ಐಐಟಿ ಮತ್ತು ಐಐಎಂನ ಈ ಇಬ್ಬರು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ರೈತರಿಗೆ ನೆರವಾಗುತ್ತಿದ್ದಾರೆ
ಐಐಟಿ – ಖರಗಪುರ ಮತ್ತು ಐಐಎಂ – ಅಹ್ಮದಾಬಾದ್‌ನ ತೌಸಿಫ್ ಖಾನ್ ಮತ್ತು ನಿಶಾಂತ್ ಮಹಾತ್ರೆಯರಿಬ್ಬರು ಸೇರಿ ರೈತರ ಎಲ್ಲ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಕಲ್ಪಿಸುವ ಮೂಲಕ ಹೆಚ್ಚಿನ ಇಳುವರಿ ಸಾಧಿಸಲು ಸಹಾಯವಾಗುವ ಗ್ರಾಮೋಫೋನ್ ಆ್ಯಪ್ಅನ್ನು ಪ್ರಾರಂಭಿಸಿದ್ದಾರೆ.
ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ (ಐಬಿಇಎಫ್) ಪ್ರಕಾರ, ಭಾರತದ ಶೇಕಡಾ 58 ರಷ್ಟು ಜನರು ಕೃಷಿಯನ್ನು ಜೀವನೋಪಾಯದ ಪ್ರಾಥಮಿಕ ಮೂಲವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ, ಇದರಿಂದಾಗಿ ಭಾರತದ ಆರ್ಥಿಕತೆಯು ಕೃಷಿ ಆಧಾರಿತವಾಗಿದೆ.
ದೇಶದ ಆರ್ಥಿಕ ಪ್ರಗತಿಯನ್ನು ನಿರ್ಧರಿಸಲು ವಿವಿಧ ವಲಯಗಳು, ಮತ್ತು ಸರ್ಕಾರವು ಮಾನ್ಸೂನ್ ಮತ್ತು ಕೃಷಿ ಉತ್ಪಾದನೆಯನ್ನು ಅವಲಂಬಿಸಿವೆ.
ನೀರಿನ ಕೊರತೆ, ಬೆಳೆ ಚಕ್ರ ಮತ್ತು ಹೆಚ್ಚಿನವುಗಳ ಬಗ್ಗೆ ರೈತರ ಚಿಂತೆಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇನ್ನೂ ಬಹಳ ಪ್ರಗತಿ ಕಾಣಬೇಕಿದೆ.
ಈ ಅಂತರವನ್ನು ನಿವಾರಿಸಲು, ಐಐಟಿ-ಖರಗ್‌ಪುರ ಮತ್ತು ಐಐಎಂ- ಅಹಮದಾಬಾದ್‌ನ ತೌಸಿಫ್ ಖಾನ್ ಮತ್ತು ನಿಶಾಂತ್ ಮಹಾತ್ರೆಯರಿಬ್ಬರು ಸೇರಿ ಅಗ್ರಿಟೆಕ್ ಸ್ಟಾರ್ಟ್ ಅಪ್ ಗ್ರಾಮೋಫೋನ್ ಅನ್ನು ಪ್ರಾರಂಭಿಸಿದರು.
