ಕೇವಲ 750 ರೂಪಾಯಿಯೊಂದಿಗೆ ಮನೆಯಿಂದ ಹೊರನಡೆದ ಮಹಿಳೆ ವಂದನಾ ಶಾಹ್ ಇಂದು ಭಾರತದ ಪ್ರಖ್ಯಾತ ವಿಚ್ಛೇದನಾ ವಕೀಲೆ
ಮುಂಬೈ ನ ಪ್ರಸಿದ್ಧ ವಿಚ್ಛೇದನಾ ವಕೀಲರಾದ ವಂದನಾ ಶಾಹ್ ಓರ್ವ ಖ್ಯಾತ ಲೇಖಕಿ ಹಾಗೂ ಅಂಕಣ ಬರಹಗಾರರು. ಅಷ್ಟು ಮಾತ್ರವಲ್ಲದೇ, ಭಾರತದಲ್ಲೇ ಮೊಟ್ಟ ಮೊದಲಿಗೆ ವಿಚ್ಛೇದನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಕಾನೂನು ಸಲಹೆಗಳನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ಒದಗಿಸುವ "ಡೈವೋರ್ಸ್ ಕಾರ್ಟ್" ಆಪ್ಅನ್ನು ಸಹ ಬಿಡುಗಡೆಗೊಳಿಸಿದ್ದಾರೆ.
ಕೌಟುಂಬಿಕ ಕಲಹದಿಂದ ನೊಂದ ವಂದನಾ ತನ್ನ 28ನೇ ವಯಸ್ಸಿನಲ್ಲಿ ಕೇವಲ 750 ರೂಪಾಯಿಗಳೊಂದಿಗೆ ರಾತ್ರಿ 2 ಗಂಟೆಗೆ ಮನೆಬಿಟ್ಟು ಹೊರನಡೆದರು. ಎಲ್ಲಿ ಹೋಗಿ ಆಶ್ರಯ ಪಡೆಯಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ವಂದನಾ ಇದ್ದರು. ಆದರೂ ವಂದನಾ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ, ಮನೆಯಿಂದ ಹೊರನಡೆಯುವ ಮೊದಲು "ನನ್ನ ಮೇಲೆ ಇನ್ನುಮುಂದೆ ಯಾರು ದಬ್ಬಾಳಿಕ ನಡೆಸಲು ಸಾಧ್ಯವಾಗದಂತೆ ಜೀವನದಲ್ಲಿ ಏನನ್ನಾದ್ರೂ ಮಹತ್ತರವಾದುದನ್ನು ಸಾದಿಸಿಯೇ ತೀರುವೆ" ಎಂದು ತಮಗೆ ತಾವೇ ಪ್ರತಿಜ್ಞೆ ಮಾಡಿಕೊಂಡರು.
ತಾವು ಡಿವೋರ್ಸ್ ಪಡೆಯಲು ಸುಮಾರು 10 ವರ್ಷಗಳೇ ಬೇಕಾದರು ವಂದನಾ ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ವಂದನಾರ ತಂದೆ ಭಾರತೀಯ ವಾಯುಪಡೆಯ (ಐಎಎಫ್) ಫೈಟರ್ ಪೈಲಟ್ ಆಗಿದ್ದರು, ಮತ್ತು “ಅಪಾಯ” ಎನ್ನುವುದು ಜೀವನದ ಅಂತರ್ಗತ ಭಾಗವಾಗಿದೆ ಎಂಬುವುದನ್ನು ಅವರು ತಮ್ಮ ತಂದೆಯಿಂದಲೇ ಕಲಿತಿದ್ದರು.
ಕಳೆದ ಒಂದುವರೆ ದಶಕದಲ್ಲಿ ವಂದನಾ ಶಾಹ್ ಅವರ ಜೀವನ 360 ಡಿಗ್ರಿಯಲ್ಲಿ ಬದಲಾವಣೆಗೆ ಒಗ್ಗಿಕೊಂಡಿತು, ಈ ಬದಲಾವಣೆ ತನ್ನಂತೆ ನೋವನ್ನು ಅನುಭವಿಸುತ್ತಿರುವ ಇತರರ ಜೀವನದಲ್ಲೂ ಬದಲಾವಣೆ ತರಲು ಸಹಕಾರಿಯಾಯಿತು.
