ಜಪಾನೀಸ್ ಭಾಷೆಯಲ್ಲಿ ಮಾತನಾಡುವ ಔರಂಗಾಬಾದ್‌ನ ಹಳ್ಳಿಯ ವಿದ್ಯಾರ್ಥಿಗಳು

ಔರಂಗಾಬಾದನಾ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಕಳೆದ ವರ್ಷ ಪರಿಚಯಿಸಿದ ಕೋರ್ಸ್‌ನ ಭಾಗವಾಗಿ ಜಪಾನೀಸ್ ಭಾಷೆಯನ್ನು ಕಲಿಯುತ್ತಿದ್ದಾರೆ.

ಜಪಾನೀಸ್ ಭಾಷೆಯಲ್ಲಿ ಮಾತನಾಡುವ ಔರಂಗಾಬಾದ್‌ನ ಹಳ್ಳಿಯ ವಿದ್ಯಾರ್ಥಿಗಳು

Thursday October 08, 2020,

2 min Read

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯ ಶಾಲೆಯು, ಹೊಸ ಭಾಷಾ ಕಲಿಕೆಯನ್ನು ಪ್ರೋತ್ಸಾಹಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ.


ಔರಂಗಾಬಾದ್‌ನಿಂದ 25 ಕಿಲೋಮೀಟರ್ ದೂರವಿರುವ ಗಡಿವತ್‌ನ ಜಿಲ್ಲಾ ಪರಿಷದ್ ಶಾಲೆಯಲ್ಲಿ, ಸಾಮಾಜಿಕ ಮಾಧ್ಯಮದ ವೇದಿಕೆಯ ಮೂಲಕ ಜಪಾನಿ ಭಾಷೆಯನ್ನು ಕಲಿಸಲಾಗುತ್ತಿದೆ.


ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ಸೂರಜ್ ಪ್ರಸಾದ್ ಜೈಸ್ವಾಲ್ ಎಎನ್‌ಐ ಜತೆ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಶಿಕ್ಷಣವನ್ನು ನೀಡುವುದು ಈ ಕಲಿಕೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.


"ಈ ಕಲಿಕೆಯ ಅಡಿಯಲ್ಲಿ, ಒಬ್ಬ ವ್ಯಕ್ತಿ ಭಾಷೆಯನ್ನು ಆನ್‌ಲೈನ್ ತರಗತಿಗಳ ಮೂಲಕ ಕಲಿಯಬಹುದು. ಶಾಲೆಯಲ್ಲಿಯ ಅನೇಕ ಶಿಕ್ಷಕರು ಸಹ ಜಪಾನೀಸ್ ಭಾಷೆಯನ್ನು ಕಲಿತಿದ್ದಾರೆ. ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಶಿಕ್ಷಣವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಬಹಳಷ್ಟು ಜಪಾನಿನ ಪ್ರವಾಸಿಗರು ಜಿಲ್ಲೆಯ ಅಜಂತಾ ಮತ್ತು ಎಲ್ಲೋರಾ ಗುಹೆಗಳಿಗೆ ಭೇಟಿ ನೀಡುತ್ತಿರುತ್ತಾರೆ. ವಿದ್ಯಾರ್ಥಿಗಳಿಗೆ ಜಪಾನೀಸ್ ಮಾತನಾಡಲು ಸಾಧ್ಯವಾದರೆ ಅವರು ಗೈಡಗಳಾಗಬಹುದು," ಎಂದು ಜೈಸ್ವಾಲ್ ಹೇಳಿದರು.


ಶಾಲೆಯು ಕಳೆದ ವರ್ಷ ಈ ಕಾರ್ಯಕ್ರಮವನ್ನು ಪ್ರಾರಂಭಿಸಿತು, ಇದರ ಅಡಿಯಲ್ಲಿ 4 ರಿಂದ 8 ತರಗತಿಗಯ ವಿದ್ಯಾರ್ಥಿಗಳಿಗೆ ಒಂದು ವಿದೇಶಿ ಭಾಷೆಯನ್ನು ಆಯ್ಕೆ ಮಾಡಲು ಕೇಳಲಾಯಿತು. ಜಪಾನಿಯರ ರೊಬೊಟಿಕ್ಸ್ ಮತ್ತು ತಂತ್ರಜ್ಞಾನದ ಮೇಲಿನ ಆಸಕ್ತಿಯಿಂದಾಗಿ, ಜಪಾನೀಸ್‌ ಭಾಷೆ ಕಲಿಯಲು ಬಹುಮತ ದೊರಕಿತು.