ಗ್ರಾಮೋಫೋನ್‌ನಿಂದ ಬೀಜದ ಮೊಳಕೆ
ತಂತ್ರಜ್ಞಾನವು ಕೃಷಿ ಕ್ಷೇತ್ರದಲ್ಲಿನ ಮಾಹಿತಿಯ ಕೊರತೆಯನ್ನು ನೀಗಿಸಬಹುದೆಂದು ಬಲವಾಗಿ ನಂಬಿದ್ದ ಈ ಜೋಡಿಯು ರೈತರಿಗೆ ಉತ್ತಮ ಪಸಲನ್ನು ಪಡೆಯಲು ಅಗತ್ಯವಾದ ಸಮಯೋಚಿತ ಮಾಹಿತಿ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಆ್ಯಪ್ಅನ್ನು ಪ್ರಾರಂಭಿಸಿದ್ದಾರೆ
ಸ್ಟಾರ್ಟ್‌ಅಫ್ ಮಿಷನ್ ಕುರಿತು ಮಾತನಾಡುತ್ತಾ ಗ್ರಾಮೋಫೋನ್‌ನ ಸಹ ಸಂಸ್ಥಾಪಕರು ಹಾಗೂ ಸಿಇಓ ಆಗಿರುವ ತೌಸಿಫ್ ಖಾನ್‌ರವರು ಹೀಗೆ ಹೇಳುತ್ತಾರೆ,
“ಉತ್ತಮ ಕೃಷಿ ಉತ್ಪನ್ನಗಳು, ಮಾಹಿತಿ ಮತ್ತು ಜ್ಞಾನವನ್ನು ರೈತರಿಗೆ ತಲುಪಿಸುವುದು ನಮ್ಮ ಗುರಿ. ಗೂಗಲ್ ಪ್ಲೇ ಸ್ಟೋರ್ ಮೂಲಕ ಯಾವುದೇ ಮೊಬೈಲ್ ಫೋನ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾದ ಅಪ್ಲಿಕೇಶನ್ ರೈತರಿಗೆ ಒಂದೇ ಸೂರಿನಡಿ ಪರಿಹಾರ ಒದಗಿಸುತ್ತದೆ, ಅಲ್ಲಿ ಅವರು ಬೆಳೆ ರಕ್ಷಣೆ, ಬೆಳೆ ಪೋಷಕಗಳು, ಬೀಜಗಳು, ಉಪಕರಣಗಳು ಮತ್ತು ಕೃಷಿ ಯಂತ್ರೋಪಕರಣಗಳನ್ನು ಮನೆಯಲ್ಲಿ ಕುಳಿತುಕೊಂಡೇ ಖರೀದಿ ಮಾಡಬಹುದು.”
ರೈತರು ಸ್ಥಳೀಯ ಬೆಳೆಯನ್ನು ಅಳವಡಿಸಿಕೊಳ್ಳಲು ಅಭ್ಯಾಸ ಮಾಡಬಹುದು ಮತ್ತು ಉತ್ತಮ ಬೆಳೆಯನ್ನು ಬೆಳೆಯಲು ಹಾಗೂ ಹವಾಮಾನ ಮಾಹಿತಿಯ ಕುರಿತು ಸಲಹೆ ಪಡೆದುಕೊಳ್ಳಬಹುದಾಗಿದೆ. ಇದು ಅವರ ಉತ್ಪನ್ನವನ್ನು ಹೆಚ್ಚಿಸುವ ಜತೆ ಕೃಷಿಯ ಮೂಲಕ ತಮ್ಮ ಆದಾಯವನ್ನು ನಿಯಮಿತವಾಗಿ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
ಅದೇ ವರ್ಷ ನಂತರದ ದಿನಗಳಲ್ಲಿ ಸಹ ಸಂಸ್ಥಾಪಕ ಮತ್ತು ತೌಸಿಫ್‌ರವರ ಬಾಲ್ಯ ಸ್ನೇಹಿತ ಆಶಿಶ್ ರಾಜನ್ (33), ಮತ್ತು ಇನ್ನೊಬ್ಬ ಸಹ ಸಂಸ್ಥಾಪಕರಾದ ಹರ್ಷಿತ್‌ರವರು ಗ್ರಾಮೋಫೋನ್ ತಂಡವನ್ನು ಸೇರಿಕೊಂಡರು.
ಆ್ಯಪ್ ಕಾರ್ಯನಿರ್ವಹಿಸುವ ಬಗೆ
ರೈತರು ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಲು ಗ್ರಾಮೋಫೋನ್ ಅಪ್ಲಿಕೇಶನ್ ಆರು ಸುದೀರ್ಘ ವಿಧಾನವನ್ನು ಹೊಂದಿದೆ: ಇನ್ಪುಟ್ ಯೋಜನೆ, ಬೆಂಬಲ ಮತ್ತು ಸಲಹೆ, ಗುಣಮಟ್ಟ, ಲಭ್ಯತೆ, ಅನುಕೂಲತೆ ಮತ್ತು ವೆಚ್ಚ-ಪರಿಣಾಮಕಾರತ್ವ.
