60ರ ಹರೆಯದಲ್ಲಿ ಪ್ರೀತಿಸಿ ಮದುವೆಯಾದ ಕೇರಳದ ಈ ದಂಪತಿ

67 ವರ್ಷದ ಕೊಚಾನಿಯನ್ ಮೆನನ್ ಮತ್ತು 66 ವರ್ಷದ ಪಿ.ವಿ.ಲಕ್ಷ್ಮಿ ಅಮ್ಮಲ್ ಅವರು ತ್ರಿಶೂರ್‌ನ ರಾಮವರ್ಮಪುರಂನಲ್ಲಿರುವ ಸರ್ಕಾರಿ ವೃದ್ಧಾಶ್ರಮದಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ.

60ರ ಹರೆಯದಲ್ಲಿ ಪ್ರೀತಿಸಿ ಮದುವೆಯಾದ ಕೇರಳದ ಈ ದಂಪತಿ

Thursday January 02, 2020,

2 min Read

ಪ್ರೀತಿ ಎಂಬುದೆ ಹಾಗೇ. ಅದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ‌. ಯಾವ ಸಮಯದಲ್ಲಿ ಬೇಕಾದರೂ ಅನುರಾಗ ಒಡಮೂಡಬಹುದು. ಇಷ್ಟೆಲ್ಲಾ‌ ಪೀಠಿಕೆ ಏಕಂದರೆ, ಕೇರಳದ ಅರವತ್ತರ ವಯಸ್ಸಿನ ದಂಪತಿಗಳು ವೃದ್ಧ್ಯಾಪದಲ್ಲಿ ಅನುರಾಗದ ಮೂಲಕ ಮದುವೆ ಬಂಧನಕ್ಕೆ ಒಳಗಾಗಿದ್ದಾರೆ‌.


ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ರಾಮನವರ್ಮಪುರಂನಲ್ಲಿರುವ ಸರ್ಕಾರಿ ವೃದ್ಧಾಶ್ರಮದಲ್ಲಿ‌ 28ನೇ ತಾರೀಖಿನಂದು 60ರ ಹರೆಯದ ವೃದ್ಧರು ಮದುವೆಯ ಬಂಧನದಲ್ಲಿ ಸಿಲುಕಿದರು.


q

ಕೊಚಾನಿಯನ್ ಮತ್ತು ಲಕ್ಷ್ಮಿ ಅವರ ವಿವಾಹದ ಸಂದರ್ಭ(ಚಿತ್ರಕೃಪೆ: ಫೇಸ್‌ಬುಕ್‌)

67ರ ವರ್ಷದ ಕೊಚಾನಿಯನ್ ಮೆನನ್ ಮತ್ತು‌ 66 ವರ್ಷದ ಪಿ.ವಿ.ಲಕ್ಮಿ ಅಮ್ಮಲ್ ಅವರ ಈ ವಿವಾಹ ಮಹೋತ್ಸವದಲ್ಲಿ ಕೇರಳ ರಾಜ್ಯ ಕೃಷಿ ಸಚಿವರಾದ ವಿ.ಎಸ್.ಸುನೀಲ್ ಕುಮಾರ್ ಅವರ ಉಪಸ್ಥಿತಿ ವಿಶೇಷವಾಗಿತ್ತು. ಇದು ಕೇರಳ ರಾಜ್ಯದಲ್ಲಿ ವೃದ್ಧಾಶ್ರಮದಲ್ಲಿ ನಡೆದ ಮೊದಲ ವಿವಾಹವಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ.


ಈ ದಂಪತಿಗಳು 30 ವರ್ಷಗಳ‌ ಪರಿಚಯವನ್ನು ಹೊಂದಿದವರಾಗಿದ್ದು, 21 ವರ್ಷಗಳ ಹಿಂದೆ ಅಮ್ಮಲ್ ಅವರ ಪತಿ ನಿಧನರಾಗುವ ಮುನ್ನ, ಅವರು ತಮ್ಮ ದೀರ್ಘಕಾಲದ ಸ್ನೇಹಿತನಾದ ಮೆನನ್ ಹತ್ತಿರ‌ ತನ್ನ ಮರಣಾನಂತರ ಅಮ್ಮಲ್‌ನನ್ನು ನೋಡಿಕೊಳ್ಳುವಂತೆ ಕೇಳಿಕೊಂಡಿದ್ದರು.


"ಅವರು(ಅಮ್ಮಲ್ ಪತಿ) ತೀರಿಕೊಂಡ ನಂತರ, ನಾನು ಕೆಲವು ವರ್ಷಗಳ ಕಾಲ ನನ್ನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದೆ‌. ಸಹಾಯ ಬೇಕಾದಾಗ ಕೊಚಾನಿಯನ್ ಮನೆಗೆ ಬರುತ್ತಿದ್ದರು. ನಂತರ, ‌ನಾನು ಮನೆಯನ್ನು ಮಾರಿ ಸಂಬಂಧಿಗಳ ಮನೆಗೆ ಸ್ಥಳಾಂತರವಾದೆ. ಅಲ್ಲಿ ಕೆಲವು ಕಾಲವಿದ್ದೆ," ಎಂದು ಅಮ್ಮಲ್ ದಿ ನ್ಯೂಸ್ ಮಿನಿಟ್‌ನೊಂದಿಗೆ ಮಾತಾಡಿದ್ದಾರೆ‌.


