ತಾಜಾ ಹಣ್ಣು ತರಕಾರಿಗಾಗಿ ಬಂದಿದೆ ‘FreshbOxx'
ಎನ್.ಎಸ್.ರವಿ
ಅನೇಕ ಜನರು ಆನ್ಲೈನ್ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ. ಮನಯಲ್ಲೇ ಕುಳಿತು ನಮಗೆ ಬೇಕಾದ, ನಮ್ಮಗಿಷ್ಟದ ವಸ್ತುಗಳನ್ನು ಖರಿದೀಸಬಹುದು. ಆದರೆ ಹುಬ್ಬಳ್ಳಿಯಂತಹ ಊರಿನಲ್ಲಿ ಯಾರು ಊಹಿಸದಂತಹ ಒಂದು ಹೊಸ ಉದ್ಯಮಕ್ಕೆ ಚಾಲನೇ ನೀಡಿರುವವರು ರೋಹನ್ ಕುಲಕರ್ಣಿ. 31 ವರ್ಷದ ಈ ಕನಸುಗಾರ ಕಳೆದ ಮೂರು ತಿಂಗಳಿಂದ ಹುಬ್ಬಳ್ಳಿಯ ಜನತೆಗೆ ತಾಜಾ ತರಕಾರಿ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಬೆರಳ ತುದಿಯಲ್ಲೇ ನಿಮ್ಮಗೆ ಬೇಕಾದ ತಾಜಾ ತರಕಾರಿಯನ್ನು ಮನೆಗೆ ಬರುವಂತೆ, ಆರ್ಡರ್ ಮಾಡುವಂತಹ ಹೊಸ ಸ್ಟಾರ್ಟ್ಪ್ಅಪ್ ಆರಂಭಿಸಿ ಹುಬ್ಬಳ್ಳಿ ಮಟ್ಟಕ್ಕೆ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯೆಂದರೆ, ಜನರಿಗೆ ಸಂತೆಗೆ ಹೋಗಿ, ಬಿಸಿಲಲ್ಲಿ ಅಲೆದು ಚೌಕಾಶಿ ಮಾಡಿ, ತರಕಾರಿ ಮಾರುವವರ ಹತ್ತಿರ ಜಗಳ ಮಾಡಿ, ಕೊನೆಗೂ ಮನೆಗೆ ಬಂದ ಮೇಲೆ, ಅಯ್ಯೋ ಕೊಳೆತ ತರಕಾರಿ ಹಾಕಿಬಿಟ್ಟನ್ನಲ್ಲಯೆಂದು ಅವನನ್ನು ಶಪಿಸುವವರೇ ಜಾಸ್ತಿ. ಇಂತಹ ಅನುಭವ ಎಲ್ಲರಿಗೂ ಆಗಿರುತ್ತದೆ. ಆದರೆ ಈ ಎಲ್ಲ ತಲೆನೋವಿಗೆ ಪರಿಹಾರವಾಗಿ ಫ್ರೆಶ್ಬಾಕ್ಸ್ ನಿಮ್ಮ ಮನೆಯ ಬಾಗಿಲಿಗೆ ತಾಜಾ ಹಣ್ಣು, ತರಕಾರಿಯನ್ನು ಮುಟ್ಟಿಸುತ್ತದೆ. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ಇಲ್ಲಿ ರಾಜಿ ಮಾಡಿಕೊಳ್ಳಲಾಗುವುದಿಲ್ಲ.
ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ರೋಹನ್ ಕುಲಕರ್ಣಿ ಎಂಬ ಕನಸುಗಾರನ ‘ತಾಜಾ’ ಸಾಹಸವಿದು. ನೀವೊಂದು ಕರೆ ಮಾಡಿ ಅಥವಾ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಇಂತಹ ತರಕಾರಿ, ಹಣ್ಣುಗಳು ಬೇಕೆಂದು ಆರ್ಡರ್ ಕೊಟ್ಟರೆ ಸಾಕು, ಅದನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಮನೆಗೆ ಮುಟ್ಟಿಸುತ್ತೆ, ಫ್ರೆಶ್ ಬಾಕ್ಸ್.
