10 ವರ್ಷದಲ್ಲಿ 3000 ಸಹೋದ್ಯೋಗಿಗಳಿಗೆ ಕನ್ನಡ ಕಲಿಸಿದ ಐಟಿ ಉದ್ಯೋಗಿ ಅಲಿಯಾಸ ಕನ್ನಡ ಪ್ರೇಮಿ

ಕನ್ನಡ ಮಾತನಾಡದವರು ಮತ್ತೆ ಮಾತನಾಡುವವರ ನಡುವೆ ಉಂಟಾಗುತ್ತಿದ್ದ ಕಮ್ಯುನಿಕೇಷನ್ ಗ್ಯಾಪ್‌ ಅನ್ನು ಗಮನಿಸಿದಾಗ ಮಧುಚಂದ್ರರಿಗೆ ಕನ್ನಡ ಕಲಿಸೋ ವಿಚಾರ ಹೊಳೆಯಿತು. 4 ಜನರಿಂದ ಶುರುವಾದ ಕನ್ನಡ ಪಾಠ 3000 ಜನರಿಗೆ ಕನ್ನಡ ಕಲಿಸಿದೆ.

10 ವರ್ಷದಲ್ಲಿ 3000 ಸಹೋದ್ಯೋಗಿಗಳಿಗೆ ಕನ್ನಡ ಕಲಿಸಿದ ಐಟಿ ಉದ್ಯೋಗಿ ಅಲಿಯಾಸ ಕನ್ನಡ ಪ್ರೇಮಿ

Friday January 31, 2020,

3 min Read

4:30 ಗೆ ಕೆಲಸ ಮುಗಿದರು 5:30 ವರೆಗೆ ಕಾದು ಕನ್ನಡ ಕ್ಲಾಸಿಗೆ ಹಾಜರಾಗಲು ಇಷ್ಟಪಡುವ ಅಂತರಾಷ್ಟ್ರೀಯ ಐಟಿ ಕಂಪನಿಯ ಕನ್ನಡೇತರ ಉದ್ಯೋಗಿಗಳು ಒಂದೆಡೆಯಾದರೆ, ಅವರ ಆಸಕ್ತಿಯನ್ನು ಹಿಡಿದಿಟ್ಟುಕೊಂಡು ಭಾಷೆ ಕಲಿಯಬೇಕೆಂಬ ಪ್ರೇಮವನ್ನು ಸರಳತೆಯಿಂದ ಪೋಷಿಸುತ್ತಾ, ತಮ್ಮ ಬಿಜಿ ಜೀವನದ ಗೋಜಲುಗಳ ನಡುವೆಯು ಕನ್ನಡ ಕಲಿಸಲು ಸಿದ್ಧರಾದ ಮಧುಚಂದ್ರ ಹೆಚ್‌ ಬಿ ಅವರ ಸಂಯಮವನ್ನು ಕನ್ನಡದ ಮೇಲಿನ ಪ್ರೀತಿಯನ್ನು ಕಂಡರೆ ಅದ್ಭುತವೆನಿಸದೆ ಇರಲಾರದು.