ವಂದನಾ ಭಾರತದಲ್ಲೇ ಮೊದಲಿಗೆ "ತೀರ್ಪುರಹಿತ ವಿಚ್ಛೇದನಾ ಬೆಂಬಲ ಸಂಸ್ಥೆಯನ್ನು " ಆರಂಭಿಸಿ ಪಿತೃಪ್ರಧಾನ ಮಧ್ಯಮ ವರ್ಗದಲ್ಲಿ ನಡೆಯುವ ಕೌಟುಂಬಿಕ ಶೋಷಣೆಯಿಂದ ಮಹಿಳೆಯನ್ನು ರಕ್ಷಿಸಲು ಪಣತೊಟ್ಟರು. ಈ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ವಂದನಾ ಇಲ್ಲಿನ ಅನುಭವಗಳ ಆಧಾರದ ಮೇಲೆ "360 ಡಿಗ್ರೀಸ್ ಬ್ಯಾಕ್ ಟು ಲೈಫ್ - ಎ ಲಿಟಿಗಂಟ್ಸ್ ಹ್ಯೂಮರಸ್ ಪರ್ಸ್ಪೆಕ್ಟಿವ್ ಆನ್ ಡೈವೋರ್ಸ್" ಎಂಬ ಪುಸ್ತಕವನ್ನೂ ಬರೆದಿದ್ದಾರೆ.
ವಂದನಾ ಅವರ ಅಭಿಪ್ರಾಯದಂತೆ ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶದಲ್ಲಿ ವಿಚ್ಛೇದನೆ ಒಂದು ಸಾಮಾನ್ಯ ಸಂಗತಿ. “ನಮ್ಮ ದೇಶದಲ್ಲಿ ಜನರು ಅತೃಪ್ತಿ ಹಾಗೂ ಅಸಮಧಾನಗಳು ಒಂದು ಕೆಟ್ಟ ವಿವಾಹ ಸಂಬಂಧದಿಂದ ಉಂಟಾಗುತ್ತದೆ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಯಾರೊಂದಿಗೆ ನಾವು ಏಳು ಸೆಕೆಂಡು ಬದುಕಲು ಕಷ್ಟಪಡುತ್ತೇವೆಯೋ ಅವರೊಂದಿಗೆ ಏಳುಜನ್ಮ ಪೂರ್ತಿ ಬದುಕಬೇಕೆಂದು ನಿರ್ಧರಿಸುತ್ತೇವೆ.”
ತಮ್ಮ ಅನುಭವಗಳ ಆಧಾರದಮೇಲೆ ವಂದನಾ ಕೆಲವು ಅನಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸುತ್ತಾ,
"ನಾನು ಅಭ್ಯಾಸ ಮಾಡುವ ಬಂಡಾರ್ ಫ್ಯಾಮಿಲಿ ಕೋರ್ಟ್‌ನಲ್ಲಿ ಸುಮಾರು 60 ವಿಚ್ಛೇಧನಾ ವಿಷಯಗಳಿದ್ದವು ಮತ್ತು ಆ ಕಟ್ಟಡವು ಏಳು ಮಹಡಿಗಳನ್ನು ಹೊಂದಿದೆ, ಆದ್ದರಿಂದ ಒಂದು ದಿನದಲ್ಲಿ ಸುಮಾರು 420 ವಿಚ್ಛೇಧನಾ ವಿಷಯಗಳ ವಾದ ಪ್ರತಿವಾದ ನಡೆಯುತ್ತಿವೆ, ಇನ್ನೂ ಒಂದು ದಶಕದ ಹಿಂದೆ ಹೋಲಿಸಿದರೆ ಅವುಗಳು ದಿಗ್ಭ್ರಮೆಗೊಳಿಸುವ ಸಂಖ್ಯೆಗಳಾಗಿದ್ದು, ಅಲ್ಲಿ ನಾವು ದಿನಕ್ಕೆ ಕೇವಲ 25 ಇಂಥಹ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು.”
