ವಿಶಿಷ್ಟ ಚೇತನರ ವಿಶಿಷ್ಟ ಸಾಧನೆ : ಕುಮಾರ ಪರ್ವತವೇರಿದ ಸುನೀಲ್‌ರ ಸಾಹಸಗಾಥೆ
ಹಾಸನದ ಸುನೀಲ್ ಎಂಬುವವರು ಅಂಗವಿಕಲತೆಯನ್ನು ಮೆಟ್ಟಿ ನಿಂತು ಒಂದೇ ಕಾಲಿನಲ್ಲಿ ಕುಮಾರ ಪರ್ವತವನ್ನು ಏರಿದ್ದಾರೆ. ಈ ಮೂಲಕ ಕುಮಾರ ಪರ್ವತವನ್ನು ಏರಿದ ಮೊದಲ ವಿಶಿಷ್ಟ ಚೇತನ ವ್ಯಕ್ತಿಯಾಗಿದ್ದಾರೆ.
ಬದುಕಿನಲ್ಲಿ ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಅವನ್ನು ಎದುರಿಸಿ ಮುಂದೆ ಸಾಗಿದರೆ ಬದುಕಿನಲ್ಲಿ ಗೆಲುವು ಸಾಧಿಸಿದಂತೆ. ಆಗುವುದಿಲ್ಲ ಎಂದು ಕೈ ಕಟ್ಟಿ ಕೂತರೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹುಟ್ಟುತ್ತಲೇ ಯಾರೂ ಸಾಧಕರಾಗಿರುವುದಿಲ್ಲ, ಆಯಾ ಪರಿಸ್ಥಿತಿಗಳು ಅವರನ್ನು ಗಟ್ಟಿಗೊಳಿಸುತ್ತವೆ.
ಇಂದು ಚಾರಣ ಮಾಡುವುದು ಒಂದು ಹವ್ಯಾಸ. ಕಾಲಿದ್ದವರು, ಎಲ್ಲ ಸರಿಯಾಗಿದ್ದವರೂ ಚಾರಣ ಮಾಡುವುದು ಕಷ್ಟ ಎನ್ನುವಂತಹ ಈ ಸಂದರ್ಭದಲ್ಲಿ ಹಾಸನದ ಸುನೀಲ್ ಎಂಬುವವರು ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವಿನಿಂದ ಒಂದು ಕಾಲನ್ನು ಕಳೆದುಕೊಂಡರು, ಈಗ ಚಾರಣ ಮಾಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಿದ್ದಾರೆ.
ಸುನೀಲ್‌ರವರು ಹದಿಮೂರನೇ ವಯಸ್ಸಿನವರೆಗೂ ಎಲ್ಲರ ಹಾಗೇ ಚೆನ್ನಾಗಿ ಓಡಾಡಿಕೊಂಡು, ಆಟೋಟದಲ್ಲೂ ಸಕ್ರಿಯವಾಗಿದ್ದರು. ಹೀಗೆ ಒಂದಿನ ಲಾಂಗ್ ಜಂಪ್ ಮಾಡುವಾಗ ಮೊಳೆಯೊಂದು ಕಾಲಲ್ಲಿ ಸೇರಿಕೊಂಡು ಅದು ತೊಂದರೆ ಆಗಿ ಗ್ಯಾಂಗ್ರೀನ್ ಥರ ಆಗಿ ಎಡಗಾಲನ್ನು ಕತ್ತರಿಸಬೇಕಾಯ್ತು. ಬದುಕಿನಲ್ಲಿ ಹೀಗೆ ಎದುರಾದ ಅನಿರೀಕ್ಷಿತ ತಿರುವಿನಿಂದ ಕಂಗೆಟ್ಟರೂ ಧೃತಿಗೆಡದೆ ಹೆಜ್ಜೆಯನ್ನಿಟ್ಟಿದ್ದಾರೆ.
ಮೈಸೂರಿನ ವಿದ್ಯಾ ವಿಕಾಸ ಇಂಜನಿಯರಿಂಗ್ ಕಾಲೇಜಿನಲ್ಲಿ ಇಂಜನಿಯರಿಂಗ್ ಮುಗಿಸಿ ಸದ್ಯ ಕೆಪಿಟಿಸಿಎಲ್‌ನಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿದ್ದಾರೆ.
