‘ನೀರಿನ ಹನಿಹನಿಯೂ ಅಮೂಲ್ಯವೇ’ - ಒಂದು ಹನಿಯೂ ಪೋಲಾಗದಂತೆ ನೋಡಿಕೊಳ್ಳುತ್ತಿರುವ 84 ವರ್ಷದ ಅಜ್ಜನ ಕಥೆ
ಆಬಿದ್ ಸುರ್ತಿ ಎಂಬ ಇವರು 2007ರಲ್ಲಿ ‘ಡ್ರಾಪ್ ಡೆಡ್ ಫೌಂಡೇಷನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿ, ತಮ್ಮ ತಂಡದೊಂದಿಗೆ ಸೇರಿಕೊಂಡು ಇಲ್ಲಿಯವರೆಗೂ ಸುಮಾರು ಎರಡು ಸಾವಿರ ಮನೆಗಳಿಗೆ ಭೇಟಿ ನೀಡಿ ಸೋರಿಕೆಯಾಗುವ ನಲ್ಲಿಗಳನ್ನು ಸರಿಪಡಿಸಿದ್ದಾರೆ - ಅದೂ ನಯಾಪೈಸಾ ತೆಗೆದುಕೊಳ್ಳದೆ.
ಸೋರುವ ನಲ್ಲಿಗಳನ್ನು ನಮ್ಮಲ್ಲಿ ಅನೇಕರು ನಿರ್ಲಕ್ಷಿಸುತ್ತೇವೆ. ಈ ಸಂಗತಿಯನ್ನು ಒಪ್ಪಲೇಬೇಕು. ಒಂದೊಂದೇ ಹನಿ ಹಾಗೆ ಸೋರುತ್ತಾ ಮಣ್ಣುಪಾಲಾಗಿ, ಅದೊಂದು ದೊಡ್ಡ ಸಮಸ್ಯೆಯಾಗುವವರೆಗೂ ಅದರತ್ತ ನಮ್ಮ ಗಮನ ಹರಿಯುವುದೇಯಿಲ್ಲ. ಹೀಗೆ ಸೆಕೆಂಡಿಗೆ ಒಂದು ಹನಿ ಸೋರಿಕೆ ಎಂದು ಲೆಕ್ಕ ಹಿಡಿದರೆ, ಒಂದು ನಲ್ಲಿಯಿಂದ ವರ್ಷಕ್ಕೆ ಸುಮಾರು 1300 ಲೀಟರುಗಳ ನೀರು ಪೋಲಾಗುತ್ತಿದೆ.
ಮುಂಬೈ ಮೂಲದ ಸರ್ಕಾರೇತರ ಸಂಸ್ಥೆ ‘ಡ್ರಾಪ್ ಡೆಡ್ ಫೌಂಡೇಶನ್’ನ ಸ್ಥಾಪಕರಾದ ಆಬಿದ್ ಅವರು ಕಳೆದ ಹನ್ನೆರಡು ವರ್ಷಗಳಿಂದ ಮನೆ-ಮನೆಗೆ ತೆರಳಿ ಸೋರಿಕೆಯಾಗುವ ನಲ್ಲಿಗಳನ್ನು ಸರಿಪಡಿಸುತ್ತಿದ್ದಾರೆ. ಸಂಸ್ಥೆಯ ಜಾಲತಾಣದಲ್ಲಿ ‘Save every drop or drop dead’ ಎಂಬ ಉಕ್ತಿಯು ಕಾಣುತ್ತದೆ. ಈ ಉಕ್ತಿಯೇ ಸಂಸ್ಥೆಯ ಉದ್ದೇಶವನ್ನು ತಿಳಿಸುತ್ತದೆ.
ಆಬಿದ್ ಅವರ ಜೊತೆಗೆ ಒಬ್ಬ ಕೊಳಾಯಿಗಾರ ಮತ್ತೊಬ್ಬ ಸ್ವಯಂಸೇವಕಿ ಇದ್ದಾರೆ. ಅವರು 2007 ರಲ್ಲಿ ಈ ಕಾರ್ಯವನ್ನು ಶುರುಮಾಡಿದಾಗಿನಿಂದ, ಆಬಿದ್ ಮತ್ತವರ ತಂಡವು ಇದುವರೆಗೂ ಸುಮಾರು ಎರಡು ಸಾವಿರ ಮನೆಗಳಲ್ಲಿ, ಒಟ್ಟಾರೆಯಾಗಿ ಇಪ್ಪತ್ತು ದಶಲಕ್ಷ ಲೀಟರುಗಳ ನೀರನ್ನು ಉಳಿಸಿದೆ.
