ಕನ್ನಡ ಗೊತ್ತಿಲ್ಲ ಎಂದವರಿಗೆ ಕನ್ನಡ ಕಲಿಸಿದರು
ಕನ್ನಡ ಗೊತ್ತಿಲ್ಲ.ಕಾಂ ಮೂಲಕ 15 ದೇಶದ ಜನರಿಗೆ ಕನ್ನಡ ಕಲಿಸಿ, 17.500 ಜನ ಕನ್ನಡ ಮಾತನಾಡುವಂತೆ ಮಾಡಿದ ಮಯ್ಯ ಬ್ರದರ್ಸ್.
ಇಂದು ಕರ್ನಾಟಕದಲ್ಲಿ ಕನ್ನಡ ಗೊತ್ತಿಲ್ಲ ಎನ್ನುವ ಜನ ತುಂಬಾ ಇದ್ದಾರೆ (ಕನ್ನಡದವರೂ ಸೇರಿ). ಆದರೆ ಈ ಮಯ್ಯ ಬ್ರದರ್ಸ್ ಕನ್ನಡ ಗೊತ್ತಿಲ್ಲ ಎನ್ನುವವರಲ್ಲಿ ವಿಶೇಷವಾಗಿ ಕಾಣುತ್ತಾರೆ. ಏಕೆಂದರೆ ಕನ್ನಡ ಗೊತ್ತಿಲ್ಲದವರಿಗಾಗಿಯೇ ಕನ್ನಡ ಗೊತ್ತಿಲ್ಲ.ಕಾಂ ಎಂಬ ಜಾಲ ತಾಣವೊಂದನ್ನು ಆರಂಭಿಸಿ ಇಂದು 17.500 ಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸಿ ಕೊಟ್ಟಿದ್ದಾರೆ.
ಜನಪ್ರಿಯ ಧಾರವಾಹಿಯಾದ ಮಗಳು ಜಾನಕಿ ಯಲ್ಲಿ ನಿರಂಜನ್ ಎಂಬ ಪಾತ್ರ ನಿರ್ವಹಿಸುತ್ತಿರುವ ರಾಕೇಶ್ ಮಯ್ಯ ಹಾಗೂ ಕಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಪ್ ಮಯ್ಯ ಸಹೋದರರಿಬ್ಬರೂ ಸೇರಿ ಐದು ವರ್ಷಗಳ ಹಿಂದೆ ಕನ್ನಡ ಗೊತ್ತಿಲ್ಲ.ಕಾಂ ಎಂಬ ಜಾಲ ತಾಣ ಆರಂಭಿಸಿದ್ದರು. ಮೊದಮೊದಲು ಅನುಪ್ ಮತ್ತು ರಾಕೇಶ್ ಇಬ್ಬರೇ ಸೇರಿ ಪರಭಾಷಿಕರಿಗೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಪಾಠ ಮಾಡಲಾರಂಭಿಸಿದರು. ಇಂದು ಕನ್ನಡ ಗೊತ್ತಿಲ್ಲ.ಕಾಂ ಮೂಲಕ ಪಾಠ ಕಲಿಸುವವರ ತಂಡದಲ್ಲಿ ಸುಮಾರು 11 ಜನ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಗೊತ್ತಿಲ್ಲ.ಕಾಂ ಮೂಲಕ ಬರೀ ಭಾರತದವರಷ್ಟೇ ಅಲ್ಲದೇ ಯುಎಸ್ಎ, ಜರ್ಮನಿ ಸೇರಿ ಸುಮಾರು 15 ದೇಶಗಳಲ್ಲಿನ ಜನರು ಈ ಜಾಲ ತಾಣದ ಮೂಲಕ ಕನ್ನಡ ಕಲಿತುಕೊಂಡಿದ್ದಾರೆ. ಕನ್ನಡ ಕಲಿಯಲಿಚ್ಚಿಸುವವರು ತಾವು ಇದ್ದ ಸ್ಥಳದಿಂದಲೇ ಕನ್ನಡ ಕಲಿಯಬಹುದಾಗಿದೆ. ವಾಟ್ಸ್ಯಾಪ್ ಹಾಗೂ ಸ್ಕೈಪ್ ಗಳ ಮೂಲಕ ಕನ್ನಡ ಪಾಠ ಮಾಡಲಾಗುತ್ತಿದೆ.
ಮೊದಲ ಎರಡು ತಿಂಗಳು ಮಾತ್ರ 249 ರೂ ಗಳನ್ನು ಶುಲ್ಕವಾಗಿ ಪಡೆಯಲಾಗುತ್ತದೆ. ಮೂರು ಹಂತವಾಗಿ ಕನ್ನಡ ಪಾಠ ಮಾಡಲಾಗುತ್ತದೆ. 25 ಜನರ ಒಂದು ಗುಂಪುಮಾಡಿ ದಿನಕ್ಕೆ 1 ಗಂಟೆಗಳ ಕಾಲ ಪಾಠ ಮಾಡಲಾಗುತ್ತದೆ. ಚರ್ಚೆ, ಸಂದೇಹಗಳು ಏನೇ ಇದ್ದರೂ ವಾಟ್ಸ್ಯಾಪ್ ಮೂಲಕ ಬಗೆಹರಿಸಲಾಗುತ್ತದೆ.
ಯುವರ್ ಸ್ಟೋರಿ ಕನ್ನಡದೊಂದಿಗೆ ಮಾತನಾಡಿದ ಅನುಪ್ ಮಯ್ಯ,
“ಆರಂಭದಲ್ಲಿ ಕನ್ನಡ ಬರದ ಸ್ನೇಹಿತರಿಗಷ್ಟೇ ಕನ್ನಡ ಪಾಠ ಮಾಡುತ್ತಿದ್ದೇವು. ಕನ್ನಡ ಗೊತ್ತಿಲ್ಲ.ಕಾಂ ಆರಂಭಿಸಿದ ನಂತರ ಇಂದು 17.500 ಕ್ಕೂ ಹೆಚ್ಚು ಜನ ಕನ್ನಡ ಕಲಿತಿದ್ದಾರೆ. ಇದರ ಕುರಿತು ನಮಗೆ ಹೆಮ್ಮೆ ಇದೆ” ಎಂದರು.
ಯಾವುದೇ ನಿರೀಕ್ಷೆ ಇಲ್ಲದೇ ಸ್ವ ಆಸಕ್ತಿಯಿಂದ ಕನ್ನಡ ಕಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೂಲತಃ ಮಂಗಳೂರಿನವರಾದ ಮಯ್ಯ ಬ್ರದರ್ಸ್ ಬೆಂಗಳೂರಿಗೆ ಬಂದು ಕನ್ನಡ ಗೊತ್ತಿಲ್ಲ.ಕಾಂ ಜಾಲ ತಾಣ ಆರಂಭ ಮಾಡಿ ಈ ಮೂಲಕ ಕನ್ನಡ ಭಾಷೆಗೊಂದು ಅಳಿಸು ಸೇವೆ ಸಲ್ಲಿಸುತ್ತಿದ್ದಾರೆ.