ಈಗಾಗ್ಲೇ ಮಾರುಕಟ್ಟೆಯಲ್ಲಿ ಬಿಗ್ ಬಾಸ್ಕೆಟ್, ಪೆಪ್ಪರ್ ಟ್ಯಾಪ್ ಮುಂತಾದ ಕಂಪನಿಗಳು ತಾಜಾ ಹಣ್ಣು ತರಕಾರಿಯನ್ನು ಪೂರೈಸುತ್ತಿವೆ. ಸೂಪರ್ ಮಾರ್ಕೆಟ್ನಲ್ಲಿ ಹಣ್ಣು, ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುತ್ತವೆ. ಆದರೆ, ರೋಹನ್ ಶೈಲಿ ಆಪ್ತವಾಗಿದೆ. ರೈತರಿಂದಲೇ ಸಾವಯವ ಹಣ್ಣು, ತರಕಾರಿ ಖರೀದಿಸಿ, ಸಂಸ್ಕರಿಸಿ, ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ರೈತರ ಜೇಬು ತುಂಬಿದ್ರೆ, ಗ್ರಾಹಕರ ಆರೋಗ್ಯ ವೃದ್ಧಿಸುತ್ತಿದೆ.
ಈಗಿನ ಕಲಬೆರಕೆ ಕಾಲದಲ್ಲಿ, ರಾಸಾಯನಿಕ ಮುಕ್ತ ಮತ್ತು ತಾಜಾ ತರಕಾರಿಯನ್ನು ಜನರಿಗೆ ಮುಟ್ಟಿಸುವ ಸಲುವಾಗಿ ರೋಹನ್ ಕುಲಕರ್ಣಿ, ಏನಾದ್ರು ಮಾಡಬೇಕೆಂದು ಯೋಚಿಸುತ್ತಿರುವಾಗಲೇ, ಫ್ರೆಶ್ ಬಾಕ್ಸ್ ಐಡಿಯಾ ಬಂದಿದ್ದು. ಚಾಣಕ್ಯ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯಿಂದ ಎಂಬಿಎ ಪದವಿ ಪಡೆದಿರುವ ರೋಹನ್ ಕುಲಕರ್ಣಿ, ಸದ್ಯ ಹುಬ್ಬಳ್ಳಿಯ ಮಟ್ಟಿಗೆ ಈ ಸೇವೆಯನ್ನು ನೀಡುತ್ತಿದ್ದಾರೆ. ತಕ್ಕ ಮಟ್ಟಿಗೆ ಹುಬ್ಬಳ್ಳಿಯಲ್ಲಿ ಯಶಸ್ವಿ ಕೂಡ ಆಗಿದ್ದಾರೆ.
"ಹುಬ್ಬಳ್ಳಿಯಲ್ಲಿ ಯಶಸ್ಸಿನ ನಂತರ ನಮ್ಮ ಕಂಪನಿಯ ವ್ಯಾಪ್ತಿಯನ್ನು ಹೆಚ್ಚಿಸುವುದು ನನ್ನ ಗುರಿಯಾಗಿದೆ. ಹಾಗಾಗಿ ಸದ್ಯ ಧಾರವಾಡಕ್ಕೂ ನಮ್ಮ ಸೇವೆಯನ್ನು ನೀಡಲಿದ್ದೇವೆ. ಬೆಂಗಳೂರಿಗೂ ನಮ್ಮ ಸೇವೆಯನ್ನು ವಿಸ್ತರಿಸಲಿದ್ದೇವೆ. ಬೆಂಗಳೂರಿನಲ್ಲಿ ಜನರ ಬಳಿ ಹಣವಿದೆ ಆದರೆ ಅವರಿಗೆ ತಾಜಾ ಸಾವಯವ ಹಣ್ಣು, ತರಕಾರಿ ಸಿಗುತ್ತಿಲ್ಲ. ಸಿಕ್ಕರೂ ಅದಕ್ಕೆ ಸಿಕ್ಕಾಪಟ್ಟೆ ಬೆಲೆ ವಸೂಲಿ ಮಾಡುತ್ತಾರೆ. ಬೆಂಗಳೂರಿನಲ್ಲಿ ಸದ್ಯ ಇಂತಹ ಸೇವೆ ಕೊಡುವವರಿಗಿಂತ 30, 40 ಪ್ರತಿಶತ ಕಮ್ಮಿ ಬೆಲೆಯಲ್ಲಿ ಹಣ್ಣು, ತರಕಾರಿ ನೀಡುವಂತಹ ಸಾಮರ್ಥ್ಯ ನಮಗಿದೆ. ಶೀಘ್ರದಲ್ಲೇ ಬೆಂಗಳೂರು ಸೇರಿದಂತೆ ಈಡೀ ಭಾರತದಲ್ಲಿ ನಮ್ಮ ಸೇವೆ ಲಭ್ಯವಾಗುವಂತೆ ಮಾಡುವುದು ನನ್ನ ಕನಸಾಗಿದೆ ಎಂತಾರೆ ರೋಹನ್."
