ಅಂಗವೈಕಲ್ಯವನ್ನು ಮೆಟ್ಟಿ ನಿಂತು ಆನ್ಲೈನ್ ಟೀಚಿಂಗ್ ನಲ್ಲಿ ಬದುಕು ಕಟ್ಟಿಕೊಂಡ ಬಾಗಲಕೋಟೆಯ ಯುವತಿ

ಚಿಕ್ಕ ವಯಸ್ಸಿನಲ್ಲಿಯೆ ಪೋಲಿಯೋಗೆ ತುತ್ತಾಗಿದ್ದ ಜ್ಯೋತಿ ಬೀಳಗಿಯವರು ಅದನ್ನು ಮೆಟ್ಟಿ ನಿಂತು ಆನ್ಲೈನ್ ಟೀಚಿಂಗ್ ಮೂಲಕ ಬದುಕನ್ನು ರೂಪಿಸಿಕೊಂಡಿದ್ದಾರೆ.

ಅಂಗವೈಕಲ್ಯವನ್ನು ಮೆಟ್ಟಿ ನಿಂತು ಆನ್ಲೈನ್ ಟೀಚಿಂಗ್ ನಲ್ಲಿ ಬದುಕು ಕಟ್ಟಿಕೊಂಡ ಬಾಗಲಕೋಟೆಯ ಯುವತಿ

Thursday December 19, 2019,

3 min Read

ಹುಟ್ಟಿನಿಂದಲೇ ಯಾರು ಸಾಧಕರಾಗಲು ಸಾಧ್ಯವಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮವಿರಬೇಕು. ಅಲ್ಲದೆ ಎಷ್ಟೊಂದು ಜನರು ನ್ಯೂನತೆಗಳನ್ನು ಹೊಂದಿದ್ದರು ಕೂಡ ಸಾಧಿಸುವ ಹಂಬಲವನ್ನು ಹೊಂದಿರುತ್ತಾರೆ. ಅಂಥವರು ಅನೇಕರಿಗೆ ಮಾದರಿಯಾಗಿ ನಿಲ್ಲುತ್ತಾರೆ‌.


ಈಗ ಎಷ್ಟೋ ಜನರು ಉದ್ಯೋಗ ಸಿಗದಿರುವ ಸಂದರ್ಭದಲ್ಲಿ ಅವಕಾಶಕ್ಕೆಂದು ಕಾದು ಕುಳಿತುಕೊಳ್ಳುತ್ತಾರೆ. ಆದರೆ ವಿಶೇಷಚೇತನರೊಬ್ಬರು ಆನ್ಲೈನ್ ಟೀಚಿಂಗ್ ಮೂಲಕ ತಮ್ಮ ಉದ್ಯೋಗವನ್ನು ತಾವೇ ಸ್ವತಃ ಹುಡುಕಿಕೊಂಡಿದ್ದಾರೆ.


ಬಾಗಲಕೋಟೆ ಜಿಲ್ಲೆಯ ತೇರದಾಳದ ಮಲ್ಲಪ್ಪ ಮತ್ತು ಅಕ್ಕಮಹಾದೇವಿ ದಂಪತಿಗಳಿಗೆ ಮಗಳಾಗಿ ಜನಿಸಿದ ಜ್ಯೋತಿ ಬೀಳಗಿ ತಾವು ಆರು ತಿಂಗಳ ಮಗುವಾಗಿದ್ದಾಗ ಪೋಲಿಯೋ ರೋಗಕ್ಕೆ ತುತ್ತಾದರು. ತಮ್ಮ ಈ ನ್ಯೂನತೆಯ ನಡುವೆಯು ಇವರು ಸ್ವಾವಲಂಬನೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ.


ಜ್ಯೋತಿ ಬೀಳಗಿ


ಬಿ.ಎಡ್, ಡಿ.ಎಡ್, ಬಿ.ಎ ಮತ್ತು ಎಂ.ಎ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಇವರಿಗೆ ಸರ್ಕಾರಿ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಬೇಕೆಂಬ ಆಸೆಯಿತ್ತು.