ಮಣ್ಣಿನ ಪರೀಕ್ಷೆ ಮತ್ತು ಬೆಳೆ ಪೋಷಣೆಯ ನಿರ್ವಹಣೆಗೆ ಅನುಕೂಲವಾಗುವ ಮೂಲಕ ರೈತರು ತಮ್ಮ ಭೂಮಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇನ್‌ಪುಟ್ ಯೋಜನೆ ಸಹಾಯ ಮಾಡುತ್ತದೆ. ಬೆಂಬಲ ಮತ್ತು ಸಲಹಾ ವಿಭಾಗವು ರೈತರಿಗೆ ಸಲಹೆ ಹವಾಮಾನ ಮತ್ತು ಮಂಡಿ ಬೆಲೆಗಳ ವರದಿ ನೀಡುವ ಮೂಲಕ ಮಾಹಿತಿ ಕೊರತೆಯನ್ನು ನೀಗಿಸುವ ಗುರಿಯನ್ನು ಹೊಂದಿದೆ.
ವಿಶ್ವಾಸಾರ್ಹ ಪೂರೈಕೆದಾರರಿಂದ ಉತ್ತಮ ಮತ್ತು ಅಧಿಕೃತ ಉತ್ಪನ್ನಗಳನ್ನು ಖರೀದಿಸಲು ರೈತರಿಗೆ ಗುಣಮಟ್ಟವು ಅನುವು ಮಾಡಿಕೊಡುತ್ತದೆ. ಮತ್ತು ಉತ್ಪನ್ನಗಳು ಸಮಯೋಚಿತವಾಗಿ ಲಭ್ಯವಾಗುವುದನ್ನು ಖಚಿತಪಡಿಸುತ್ತದೆ ಹಾಗೂ ಮಾರುಕಟ್ಟೆಯ ಹೊಸ ಬೆಳವಣಿಗೆಯ ಜತೆ ರೈತರು ಮುಂದುವರೆಯುವರೆಯಲು ಸಹಾಯ ಮಾಡುತ್ತದೆ. ಇದರ ಅನುಕೂಲವೆಂದರೆ ರೈತರು ಮನೆಯಲ್ಲಿ ಕುಳಿತುಕೊಂಡೇ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಕೊನೆಯದಾಗಿ, ವೆಚ್ಚ-ಪರಿಣಾಮಕಾರಿ ಕಾರ್ಯವು ಉತ್ಪನ್ನಗಳನ್ನು ಮೂಲ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡುವುದನ್ನು ಖಾತ್ರಿಪಡಿಸುತ್ತದೆ.
ಈ ಸ್ಟಾರ್ಟ್‌ಅಪ್ ಉಚಿತ ಸಹಾಯವಾಣಿಯನ್ನು ಸಹ ಹೊಂದಿದೆ, ಅದು ಅಪ್ಲಿಕೇಶನ್ ಅಳವಡಿಸಿಕೊಳ್ಳಲು ಸಾಧ್ಯವಿಲ್ಲದ ಅಥವಾ ಸ್ಮಾರ್ಟ್ ಫೋನ್ ಹೊಂದಿಲ್ಲದ ರೈತರಿಗೆ ಅದೇ ಮಾಹಿತಿಯನ್ನು ಒದಗಿಸುತ್ತದೆ. ಕೃಷಿ ಹಿನ್ನೆಲೆ ಹೊಂದಿರುವ ಕಂಪನಿಯ ಸದಸ್ಯರು ರೈತರೊಂದಿಗೆ ಸಂಪರ್ಕ ಸಾಧಿಸುತ್ತಾರೆ.
ಗ್ರಾಮೋಫೋನ್ ಬರೀ ಆನ್ ಲೈನ್ ಸೇವೆ ನೀಡದೆ, ತಂಡವು ಕೃಷಿ ಭೂಮಿಗೂ ಸಹ ಭೇಟಿ ನೀಡುತ್ತದೆ, ಮಣ್ಣಿನ ಮತ್ತು ಹವಾಮಾನದ ಸ್ವರೂಪವನ್ನು ಗಮನಿಸುತ್ತದೆ ಮತ್ತು ಕೃಷಿಗೆ ಯೋಗ್ಯ ಪರಿಹಾರವನ್ನು ನೀಡುತ್ತದೆ.