ವಿಚ್ಛೇದನದ ನಂತರವೂ ಜೀವನವಿದೆ
ತಮ್ಮ ವಿಚ್ಛೇದನಕ್ಕಾಗಿ ಮನೆಯಿಂದ ಹೊರಡುವಾಗ ವಂದನಾ ಅವರು 'ನಿರುದ್ಯೋಗಿ' ಆಗಿದ್ದರು ಮತ್ತು ಅವರ ಕೈಯಲ್ಲಿ ಹಣವು ಇರಲಿಲ್ಲ. ತಮ್ಮ ಈ ಅಗ್ನಿಪರೀಕ್ಷೆಯ ಬಗ್ಗೆ, ಅವರು ಹೇಳುತ್ತಾ,
"ನಾನು ಅಲ್ಲಿಂದ ನಿಧಾನವಾಗಿ ಪರಿವರ್ತನೆಗೊಂಡೆ, ಅಪರಿಚಿತರು, ಸ್ನೇಹಿತರು, ಹಿತೈಷಿಗಳು ಮತ್ತು ಬೆಂಬಲಿಗರ ಸಹಾಯದಿಂದ ಯು ಎಸ್ ನಲ್ಲಿ ಉದ್ಯೋಗ ಪಡೆದೆ ನನ್ನ ದಿನದ ಆಹಾರಕ್ಕಾಗಿ, ಮತ್ತು ಬಿಡುವಿನ ವೇಳೆಯಲ್ಲಿ ವಿದೇಶ ಪ್ರಯಾಣಕ್ಕೆ ಹೋಗಲು ಸಾಕಾಗುವಷ್ಟು ಸಂಪಾದಿಸಲು ಆರಂಭಿಸಿದೆ. ಈ ನನ್ನ ಪ್ರಯಾಣದ ಮಧ್ಯೆ ಡಿವೋರ್ಸ್ ಪಡೆಯಲಿಚ್ಚಿಸುವ ಮಹಿಳೆಯರಿಗೆ ಬೆಂಬಲ ನೀಡಲು 360 ಡಿಗ್ರಿ ಬ್ಯಾಕ್ ಟು ಲೈಫ್ ಎಂಬ ಸಂಸ್ಥೆಯನ್ನು ಆರಂಭಿಸಿದೆ. ಈ ಸಂಸ್ಥೆ ಇಂದು ಹಲವಾರು ಮಹಿಳೆಯರಿಗೆ ದಾರಿದೀಪವಾಗಿದೆ, ಮಾತ್ರವಲ್ಲದೆ ನಾನು ಕೃತಿ ರಚಿಸಿಲು ಇಲ್ಲಿನ ಅನುಭವಗಳು ಸಹಕಾರಿಯಾಗಿದೆ."
ಆದರೂ, ವಂದನಾ ಅವರ ಅಭಿಪ್ರಾಯದಲ್ಲಿ ಇನ್ನೂ ಅನೇಕ ಮಹಿಳೆಯರು ಅತೃಪ್ತಿಕರ ವಿವಾಹಗಳಲ್ಲಿ ಬಂಧಿತರಾಗಿದ್ದಾರೆ.
"ಸಂಗಾತಿಯು ತನ್ನ ಹೆಂಡತಿಯನ್ನು ಗುದ್ದುವ ಚೀಲವಾಗಿ ಬಳಸುವ ಮೊದಲು ಒಂದು ಬಾರಿಯೂ ಯೋಚಿಸದೆ, ಅವಳ ಹೆಸರುಗಳನ್ನು ವೇಶ್ಯೆ, ನೀಚೆ ಎಂದು ಮನಬಂದಂತೆ ಕರೆಯುವ ಸಂದರ್ಭಗಳು ಇನ್ನೂ ಇವೆ. ನಾನು ಒಮ್ಮೆ ಆ ಸ್ಥಾನದಲ್ಲಿದ್ದೆ, ಆದರೆ ನಾನು ಹೊರನಡೆಯುವ ಧೈರ್ಯವನ್ನು ಹೊಂದಿದ್ದೇನೆ ಎಂದು ನನಗೆ ಖುಷಿಯಾಗಿದೆ," ಎಂದು ಅವರು ಹೇಳುತ್ತಾರೆ.