"ನನ್ನ ತಾಯಿಯೊಬ್ಬರು ನಿವೃತ್ತ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ. ಅವರಿಂದಲೇ ನನಗೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಬೇಕೆಂಬ ಕನಸು ಮೂಡಿತ್ತು. ಸರ್ಕಾರಿ ನೌಕರಿ ಸಿಗದೇ ಇದ್ದಾಗ ನಾನು ಖಾಸಗಿ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದೆ. ಆದರೆ ಸತತವಾಗಿ ಕಾರ್ಯ ನಿರ್ವಹಿಸಲು ನನ್ನ ಆರೋಗ್ಯ ನನ್ನೊಂದಿಗೆ ಸಾಥ್ ನೀಡಲಿಲ್ಲ. "

ಅತಿಥಿ ಉಪನ್ಯಾಸಕರಾಗಿದ್ದ ಸಂದರ್ಭದಲ್ಲಿ ತಾವೇ ದಿನವೂ ತಮ್ಮ ತ್ರಿಚಕ್ರವಾಹನದ ಸ್ಕೂಟರ್ ನಲ್ಲಿ ಶಾಲೆಗೆ ಮತ್ತೊಬ್ಬರ ಆಸರೆ ಪಡೆಯದೆ ಪಯಣಿಸುತ್ತಿದ್ದರು.


2014ರಲ್ಲಿ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡ ನಂತರ, ಶಾಲೆಗಳಲ್ಲಿ ಪಾಠ ಮಾಡುವುದು ಕಷ್ಟಕರವಾಗಿದ್ದರಿಂದ ಕೆಲಸಕ್ಕೆ ರಿಸೈನ್ ಮಾಡಿದೆ‌ ಎಂದೆನ್ನುತ್ತಾರೆ.


ಯುವರ್ ಸ್ಟೋರಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಜ್ಯೋತಿಯವರು,


"ನನ್ನ ಕಾಲು ಮತ್ತು ಬೆನ್ನು ಅಲ್ಪವಾಗಿದ್ದು ಇದರಿಂದ ನನಗೆ ಸರ್ಕಾರಿ ನೌಕರಿಯಲ್ಲಿ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ‌. ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಕಷ್ಟಕರವಾಗಿದೆ. ಪದವಿ ಪಡೆದರೂ ಸಹ ಕೆಲಸ ಪಡೆಯುವುದು ಸುಲಭವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಆನ್ಲೈನ್ ಟೀಚಿಂಗ್ ಕುರಿತಾಗಿ ಗಮನಿಸಿದೆ. ಇದು ನನ್ನ ಕನಸಿಗೆ ಹಾಗೂ ನನ್ನ ಪರಿಸ್ಥಿತಿಯಲ್ಲಿ ಸಿಕ್ಕ ಸರಿಯಾದ ಅವಕಾಶವಾಗಿದೆ," ಎಂದರು.

ಆನ್ಲೈನ್ ಟೀಚಿಂಗ್

ಹೀಗೆ ಮನೆಯಲ್ಲಿರಬೇಕಾದ ಸಂದರ್ಭ ಬಂದೋದಗಿದಾಗ ಜ್ಯೋತಿಯವರು ಮನೆಯಲ್ಲಿಯೇ ಕುಳಿತು ಮಾಡುವಂತಹ ಕೆಲಸಗಳಗಳನ್ನು ಹುಡುಕುತ್ತಿದ್ದರು. ಹಲವಾರು ಜಾಲತಾಣಗಳಲ್ಲಿ ಇದರ ಕುರಿತಾಗಿ ಹುಡುಕಾಡಿದ್ದರು.