ಸದ್ಯ ಗ್ರಾಹಕರು ಮೊಬೈಲ್ ಸಂಖ್ಯೆ 7899884488ಗೆ ಕರೆ ಮಾಡಿ ಅಥವಾ ಕಂಪನಿಯ ಅಧಿಕೃತ ವೆಬ್ ಸೈಟ್ ಮೂಲಕ ತಮ್ಮ ಬೇಡಿಕೆ ಸಲ್ಲಿಸಿದರೆ, ಹಣ್ಣುಗಳ ಬುಟ್ಟಿ ಹಿಡಿದು ಫ್ರೆಷ್ ಬಾಕ್ಸ್ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಸದ್ಯ ರೋಹನ್ ಅವರಿಗೆ ಬಿ2ಸಿಗಿಂತ ಬಿ2ಬಿಯಲ್ಲಿ ಉತ್ತಮ ವ್ಯಾಪಾರ ಆಗುತ್ತಿದೆ. "ಅನೇಕ ಪ್ರತಿಷ್ಠಿತ ಹೊಟೆಲ್ ಮತ್ತು ರೆಸ್ಟೊರೆಂಟ್ಗಳು ಉತ್ತಮ ಗುಣಮಟ್ಟದ ಆಹಾರ ತಯಾರಿಸಬೇಕು, ತಾಜಾ ಹಣ್ಣಿನ ರಸ, ಫ್ರೂಟ್ ಸಲಾಡ್ ಪೂರೈಸುವ ಹೊಟೆಲ್ಗಳು ನಮಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ತರಕಾರಿಗಳ ಆರ್ಡರ್ ನೀಡುತ್ತಿದ್ದಾರೆ. ಮಾಮೂಲಿ ಹೊಟೆಲ್ಗಳಲ್ಲಿ ಯಾವ ತರಕಾರಿ ಕಮ್ಮಿ ಬೆಲೆಗೆ ಸಿಗುತ್ತದೆಯೋ, ಮಾರುಕಟ್ಟೆಯಲ್ಲಿ ಯಾವುದು ಉಳಿದಿರುತ್ತದೆಯೋ ಅದನ್ನೇ ಖರೀದಿಸಿ ಅದರ ಖಾದ್ಯಗಳನ್ನು ತಯಾರಿಸುತ್ತಾರೆ. ಆದರೆ ಪ್ರತಿಷ್ಠಿತ ಹೊಟೆಲ್ಗಳು ಮಾತ್ರ ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ. ಅಂತವರು ನಮ್ಮ ಖಾಯಂ ಗಿರಾಕಿಗಳಾಗಿದ್ದಾರೆ’.
