ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಬಯಕೆ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿರುತ್ತದೆ. ಇದು ಸಹಜ ಮತ್ತು ಸ್ವಾಭಾವಿಕ. ಆದರೆ ಕೆಲವೊಮ್ಮೆ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಇದಕ್ಕೆ ಪೂರಕವಾಗಿರುವುದಿಲ್ಲ. ಅದರಲ್ಲೂ ಅಶಕ್ತ ಮತ್ತು ದೃಷ್ಟಿ ಹೀನರಾದರೆ ಹೇಳುವುದು ಬೇಡ. ಇಂತಹ ಸಂದರ್ಭದಲ್ಲಿ ಆತ್ಮ ವಿಶ್ವಾಸವನ್ನು ಬಡಿದೆಬ್ಬಿಸಿ, ಇಂತಹ ಮಕ್ಕಳನ್ನು ಉದ್ಯಮ ಶೀಲರನ್ನಾಗಿ ಮತ್ತು ನಾಗರಿಕ ಸೇವಾ ಕಾರ್ಯಕರ್ತರಾಗಿ ಶಾಲೆಯೊಂದು ರೂಪಿಸುತ್ತಿದೆ. ಬನ್ನಿ ಈ ಶಾಲೆಯ ಬಗ್ಗೆ ತಿಳಿದುಕೊಳ್ಳೋಣ.
ಇಂದು ಶಾಲೆ ಅಂದರೆ ಕಣ್ಣಮುಂದೆ ಬರುವುದು ಆಕರ್ಷಕ ಕಟ್ಟಡಗಳು. ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಪ್ರವೇಶಾತಿ ಗಿಟ್ಟಿಸಲು ಹರ ಸಾಹಸ ಪಡುತ್ತಿರುವ ಪೋಷಕರು. ಪರೀಕ್ಷೆಗಳಲ್ಲಿ ಅಂಕ. ಅಂಕ ಪಡೆಯುವುದೇ ಗುರಿ. ಹೀಗೆ ಒಂದೇ ಚಿತ್ರಣ ಮೂಡಿ ಬರುತ್ತಿದೆ. ಆದರೆ ಈ ಶಾಲೆ ಇದಕ್ಕಿಂತ ಭಿನ್ನವಾಗಿದೆ. ಇಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗಿದೆ. ಇದರ ಜೊತೆ ಜೊತೆಗೆ ಸಹನೆ, ಅನುಕಂಪದ ಪಾಠ ಭೋಧಿಸಲಾಗುತ್ತಿದೆ. ನಿಮಗೆ ಅಚ್ಚರಿ ಎನಿಸಬಹುದು ಆದರೂ ಇದು ಸತ್ಯ.
1998ರಲ್ಲಿ ಆರಂಭವಾದ ಈ ಶಾಲೆ, ಮಕ್ಕಳಿಗೆ ವಸತಿ, ಆಹಾರ, ಬಟ್ಟೆ ಮತ್ತು ವೃತ್ತಿಪರ ತರಬೇತಿ ಕೂಡ ನೀಡುತ್ತಿದೆ. ದೃಷ್ಟಿ ಹೀನರಿಗೆ ಹೀಗೆ ಸಕಲ ಸೌಲಭ್ಯ ಒದಗಿಸುತ್ತಿದೆ. ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ನೀಡುತ್ತಿದೆ. ಇದು ಈ ಶಾಲೆಯ ಸಾಧನೆ.
ಯಾವುದೇ ಬಾಹ್ಯ ನೆರವಿಲ್ಲದೆ ಈ ಶಾಲೆಯನ್ನು ಮುನ್ನೆಡೆಸುತ್ತಿರುವವರು ಶ್ರೀ ಆಚಾರ್ಯ ರಕೂಂ. ಸುಮಾರು 600 ಮಕ್ಕಳ ಹೊಣೆ ಹೊತ್ತಿರುವ ಆಚಾರ್ಯರು ಎಲ್ಲರನ್ನು ತಮ್ಮ ಮಕ್ಕಳಂತೆ ಸಲಹುತ್ತಿದ್ದಾರೆ.