ಎನ್‌ಡಿಟಿವಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಆಬಿದ್,
“ಪ್ರತಿ ವಾರವೂ ನಾವು ಒಂದು ಬಿಲ್ಡಿಂಗನ್ನೋ ಅಥವಾ ಅಪಾರ್ಟಿಮೆಂಟನ್ನೋ ಗುರಿಯಾಗಿಟ್ಟುಕೊಂಡು, ಆ ಕಟ್ಟಡದ ಕಾರ್ಯದರ್ಶಿಯನ್ನು ಭೇಟಿಯಾಗಿ ನಮ್ಮ ಉದ್ದೇಶವನ್ನು ವಿವರಿಸುತ್ತೇವೆ. ಅವರು ಒಪ್ಪಿಗೆ ನೀಡದ ಮೇಲೆ, ನಮ್ಮ ಭಿತ್ತಿಪತ್ರಗಳನ್ನು ಅಲ್ಲಿನ ನೋಟಿಸ್ ಬೋರ್ಡಿಗೆ ಹಾಕುತ್ತೇವೆ. ಶನಿವಾರದ ದಿನ, ನಮ್ಮ ವಿವರಗಳೊಂದಿಗೆ ಕರಪತ್ರಗಳನ್ನು ಹಂಚುತ್ತೇವೆ. ಕೊನೆಯದಾಗಿ, ಭಾನುವಾರದ ದಿನ, ಮೇಲಿನ ಮಹಡಿಯಿಂದ ಶುರುಮಾಡಿ, ಪ್ರತಿಯೊಂದು ಬಾಗಿಲನ್ನೂ ಬಡಿಯುತ್ತಾ, ನಲ್ಲಿಗಳನ್ನು ಸರಿಪಡಿಸುತ್ತೇವೆ.” ಎಂದು ತಿಳಿಸಿದ್ದಾರೆ.
ಹೀಗೆ ಭಿತ್ತಿಪತ್ರಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ನೀರನ್ನು ಉಳಿಸುವ ಮಹತ್ವವನ್ನು ಜನರಿಗೆ ವಿವರಿಸುವ ಪ್ರಯತ್ನವನ್ನು ಆಬಿದ್ ಸುರ್ತಿ ಮಾಡುತ್ತಾರೆ. ಅವರು ತಯಾರಿಸಿದ ಭಿತ್ತಿಪತ್ರಯೊಂದರಲ್ಲಿ ‘ಪ್ರವಾದಿಯು ಜನರಿಗೆ ನೀರು ಉಳಿಸಲು ಹೇಳುತ್ತಿರುವ ಚಿತ್ರವಿದೆ’ ಎಂದು ಫ್ರೀ ಪ್ರೆಸ್ ಪತ್ರಿಕೆ ತಿಳಿಸಿದೆ.
ಮತ್ತೊಂದು ಭಿತ್ತಿಚಿತ್ರದಲ್ಲಿ ಗಜವದನ ಗಣರಾಯನು ಹೀಗೆ ಹೇಳುತ್ತಾನೆ-
"ನೀವು ನೀರನ್ನು ಹೀಗೆ ಪೋಲುಮಾಡಿದರೆ, ನನ್ನನ್ನು ಎಲ್ಲಿ ಮುಳುಗಿಸುತ್ತೀರಿ ?" ಇದನ್ನು ದಿ ಫ್ರೀ ಪ್ರೆಸ್ ಪತ್ರಿಕೆಯು ವರದಿ ಮಾಡಿದೆ.
ನೀರಿನ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಟ ಅಮಿತಾಬ್ ಬಚ್ಚನ್ ಅವರು ನಡೆಸುವ ‘ಕೌನ್ ಬನೇಗಾ ಕರೋಡ್ ಪತಿ’ ಎಂಬ ಜನಪ್ರಿಯ ಗೇಮ್ ಶೋನಲ್ಲೂ ಆಬಿದ್ ಭಾಗವಹಿಸಿದ್ದಾರೆ.
ಏನೇಯಾಗಲಿ ಆಬೀದ್ ಅವರ ಈ ಪಯಣ ಸರಾಗವಾಗಿಯೇ ಸಾಗುತ್ತಿದೆ. ಮೊದಮೊದಲು ಜನರು ಸಹಕರಿಸುತ್ತಿರಲಿಲ್ಲ-ನೀರಿನ ಮಹತ್ವವೇನೆಂದು ಅರಿತುಕೊಳ್ಳಲು ಅವರಿಗೆ ಸ್ವಲ್ಪ ಸಮಯ ಹಿಡಿಯಿತೆಂದು ಆಬಿದ್ ಹೇಳುತ್ತಾರೆ. ಆಬಿದ್ ಅವರು ಪುಕ್ಕಟೆಯಾಗಿ ನಲ್ಲಿಗಳನ್ನು ಸರಿಪಡಿಸುವುದು ತಮ್ಮ ಜೇಬಿನಿಂದಲೇ. ತಿಂಗಳಿಗೆ ಸುಮಾರು 5,000 ರೂ. ಗಳ ಖರ್ಚು. ಇದು ನಿಜಕ್ಕೂ ಅವರ ನಿಭಾಯಿಸಲು ಕಷ್ಟವಾಗುವ ಮೊತ್ತವೇ ಸರಿ.