ಗ್ರಾಹಕರ ಬೇಡಿಕೆಯನ್ನು ಪೂರೈಸಲು ರೋಹನ್ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ತಮ್ಮಗೆ ಎಷ್ಟು ಸಾಮಗ್ರಿ ಬೇಕು ಎಂಬ ಬೇಡಿಕೆಯನ್ನು ರೈತರಿಗೆ ಮುಂಚೇನೆ ಒಂದು ಅಂದಾಜಿನಲ್ಲಿ ಹೇಳಿರುತ್ತಾರೆ. ಅವರಿಗೆ ಬೇಕಾದ ಅಲ್ಲಿಂದ ಅವರಿಗೂ ಒಳ್ಳೆ ರೇಟ್ ಕೊಟ್ಟು ಪಡೆದುಕೊಂಡು ಬರ್ತಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಮ್ಮೊಂದಿಗೆ ಗುರುತಿಸಿಕೊಂಡಿರುವ ಸುಮಾರು 25 ರೈತರಿಗೆ ಸಾವಯವ ಕೃಷಿ ತರಬೇತಿ ನೀಡಿದ್ದಾರೆ. ‘ಸದ್ಯ ವಹಿವಾಟು ವೃದ್ಧಿಸಿದಂತೆ ರೈತರ ಸಂಖ್ಯೆಯೂ ಹೆಚ್ಚಲಿದೆಯಂತಾರೆ ರೋಹನ್. ಸದ್ಯ ಮುಂಜಾನೆ ತಮ್ಮ ಸರಕು ವಾಹನ ಹಾಗೂ ಸಿಬ್ಬಂದಿಯೊಂದಿಗೆ ರೈತರ ಹೊಲಗಳಿಗೆ ತೆರಳುವ ರೋಹನ್, ಅಲ್ಲಿ ಹಣ್ಣು, ತರಕಾರಿಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ತೂಕ ಮಾಡಿ, ಸೀಲ್ ಮಾಡಲಾದ ಪೊಟ್ಟಣಗಳಲ್ಲಿ ಗ್ರಾಹಕರಿಗೆ ತಲುಪಿಸುತ್ತಾರೆ. ಇವರ ಕಂಪನಿಯಲ್ಲಿ ಏಳು ಜನ ಕೆಲಸ ಮಾಡುತ್ತಿದ್ದು. ಇವರಿಗೆ ಈಗ ಕೈತುಂಬಾ ಕೆಲಸವಿದೆ.
ಇವರು ಮಾಡುತ್ತಿರುವ ಈ ಕೆಲಸದಿಂದ ರೈತರಿಗೂ ತುಂಬಾ ಲಾಭವಾಗಿದೆ. ಮಧ್ಯವರ್ತಿಗಳ ಹಾವಳಿಯೇ ರೈತರ ಆತ್ಮಹತ್ಯೆಗೆ ಮುಖ್ಯ ಕಾರಣವಾಗಿದೆ. ಆದರೆ ಇವರು ರೈತರನ್ನು ನೇರವಾಗಿ ಸಂಪರ್ಕಿಸಿ ಹಣ್ಣು, ತರಕಾರಿಗಳನ್ನು ಕೊಳ್ಳುತ್ತಾರೆ. ಇಲ್ಲಿ ಯಾವುದೇ ರೀತಿ ಕಮಿಷನ್ ಇಲ್ಲ. ತೂಕದಲ್ಲಿ ವ್ಯತ್ಯಾಸವಿಲ್ಲ. ರೈತರಿಗೆ ಉತ್ತಮ ಬೆಲೆ ಸಿಕ್ಕಿದ್ದು, ಅವರ ಜೀವನಮಟ್ಟವೂ ಸುಧಾರಿಸಲು ಇವರು ಕಾರಣರಾಗಿದ್ದಾರೆ. ‘ಬೆಲೆ ಏರಿಳಿತದ ಸಮಸ್ಯೆ ನಮ್ಮನ್ನು ಈವರೆಗೂ ಕಾಡಿಲ್ಲ. ಏಕೆಂದರೆ ಬೆಲೆ ಏರಿಸುವುದು, ಇಳಿಸುವುದು ರೈತರೂ ಅಲ್ಲ, ಗ್ರಾಹಕರೂ ಅಲ್ಲ, ಮಧ್ಯವರ್ತಿಗಳು. ಹೀಗಾಗಿ, ರೈತರಿಗೆ ಒಳ್ಳೆ ಬೆಲೆ ಕೊಡಲು ನಮ್ಮಿಂದ ಸಾಧ್ಯವಾಗಿದೆ. ರಾಜ್ಯದ ಹಲವು ಭಾಗದ ರೈತರು ಕರೆ ಮಾಡಿ, ತಮ್ಮ ಹೊಲದಿಂದ ತರಕಾರಿ ಖರೀದಿಸುವಂತೆ ಕೇಳುತ್ತಿದ್ದಾರೆ’ ಎಂದು ರೋಹನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