ಶಾಲೆಗೆ ಪ್ರವೇಶ ಬಯಸಿ ದೂರದ ಊರಿನಿಂದ ಮಕ್ಕಳು ಬರುತ್ತಿದ್ದಾರೆ. ಇದುವರೆಗೆ ಯಾರನ್ನು ಕೂಡ ನಿರಾಶೆಗೊಳಿಸಿಲ್ಲ. ಶಾಲೆಯ ಹೊರಗಡೆ ಒಂದು ಬ್ಲಾಕ್ ಬೋರ್ಡ್ ನಲ್ಲಿ ಅಗತ್ಯ ವಿರುವ ವಸ್ತುಗಳ ಪಟ್ಟಿ ಬಗ್ಗೆ ಮಾಹಿತಿ ನೀಡುತ್ತೇವೆ. ಇದನ್ನು ನೋಡಿದ ದಾರಿ ಹೋಕರು ಇದಕ್ಕೆ ಸ್ಪಂದಿಸುತ್ತಾರೆ. ಸುಮಾರು ಅರ್ಧದಷ್ಟು ವಸ್ತು ಈ ರೀತಿ ಬರುತ್ತದೆ. ಅದೇ ರೀತಿ ಉಳಿದ ವಸ್ತುಗಳನ್ನು ಇನ್ನಿತರ ಮೂಲಗಳಿಂದ ಸರಿದೂಗಿಸಲಾಗುತ್ತಿದೆ.
ಆರಂಭದ ದಿನಗಳು
1998, ಜೂನ್ ತಿಂಗಳಲ್ಲಿ ಶಾಲೆ ಚಿಕ್ಕ ಪ್ರಮಾಣದಲ್ಲಿ ಆರಂಭವಾಯಿತು. ಅಂಧರನ್ನು ಗುರಿಯಾಗಿರಿಸಿಕೊಂಡು ಈ ಶಾಲೆ ಆರಂಭಿಸಲಾಯಿತು. ಆಚಾರ್ಯ ಶ್ರೀ ರಕುಮ್ ಅವರು, ತಮ್ಮ ಕನಸನ್ನು ಸಾಕಾರಗೊಳಿಸಿದರು. ಬೆಂಗಳೂರಿನಲ್ಲಿ ಆರಂಭಗೊಂಡ ಶಾಲೆ ಇದೀಗ ಮೂರು ಶಾಖೆಗಳನ್ನು ಹೊಂದಿದೆ. 600 ಮಕ್ಕಳನ್ನು ಸಲಹುತ್ತಿದೆ.
ಸ್ಥಾಪಕರಾದ ಆಚಾರ್ಯ ಶ್ರೀ ರಕುಂ ಅವರ ಜೀವನ ಕಥೆ ಸ್ಫೂರ್ತಿದಾಯಕವಾಗಿದೆ. ಕರಾಟೆಯಲ್ಲಿ ಪರಿಣಿತಿ ಪಡೆದಿರುವ ರಕುಮ್, ಕರಾಟೆ ಚಾಂಪಿಯನ್ ಕೂಡ ಆಗಿದ್ದರು. 1988ರಲ್ಲಿ ವಿಶ್ವ ದಾಖಲೆ ಕೂಡ ನಿರ್ಮಿಸಿದ್ದರು. ಕೇವಲ ಕರಾಟೆ ಪಟು ಮಾತ್ರವಲ್ಲ ಬದಲಾಗಿ ಇನ್ನಿತರ ಕ್ಷೇತ್ರಗಳಲ್ಲಿ ಕೂಡ ರಕುಮ್ಗುರುತಿಸಿಕೊಂಡಿದ್ದಾರೆ. ಜಪಾನ್ ಭಾಷೆಯಲ್ಲಿ ಪ್ರಭುತ್ವ ಪಡೆದಿದ್ದಾರೆ. ಪ್ರಕೃತಿ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದಾರೆ. ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಬಳಸಿಕೊಳ್ಳುತ್ತಾರೆ. ತಮ್ಮದೇ ಅನುಭವದ ಆಧಾರದಲ್ಲಿ ಮಕ್ಕಳಿಗೂ ನೀತಿಪಾಠ ಮತ್ತು ನೈತಿಕತೆ ಬೋಧಿಸುತ್ತಾರೆ. ಒಂದೊಮ್ಮೆ ಹಸಿವಿನಿಂದ ಕಂಗೆಟ್ಟು ತಮ್ಮ ಆಶ್ರಮಕ್ಕೆ ಬಂದಿದ್ದ ಇಬ್ಬರು ವೃದ್ಧೆಯರಿಗೆ ತಮಗೆ ಮೀಸಲಿಟ್ಟಿದ್ದ ಅನ್ನವನ್ನೇ ನೀಡುವ ಮೂಲಕ ಮಾನವೀಯತೆ ಮೆರೆದರು. ಇಲ್ಲಿ ಹಸಿದವರ ಹಸಿವು ನೀಗಿಸುವುದು ಮೊದಲ ಕರ್ತವ್ಯ ಎಂಬ ಪಾಠವನ್ನು ಈ ಮೂಲಕ ಮಕ್ಕಳಿಗೆ ತಿಳಿ ಹೇಳಿದರು.