ಇವರ ಕನ್ನಡ ಪ್ರೇಮಕ್ಕೆ ಒಂದು ದಶಕದಲ್ಲಿ ಸುಮಾರು 3000 ಕನ್ನಡೇತರರು ಕನ್ನಡ ಮಾತನಾಡಲು ಶುರುಮಾಡಿರುವುದೇ ಸಾಕ್ಷಿ. ಈ ಕನ್ನಡ ಪ್ರೇಮಿಯ ಹೆಸರು ಮಧುಚಂದ್ರ ಹೆಚ್‌ ಬಿ. ಇವರ ಊರು ಭದ್ರಾವತಿ, ವಾಸ ಬೆಂಗಳೂರು. ವೃತ್ತಿಯಿಂದ ಅಂತರಾಷ್ಟ್ರೀಯ ಐಟಿ ಕಂಪನಿಯಲ್ಲಿ ಸಾಫ್ಟವೇರ್‌ ಇಂಜಿನೀಯರ್.‌ ಇವರ ಪ್ರವೃತ್ತಿ ತಾವು ಕೆಲಸ ಮಾಡುವ ಕಂಪನಿಯ ಸಹೋದ್ಯೋಗಿಗಳಿಗೆ ಕನ್ನಡ ಕಲಿಸುವುದು. ಇವರ ಕನ್ನಡ ಸೇವೆ 2010 ರಿಂದ ನಿಲ್ಲದೆ ನಿರಂತರವಾಗಿ ಸಾಗಿ ಬಂದಿದೆ. ಇಷ್ಟು ಕಾಲ ಉರುಳಿದರು ತಮ್ಮ ಕಾಯಕವನ್ನು ಮುಂದುವರೆಸಿರುವ ಮಧುಚಂದ್ರರಿಗೆ ತಮ್ಮ ಸರಳವಾದ, ವಿಶಿಷ್ಟವಾದ ಕೆಲಸದ ಬಗ್ಗೆ ಹೇಗನಿಸುತ್ತದೆ ಎಂದು ಕೇಳಿದಾಗ, ನಗುತ್ತಲೆ “ತುಂಬಾ ಖುಷಿಯಿದೆ” ಎನ್ನುತ್ತಾರೆ.


ಭಾಷೆ ಕಲಿಯೋದಿಲ್ಲ ಅನ್ನೋ ವಿಚಾರದ ಬಗ್ಗೆ ಮಾತನಾಡುತ್ತಾ,


“ಕನ್ನಡ ಬರೋದಿಲ್ಲ, ಮಾತಾಡಲ್ಲ ಎಂದು ಬೈಯ್ಯುವವರು ಜಾಸ್ತಿ, ಕನ್ನಡ ಕಲಿಸೋರು ಕಡಿಮೆ. ಕಲಿಯೋ ಆಸಕ್ತಿ ಅವರಿಗಿದ್ರೆ ಅದಕ್ಕಿಂತ ಹೆಚ್ಚು ಆಸಕ್ತಿ ಕಲಿಸೋರಿಗಿರಬೇಕು,” ಎನ್ನುತ್ತಾರೆ.


ಪ್ರತಿದಿನ ಕೆಲಸ ಮುಗಿದ ಮೇಲೆ ಶುರುವಾಗುವ ಒಂದು ಗಂಟೆಯ 10 ಕ್ಲಾಸ್‌ಗಳ ಕನ್ನಡ ಕೋರ್ಸ್‌ನಲ್ಲಿ 25 ರಿಂದ 30 ಜನರಿರುತ್ತಾರೆ. ಇಷ್ಟೂ ಜನರಿಗೆ ಸರಳವಾಗಿ ಮತ್ತು ಸುಲಭವಾಗಿ ಕನ್ನಡ ಅರ್ಥವಾಗುವಂತಹ ಪಠ್ಯಕ್ರಮವನ್ನು ಮಧುಚಂದ್ರ ಸಿದ್ಧಪಡಿಸಿಕೊಂಡಿದ್ದಾರೆ. ಒಂದು ಗಂಟೆಯ ಕ್ಲಾಸ್‌ನಲ್ಲಿ 15 ನಿಮಿಷ ಮಾತ್ರ ತಮ್ಮ ಬೋಧನೆಯನ್ನು ಸೀಮಿತಗೊಳಿಸಿ ಮಿಕ್ಕ 45 ನಿಮಿಷವನ್ನು ವಿದ್ಯಾರ್ಥಿಗಳೊಂದಿಗೆ ಚರ್ಚೆಮಾಡುತ್ತಾ ಹೊಸ ವಿಷಯಗಳನ್ನು ಹೇಳುತ್ತಾ ಹೋಗುತ್ತಾರೆ. ಇದು ಕಲಿಯುವವರಿಗೂ ಹೊರೆ ಏನಿಸದೆ ಕಲಿಕೆಯನ್ನು ಆನಂದಿಸುವಂತೆ ಮಾಡುತ್ತದೆ.


