ತಾರಸಿಯ ತುಂಬ ಹಸಿರು ‘ಸ್ನೇಹ’ ದ ಉಸಿರು
ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಜೀವನ ಮತ್ತಷ್ಟು ಸಂದರವಾಗುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಇವರು ವೃತ್ತಿಯಿಂದ ಆಕಾಶವಾಣ ಯಲ್ಲಿ ಅನೌನ್ಸರ್, ಪ್ರವೃತ್ತಿಯಿಂದ ಪ್ರಕೃತಿಯೊಂದಿಗೆ ಒಡನಾಟ ಹೊಂದಿದವರು. ಹಸಿರನ್ನು ಬೆಳೆಸುತ್ತಿರುವವರು. ಅವರೇ ಮಂಗಳೂರಿನ ಕೊಡಿಕಲ್ಲಿನ ನಿವಾಸಿ ಸ್ನೇಹಾ ಭಟ್.
ಇವರು ಮನೆಯ ಮಾಳಿಗೆಯಲ್ಲಿಯೇ ಸಾವಯವ ಪದ್ಧತಿಯ ಮೂಲಕ ಮಿನಿ ತೋಟವನ್ನೇ ನಿರ್ಮಿಸಿದ್ದಾರೆ. ಅಲ್ಪ ಜಾಗದಲ್ಲಿಯೆ ಬಗೆಬಗೆಯ ತರಕಾರಿಗಳನ್ನು, ತರೇವಹಾರಿ ಹೂವುಗಳನ್ನು, ಔಷದೀಯ ಸಸ್ಯಗಳನ್ನು ಬೆಳೆಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ಮನೆಯಲ್ಲಿ ತಂದೆ ತಾಯಿ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರು. ಅದನ್ನು ಕಂಡು ಸ್ಪೂರ್ತಿಗೊಂಡ ಇವರು ಮನೆಯಲ್ಲಿ ಟೆರೆಸ್ ಗಾರ್ಡನ್ ಯಾಕೆ ಮಾಡಬಾರದು ಎಂಬ ಯೋಚನೆ ತಲೆಗೆ ಬಂದಾಗ, ಅದನ್ನು ತಕ್ಷಣವೇ ಕಾರ್ಯರೂಪಕ್ಕೂ ತಂದಿದ್ದಾರೆ.
ಪ್ರಾರಂಭದಲ್ಲಿ ಮಣ್ಣನ್ನು ಟೆರೆಸ್‍ಗೆ ಸಾಗಿಸಲು ಸ್ವಲ್ಪ ಕಷ್ಟ ಆಯ್ತು ಇಂತಹ ಸಂದರ್ಭದಲ್ಲಿ ಸ್ನೇಹಾ ಅವರ ಪತಿ ರವೀಶ್ ಇವರಿಗೆ ಸಾಥ್ ನೀಡಿದ್ದು, ಮಣ್ಣನ್ನು ಗೋಣಿ ಚೀಲದಲ್ಲಿ ಎತ್ತಿ ಮಣ್ಣನ್ನು ಹಾಕಿದ್ದಾರೆ. ನಂತರ ಅದನ್ನು ಬಕೆಟ್ ಹಾಗೂ ಗ್ರೋಬ್ಯಾಗ್‍ಗಳಿಗೆ ವರ್ಗಾಯಿಸಿದ್ದಾರೆ.
ಸಾವಯವ ಪದ್ಧತಿ
ಸ್ನೇಹಾ ಭಟ್ ಅವರು ತಮ್ಮ ಈ ತಾರಸಿ ತೋಟದಲ್ಲಿ ಯಾವುದೇ ರಾಸಾಯಿನಿಕ ಗೊಬ್ಬರವನ್ನು ಬಳಸಬಾರದು, ಸಂಪೂರ್ಣವಾಗಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ವಿಷಮುಕ್ತವಾದ ಬೆಳೆಯನ್ನು ಬೆಳೆಯಬೇಕು ಎಂದು ನಿರ್ಧರಿಸಿದ್ದರು.
ಅದರಂತೆ ಇಲ್ಲಿರುವ ಯಾವುದೇ ಗಿಡಗಳಿಗೆ ರಾಸಾಯಿನಿಕ ಗೊಬ್ಬರ ನೀಡದೇ ಅಪ್ಪಟ ಸಾವಯವ ಪದ್ಧತಿಯಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಸಗಣಿ ಗೊಬ್ಬರ ಹಾಗೂ ಅಡುಗೆಮನೆಯ ತರಕಾರಿ ಸಿಪ್ಪೆಯಂತಹ ಕಿಚನ್ ವೇಸ್ಟ್ ಅನ್ನು ಗೊಬ್ಬರವಾಗಿ ಬಳಸಿದ್ದಾರೆ. ಇದು ಗಿಡಗಳಿಗೆ ಒಳ್ಳೆಯದು ಎನ್ನುತ್ತಾರೆ ಸ್ನೇಹಾ ಅವರು.
