ಫೈಜರ್‌-ಬಯೋಎನ್‌ಟೆಕ್‌ನ ಕೋವಿಡ್‌-19 ಲಸಿಕೆ ಬಳಕೆಗೆ ಅನುಮೋದನೆ ನೀಡಿದ ಬ್ರಿಟನ್‌ ಸರ್ಕಾರ

ಲಸಿಕೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಅಮೇರಿಕನ್‌ ಸಂಸ್ಥೆ ಫೈಜರ್‌ ಮತ್ತು ಜರ್ಮನ್‌ನ ಬಯೋಎನ್‌ಟೆಕ್‌ ಎಲ್ಲ ವಯಸ್ಸಿನವರಲ್ಲಿಯೂ ಲಸಿಕೆ ಪರಿಣಾಮಕಾರಿಯಾಗಿದೆ ಎಂಬುದು ಪರೀಕ್ಷೆಗಳಿಂದ ತಿಳಿದಿದೆ ಎಂದಿದೆ.

ಫೈಜರ್‌-ಬಯೋಎನ್‌ಟೆಕ್‌ನ ಕೋವಿಡ್‌-19 ಲಸಿಕೆ ಬಳಕೆಗೆ ಅನುಮೋದನೆ ನೀಡಿದ ಬ್ರಿಟನ್‌ ಸರ್ಕಾರ

Wednesday December 02, 2020,

1 min Read

ಬುಧವಾರ ಬ್ರಿಟನ್‌ ಸರ್ಕಾರ ಫೈಜರ್‌-ಬಯೋಎನ್‌ಟೆಕ್‌ನ ಕೋವಿಡ್‌-19 ಲಸಿಕೆ ಬಳಕೆಗೆ ಅನುಮೋದನೆ ನೀಡಿದೆ. ಜಗತ್ತನ್ನೆ ಕಾಡುತ್ತಿರುವ ಕೊರೊನಾವೈರಸ್‌ ನಿರ್ಮೂಲನೆ ಮಾಡಲು ಲಸಿಕೆ ಬಳಕೆಗೆ ಅನುಮೋದನೆ ನೀಡಿದ ಮೊದಲ ದೇಶವಾಗಿ ಬ್ರಿಟನ್‌ ಹೊರಹೊಮ್ಮಿದೆ.


ಮೆಡಿಸಿನ್ಸ್‌ ಆ್ಯ‌ಂಡ್ ಹೆಲ್ತ್‌ಕೇರ್‌ ಪ್ರಾಡಕ್ಟ್ಸ್‌ ರೇಗುಲೇಟರಿ ಏಜನ್ಸಿ(ಎಮ್‌ಎಚ್‌ಆರ್‌ಎ) ಕೋವಿಡ್‌-19 ವಿರುದ್ಧ ಈ ಲಸಿಕೆ ಶೇ. 95 ರಷ್ಟು ಪರಿಣಾಮಕಾರಿಯಾಗಿದ್ದು, ಬಳಕೆಗೆ ಸುರಕ್ಷಿತವಾಗಿದೆ ಎಂದಿದೆ.


ಲಸಿಕೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಅಮೇರಿಕನ್‌ ಸಂಸ್ಥೆ ಫೈಜರ್‌ ಮತ್ತು ಜರ್ಮನ್‌ನ ಬಯೋಎನ್‌ಟೆಕ್‌ ಎಲ್ಲ ವಯಸ್ಸಿನವರಲ್ಲಿಯೂ ಲಸಿಕೆ ಪರಿಣಾಮಕಾರಿಯಾಗಿದೆ ಎಂಬುದು ಪರೀಕ್ಷೆಗಳಿಂದ ತಿಳಿದಿದೆ ಎಂದು ಹೇಳಿದ್ದವು.


ಬ್ರಿಟನ್‌ ಸರ್ಕಾರ ಲಸಿಕೆಯ ಪ್ರಮಾಣಿತ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ತಿಳಿದುಕೊಳ್ಳಲು ಎಮ್‌ಎಚ್‌ಆರ್‌ಎಗೆ ಹೇಳಿತ್ತು.