ಸಹ ಸಂಸ್ಥಾಪಕರು ಮೊದಲ ಬಾರಿಗೆ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಮಧ್ಯಪ್ರದೇಶದ ರೈತರೊಂದಿಗೆ ಗ್ರಾಮೋಫೋನ್ ಅಪ್ಲಿಕೇಶನ್ ಪ್ರಾರಂಭಿಸುವ ಬಗ್ಗೆ ಸಂವಹನ ನಡೆಸಿರುವುದು ಇಲ್ಲಿಯವರೆಗಿನ ದೊಡ್ಡ ಸವಾಲಾಗಿತ್ತು.
“ನಾವು ಮೊದಲ ಬಾರಿ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಿದಾಗ ಹೊರಗಿನವರಾದ ನಮಗೆ ಇದೊಂದು ಸವಾಲಿನ ಕೆಲಸವಾಗಿತ್ತು. ಗ್ರಾಮಸ್ಥರ ಮೊದಲ ಪ್ರತಿಕ್ರಿಯೆ ‘ನೀವು ಯಾರು? ನಾವು ವರ್ಷಗಳಿಂದ ಈ ರೀತಿಯ ಬೇಸಾಯವನ್ನು ಮಾಡುತ್ತಿದ್ದೇವೆ’ ಎಂಬೂದಾಗಿತ್ತು. ಗ್ರಾಮಫೋನ್‌ನ ಸತ್ಯಾಸತ್ಯತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ನಂಬುವುದು ಅವರಿಗೆ ಆರಂಭಿಕ ಸವಾಲಾಗಿತ್ತು. ಆದಾಗ್ಯೂ, ಸಮಯ ಕಳೆದಂತೆ ನಾವು ಅವರ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಲು ಸಾಧ್ಯವಾಯಿತು,” ಎಂದು ನಿಶಾಂತ್ರವರು ಹೇಳುತ್ತಾರೆ.
ಸಕಾರಾತ್ಮಕ ಪರಿಣಾಮ
ಭಾರತದ ರೈತರ ಮೇಲೆ ಗ್ರಾಮಫೋನ್ ಬೀರಿದ ದೊಡ್ಡ ಪರಿಣಾಮವೆಂದರೆ ಅವರ ಮನಸ್ಥಿತಿ ಮತ್ತು ಅವರು ಕೃಷಿಯನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿದೆ. ಕೃಷಿಯ ವಿಷಯದಲ್ಲಿ ಎಲ್ಲಿಲ್ಲದ ಸಾಧ್ಯತೆಗಳಿವೆ ಎಂದು ಅವರೀಗ ಅರಿತುಕೊಂಡಿದ್ದಾರೆ.
“ರೈತರ ನಡವಳಿಕೆ ಮತ್ತು ಮನಸ್ಥಿತಿಯ ಬದಲಾವಣೆಯನ್ನು ನಾವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇವೆ, ಮತ್ತು ಇದು ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿದೆ. ಕೃಷಿಯ ಸಾಮರ್ಥ್ಯವನ್ನು ಮತ್ತಷ್ಟು ಅರಿತುಕೊಳ್ಳಲು ಹಾಗೂ ಬದಲಾವಣೆ ಮಾಡಲು ನಾವು ಮಾಡಬಹುದಾದ ಕೆಲಸದ ಕುರಿತು ನಿರಂತರವಾಗಿ ಗ್ರಾಮೋಫೋನ್ ಮೂಲಕ ಮಾಹಿತಿ ನೀಡಲು ಪ್ರಯತ್ನಿಸುತ್ತೇವೆ,” ಎಂದು ಆಶಿಶ್‌ರವರು ಹೇಳುತ್ತಾರೆ.
"ಇದರ ಪರಿಣಾಮದ ಕುರಿತು ಹೇಳುವುದಾದರೆ, ನಮ್ಮ ಅಪ್ಲಿಕೇಶನ್ ಬಳಸಿದ ರೈತರ ಉತ್ಪಾದನೆಯಲ್ಲಿ ಶೇಕಡಾ 40ರಷ್ಟು ಹೆಚ್ಚಳವಾಗಿರುವುದನ್ನು ಮತ್ತು ವೆಚ್ಚದಲ್ಲಿ ಶೇಕಡಾ 20ರಷ್ಟು ಕಡಿಮೆ ಆಗಿರುವುದನ್ನು ನಾವು ಗಮನಿಸಿದ್ದೇವೆ," ಎಂದು ನಿಶಾಂತ್ರವರು ಹೇಳುತ್ತಾರೆ.