“ನಾನು ಮೊದಲಿಗೆ ಎಲ್ಲವನ್ನೂ ಯೋಚಿಸಿ ಲೆಕ್ಕಮಾಡತೊಡಗಿದೆ - ಕೊಳಾಯಿಗಾರನಿಗೆ, ದಿನಕ್ಕೆ ಎರಡುನೂರು ರೂಪಾಯಿಯಾದರೂ ಕೊಡಬೇಕಾಗುತ್ತದೆ. ನಲ್ಲಿಯ ವಾಷರ್ ಒಂದಕ್ಕೆ ಎರಡು ರೂಪಾಯಿ. ಹೀಗಾದರೆ, ನನ್ನ ಜೇಬಿಗೆ ದೊಡ್ಡ ಕತ್ತರಿಯೇನೂ ಬೀಳುವುದಿಲ್ಲ. ಆದರೆ ಇದನ್ನು ಚಾಚೂ ತಪ್ಪದೆ ಹೀಗೇ ಮುಂದುವರಿಸಿದರೆ ದೊಡ್ಡ ಹೂಡಿಕೆಯೇ ಬೇಕಾಗುತ್ತದೆ. ಅಲ್ಲದೆ, ನನ್ನ ಬಸ್ಸು, ಆಟೋ ಚಾರ್ಜು, ಜೊತೆಗೆ ತಂಡದವರಿಗೆಲ್ಲಾ ಉಪಹಾರದ ಕರ್ಚನ್ನೂ ನೋಡಿಕೊಳ್ಳಬೇಕು. ಹಾಗಾದರೆ ವಾರಕ್ಕೆ ಏನಿಲ್ಲವೆಂದರೂ ಸಾವಿರ ರೂಪಾಯಿ. ಅಂದರೆ ತಿಂಗಳಿಗೆ ನಾಲ್ಕರಿಂದ ಐದುಸಾವಿರ ರೂಪಾಯಿ ಅಂತಾಯ್ತು” ಎಂದು ಆಬಿದ್ ಎನ್.ಡಿ.ಟಿ.ವಿಗೆ ತಿಳಿಸಿದ್ದಾರೆ.
ಪ್ರಸಿದ್ಧ ಲೇಖಕರೂ ಆಗಿದ್ದ ಆಬಿದ್ ಅವರು ಹಿಂದಿ ಸಾಹಿತ್ಯಕ್ಕೆ ಸಲ್ಲಿಸಿದಂತಹ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಉತ್ತರ ಪ್ರದೇಶದ ‘ಹಿಂದಿ ಸಂಸ್ಥಾನ’ವು ಅವರಿಗೆ ಒಂದು ಲಕ್ಷ ರೂ. ಮೌಲ್ಯದ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು ಆ ಹಣವನ್ನು ತಮ್ಮ ಸಂಸ್ಥೆಗಾಗಿಯೇ ಬಳಿಸಿದರು. ಹಾಗೆ ನೋಡಿದರೆ ತಮಗೆ ಬಂದ ಎಲ್ಲಾ ಪ್ರಶಸ್ತಿ, ಬಹುಮಾನಗಳ ಹಣವನ್ನು ತಮ್ಮ ಈ ಕಾರ್ಯಕ್ಕಾಗಿಯೇ ಅವರು ವ್ಯಯಮಾಡುತ್ತಾ ಬಂದಿದ್ದಾರೆ.
“ಡ್ರಾಪ್ ಡೆಡ್ ಫೌಂಡೇಶನನ್ ನಿಯಮಿತವಾಗಿ ನಡೆಯಲು ಹಣದ ಅವಶ್ಯಕತೆ ಎಲ್ಲ ವೇಳೆಯೂ ಇದ್ದೇ ಇರುತ್ತಿತ್ತು. ಆ ದೇವರೇ ನನ್ನ ಬೆನ್ನಿಗಿದ್ದು ಸರಾಗವಾಗಿ ಮುನ್ನಡೆಸಿದ. ನಟ ಅಮಿತಾಬ್ ಬಚ್ಚನ್ ರವರು 11 ಲಕ್ಷ ರೂ.ಗಳ ದೊಡ್ಡ ಮೊತ್ತವನ್ನು ಫೌಂಡೇಶನ್ನಿಗೆ ನೀಡಿದರು. ಮಹಾರಾಷ್ಟ್ರ ಸರ್ಕಾರವು 50,000 ರೂ.ಗಳನ್ನು ಗೌರವಧನವಾಗಿ ಬಹುಕರಿಸಿ ನನಗೆ ಸಹಾಯ ಮಾಡಿತು. ಹಾಗೆಯೇ ಒಬ್ಬ ಕೊಳಾಯಿಗಾರ ನನ್ನ ಬಳಿ ಸಂಬಳವನ್ನು ಪಡೆಯದೇ ಪುಕ್ಕಟೆಯಾಗಿ ದುಡಿದ.” ಎಂದು ಎನ್.ಡಿ.ಟಿ.ವಿಗೆ ಹೇಳಿದ್ದಾರೆ ಆಬಿದ್.