ಓರ್ವ ವಿಚ್ಛೇದನ ವಕೀಲೆಯಾಗಿ ವಂದನಾ
ವಿಚ್ಛೇದನಾ ವಕೀಲರಾಗಿ, ವಂದನಾ ರಾಜಕಾರಣಿಗಳು ಮತ್ತು ಬಾಲಿವುಡ್ ತಾರೆಯರು ಸೇರಿದಂತೆ ಅನೇಕ ಉನ್ನತ ಪ್ರಕರಣಗಳನ್ನು ನಿರ್ವಹಿಸಿದ್ದಾರೆ. “ನಾವು ಕ್ಲೈಂಟ್ ಗೌಪ್ಯತೆಯನ್ನು ಉಲ್ಲಂಘಿಸಲು ಮತ್ತು ಕಥೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಬಾಲಿವುಡ್‌ನಲ್ಲಿನ ಪ್ರಕರಣಗಳು ಯಾವಾಗಲೂ ವಿಭಿನ್ನವಾಗಿರುತ್ತವೆ. ವಿಚ್ಛೇದನಾ ವಕೀಲರ ಕೆಲಸವು ಅವರಿಗೆ ಈ ಕೇಸ್ ಗಳನ್ನು ನಿಭಾಯಿಸಲು ಸಹಾಯ ಮಾಡುವುದು. ಆದ್ದರಿಂದ ಈ ಕೆಲಸ ಹೆಚ್ಚು ಮುಖ್ಯವಾಗುತ್ತದೆ. ಆದರೂ ವಿಚ್ಛೇದನಾ ಬಡವರಲ್ಲಿ ಮತ್ತು ಶ್ರೀಮಂತರಲ್ಲಿ ಭಾವನಾತ್ಮಕವಾಗಿ ಪ್ರಕ್ಷುಬ್ಧವಾಗಿರುತ್ತದೆ," ಎಂದು ಅವರು ಅಭಿಪ್ರಾಯಪಡುತ್ತಾರೆ.
ಒನ್ಲೈನ್ ನಲ್ಲಿ ಕಾನೂನು ಸಲಹೆ
ಮುಂಬೈ ಮೂಲದ ವಕೀಲರು ವಿಶ್ವದ ಮತ್ತು ಭಾರತದ ಮೊದಲ ಕಾನೂನು ಅಪ್ಲಿಕೇಶನ್ ಡಿವೋರ್ಸ್‌ಕಾರ್ಟ್ ಅನ್ನು ಪ್ರಾರಂಭಿಸಿದ್ದಾರೆಂದು ಹೇಳಿಕೊಳ್ಳುತ್ತಾರೆ, ಇದು ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಶ್ನೆಗಳಿಗೆ ತಕ್ಷಣ ಉತ್ತರಿಸುವ ಗುರಿಯನ್ನು ಹೊಂದಿದೆ.
ಇದರ ಕಾರ್ಯವಿಧಾನವನ್ನು ವಿವರಿಸುತ್ತಾ, ವಂದನಾ,
"ಸಾಮಾನ್ಯವಾಗಿ ಕೆಟ್ಟ ವಿವಾಹ ಅಥವಾ ವಿಚ್ಛೇದನ ಪ್ರಕರಣದ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಕ್ತಿಗಳು, ಒಂದು ಗುಂಡಿಯನ್ನು ಕ್ಲಿಕ್ ಮಾಡುವುದರಿಂದ ತಕ್ಷಣದ ವೆಚ್ಚ-ಪರಿಣಾಮಕಾರಿ ಕಾನೂನು ಪರಿಹಾರವನ್ನು ಬಯಸುತ್ತಾರೆ. ಈ ಅಪ್ಲಿಕೇಶನ್ ತಕ್ಷಣದ ಕಾನೂನು ಪರಿಹಾರಗಳು, ಉತ್ತರಗಳು ಮತ್ತು ನ್ಯಾಯಾಲಯದ ಕಾರ್ಯವಿಧಾನಗಳ ಬಗ್ಗೆ ಮಾರ್ಗದರ್ಶನ, ವಕೀಲರ ನೇಮಕಾತಿಗಾಗಿ ನಿರಂತರವಾಗಿ ಮಾಹಿತಿಯನ್ನು ಒದಗಿಸುತ್ತದೆ."