ಸ್ನೇಹಾ ಭಟ್‍ರವರ ತಾರಸಿ ತೋಟ
ತರಕಾರಿ, ಹೂವು ಎಲ್ಲವೂ ಒಂದೇ ಕಡೆಯಲ್ಲಿ. ಆರೋಗ್ಯಕ್ಕೆ ಉಪಯಕ್ತವಾದ ಹಾಗಲಕಾಯಿ, ತೊಂಡೆಕಾಯಿ, ಬೆಂಡೆ, ತೊಂಡೆಕಾಯಿ, ಅಲಸಂಧಿ, ಸೌತೆ ಹೀಗೆ ಹಲವಾರು ತರಕಾರಿಗಳು ಇವರ ಕೈತೋಟದಲ್ಲಿ ಲಭ್ಯವಿರುವುದರಿಂದ ಇವರು ಮಾರ್ಕೆಟ್‍ನಿಂದ ತರಕಾರಿ ತರುವ ಪ್ರಮೇಯವೇ ಇಲ್ಲ. ಸೀಸನ್‍ಗೆ ತಕ್ಕ ಹಾಗೇ ಅಮಟೆ, ನುಗ್ಗೆ, ಬದನೆ, ಕುಂಬಳಕಾಯಿ, ಸುವರ್ಣಗೆಡ್ಡೆ, ಟೊಮೆಟೊ, ಹಸಿಮೆಣಸಿನಕಾಯಿ, ಎಲ್ಲಕ್ಕೂ ಇವರ ತೋಟದಲ್ಲಿ ಜಾಗವಿದೆ. ಬೆಳೆಯಲು ಅನುಗುಣವಾಗುವಂತೆ ಎಲ್ಲ ತರಕಾರಿಗಳನ್ನು ಬೆಳೆಯುತ್ತಾರೆ.
ಇಲ್ಲಿ ಕೇವಲ ತರಕಾರಿಗಳೂ ಮಾತ್ರವಲ್ಲದೇ, ಸೊಪ್ಪುಗಳು ಸಹ ಇವೆ. ಹರಿವೆ, ಬಸಳೆ, ಪುದೀನ, ಕೋತ್ತಂಬರಿ, ಮಜ್ಜಿಗೆಸೊಪ್ಪು, ಕರಿಬೇವು, ಫಲಾವ್ ಎಲೆ. ಮುಂತಾದ ತರಕಾರಿ ಸೊಪ್ಪುಗಳನ್ನು ಬೆಳೆದಿದ್ದಾರೆ.
ಹೂವಿನ ಘಮಲು
ತರಕಾರಿ ಹಾಗೂ ಸೊಪ್ಪುಗಳು ಮಾತ್ರವಲ್ಲದೆ, ಹೂವಿನ ಗಿಡಗಳೂ ಕೂಡ ಇಲ್ಲಿ ಘಮಿಸುತ್ತಿವೆ. ಗುಲಾಬಿ, ನೈದಿಲೆ, ಬಿಳಿ ಹಾಗೂ ಹಳದಿ ಕೋಮಲೆ, ಬಿಳಿ ತಾವರೆ, ದಾಸವಾಳ, ಮಲ್ಲಿಗೆ ಮುಂತಾದ ಹೂವುಗಳು ಇಲ್ಲಿ ಸ್ಥಾನ ಪಡೆದಿವೆ.
ಯುವರ್‌ಸ್ಟೋರಿ ಯೊಂದಿಗೆ ಮಾತನಾಡಿದ ಸ್ನೇಹಾರವರು,
“ಯಾವುದೇ ರಾಸಾಯಿನಿಕ ಬಳಸದೇ ತರಕಾರಿಯನ್ನು ಮನೆಯಲ್ಲಿ ಬೆಳೆಯಬೇಕು ಎನ್ನುವುದು ನಮ್ಮ ಕನಸಾಗಿತ್ತು. ಹಾಗೇಯೆ ಅದನ್ನು ಮಾಡಿದ್ದೇನೆ. ಇದಕ್ಕೆ ಮನೆಯವರೆಲ್ಲರ ಸಹಕಾರವಿದೆ. ನನ್ನ ಪತಿಯು ಕೂಡ ನನ್ನ ಕನಸನ್ನು ನನಸಾಗುವಂತೆ ಮಾಡಿದ್ದಾರೆ. ನಾವು ಬೆಳೆದ ತರಕಾರಿಯನ್ನು ನಾವೇ ಅಡುಗೆ ಮಾಡುವಾಗ ತುಂಬಾ ಖುಷಿ ಆಗುತದೆ” ಎನ್ನುತ್ತಾರೆ.