ಯಾರಿಗೆ ಸಹಾಯ ಮಾಡುತ್ತಾರೆ..?
ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಈ ಶಾಲೆ ಸಹಾಯ ಮಾಡುತ್ತದೆ. ಅದೇ ರೀತಿ ತಮ್ಮ ಕುಟುಂಬದಿಂದ ನಿರ್ಲಕ್ಷ್ಯಕ್ಕೊಳಗಾಗಿ ತಮ್ಮ ಬಾಲ್ಯ ಕಾಲದ ಜೀವನದಿಂದ ವಂಚಿತರಾಗಿರುವ ಮಕ್ಕಳಿಗೆ ಸಂಸ್ಥೆ ಸಹಾಯ ಮಾಡುತ್ತಿದೆ. ಈ ಮಕ್ಕಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ಪರಿವರ್ತಿಸಿ, ಸಮಾಜದ ಆಸ್ತಿಯಾಗಬೇಕು ಎಂಬುದೇ ಇದರ ಧ್ಯೇಯವಾಗಿದೆ.
ವೃದ್ಧೆಯರಿಗೆ ಪಿಂಚಣಿ : 65 ವರ್ಷ ಮೀರಿದ ವೃದ್ದೆಯರಿಗೆ ಪಿಂಚಣಿ. ನಗರದ ಏಳು ಕೊಳಚೆಗೇರಿಯಲ್ಲಿರುವ ವೃದ್ದೆಯರಿಗೆ ಪಿಂಚಣಿ
300 ವಿಧವೆಯರಿಗೆ ಸಹಾಯ ಹಸ್ತ
ಸ್ಲಮ್ ನಿವಾಸಿಗಳಾಗಿರುವ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಳ್ಳುವಂತಾಗಲು ಪ್ರೋತ್ಸಾಹ, ಅಗತ್ಯ ನೆರವು
30 ವರ್ಷ ಮೀರಿದ ಅಂಧರಿಗೆ ವೈದ್ಯಕೀಯ, ಬ್ರೈಲ್ ಪುಸ್ತಕ ಖರೀದಿಗೆ ನೆರವು
ಯೋಜನೆ ಹೇಗೆ ಮೊಳಕೆಯೊಡೆಯಿತು..?
ಒಂದು ದಿನ ಅಪರಾಹ್ನ ಸುರಿದ ಭಾರಿ ಮಳೆಗೆ ಮಕ್ಕಳು ಕಲಿಯುತ್ತಿದ್ದ ಜಾಗ ಪೂರ್ತಿ ನೀರಿನಿಂದ ಆವೃತ್ತವಾಯಿತು. ಇದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆಗೀಡಾದರು. ಇದು ಆಚಾರ್ಯ ಅವರನ್ನು ಚಿಂತೆಗೀಡು ಮಾಡಿತು. ಪರಿಹಾರ ಹುಡಕಲೇಬೇಕೆಂಬ ಮನಸ್ಸು ಹಾತೊರೆಯಿತು. ಹೀಗೆ ಆರಂಭವಾಯಿತು ಬದುಕಿನ ಮೊದಲ ಅಧ್ಯಾಯ. ತಮ್ಮ ಕರಾಟೆ ಜೀವನ ಬದಿಗಿರಿಸಿ, ಸಮಾಜ ಸೇವೆಯತ್ತ ಮನಸ್ಸು ಮಾಡಿದರು.