ಎರಡು ವರ್ಷಗಳ ಹಿಂದೆ, ಸುನೀಲ್‌ರವರ ಸ್ನೇಹಿತರಾದ ಮನು ಎನ್ ಗೌಡ ಎಂಬುವವರು ಇವರಲ್ಲಿ ಸ್ಪೂರ್ತಿ ತುಂಬಿ ನಿನ್ನ ಕೈಯಲ್ಲಿ ಸಾಧ್ಯ ಆಗುತ್ತೆ ಎಂದು ಮೊದಲ ಬಾರಿಗೆ ಚಾರಣಕ್ಕೆ ಕರೆದುಕೊಂಡು ಹೋದರು. ಅಂದಿನಿಂದ ಶುರುವಾದ ಚಾರಣದ ಹವ್ಯಾಸ ಕಡಿಮೆಯಾಗಿಲ್ಲ.
"ಯಾವುದು ಆಗೋಲ್ಲ ಅಂತ ಕೂತರೆ ಅದು ಆಗುವುದಿಲ್ಲ. ಅದನ್ನು ಎದುರಿಸಿ, ಮುನ್ನುಗ್ಗಿ ಎದುರಿಸಬೇಕೆಂದು," ಸುನೀಲ್ ಹೇಳುತ್ತಾರೆ.
ಸುನೀಲ್‌ರವರು ಕರ್ನಾಟಕದ ಟಾಪ್ 3 ಎಂದೇ ಕರೆಯಲ್ಪಡುವ ಮುಳ್ಳಯ್ಯನಗಿರಿ, ಕುಮಾರ ಪರ್ವತ, ತಡಿಯಾಂಡಮೊಲ್ ಪರ್ವತಗಳನ್ನು ಹತ್ತಿದ್ದಾರೆ. ಹಾಗೇಯೆ ಬೆಂಗಳೂರು ಮತ್ತು ಮಾಗಡಿ ಸುತ್ತ-ಮುತ್ತ ಇರುವ ಬೆಟ್ಟ ಹಾಗೂ ಶಿವಗಂಗೆ, ಸಾವನದುರ್ಗ, ಹುತ್ರಿದುರ್ಗ ಪರ್ವತಗಳನ್ನು ಹತ್ತಿದ್ದಾರೆ.
ತಾವು ಮಾಡುವ ಎಲ್ಲ ಕೆಲಸಕ್ಕೂ ತಂದೆ ನಿಂಗರಾಜು ತಾಯಿ ತಾಯಿ ಕುಮಾರಿ ಅವರ ಬೆಂಬಲ ಸದಾ ಇರುತ್ತದೆ ಎನ್ನುತ್ತಾರೆ ಸುನೀಲ್.
ಅದರಲ್ಲಿಯೂ ಕುಕ್ಕೆ ಸುಬ್ರಹ್ಮಣ್ಯದ ಬಳಿಯಿರುವ ಕುಮಾರ ಪರ್ವತ ದಕ್ಷಿಣ ಭಾರತದ ಕಷ್ಟಕರ ಚಾರಣ ಎಂದೇ ಹೇಳಲಾಗುತ್ತದೆ. ಅಂತಹ ಚಾರಣವನ್ನು ಆತ್ಮವಿಶ್ವಾಸದಿಂದ ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಹತ್ತಿ ಇಳಿದಿದ್ದಾರೆ. ಗಣರಾಜ್ಯೋತ್ಸವ ದಿನದಂದು ಕುಮಾರ ಪರ್ವತವನ್ನು ಏರಿದ್ದಾರೆ. ಕುಮಾರ ಪರ್ವತವನ್ನು ಏರಿದ ಮೊದಲ ವಿಶಿಷ್ಟ ಚೇತನರಾಗಿದ್ದಾರೆ.
ಬದುಕಿನಲ್ಲಿ ಎಂತಹ ಸವಾಲುಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಆತ್ಮಬಲ ಇದ್ದರೆ ಸಾಕು ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸುನೀಲ್ ಅವರೇ ಪ್ರತ್ಯೇಕ ಸಾಕ್ಷಿ. ಸುನೀಲ‌್‌ರವರ ಈ ಸಾಧನೆ ಮತ್ತಷ್ಟು ಬೆಳೆಯಲಿ. ಬದುಕಿನಲ್ಲಿ ಏನೇ ಆದರೂ ಧೃತಿಗೆಡದೆ ಎದುರಿಸಬೇಕು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಇವರಿಗೆ ನಮ್ಮದೊಂದು ಸಲಾಂ!
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.