ಇದು ಬದಲಾವಣೆಯನ್ನು ತರಲು ಧೈರ್ಯಶಾಲಿ ಪ್ರಯತ್ನವಾಗಿದೆ. ಇಲ್ಲಿ ಕ್ಲೈಂಟ್-ವಕೀಲರ ಸವಲತ್ತು ಇದೆ, ಈ ಅಪ್ಲಿಕೇಶನ್ ಗೌಪ್ಯತೆಯನ್ನು ಕಾಪಾಡುತ್ತದೆ. ವ್ಯಕ್ತಿಯೊರ್ವ ಅನಾಮಧೇಯನಾಗಿ ಅವನ / ಅವಳ ವೈಯಕ್ತಿಕ ಸಮಸ್ಯೆಗಳನ್ನು ಎಲ್ಲರೊಂದಿಗೆ ಚರ್ಚಿಸಲು ಅನುಕೂಲವನ್ನು ಮಾಡಿಕೊಡುತ್ತದೆ,” ಎಂದು ಅವರು ಹೇಳುತ್ತಾರೆ.
ವಂದನಾ ಅವರು ನಡೆದು ಬಂದ ಹಾದಿ
ಓರ್ವ ವಿಚ್ಛೇದನಾ ವಕೀಲೆಯಾಗಿ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದ ವಂದನಾ ಅವರಿಗೆ ಪ್ರಾರಂಭದಲ್ಲಿ ಹಲವಾರು ಅಡೆತಡೆಗಳು ಎದುರಾದವು. ಅವರ ಹೆಸರಿಗೆ ಮಸಿಬಳಿಯಲಾಯಿತು, ಅವರಿಗೆ ನೀಡಬೇಕಾದ ವಕೀಲರ ಶುಲ್ಕದಲ್ಲೂ ಚೌಕಾಸಿಗೆ ಇಳಿಯಲು ಆರಂಭಿಸಿದರು. ಇಷ್ಟೆಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತ ವಂದನಾ ಇಂದು ಪ್ರಸಿದ್ಧ ವಕೀಲರಾಗಿದ್ದರೆ.
“ನನ್ನ ಮದುವೆಯೇ ನನಗೆ ದೊಡ್ಡ ಪಾಠವಾಗಿದೆ. ಇದು ನನ್ನ ಜೀವನವನ್ನು, ನನ್ನನ್ನು ಇರುವ ಹಾಗೆಯೇ ಸ್ವೀಕರಿಸಲು ಕಲಿಸಿತು. ಯಾರಾದರೂ ನನ್ನನು ತಮ್ಮ ನಕಾರಾತ್ಮಕ ಅಂಶಗಳಿಂದ ತುಳಿಯಲು ಯತ್ನಿಸಿದರೆ ನಾನು ಸದಾ ಅವರಿಂದ ದೂರವಿರಲು ಪ್ರಯತ್ನಿಸುತ್ತೇನೆ. ಆದರೆ ನಮ್ಮ ಜೀವನದ ಕುರಿತು ದಿನಕ್ಕೊಂದು ಹೊಸ ಮಾತುಗಳನ್ನಾಡುವವರನ್ನು ನಾವು ಸಂಪೂರ್ಣವಾಗಿ ಬಾಯಿಮುಚ್ಚಿಸಲು ಸಾಧ್ಯವಿಲ್ಲ. ಓರ್ವ ಡಿವೋರ್ಸ್ ಲಾಯೆರ್ ಅದ ನನಗೆ ನ್ಯಾಯಾಲಯದಲ್ಲಿ ಆಗಲಿ, ಫ್ಯಾಮಿಲಿ ಕೋರ್ಟ್ ನಲ್ಲಿ ಆಗಲಿ ಸಕಾರಾತ್ಮಕವಾಗಿರುವುದು ತುಂಬಾ ಮುಖ್ಯ. ಇವೆಲ್ಲವೂ ಸುಲಭವಲ್ಲ..! ಹೇಗೆ ದೊಡ್ಡ ಅಲೆಗಳ ವಿರುದ್ಧವಾಗಿ ಈಜುವುದು ಎಷ್ಟು ಕಷ್ಟವೋ ಹಾಗೆ ಇದು ಕೂಡ.”