ಪಠ್ಯೇತರ ಚಟುವಟಿಕೆ ಇಲ್ಲಿ ಪ್ರಾಮುಖ್ಯತೆ ಪಡೆದಿದೆ. ಯೋಗ, ಕರಾಟೆ, ಸೈಕ್ಲಿಂಗ್ಗೂ ಇಲ್ಲಿ ಸ್ಥಾನ ನೀಡಲಾಗಿದೆ. ಸ್ವಾವಲಂಬನೆಯ ಬದುಕು ಕಲಿಸಲಾಗುತ್ತಿದೆ. ಅಡುಗೆ ತಯಾರಿ, ಬಡಗಿ ಕೆಲಸ, ಇಲೆಕ್ಟ್ರಿಕಲ್ ರಿಪೇರಿ ಹೀಗೆ ದಿನಚರಿಯಲ್ಲಿ ಇದನ್ನು ಸೇರಿಸಲಾಗಿದೆ. ಮಕ್ಕಳು ಸ್ವಾವಲಂಬನೆಯ ಬದುಕು ಇಲ್ಲಿನ ಆಶಯವಾಗಿದೆ. ಆರನೇ ತರಗತಿಯಿಂದ ಆಹಾರ ತಯಾರಿಕೆಯ ತರಬೇತಿ ಕೂಡ ನೀಡಲಾಗುತ್ತಿದೆ.
ಮಕ್ಕಳು 18 ವರ್ಷಕ್ಕೆ ಬಂದಾಗ, ಅವರಿಗೆ ದ್ವಿಚಕ್ರ ಮತ್ತು ಇತರ ವಾಹನಗಳ ತರಬೇತಿ ಕೂಡ ನೀಡಲಾಗುತ್ತಿದೆ. ಹೀಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಪರಿಪೂರ್ಣ ವ್ಯಕ್ತಿತ್ವ ಅರಳುವಿಕೆ ಮತ್ತು ಸ್ವಾವಲಂಬನೆ ಜೀವನ ಮಂತ್ರ ಇಲ್ಲಿದೆ.
ಈ ಎಲ್ಲ ಕಲೆಗಳನ್ನು , ಬದುಕಿನ ಪಾಠ ಕಲಿತ ಮಕ್ಕಳು ಮುಂದೆ ಸಮಾಜಕ್ಕೆ ಕೊಡುಗೆ ನೀಡಬೇಕು. ಎಂಬುದೇ ಆಚಾರ್ಯ ಅವರ ಆಶಯವಾಗಿದೆ. ಆರನೆ ತರಗತಿಯಿಂದಲೇ ನಾಗರಿಕ ಸೇವಾ ಪರೀಕ್ಷೆ ಎದುರಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಕರಾಟೆ ಪಾಠ
ಈ ಶಾಲೆ ಹಲವರಿಗೆ ಬದುಕಿನ ನೆಲೆ ಒದಗಿಸಿದೆ. ಇತ್ತೀಚೆಗಷ್ಟೇ ಮೂವರು ವಿದ್ಯಾರ್ಥಿಗಳು ಸಿವಿಲ್ ಪರೀಕ್ಷೆ ಬರೆದಿದ್ದರು. ಇದಲ್ಲದೆ ಹಲವು ಮಂದಿ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿರಾ ನಗರದ ಶಾಲೆಯ ಮುಖ್ಯಸ್ಥೆ ಈ ಸಂಸ್ಥೆಯ ಹಳೆ ವಿದ್ಯಾರ್ಥಿ. ಇದಲ್ಲದೆ ಇತರ ಸಾಧನೆಗಳು ಸಾಕಷ್ಟಿವೆ. ಉಪೇಕ್ಷಿತ ಮಕ್ಕಳೆಂಬ ಈ ಹಿಂದೆ ಹಣೆಪಟ್ಟಿಹೊತ್ತಿದ್ದ ಮಕ್ಕಳು ಇದೀಗ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ.