ಆಗ ಅವರ ಗಮನಕ್ಕೆ ಹೈದರಾಬಾದ್ ಕಂಪನಿಯೊಂದು ಬಂದಿತು. ಅದರ ಮೂಲಕ ಆನ್ಲೈನ್ ಟೀಚಿಂಗ್ ಅನ್ನು ಆಯ್ದುಕೊಂಡು ಕಳೆದೆರಡು ವರ್ಷಗಳಿಂದ ಆನ್ಲೈನ್ ಪಾಠ ಹೇಳಿ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ‌.


ಹೇಗಿರುತ್ತದೆ ಇದು

ಇಲ್ಲಿ ಜ್ಯೋತಿಯವರು ಜೀವವಿಜ್ಞಾನ ಮತ್ತು ರಸಾಯನಶಾಸ್ತ್ರ ವಿಷಯಗಳನ್ನು ಲ್ಯಾಪ್‌ಟಾಪ್ ನಲ್ಲಿ, ಟೆಕ್ಸ್ಟಿಂಗ್ ವಿಧಾನದ ಮೂಲಕ ಬೊಧಿಸುತ್ತಾರೆ‌. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 4.30 ರಿಂದ 8.30 ರವರೆಗೆ ಈ ತರಗತಿಗಳು ನಡೆಯುತ್ತವೆ. ಇದು ಒಂಥರಾ ಆನ್ಲೈನ್ ಟ್ಯೂಷನ್ ಇದ್ದ ಹಾಗೆ. ಇಲ್ಲಿ ವಿಡಿಯೋ ಕಾಲ್ ಮುಂತಾದವುಗಳಿಗೆ ಅವಕಾಶ ಇಲ್ಲ. ಬರವಣಿಗೆಯಿಂದಲೆ ಪಾಠ ಹೇಳಿಕೊಡಬೇಕು.


ಕೆಲಸದಲ್ಲಿ ನಿರತರಾಗಿರುವ ಜ್ಯೋತಿ




ವಿದೇಶಿ ವಿದ್ಯಾರ್ಥಿಗಳು

ಈವರೆಗೂ ಅಮೇರಿಕಾ, ವಾಷಿಂಗ್ಟನ್‌, ಸೌದಿ ಅರೇಬಿಯಾದ ವಿದ್ಯಾರ್ಥಿಗಳು ಇವರ ಪಾಠವನ್ನು ಕೇಳುತ್ತಿದ್ದಾರೆ. ಪ್ರತಿದಿನವು ಮೂರರಿಂದ ನಾಲ್ಕು ವಿದ್ಯಾರ್ಥಿಗಳಿರುತ್ತಾರೆ. ವಿದ್ಯಾರ್ಥಿಗಳಿಗೆ ಇವರ ಬೋಧನೆ ಇಷ್ಟವಾದಲ್ಲಿ ಅವರು ತಮ್ಮ ಫೀಡ್ಬ್ಯಾಕ್ ನೀಡುತ್ತಾರೆ. ಮರುದಿನದ ತರಗತಿಗಳಿಗೆ ಇವರೇ ಬೇಕೆಂದರೆ ಅಪಾಯಿಂಟ್ಮೆಂಟ್ ಪಡೆದುಕೊಳ್ಳುತ್ತಾರೆ.


ಕಲಿತಿರುವುದು ಬಿಎ ಆದರೂ ಬೋಧಿಸುತ್ತಿರುವುದು ವಿಜ್ಞಾನ

ಜ್ಯೋತಿಯವರು ಬಿ.ಎ ಹಾಗೂ ಎಂ.ಎ ಪದವಿಯನ್ನು ಪಡೆದಿದ್ದಾರೆ‌. ಆದರೆ ಪಿಯುಸಿಯಲ್ಲಿರುವಾಗ ನಾನು ವಿಜ್ಞಾನವನ್ನು ಅಭ್ಯಸಿಸಿದ್ದೆ. ನನ್ನ ಇಂಗ್ಲೀಷ್ ಭಾಷೆ ಕೂಡ ಚೆನ್ನಾಗಿರುವುದರಿಂದ ಸುಲಭವಾಗಿ ಪಾಠ ಮಾಡಲು ಸಾಧ್ಯವಾಯಿತು. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಹಾಗೇ ಹಲವಾರು ಪುಸ್ತಕಗಳನ್ನು ರೆಫರ್ ಮಾಡುವೆ ಎಂದೆನ್ನುತ್ತಾರೆ ಜ್ಯೋತಿ.