ಗ್ರಾಮೋಫೋನ್ ಅಪ್ಲಿಕೇಶನ್‌ನಿಂದ ಅತ್ಯುತ್ತಮ ಲಾಭ ಗಳಿಸಿದ ರೈತ ರಾಮ್‌ಕಿಶನ್ ಜಿ ಕಾನಾರ್ಡಿರವರು ಹೀಗೆ ಹೇಳುತ್ತಾರೆ,
“ನಾನು ಮೊದಲು ಇಂದೋರ್‌ನ ಗ್ರಾಮೋಫೋನ್ ಕಚೇರಿಗೆ ಭೇಟಿ ನೀಡಿದಾಗ, ಅವರು ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆಂದು ಕಲಿಸಿದರು. ಹವಾಮಾನ ಮತ್ತು ಮಳೆಯ ಮುನ್ಸೂಚನೆ ಕುರಿತು ಹೇಳುವುದರಿಂದ ಇದು ನನಗೆ ಸಾಕಷ್ಟು ಸೂಕ್ತವಾಗಿತ್ತು. ಆಷ್ಟೇ ಅಲ್ಲದೇ ನನ್ನ ಬೆಳೆಗೆ ಯಾವುದೇ ರೋಗ ಬಾಧಿಸಿದೆಯೆಂಬೂದನ್ನು ಅಪ್ಲಿಕೇಶನ್ ತಿಳಿಸುತ್ತದೆ, ಒಂದುವೇಳೆ ರೋಗ ಬಂದಿದ್ದರೆ ಅದನ್ನು ಸೂಕ್ತ ಔಷಧದ ಮೂಲಕ ಹೇಗೆ ಗುಣಪಡಿಸಬಹುದೆಂಬ ಮಾಹಿತಿ ನೀಡುತ್ತದೆ. ಒಂದುವೇಳೆ ಗಮನಹರಿಸಬೇಕಾದ ಅಗತ್ಯ ಬಂದರೆ ಕಚೇರಿಯ ಮೂಲಕ ನನಗೆ ಕರೆ ಮಾಡಿ ಸೂಚನೆ ನೀಡುವ ಮೂಲಕ ಪರಿಹಾರ ಕಲ್ಪಿಸಲಾಗುತ್ತದೆ, ನಿರ್ದಿಷ್ಟ ಬ್ರ್ಯಾಂಡ್‌ಅನ್ನು ಮಾರಾಟ ಮಾಡುವ ಇತರರಿಗಿಂತ ಭಿನ್ನವಾಗಿ ನನ್ನ ಬೆಳೆಗೆ ಯಾವುದು ಸೂಕ್ತವಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ಮಾಹಿತಿ ನೀಡುತ್ತದೆ.”
ಮೂರು ಲಕ್ಷಕ್ಕೂ ಹೆಚ್ಚು ರೈತರು ಗ್ರಾಮಫೋನ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡಿದ್ದು, ಇದು ಬಾಯಿ ಮಾತಿನ ಮಾರುಕಟ್ಟೆಯಿಂದಲೇ ಹೆಚ್ಚಿನ ಲಾಭವನ್ನು ಪಡೆದಿದೆ.
“ನಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ, ನಮ್ಮ ಬೆಳೆಗಳಿಗೆ ಬಳಸಬಹುದಾದ ಯಾವುದೇ ಬ್ರಾಂಡ್‌ನ ಉತ್ಪನ್ನಗಳಿಲ್ಲ, ಆದರೆ ಗ್ರಾಮೋಫೋನ್ ಅಪ್ಲಿಕೇಶನ್ ಮೂಲಕ ಬೆಳಿಗ್ಗೆ ನಮ್ಮ ಆಯ್ಕೆಯನ್ನು ಆರ್ಡರ್ ಮಾಡಿದರೆ ಸಂಜೆಯವೇಳೆಗೆ ಅದು ನಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ನಮಗೆ ಬೇಕಾದ ಉತ್ಪನ್ನಗಳಿಗಾಗಿ ಹೆಚ್ಚಿನ ಸಮಯ ವ್ಯರ್ಥಮಾಡಬೇಕಾಗಿಲ್ಲ, ಅಥವಾ ತಪ್ಪು ಉತ್ಪನ್ನವನ್ನು ಖರೀದಿಸುವುದನ್ನು ಕೊನೆಗೊಳಿಸಬಹುದು,” ಎಂದು ಮಧ್ಯಪ್ರದೇಶದ ಇನ್ನೊಬ್ಬ ರೈತರಾದ ದೇವೇಂದ್ರ ಪಾಟೀದಾರ್‌ರವರು ಹೇಳುತ್ತಾರೆ.