ಈ ಕ್ಲಾಸಿನಲ್ಲಿ ಕನ್ನಡ ಕಲಿತ ವಿಶಾಖಪಟ್ಟನಂನ ಸ್ನೇಹಿತ ಎಂಬುವವರು ಕನ್ನಡದಲ್ಲಿ ಮಾತನಾಡುತ್ತಾ, “ಕ್ಲಾಸ್‌ಗಳು ತುಂಬಾ ವ್ಯವಸ್ಥಿತವಾಗಿವೆ. ಎಲ್ಲವೂ ಆನ್‌ ಪಾಯಿಂಟ್‌ ಆಗಿರುತ್ತದೆ. ತುಂಬಾ ಕಂಫರ್ಟೆಬಲ್‌ ಆಗಿದ್ವು ಕ್ಲಾಸ್‌,” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.


ಮಧುಚಂದ್ರ ಹೆಚ್‌ ಬಿ

ತಮ್ಮ ಉದ್ದೇಶದ ಬಗ್ಗೆ ಮಾತನಾಡುತ್ತಾ ಮಧುಚಂದ್ರ,

“ಕನ್ನಡ ಕಲಿಯಲು ನಮ್ಮ ಬಳಿ ಬರುವವರು ಕನ್ನಡವನ್ನು ಅರ್ಥಮಾಡಿಕೊಂಡು ಉತ್ತರ ನೀಡಿದರೆ ನಾವು ಅಂದುಕೊಂಡಿದ್ದು ಸಾರ್ಥಕವಾದಂತೆ. ಕನ್ನಡದ ಜೊತೆ ಕರ್ನಾಟಕವನ್ನು ಕನೆಕ್ಟ್‌ ಮಾಡ್ತಿವಿ,” ಎನ್ನುತ್ತಾರೆ.


ನಾನು ನಮ್ಮ ದಿಂದ ಶುರುವಾಗುವ ಈ ತರಬೇತಿ ಮುಂದೆ ಪ್ರಶ್ನಾರ್ಥಕ ವಾಕ್ಯಗಳು, ಅಂಕಿ ಸಂಖ್ಯೆಗಳು, ಅಳತೆಗಳು, ಲಿಂಗಗಳು, ದಿಕ್ಕು, ಸಮಯದತ್ತ ಸಾಗಿ ಕಾಲಗಳನ್ನು ಹೇಳಿಕೊಡುವ ಮೂಲಕ ಕೊನೆಗೊಳ್ಳುತ್ತದೆ. ಕಲಿಕೆ ಪ್ರಾಯೋಗಿಕವಾರಲೆಂದು ಮಧುಚಂದ್ರರವರು ವಿದ್ಯಾರ್ಥಿಗಳಿಗೆ ಮನೆ ಮಾಲೀಕ-ಬಾಡಿಗೆದಾರ, ಆಟೋ ಡ್ರೈವರ್-ಗ್ರಾಹಕ ಮುಂತಾದ ಸಂದರ್ಭಗಳಲ್ಲಾಗಬಹುದಾದ ಮಾತುಕತೆಗಳನ್ನು ನೆನಪಿಸಿಕೊಳ್ಳಲು ಹೇಳಿ ಅವರ ಮಾತೃಭಾಷೆಯಲ್ಲಿ ಬರೆಸಿ ನಂತರ ಕನ್ನಡದಲ್ಲಿ ಅವುಗಳನ್ನು ಹೇಗೆ ಹೇಳಬಹುದೆಂದು ತಿಳಿಸುತ್ತಾರೆ.


ಟ

ಕನ್ನಡ ಕ್ಲಾಸಿನಲ್ಲಿ ಚರ್ಚೆ ಮಾಡುತ್ತಿರುವುದು

ವಿದ್ಯಾರ್ಥಿಗಳಿಗೆ ತುಂಬಾ ಕನೆಕ್ಟ್‌ ಆಗಬಲ್ಲಂತಹ ಪದಗಳನ್ನು ಮೊದಲು ಹೇಳಿ ಕೊಡಲಾಗುತ್ತದೆ. ಉದಾಹರಣೆಗೆ, ಬಾಗಿಲು ತೆರೆ ಪದ, ಇದು ಮೆಟ್ರೋನಲ್ಲಿ ಆಗಾಗ ಕೇಳಿ ಬರುವ ಪದ. ಸಂದರ್ಭ ಸಹಿತವಾಗಿ ಪದದ ಅರ್ಥ ಹೇಳಿದಾಗ ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತೆ. ಹೀಗೆ ಸಾಮಾನ್ಯವಾಗಿ ಬಳಕೆಯಾಗುವ ಪದಗಳನ್ನು ವಾಕ್ಯಗಳನ್ನು ಅವರ ಮಾತೃಭಾಷೆಗೆ ಮ್ಯಾಪಿಂಗ್‌ ಮಾಡಿ ಕೊಡುತ್ತೇವೆ ಎನ್ನುತ್ತಾರೆ.