ವಿದ್ಯಾರ್ಥಿಗಳು ತೆಗೆದುಕೊಳ್ಳುವ ತರಗತಿಯ ಮೇಲೆ ಸಂಬಳ ನಿಗದಿಯಾಗಿದ್ದು,‌ ಒಂದು ಗಂಟೆಯ ತರಗತಿಗೆ 175 ರೂಪಾಯಿ ಇದೆ. ಪ್ರತಿದಿನ ನಾಲ್ಕು ಗಂಟೆ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಪಠ್ಯದ ಕುರಿತು ಅನುಮಾನಗಳಿದ್ದರೆ ಆ ದಿನ ತರಗತಿಗಳು ಒಂದೆರೆಡು ಗಂಟೆ ಹೆಚ್ಚಾಗುತ್ತದೆ. ಮನೆಯಲ್ಲಿಯೇ ಇದ್ದು ಆನ್ಲೈನ್ ಟೀಚಿಂಗ್ ಮೂಲಕ ತಿಂಗಳಿಗೆ ಕನಿಷ್ಟ 25,000 ರೂಪಾಯಿ ಸಂಬಳವನ್ನು ಜ್ಯೋತಿಯವರು ಪಡೆಯುತ್ತಾರೆ.


ಇದುವರೆಗೂ ಸರ್ಕಾರದಿಂದ ಯಾವುದೇ ಸೌಲಭ್ಯ-ಸವಲತ್ತುಗಳು ಜ್ಯೋತಿಯವರ ಪಾಲಿಗೆ ದಕ್ಕಿಲ್ಲ. ಅಂಗವಿಕಲರ ಮಾಶಾಸನ, ಬಸ್ ಪಾಸ್, ರೈಲ್ವೆ ಪಾಸ್ ಗಳಾವು ಸಿಕ್ಕಿಲ್ಲ. ತಾಯಿ ಸರ್ಕಾರಿ ನೌಕರಿ ಮಾಡುತ್ತಿದ್ದರೆಂದು ಯಾವುದೇ ಸೌಲಭ್ಯ ಸಿಗಲಿಲ್ಲ. ಆದರೆ ಈಗ ಅವರು ನಿವೃತ್ತಿಯನ್ನು ಹೊಂದಿದ್ದು, ಇನ್ನಾದರೂ ಜ್ಯೋತಿಯವರಿಗೆ ಸರ್ಕಾರದಿಂದ ಸೌಲಭ್ಯಗಳು ಸಿಕ್ಕು, ಅವರ ಬದುಕು ಮತ್ತಷ್ಟು ಸುಸ್ಥಿತಿಗೆ ಬರಲಿ, ಇನ್ನಾದರೂ ಇದಕ್ಕೆ ಸಂಬಂಧಿಸಿದವರು ಇದರತ್ತ ಗಮನ ಹರಿಸಬೇಕು.


ನ್ಯೂನತೆ ಎನ್ನುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬುದನ್ನು ಜ್ಯೋತಿ ಬೀಳಗಿಯವರು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ‌. ಅವರ ಈ ಬದುಕು ನಮ್ಮೆಲ್ಲೆರಿಗೂ ಸ್ಪೂರ್ತಿಯಾಗಲಿ. ಜೀವನಪ್ರೀತಿ ಇನ್ನಷ್ಟು ಹೆಚ್ಚಲಿ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.