ಮುಂದಿರುವ ಸವಾಲುಗಳು
ತಮ್ಮ ಶಾಲೆಯಲ್ಲಿರುವ ಮಕ್ಕಳಿಗೆ ಉತ್ತಮ ಸೌಲಭ್ಯ ಪೂರೈಸಲು ರಕೂಂ ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಸೀಮಿತ ಸಂಪನ್ಮೂಲದಿಂದಾಗಿ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಎಂಟು ಮಕ್ಕಳಿಗೆ ಒಂದು ಶೌಚಾಲಯ ಎನ್ನುವ ಪರಿಸ್ಥಿತಿ . ಇದೀಗ ದಾನಿಗಳ ನೆರವು ಅಗತ್ಯವಾಗಿದೆ. ಈಗ ಹಳೆಯ ಕಟ್ಟಡವೊಂದರಲ್ಲಿ ಶಾಲೆ ಕಾರ್ಯಾಚರಿಸುತ್ತಿದೆ. ಇದನ್ನೆಲ್ಲ ಸುಧಾರಿಸಿ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಬೇಕಿದೆ. ಆವರಣದ ಗೋಡೆ ಕಟ್ಟಬೇಕಾಗಿದೆ. ಇದಕ್ಕೆ ದಾನಿಗಳು ಸ್ವಯಂ ಪ್ರೇರಿತರಾಗಿ ಸ್ಪಂದಿಸಬೇಕಾಗಿದೆ.
ಶಾಲೆಯ ಹೊರಗಡೆ ಇರುವ ಬ್ಲ್ಯಾಕ್ ಬೋರ್ಡ್ ಮನವಿಗೆ ಜನರು ಸ್ಪಂದಿಸುತ್ತಿದ್ದಾರೆ. ಆದರೆ ಜನರು ಇನ್ನಷ್ಟು ಪರಿಣಮಕಾರಿಯಾಗಿ ಮತ್ತು ಹೃತ್ಪೂರ್ವಕವಾಗಿ ಸ್ಪಂದಿಸಬೇಕಿದೆ. ಯಾಕೆಂದರೆ ಈ ಮಕ್ಕಳೆಲ್ಲ ಸಮಾಜದ ಆಸ್ತಿ. ಇವರನ್ನು ರಕ್ಷಿಸಬೇಕಾದುದು ನಮ್ಮೆಲ್ಲರ ಹೊಣೆ ಎನ್ನುತ್ತಾರೆ ಆಚಾರ್ಯ ಅವರು.
ಭವಿಷ್ಯದ ಯೋಜನೆಗಳೇನು?
ಜಪಾನ್ ಸಮರ ಕಲೆಯಲ್ಲಿ ಪರಿಣಿತಿ ಪಡೆದಿರುವ ಆಚಾರ್ಯ ರುಕೂಂ ಈ ಕಲೆಯ ತತ್ವವನ್ನೇ ನಂಬಿದ್ದಾರೆ. ಸಾವಿರ ಯೋಧರಂತೆ ನೀನು ಘರ್ಜಿಸು.. ನಿನಗೆ ಸಾವಿರ ಮಂದಿಯನ್ನು ಸಲಹುವ ಶಕ್ತಿ ಬರುತ್ತದೆ. ಇದನ್ನೇ ತಮ್ಮ ವಿದ್ಯಾರ್ಥಿಗಳಿಗೂ ಬೋಧಿಸುತ್ತಿದ್ದಾರೆ. ಅವರಲ್ಲಿನ ಆತ್ಮ ವಿಶ್ವಾಸ ಬಡಿದೆಬ್ಬಿಸುತ್ತಿದ್ದಾರೆ. ತಮ್ಮ ಶಾಲೆಯ ಮಕ್ಕಳು ಎಲ್ಲ ಮಕ್ಕಳಂತೆ ಸಾಧನೆ ಮಾಡುವ ಪರಿಪೂರ್ಣ ಶಕ್ತಿ , ಆತ್ಮ ವಿಶ್ವಾಸ ಹೊಂದಿದ್ದಾರೆ ಎಂದು ಆಚಾರ್ಯ ಅವರು ಪ್ರತಿಪಾದಿಸುತ್ತಿದ್ದಾರೆ. ಈ ಮಕ್ಕಳಿಗೆ ಶುಭವಾಗಲಿ ಅಂತ ಯುವರ್ ಸ್ಟೋರಿ ಟೀಮ್ ಆಶಿಸುತ್ತದೆ.