಐಐಟಿ ದೆಹಲಿಯಲ್ಲಿ ಫೆಬ್ರವರಿ 14-15 ರಂದು ನಡೆದ ರಾಷ್ಟ್ರ ಮಟ್ಟದ ಇನ್ಸ್ಪೈರ್ ಸೈನ್ಸ್ ಪ್ರದರ್ಶನದಲ್ಲಿ ಪ್ರಶಸ್ತಿಗಳಿಸಿದೆ. ಅವರಿಗೆ ಹತ್ತು ಸಾವಿರ ರೂಪಾಯಿಗಳ ನಗದು ಬಹುಮಾನ ಹಾಗೂ ಒಂದು ಲ್ಯಾಪ್‌ಟಾಪ್ ಅನ್ನು ಪ್ರಶಸ್ತಿ ರೂಪದಲ್ಲಿ ನೀಡಲಾಗಿದೆ. ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ 622 ಪ್ರದರ್ಶಕರು ಭಾಗವಹಿಸಿದ್ದರಿಂದ ಗೆಲ್ಲುವುದು ಸುಲಭವಾಗಿರಲಿಲ್ಲ.
ಆದಾಗ್ಯೂ ಈ ಬಾಲಕನ ಆವಿಷ್ಕಾರ ಹಾಗೂ ಉದ್ಯಮವು ಹಲವು ವೀಕ್ಷಕರನ್ನು ಹಾಗೂ ತೀರ್ಪುಗಾರರನ್ನು ಆಕರ್ಷಿಸಿತ್ತು. ಅದಷ್ಟೇ ಅಲ್ಲದೆ ಅಭಿಷೇಕ್ ಅವರ ಈ ಮೂಲಮಾದರಿಯನ್ನು ನಾಗರಿಕ ಸರಬರಾಜು ಇಲಾಖೆಯು ಭತ್ತ ಖರೀದಿಸುವ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದೆ.
ಈ ಯಂತ್ರ ಸರಿಯಾಗಿ ಕೆಲಸ ಮಾಡಿದಲ್ಲಿ, ಇದನ್ನು ರಾಜ್ಯಾದ್ಯಂತ ಅಳವಡಿಸಲಾಗುವುದು ಎಂದು ಹೇಳಿರುವ ಐಪಿಎಸ್ ಅಧಿಕಾರಿ ಅಕುನ್ ಸಭರ್ವಾಲ್ ಈ ಯಂತ್ರಕ್ಕೆ ‘ವರಿ ಅಭಿಷರೆಕಂ' ರಂದು ಹೆಸರಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಸಭರ್ವಾಲ್ ತಮ್ಮ ಅಧಿಕಾರಿಗಳಿಗೆ ತೆಲಂಗಾಣ ಸರ್ಕಾರದ ಪರವಾಗಿ ಹಕ್ಕುಪತ್ರವನ್ನು ಸಹ ಪಡೆಯಲು ಹೇಳಿದ್ದಾರೆ. ದಿ ಹಿಂದೂನೊಂದಿಗೆ ಮಾತನಾಡುತ್ತಾ, ಅವರು, ಈ ಯಂತ್ರವನ್ನು ಕೆಲ ಬದಲಾವಣೆಯೊಂದಿಗೆ ಮಾರ್ಪಾಡು ಮಾಡಿದರೆ ರೈತರಿಗೆ ತುಂಬಾ ಸಹಾಯವಾಗುತ್ತದೆ. ಅದರ ಸಾಮರ್ಥ್ಯವನ್ನು 20 ಕೆಜಿಯಿಂದ 40/45 ಕೆಜಿಗೆ ಅದರ ಅಗಲವನ್ನು ಸಹ ಏರಿಸಿದರೆ ಅನುಕೂಲವಾಗುತ್ತದೆ ಎಂದರು.
ಇದೆಲ್ಲವು ಆದದ್ದು ತನ್ನ ತಾಯಿಯ ಜೀವನವನ್ನು ಸುಲಭಗೊಳಿಸಲು ಬಾಲಕ ಮಾಡಿದ ಒಂದು ಸಣ್ಣ ಪ್ರಯತ್ನದಿಂದ ಎಂಬುದು ವಿಶಿಷ್ಟವಾಗಿದೆ.