ಮಧ್ಯಮ ಗಾತ್ರದ ಗ್ರೋ ಬ್ಯಾಗ್ ಹಾಗೂ, ಬಕೆಟ್ ಹಾಗೂ ಹಳೆಯ ಪೇಂಟ್ ಬಕೆಟ್‍ಗಳಲ್ಲಿ ಗಿಡಗಳನ್ನು ಬೆಳೆದಿದ್ದಾರೆ. ಇವುಗಳಿಗೆ ಬೆಳಿಗ್ಗೆ ಹಾಗೂ ಸಾಯಂಕಾಲ ನೀರನ್ನು ಉಣಬಡಿಸುತ್ತಾರೆ. ಎಕರೆಗಟ್ಟಲೆ ಭೂಮಿಯನ್ನು ಹೊಂದಿದವರು ಕೂಡ ಇವರ ಈ ತೋಟವನ್ನು ನೋಡಿ ಕಲಿಯಬೇಕು, ಹಾಗಿದೆ, ರಾಸಾಯಿನಿಕ ಬಳಸದೇ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ತರಕಾರಿ, ಸೊಪ್ಪು ಅಮೃತ ಇದ್ದ ಹಾಗೇ ಎನ್ನುತ್ತಾರೆ ಸ್ನೇಹಾ ಅವರು. ಅಲ್ಲದೇ, ಇವರ ಮಗಳು ಸಮನ್ವಿ ಕೂಡ ಅಳಿಲು ಸೇವೆಯಂತೆ ತನ್ನ ಎಳೆಯ ವಯಸ್ಸಿನಲ್ಲಿ ಗಿಡಗಳ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದಾಳೆ. ಇವರ ಈ ಕಾರ್ಯಕ್ಕೆ ಮನೆಯವರೆಲ್ಲರ ಸಹಕಾರವು ಇದೆ. ಈ ರೀತಿಯಾಗಿ ಸಮಾಜಕ್ಕೆ ಹಾಗೂ ಪ್ರಕೃತಿಗೆ ಕೊಡುಗೆಯನ್ನು ನೀಡುತ್ತಿದ್ದಾರೆ. ಹಸಿರಿನೊಂದಿಗೆ ಇವರ ಬಾಂಧವ್ಯ ಹೀಗೆ ಚಿರವಾಗಿರಲಿ ಎನ್ನುವುದು ನಮ್ಮ ಹಾರೈಕೆ.
ಇತರರಿಗೆ ಸ್ಪೂರ್ತಿ
ಇವರ ಈ ಟೆರೆಸ್ ಗಾರ್ಡನ್ ಅನ್ನು ಕಂಡ ಇವರ ಅಕ್ಕ-ಪಕ್ಕದ ಮನೆಯವರು ಕೂಡ ಸ್ಪೂರ್ತಿಗೊಂಡು ತಮ್ಮ ಮನೆಗಳಲ್ಲಿ ತರಕಾರಿಗಳನ್ನು ಬೆಳೆಯ ತೊಡಗಿದ್ದಾರೆ. ಕಡಿಮೆ ಫಲ ದೊರಕಿದರು ನಾವೇ ಬೆಳೆದಿದ್ದನ್ನು ನಾವೇ ತಿನ್ನುತ್ತೇವೆ ಎಂಬ ಸಂತೋಷ ಸಿಗುತ್ತದೆ ಎನ್ನುತ್ತಾರೆ. ಈ ರೀತಿಯಾಗಿ ಸ್ನೇಹಾ ಭಟ್ ಅವರು ಇತರರಿಗೂ ಮಾದರಿಯಾಗಿದ್ದಾರೆ.
ಔಷಧೀಯ ಗಿಡಮೂಲಿಕೆಗಳು
ಆರೋಗ್ಯವನ್ನು ಕಾಪಾಡುವಂತಹ ಔಷಧೀಯ ಸಸ್ಯಗಳಾದ ಬ್ರಾಹ್ಮಿ, ದೊಡ್ಡಪತ್ರೆ, ಪುನರ್ನವ, ಇನ್ಸುಲಿನ್, ಅಮೃತಬಳ್ಳಿ, ತಿಮರೆ, ರಾಮಪತ್ರೆ, ಚಕ್ರಮುನಿ, ಅಮೃತಬಳ್ಳಿ ಮುಂತಾದ ಸಸ್ಯಗಳನ್ನು ಸಹ ಬೆಳೆಸಿದ್ದಾರೆ.
ಕಮಲದ ಹೂವನ್ನು ಬೆಳೆಸೋಕೆ ದೊಡ್ಡ ಕೊಳವೇ ಬೇಕಿಲ್ಲ, ಕಡಿಮೆ ಜಾಗದಲ್ಲಿಯೂ ಅದನ್ನು ಬೆಳೆಸಬಹುದು ಅದಕ್ಕೆ ಸಾಕ್ಷಿ ಇವರು ತಮ್ಮ ಟೆರೆಸ್‍ನ ಕಾಂಕ್ರೀಟ್ ಸ್ಲ್ಯಾಬ್‍ಗೆ ಟರ್ಪಲ್ ಹಾಕಿ ಚಿಕ್ಕ ಟ್ಯಾಂಕ್ ಹಾಗೇ ಮಾಡಿ, ಅದರಲ್ಲಿಯೇ ಕಮಲವನ್ನು ಅರಳಿಸಿದ್ದಾರೆ.