2021ರ ಅಂತ್ಯದೊಳಗೆ ಬ್ರಿಟನ್‌ 40 ಮಿಲಿಯನ್‌ ಡೋಸ್‌ಗಳನ್ನು ಪಡೆಯುವ ನಿರೀಕ್ಷೆಯಿದೆ, ಇದು ಜನಸಂಖ್ಯೆಯ ಮೂರನೇ ಒಂದು ಭಾಗಕ್ಕೆ ಲಸಿಕೆ ನೀಡಲು ಸಾಕಾಗುತ್ತದೆ. ಬಹುತೇಕ ಅರ್ಧದಷ್ಟು ಲಸಿಕೆ ಮುಂದಿನ ವರ್ಷದ ಮೊದಲ ಭಾಗದಲ್ಲೆ ಬರುವ ನಿರೀಕ್ಷೆಯಿದೆ.


ಎಮ್‌ಎಚ್‌ಆರ್‌ಎ ನಿಗದಿಪಡಿಸಿರುವ ಪ್ರಮಾಣಿತ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮವನ್ನು ತೋರಿಸಿದರೆ ಮಾತ್ರ ಕೋವಿಡ್‌-19 ಲಸಿಕೆ ಬಳಕೆಗೆ ಮತ್ತು ನಿರಂತರ ಉತ್ಪಾದನೆಗೆ ಅನುಮೋದನೆ ನೀಡುತ್ತದೆ ಎಂದು ಬ್ರಿಟನ್‌ ಸರ್ಕಾರ ಒತ್ತಿಹೇಳಿತ್ತು.

ಎಮ್‌ಎಚ್‌ಆರ್‌ಎ ಬ್ರಿಟನ್‌ನ ಸ್ವತಂತ್ರ ನಿಯಂತ್ರಕವಾಗಿದ್ದು, ಅದು ತನ್ನ ಉತ್ಕೃಷ್ಟ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕ್ಕೆ ಜಾಗತಿಕವಾಗಿ ಹೆಸರುವಾಸಿಯಾಗಿದೆ.


ಲಸಿಕೆಯನ್ನು ಬಯೋಎನ್‌ಟೆಕ್‌ನ ಜರ್ಮನ್‌ ಸೈಟ್‌ಗಳಲ್ಲಿ ಮತ್ತು ಬೆಲ್ಜಿಯಮಂನ ಪೈಜರ್ ಉತ್ಪಾದನಾ ತಾಣಗಳಲ್ಲಿ ತಯಾರಿಸಲಾಗುವುದು.


ಫೈಜರ್‌-ಬಯೋಎನ್‌ಟೆಕ್‌ನ ಲಸಿಕೆಯ ವಿತರಣೆಗೆ ಬೇಕಾಗುವ ಶೀತಲ ಸಂಗ್ರಹಣೆ ಯಾವುದೇ ತರಹದ ಸಮಸ್ಯೆಯನ್ನು ಮತ್ತು ವಿಳಂಬವನ್ನು ಉಂಟುಮಾಡುವುದಿಲ್ಲ ಎಂಬ ವಿಶ್ವಾಸವಿದೆಯೆಂದು ಬ್ರಿಟನ್‌ ಹೇಳಿದೆ. ಪ್ರಿಡ್ಜ್‌ನಲ್ಲಿ 2 ರಿಂದ 8 ಡಿಗ್ರಿ ತಾಪಮಾನದಲ್ಲಿ ಲಸಿಕೆಯನ್ನು ಇಟ್ಟರೆ 5 ದಿನಗಳವರೆಗೆ ಬಳಸಬಹುದಾದರಿಂದ ಅದನ್ನು ವಿತರಣಾ ಕೇಂದ್ರಗಳಲ್ಲಿ ಸುಲಭವಾಗಿ ಶೇಖರಿಸಿಡಬಹುದಾಗಿದೆ.