8 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಾತನಾಡುತ್ತಾ, “ಜಪಾನೀಸ್‌ ಭಾಷೆ ಕಲಿಯಲು ಖುಷಿಯಾಗುತ್ತದೆ. ಈಗ ಲೇವಲ್‌-1 ಮುಗಿದಿದೆ. ಈಗ ನಾವು ಜಪಾನೀಸ್‌ನಲ್ಲಿ ಮಾತಾಡಬಹುದು. ನಾನು ಜಪಾನಿಗೆ ಹೋಗಿ ರೋಬೋಟಿಕ್ಸ್‌ ಕಲಿಯಬೇಕೆಂದಿದ್ದೇನೆ,” ಎಂದು ವಿವರಿಸಿದಳು.


6 ನೇ ತರಗತಿಯ ಇನ್ನೊಬ್ಬಳು ವಿದ್ಯಾರ್ಥಿನಿ, “ಜಪಾನ್‌ ತಂತ್ರಜ್ಞಾನದಿಂದ ನಡೆಯುವ ದೇಶ. ನಾನು ಅಲ್ಲಿ ಹೋಗಿ ತಂತ್ರಜ್ಞಾನದ ಬಗ್ಗೆ ಕಲಿಯಬೇಕೆಂದುಕೊಂಡಿದ್ದೇನೆ, ಏಕೆಂದರೆ ಹಾಗೆ ನಾನು ಭಾರತದಲ್ಲಿ ಮಾಡಲು ಬಯಸುತ್ತೇನೆ,” ಎಂದಳು.

ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಫ್ರೀ ಪ್ರೆಸ್‌ ಜರ್ನಲ್‌)


ಕಳೆದ 25 ವರ್ಷಗಳಿಂದ ಜಪಾನ್‌ನಲ್ಲಿ ನೆಲೆಸಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಜಪಾನೀಸ್ ಲ್ಯಾಂಗ್ವೇಜ್ ಅಂಡ್ ಲಿಂಗ್ವಿಸ್ಟಿಕ್ಸ್‌ನ ಪ್ರಾಧ್ಯಾಪಕ ಪ್ರಶಾಂತ್ ಪರದೇಶಿ ಈ ಉಪಕ್ರಮದ ಬಗ್ಗೆ ತಿಳಿದುಕೊಂಡು ಮಕ್ಕಳಿಗೆ ಭಾಷೆ ಕಲಿಯಲು ಸಹಾಯ ಮಾಡಲು ನಿರ್ಧರಿಸಿದರು.


ಪ್ರಶಾಂತ ಅವರ ಸಹಾಯದ ಬಗ್ಗೆ ಮಾತನಾಡುತ್ತಾ ಜಿಲ್ಲಾ ಪರಿಷತ್ ಶಿಕ್ಷಣ ವಿಸ್ತರಣಾಧಿಕಾರಿ ರಮೇಶ್‌ ಠಾಕುರ್‌ ಪಿಟಿಐ ಜತೆ ಮಾತನಾಡುತ್ತಾ, “ಪರದೇಶಿಯವರು ನನ್ನ ಜತೆ ಫೋನ್‌ನಲ್ಲಿ ಮಾತಾಡಿ ಯೋಜನೆ ವಿವರಣೆ ಪಡ್ಕೊಂಡು, ಜಪಾನೀಸ್‌ ಮತ್ತು ಮರಾಠಿ ಭಾಷೆಯ ಆರು ಸೆಟ್‌ ಪುಸ್ತಕಗಳನ್ನು ಕಳಿಸಿದರು. ನಮಗೆ ಈಗ ಸಿಕ್ಕಿರುವ ಪುಸ್ತಕಗಳಲ್ಲಿ ಜಪಾನೀಸ್‌-ಮರಾಠಿ ಭಾಷೆಯ ಶಬ್ದಕೋಶವಿದೆ, ಭಾಷಾಂತರ ಮಾಡಿದ ಕತೆ ಪುಸ್ತಕಗಳು ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ಪುಸ್ತಕಗಳಿವೆ,” ಎಂದರು.