ವಂದನಾ ಇಂದು ಪ್ರಮುಖ ವಿಚ್ಛೇದನಾವಕೀಲರಲ್ಲದೆ, ಪ್ರಸಿದ್ಧ ಲೇಖಕಿ ಕೂಡಾ ಹೌದು - ಅವರ ಪುಸ್ತಕ "360 ಡಿಗ್ರೀಸ್ ಬ್ಯಾಕ್ ಟು ಲೈಫ್" ಅನ್ನು ಸ್ತ್ರೀಸಮಾನತಾವಾದಿ ಐಕಾನ್ "ಗ್ಲೋರಿಯಾ ಸ್ಟೀನೆಮ್" ಅನುಮೋದಿಸಿದ್ದಾರೆ. ವಂದನಾ ಪ್ರಮುಖ ಅಂಕಣಕಾರರಾಗಿದ್ದು ಅನೇಕ ಬಿಬಿಸಿ ಸಾಕ್ಷ್ಯಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಅರುಣರಾಜೆ ಪಾಟೀಲ್ ನಿರ್ದೇಶನದ ಪ್ರಿಯಾಂಕಾ ಚೋಪ್ರಾ ಅವರ ಹೊಸ ಚಿತ್ರ ಫೈರ್‌ಬ್ರಾಂಡ್‌ಗೆ ವಂದನಾ ವಿಚ್ಛೇದನಾ ಕಾನೂನು ಸಲಹೆಗಾರರಾಗಿದ್ದರು, ಇದು ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್ ಆಗಿದೆ.
ವಂದನಾ ಅವರ ಮುಂದಿನ ಯೋಜನೆಗಳಲ್ಲಿ ಡಿವೋರ್ಸ್‌ಕಾರ್ಟ್ ಅನ್ನು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ವಿಸ್ತರಿಸುವುದು ಸೇರಿದೆ.
"ಇದು ದೇಶದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನನ್ನು ಗ್ರಹಿಸುವ ವಿಧಾನವನ್ನು ಬದಲಾಯಿಸುತ್ತದೆ. ನಾನು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಸದಸ್ಯೆ ಆಗಿರುವುದರಿಂದ, ವಾಯುಪಡೆಯ ಪೈಲಟ್ ಆಗಿದ್ದ ನನ್ನ ತಂದೆಯಂತೆ ಒಂದು ದಿನ ಕಾನೂನಿನಲ್ಲಿ ನೀತಿ ನಿರೂಪಣೆಯ ಭಾಗವಾಗಬೇಕೆಂದು ನಾನು ಭಾವಿಸುತ್ತೇನೆ. ವೆಬ್-ಸರಣಿಗಳು ಮತ್ತು ಇತರ ಬಹು-ಮಾಧ್ಯಮಗಳಿಗೆ ಪ್ರವೇಶಿಸುವ ಮೂಲಕ ಎಲ್ಲಾ ವಕೀಲರಲ್ಲದವರಿಗೆ, ಶ್ರೀ ಸಾಮಾನ್ಯರಿಗೂ ಕಾನೂನನ್ನು ಸುಲಭವಾಗಿ ಅರ್ಥೈಸಿಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಾನು ಆಶಿಸುತ್ತೇನೆ,” ಎಂದು ಹೇಳಿದರು.