‘ಬೈ ಇಟ್, ಕುಕ್ ಇಟ್, ಈಟ್ ಇಟ್’ - ಇದು ಪ್ರೆಷ್ ಬಾಕ್ಸ್ ನ ಮೂಲ ಮಂತ್ರ. ಸದ್ಯ ತರಕಾರಿ, ಸೊಪ್ಪು, ಹಣ್ಣುಗಳು ಹಾಗೂ ತೆಂಗಿನಕಾಯಿ ಸೇರಿ 58 ವಸ್ತುಗಳನ್ನು ಪೂರೈಸುತ್ತಿದೆ. ಬೇಡಿಕೆಗೆ ಅನುಸಾರ ರೈತರ ತೋಟದಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿ ತಲುಪಿಸುವ ಸೇವೆ ಉಚಿತವಾಗಿ ನೀಡುತ್ತಿದೆ. ಖರೀದಿಸಿದ ವಸ್ತುಗಳಿಗೆ ನಿಗದಿತ ಮೌಲ್ಯ ಪಾವತಿಸಿದರೆ ಆಯಿತು.ಆನ್ಲೈನ್ನಲ್ಲಿ ಯಾವ ರೇಟ್ ತೋರಿಸಲಾಗುತ್ತದೆಯೋ ಅದೇ ಬೆಲೆಗೆ ವಸ್ತುಗಳನ್ನು ಪೂರೈಸಲಾಗುತ್ತೆ. ತೂಕದಲ್ಲಾಗಲಿ, ಗುಣಮಟ್ಟದಲ್ಲಾಗಲಿ ಒಂದು ಚೂರು ಮೋಸವಿಲ್ಲ. ಆದರೆ ಚೌಕಾಶಿಗೆ ಅವಕಾಶವಿಲ್ಲ, ಬಲವಂತದ ಮಾರಾಟವಿಲ್ಲ. ಆರ್ಡರ್ ರದ್ದು ಮಾಡುವಂತಿಲ್ಲ, ಹೆಚ್ಚು ಬೇಕೆಂದರೂ ಸಿಗಲ್ಲ. ತುಂಬಾ ಪ್ರಾಮಾಣಿಕವಾಗಿ ತಾಜಾ ತರಕಾರಿಯನ್ನು, ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಪೂರೈಸಲಾಗುತ್ತಿದೆ. ಈ ಸೇವೆಗೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.
ಕೇವಲ ₹ 3 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಫ್ರೆಷ್ ಬಾಕ್ಸ್ ಈಗ ಹುಬ್ಬಳಿಯಲ್ಲಿ ಮನೆಮಾತಾಗಿದೆ. ಫ್ರಾಂಚೈಸಿಗಳ ಮೂಲಕ ಧಾರವಾಡ, ಬೆಂಗಳೂರು ಬೆಳಗಾವಿ, ಕಾರವಾರ ಹಾಗೂ ಗೋವಾಕ್ಕೆ ವಹಿವಾಟನ್ನು ವಿಸ್ತರಿಸಲು, ದವಸ-ಧಾನ್ಯ, ಹಪ್ಪಳ, ಉಪ್ಪಿನಕಾಯಿ ಹಾಗೂ ಮಸಾಲೆ ಪದಾರ್ಥಗಳನ್ನು ತಮ್ಮ ವಹಿವಾಟಿನ ಪರಿಧಿಗೆ ತರಲು ರೋಹನ್ ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿನ ಮಾರುಕಟ್ಟೆಯ ಬಗ್ಗೆ ಈಗಾಗ್ಲೇ ಅಧ್ಯಯನ ಮಾಡಿರುವ ರೋಹನ್ ಶೀಘ್ರದಲ್ಲೇ 'Freshboxx'ಎಲ್ಲೆಡೆ ತನ್ನ ಉತ್ಕೃಷ್ಟ ಸೇವೆಯನ್ನು ವಿಸ್ತರಿಸುವ ಹಾದಿಯಲ್ಲಿದೆ. ಒಂದು ಸಣ್ಣ ಐಡಿಯಾ ಇಂದು ಹಲವರ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ. ರೈತರು ಗ್ರಾಹಕರು ಎಲ್ಲರ ಮೊಗದಲ್ಲಿ ಮಂದಹಾಸಕ್ಕೆ ರೋಹನ್ ಕಾರಣರಾಗಿದ್ದಾರೆ.