“ಗ್ರಾಮೋಫೋನ್‌ನಿಂದ ಬಹಳ ಮಟ್ಟದ ಬೆಳವಣಿಗೆಯನ್ನು ನಾವು ಗಮನಿಸಿದ್ದೇವೆ, ಪ್ರತಿ ವರ್ಷ ಐದು ಪಟ್ಟು ಬೆಳೆಯಲು ಸಾಧ್ಯವಾಗಿದೆ ಏಕೆಂದರೆ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ನಾವು ಸಮರ್ಥರಾಗಿದ್ದೇವೆ ಮತ್ತು ಆ ನಿಟ್ಟಿನಲ್ಲಿ ನಾವು ಸೇವೆಯನ್ನು ನೀಡಿದ್ದೇವೆ. ಅವರನ್ನು ಸಬಲೀಕರಣಗೊಳಿಸುವಂತಹ ಉತ್ತಮ ಉತ್ಪನ್ನಗಳ ಡಿಜಿಟಲ್ ಫ್ಲಾಟ್‌ಫಾರ್ಮ್ಅನ್ನು ನಾವು ನಿರ್ಮಿಸಿದ್ದೇವೆ," ಎಂದು ತೌಸಿಫ್‌ರವರು ಹೇಳುತ್ತಾರೆ.
ಆರಂಭಿಕ ಬೆಳವಣಿಗೆ ಮತ್ತು ಪಯಣ
2009ರಲ್ಲಿ ಕೃಷಿ ವ್ಯವಹಾರ ನಿರ್ವಹಣೆ ವಿಷಯದಲ್ಲಿ ಪದವಿ ಪಡೆದ ಐಐಎಂ ಅಹಮದಾಬಾದ್ ಮತ್ತು ಐಐಟಿ ಖರಗ್‌ಪುರದ ವಿದ್ಯಾರ್ಥಿಗಳು ಭಾರತೀಯ ರೈತರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸದರು. ಉತ್ಪಾದನೆಯೇ ದೊಡ್ಡ ಸಮಸ್ಯೆ ಎನ್ನುವುದನ್ನು ಅವರು ಕಂಡುಕೊಂಡರು.
“ಭಾರತವು ಹಣ್ಣು ಮತ್ತು ತರಕಾರಿ ಉತ್ಪಾದಿಸುವ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ, ಮತ್ತು ಭಾರತೀಯ ರೈತನಿರಿಗೆ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ನಾವು ಕೃಷಿ ಮತ್ತು ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಸರಿಯಾದ ಜ್ಞಾನ ಮತ್ತು ವಿಧಾನವನ್ನು ಒದಗಿಸಲು ಏನನ್ನಾದರೂ ಮಾಡಲು ಬಯಸಿದ್ದೆವು,” ಎಂದು ತೌಸಿಫ್‌ರವರು ಹೇಳುತ್ತಾರೆ.
ಆಡಳಿತ ವ್ಯವಸ್ಥೆಯಲ್ಲಿನ ರಚನಾತ್ಮಕ ಸಮಸ್ಯೆಗಳಿಂದ, ರೈತರು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿರುವುದಿಲ್ಲ, ಅಥವಾ ಒಂದು ನಿರ್ದಿಷ್ಟ ವರ್ಷದಲ್ಲಿ ಇಳುವರಿ ಎಷ್ಟು ಅನುಕೂಲಕರವಾಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.
“ರೈತರ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಬಯಕೆಯಾಗಿದೆ’ ಉತ್ಪಾದಕತೆಯನ್ನು 50 ರಿಂದ 70 ಪ್ರತಿಶತದಷ್ಟು ಸುಧಾರಿಸಲು ಸಹಾಯ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲು ನೆರವಾಗುತ್ತೇವೆ” ಎಂದು ತೌಸಿಫ್‌ರವರು ಹೇಳುತ್ತಾರೆ.