ಕನ್ನಡ ಕ್ಲಾಸ್‌ ಶುರುಮಾಡುವ ಒಂದೇರೆಡು ವಾರದ ಮೊದಲು ಎಲ್ಲ ಸಹೋದ್ಯೋಗಿಗಳಿಗೂ ಕಂಪನಿಯ ಎಚ್‌ ಆರ್‌ ರವರ ಅನುಮತಿ ಪಡೆದು ಮಿಂಚಂಚೆ ಕಳಿಸಲಾಗುತ್ತದೆ, ಆಸಕ್ತರು ತಾವೇ ಸ್ವತಃ ನೋಂದಾಯಿಸಿಕೊಂಡು ಬರುತ್ತಾರೆ. ಹೀಗೆ ವರ್ಷಕ್ಕೆ 25 - 30 ಜನರ 5 - 6 ಬ್ಯಾಚ್‌ಗಳನ್ನು ಮಾಡುತ್ತಾರೆ. ತಮ್ಮಂತೆ ಸಮಾನ ಮನಸ್ಕ ಆಸಕ್ತ 3 - 4 ಜನರನ್ನು ಸೇರಿಸಿಕೊಂಡು ಕನ್ನಡ ಪಾಠ ಶುರುಮಾಡುತ್ತಾರೆ.


ಟ

ಕನ್ನಡ ಪಾಠದಲ್ಲಿ ನಿರತರಾಗಿರುವ ಮಧುಚಂದ್ರ

10 ವರ್ಷಗಳ ಹಿಂದೆ ಕನ್ನಡ ಮಾತನಾಡದವರು ಮತ್ತೆ ಮಾತನಾಡುವವರ ನಡುವೆ ಉಂಟಾಗುತ್ತಿದ್ದ ಕಮ್ಯುನಿಕೇಷನ್ ಗ್ಯಾಪ್‌ ಅನ್ನು ಗಮನಿಸಿದಾಗ ಮಧುಚಂದ್ರರಿಗೆ ಕನ್ನಡ ಕಲಿಸೋ ವಿಚಾರ ಹೊಳೆಯಿತು. ಆ ಸಮಯದಲ್ಲಿ ಹಲವಾರು ಜನರು ಕನ್ನಡ ಕಲಿಸುತ್ತಿದ್ದರು, ಆದರೆ ಅದು ತುಂಬಾ ಪುಸ್ತಕೀಯ ಭಾಷೆಯ ಶೈಲಿಯಲ್ಲಿತ್ತು. ದಿನಬಳಕೆಯ ಕನ್ನಡ ಕಲಿಸಲು ಮತ್ತು ಬಳಸಲು ಸುಲಭವಾಗಿರುತ್ತೆ ಎನ್ನುತ್ತಾರೆ ಮಧುಚಂದ್ರ.


ಈ 10 ವರ್ಷದ ಪಯಣದಲ್ಲಿ ದಿನವೂ 1 ಗಂಟೆ ಮೀಸಲಿಡುವ ಮಧುಚಂದ್ರರಿಗೆ ಯಾವತ್ತು ಇದು ಬೇಜಾರೇನಿಸಿಲ್ಲವೆ ಎಂದು ಕೇಳಿದಾಗ,

“ದಿನಾ ಕೆಲಸ ಮುಗಿದ ಮೇಲೆ ಒಂದು ಗಂಟೆ ಕನ್ನಡ ಪಾಠ ಮಾಡಿದರೆ, ರಿಲ್ಯಾಕ್ಸ್‌ ಎಣಿಸುತ್ತೆ,” ಎಂದರು.