ಮೆನನ್ ನಿರಂತರವಾಗಿ ಅಮ್ಮಲ್‌ಗೆ ಸಹಾಯ ಮಾಡುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ಸಂಪರ್ಕವನ್ನು ಕಳೆದುಕೊಂಡಿದ್ದರು. ನಂತರ ಎರಡು ವರ್ಷದ ಹಿಂದೆ ಅಮ್ಮಲ್ ರವರು ರಾಮವರ್ಮಪುರಂ ವೃದ್ಧಾಶ್ರಮಕ್ಕೆ ತೆರಳಿದರು. ಈಗೆರಡು ತಿಂಗಳ ಹಿಂದೆ ಮೆನನ್ ರವರು ಕೂಡ ಅದೇ ವೃದ್ಧಾಶ್ರಮಕ್ಕೆ ತೆರಳಿ ಮತ್ತೆ ಸ್ನೇಹವನ್ನು ಪಡೆದುಕೊಂಡರು. ನಂತರ ಅವರು ತಮ್ಮ ಉಳಿದ ಜೀವನವನ್ನು ಗಂಡ ಹೆಂಡತಿಯಾಗಿ ಬಾಳಲು ನಿರ್ಧರಿಸಿದರು.


ತ್ರಿಶೂರ್ ಕಾರ್ಪೊರೇಷನ್ ವೆಲ್ಫೇರ್ ಸ್ಥಾಯಿ ಸಮಿತಿ ಸದಸ್ಯ ಜಾನ್ ಡೇನಿಯಲ್ ಅವರ ನೇತೃತ್ವದಲ್ಲಿ ವಿವಾಹವನ್ನು ಆಯೋಜಿಸಲಾಗಿತ್ತು. ಡಿಸೆಂಬರ್ ಮೂವತ್ತರಂದು ವಿವಾಹ ‌ನಿಗದಿಪಡಿಸಿದ್ದರೂ, ನಂತರ 28ರಂದು ಪೂರ್ವಭಾವಿಯಾಗಿ ಮಾಡಲಾಯಿತು. ಇದನ್ನು ಡೇನಿಯಲ್ ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಿದರು. ಮದುವೆಗೆ ಕೆಲವು ದಿನಗಳ ಮುಂಚೆ ಮದುವೆಯ ಆಮಂತ್ರಣವನ್ನು ಸಹ ಹಂಚಿಕೊಂಡಿದ್ದರು. ವರದಿ ದಿ ಲಾಜಿಕಲ್ ಇಂಡಿಯನ್.


"ಇದು ನನ್ನ ಜೀವನದ ಸಂತೋಷದ ದಿನಗಳಲ್ಲೊಂದಾಗಿದೆ. ರಾಮವರ್ಮಪುರಂ ವೃದ್ಧಾಶ್ರಮದ ಕೊಚಾನಿಯನ್ ಮತ್ತು ಲಕ್ಷ್ಮಿ ಅಮ್ಮಲ್ ಅವರ ಮದುವೆಗೆ ಸಾಕ್ಷಿಯಾಗಿರುವುದು ಯಾವಾಗಲೂ ನೆನಪಿನಲ್ಲಿಳಿಯುವಂತಹದು. ಈ ಮದುವೆಗೆ ಸಾಮಾಜಿಕ ಕಾರ್ಯಕರ್ತರು, ಖೈದಿಗಳು, ಹಿತೈಷಿಗಳು ಈ ಮದುವೆಗೆ ಸಾಕ್ಷಿಯಾಗಿದ್ದರು. ಕೇರಳದ ಸರ್ಕಾರಿ ವೃದ್ಧಾಶ್ರಮದಲ್ಲಿ ನಡೆದ ಮೊದಲ ಮದುವೆಯಾಗಿದೆ. ವರ ಮತ್ತು ವಧುರವರು ಮಂಟಪಕ್ಕೆ ಪ್ರವೇಶಿಸುವಾಗ ಅತ್ಯಂತ ಸಂತೋಷ ಹಾಗೂ ಉತ್ಸಾಹವನ್ನು ಹೊಂದಿದ್ದರು. ಅವರ ವೈವಾಹಿಕ ಜೀವನವು ಸಂತೋಷದಾಯಕವಾಗಿರಬೇಕೆಂದು ಬಯಸುತ್ತೇನೆ," ಎಂದು‌ ಸಚಿವರು ಹೇಳುತ್ತಾರೆ.


ಈ ದಂಪತಿಗಳು ಪ್ರೀತಿಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂದು ಈ ಮೂಲಕ ನಿರೂಪಿಸಿದ್ದಾರೆ.