ಜಾನ್ ಡೀರ್‌ನಲ್ಲಿ ಅಧ್ಯಯನ ಮಾಡಿ ಮತ್ತು ಒಟ್ಟಿಗೆ ಕೆಲಸ ಮಾಡಿದ ನಂತರ, ಇವರಿಬ್ಬರು ಒಟ್ಟಾಗಿ ಹೊಸ ಕೆಲಸ ಮಾಡಲು ನಿರ್ಧರಿಸಿ 2016 ರಲ್ಲಿ ಅಗ್ರಿಟೆಕ್ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿದರು. ಇಂದು, ಕಂಪನಿಯು 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ, ಆಶಿಶ್‌ರವರು ಬೆಂಗಳೂರು ಕಚೇರಿಯ ಮುಖ್ಯಸ್ಥರಾಗಿದ್ದಾರೆ, ಮತ್ತು ಉಳಿದ ಮೂರು ಸಹ-ಸಂಸ್ಥಾಪಕರು ಇಂದೋರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ನಿಶಾಂತ್ ಮತ್ತು ತೌಸಿಫ್‌ರವರು 10ಲಕ್ಷ ರೂ. ಹೂಡಿಕೆಯೊಂದಿಗೆ ಗ್ರಾಮೋಫೋನ್ ಅನ್ನು ಪ್ರಾರಂಭಿಸುತ್ತಾರೆ. ನಂತರ ತಮ್ಮ ಎರಡನೇ ಸುತ್ತಿನಲ್ಲಿ ಅವರು ಖಾಸಗಿ ಹೂಡಿಕೆಯನ್ನು ಸ್ವೀಕರಿಸಿದರು, ಇಲ್ಲಿಯವರೆಗೆ ಗ್ರಾಮೋಫೋನ್‌ನಲ್ಲಿ ಹೂಡಿಕೆ ಮಾಡಿದ ಕೆಲವು ಕಂಪನಿಗಳಲ್ಲಿ ನೌಕ್ರಿ ಡಾಟ್ ಕಾಮ್, ಆಶಾ ಇಂಪ್ಯಾಕ್ಟ್, ಬೆಟರ್ ಕ್ಯಾಪಿಟಲ್ ಮತ್ತು ಇನ್ಫೋ ಎಡ್ಜ್ ಲಿಮಿಟೆಡ್ ಸೇರಿವೆ.
ಭವಿಷ್ಯದ ಯೋಜನೆ
ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಗ್ರಾಮಫೋನ್ ತಂಡವು ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಂತಹ ಇತರ ರಾಜ್ಯಗಳಿಗೂ ವಿಸ್ತರಿಸಲು ಆಶಿಸುತ್ತೇವೆ ಮತ್ತು ಇತರ ಭಾಷೆಗಳಲ್ಲಿಯೂ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದೆ.
“ಅಪ್ಲಿಕೇಶನ್ ಒದಗಿಸಿರುವ ಸೇವೆಯಂತೆ ತಂತ್ರಜ್ಞಾನದ ಮೂಲಕ ಮಾನವ ಸಂಪರ್ಕ ಸಾಧನ ನಿರ್ಮಿಸುವುದು ಮತ್ತು ಪುನರಾವರ್ತಿಸುವ ಕೆಲಸವನ್ನು ನಾವು ಶೀಘ್ರದಲ್ಲೇ ಮಾಡಲು ಬಯಸುತ್ತೇವೆ, ರೈತರು ಉತ್ಪನ್ನಗಳು ತಮ್ಮ ಮನೆ ಬಾಗಿಲಿಗೆ ಬಂದು ತಲುಪುವವರೆಗೂ ಮಾರ್ಗದರ್ಶನ ಪಡೆಯಲು ಬಯಸುತ್ತಾರೆಂಬೂದನ್ನು ನಾವು ಗಮನಿಸಿದ್ದೇವೆ. ನಮ್ಮಲ್ಲಿ ಉಚಿತ ಸಹಾಯವಾಣಿಯಿದೆ ಆದರೆ ಇದನ್ನು ಹೊಂದಿರುವುದರಿಂದ ಹೆಚ್ಚು ಪ್ರಯೋಜನವಾಗಲಿದೆ." ಎಂದು ನಿಶಾಂತ್ರವರು ಹೇಳುತ್ತಾರೆ.